ಪಂಚಾಯತ್‌ ರಾಜ್ ಇಲಾಖೆಯಲ್ಲಿನ ಸಮಸ್ಯೆಗಳು: ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸಭೆ

Update: 2018-11-03 14:07 GMT

ಬೆಂಗಳೂರು, ನ.3: ಪಂಚಾಯತ್‌ ರಾಜ್ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಶನಿವಾರ ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ರಾಜ್ಯದಲ್ಲಿರುವ ಎಲ್ಲ ಗ್ರಾಮ ಪಂಚಾಯತ್ ಗಳ ಬಾಪೂಜಿ ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆ, ಬಾಪೂಜಿ ಸೇವಾ ಕೇಂದ್ರಗಳಿಗೆ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಪೀಠೋಪರಣಗಳನ್ನು ಒದಗಿಸುವುದು, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಗ್ರಾಮ ಪಂಚಾಯತ್ ಗಳ ಮೂಲ ಸೌಕರ್ಯಕ್ಕೆ ಅನುದಾನ ಒದಗಿಸಲು ಅವಕಾಶ ಕಲ್ಪಿಸುವುದು. ಗ್ರಾಮ ಸ್ವರಾಜ್ 2ನೇ ಹಂತದ ಶೀಘ್ರ ಅನುಷ್ಠಾನ ಸೇರಿದಂತೆ ಈಗಾಗಲೇ ಕರ್ತವ್ಯದಲ್ಲಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಗ್ರೂಪ್ ಬಿ ದರ್ಜೆಗೇರಿಸುವ ಬಗ್ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಶ್ರೀನಿವಾಸ ಪೂಜಾರಿ ಸಭೆ ನಡೆಸಿದರು.

ಬಾಪೂಜಿ ಸೇವಾ ಕೇಂದ್ರಗಳಿಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿಗೆ ಶೀಘ್ರ ಅನುಮತಿ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಬಾಪೂಜಿ ಸೇವಾ ಕೇಂದ್ರವು ಸೇರಿದಂತೆ ಗ್ರಾಮ ಪಂಚಾಯತ್ ಗಳ ಮೂಲ ಸೌಕರ್ಯಕ್ಕೆ ಅನುದಾನ ಒದಗಿಸಲು ಯೋಜನಾ ಇಲಾಖೆಯೊಂದಿಗೆ ಚರ್ಚಿಸಿ, ಅಗತ್ಯ ಆದೇಶವನ್ನು ಹೊರಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಗ್ರಾಮ ಪಂಚಾಯತ್ ಗಳ ಆಡಳಿತಾತ್ಮ ಹಿತದೃಷ್ಟಿಯಿಂದ ಮತ್ತು ಗ್ರಾಮ ಪಂಚಾಯತ್ ಗೆ ವಹಿಸಿರುವ ಜವಾಬ್ದಾರಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯನ್ನು ಮೇಲ್ದರ್ಜೆಗೇರಿಸಲು ಹಾಗೂ ತಾಲೂಕು ಮತ್ತು ಗ್ರಾಮ ಪಂಚಾಯತ್ ಮಧ್ಯೆ ಗ್ರಾಮೀಣಾಭಿವೃದ್ಧಿ ಅಧಿಕಾರಿ (ಆರ್.ಡಿ.ಓ) ಹುದ್ದೆ ಸೃಜನೆ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಖ್, ಪಂಚಾಯತ್‌ ರಾಜ್ ನಿರ್ದೇಶಕ ಕೇಂಪೆಗೌಡ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದು, ಪಂಚಾಯತ್‌ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತ್ ಗಳ ಆಡಳಿತದ ಸಮಸ್ಯೆಗಳನ್ನು ಶೀಘ್ರ ನಿವಾರಿಸುವುದಾಗಿ ಸಭೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News