ಜಾನಪದ ನಾಡೋಜ ಎಚ್.ಎಲ್. ನಾಗೇಗೌಡರು

Update: 2018-11-03 14:57 GMT

ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಒಬ್ಬರಾದ ಎಚ್.ಎಲ್. ನಾಗೇಗೌಡರದು ಬಹುಮುಖ ಪ್ರತಿಭೆ. ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಅನುವಾದಕರಾಗಿ, ಜಾನಪದ ಸಂಗ್ರಾಹಕ, ಸಂಶೋಧಕರಾಗಿ, ಜಾನಪದ ಲೋಕದ ನಿರ್ಮಾತೃವಾಗಿ ನಾಗೇಗೌಡರು ನಾಡಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಒಬ್ಬ ವ್ಯಕ್ತಿ ತನ್ನ ಜೀವಿತದ ಅವಧಿಯಲ್ಲಿ ಇಷ್ಟೆಲ್ಲವನ್ನು ಸಾಧಿಸಲು ಸಾಧ್ಯವೇ ಎಂದು ವಿಸ್ಮಯಪಡುವಂತೆ ಮಾಡಿರುವ ಶ್ರೀ ನಾಗೇಗೌಡರ ಸಾಧನೆಯು ಅವರ ವ್ಯಕ್ತಿತ್ವದಷ್ಟೇ ಗರಿಷ್ಠವಾದುದು.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಹೆರಗನಹಳ್ಳಿಯಲ್ಲಿ 1915 ರ ಫೆಬ್ರವರಿ 11ರಂದು ಜನಿಸಿದ ಎಚ್.ಎಲ್. ನಾಗೇಗೌಡರ ದೊಡ್ಡಮನೆಯು ಸಂಖ್ಯಾಬಲದಿಂದಲ್ಲದೆ ಗುಣ, ಗೌರವ ಮತ್ತು ಸಂಸ್ಕೃತಿಯ ಲೆಕ್ಕದಲ್ಲೂ ದೊಡ್ಡಮನೆಯೇ ಆಗಿದ್ದಿತು. ನಾಗೇಗೌಡರು ಬಾಲ್ಯದಲ್ಲಿಯೇ ಬುದ್ಧಿವಂತರೂ ಸೂಕ್ಷ್ಮಮತಿಗಳೂ ಆಗಿದ್ದರು. ಬಿ.ಎಸ್‌ಸಿ. ಮತ್ತು ಎಲ್‌ಎಲ್‌ಬಿ. ಪದವಿಗಳನ್ನು ಪೂರೈಸಿ 1941ರಲ್ಲಿ ನಡೆದ ಮೈಸೂರು ಸಿವಿಲ್ ಸರ್ವಿಸ್ ಸ್ಪರ್ಧಾಪರೀಕ್ಷೆಯಲ್ಲಿ ತೇರ್ಗಡೆಯಾಗಿ ಗೆಜೆಟೆಡ್ ಹುದ್ದೆಗೆ ಆಯ್ಕೆಯಾದ ಗೌಡರು ನಂತರ 1979ರಲ್ಲಿ ರಾಜ್ಯದ ಲೋಕಸೇವಾ ಆಯೋಗದ ಸದಸ್ಯತ್ವದಿಂದ ನಿವೃತ್ತರಾಗುವವರೆಗೂ ಹಿಂದಿರುಗಿ ನೋಡಲಿಲ್ಲ. ಲೋಕಸೇವಾ ಆಯೋಗದ ಆರು ವರ್ಷಗಳ ಸದಸ್ಯತ್ವದ ಅವಧಿಯಲ್ಲಿ ಅವರು ಸರಕಾರದ ಎಲ್ಲಾ ಇಲಾಖೆಗಳಲ್ಲಿ ಸಾವಿರಾರು ಮಂದಿ ಗ್ರಾಮೀಣ ಅಭ್ಯರ್ಥಿಗಳಿಗೆ ನಿರ್ವಂಚನೆಯಿಂದ ನಿಷ್ಪಕ್ಷಪಾತವಾಗಿ ಉದ್ಯೋಗಾವಕಾಶವನ್ನು ಕಲ್ಪಿಸಿದ್ದು ಚರಿತ್ರೆ. ಅಧಿಕಾರ ಮತ್ತು ಅಂತಸ್ತುಗಳ ಏರುಕ್ರಮದಲ್ಲಿ ಗೌಡರೆಂದೂ ಬದುಕನ್ನು ಕಳೆದುಕೊಂಡವರಲ್ಲ. ದಕ್ಷ ಆಡಳಿತಗಾರರಾದ ಗೌಡರು ತಾವು ನಿರ್ವಹಿಸಿದ ವಿವಿಧ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ನಿಷ್ಠೆ, ಸಮಯ ಪ್ರಜ್ಞೆ, ಶಿಸ್ತು, ಮಾನವೀಯತೆಗಳಿಗೆ ಹೆಸರಾಗಿದ್ದರು.

ಕೃತಿ ಸಾಧನೆ

ನಾಗೇಗೌಡರು ಮೂಲತಃ ಕಲಿತದ್ದು ವಿಜ್ಞಾನ ಮತ್ತು ನ್ಯಾಯಶಾಸ್ತ್ರಗಳನ್ನು; ಸೇರಿದ್ದು ಆಡಳಿತ ಕ್ಷೇತ್ರವನ್ನು; ಆಸಕ್ತಿ ಬೆಳೆದದ್ದು ಕನ್ನಡ ಸಾಹಿತ್ಯ ಮತ್ತು ಜಾನಪದದಲ್ಲಿ. ನಾಗೇಗೌಡರ ಲೋಕಗ್ರಹಿಕೆ ಮತ್ತು ಅಭಿವ್ಯಕ್ತಿಗಳೆರಡೂ ಅಸಾಧಾರಣವಾದುವು. ಸಾಹಿತ್ಯ ಮತ್ತು ಜಾನಪದ ಏಳಿಗೆಗೆ ಬದುಕನ್ನು ಮುಡಿಪಾಗಿರಿಸಿದ ಅಪರೂಪದ ಚೇತನ. ಅವರ ವ್ಯಕ್ತಿತ್ವವು ಬುದ್ಧಿವಂತಿಕೆ, ಪ್ರತಿಭೆ ಮತ್ತು ಗ್ರಾಮೀಣ ಸಂವೇದನೆಗಳ ತ್ರಿವೇಣಿ ಸಂಗಮ. ಎಚ್.ಎಲ್. ನಾಗೇಗೌಡರ ಜೀವನಾನುಭವದ ವ್ಯಾಪ್ತಿ ಎಷ್ಟು ವಿಶಾಲ, ಅಪರಿಮಿತವಾದುದು ಎಂಬುದಕ್ಕೆ ಅವರು ರಚಿಸಿರುವ ಸುಮಾರು 50 ಕೃತಿಗಳು ಉತ್ತಮ ಸಾಕ್ಷ್ಯಗಳನ್ನು ಒದಗಿಸುತ್ತವೆ. ತಮ್ಮ ತಾರುಣ್ಯದಲ್ಲಿ ರಚಿಸಿದ ನಾನಾಗುವೆ ಗೀಜಗನ ಹಕ್ಕಿ ಮತ್ತು ಕಥೆ-ವ್ಯಥೆ ಎಂಬ ಮೊತ್ತ ಮೊದಲ ಕವನ ಸಂಕಲನದಿಂದ ಮೊದಲುಗೊಂಡು ತೀರಾ ಇತ್ತೀಚಿನ ಕೃತಿಯಾದ ಮಲೆನಾಡಿನ ವಾಲ್ಮೀಕಿಯವರೆಗೂ ಗ್ರಾಮೀಣ ಮುಗ್ಧತೆ, ಕುತೂಹಲ, ಸರಳತೆ, ಅದಮ್ಯ ಜೀವನ ಪ್ರೀತಿಗಳು ನಾಗೇಗೌಡರ ಬರವಣಿಗೆಯ ಜೀವದ್ರವ್ಯ. ನವಿರಾದ ಹಾಸ್ಯ, ಸರಸಗಳಿಂದ ಕೂಡಿದ ಅವರ ನನ್ನೂರು ಚಿತ್ರಗಳು ಓದುಗರ ಮನಸ್ಸಿಗೆ ಕಚಗುಳಿಯಿಡುತ್ತವೆ, ಲವಲವಿಕೆಯನ್ನುಂಟು ಮಾಡುತ್ತವೆ. ದೊಡ್ಡಮನೆ ಮತ್ತು ಸೊನ್ನೆಯಿಂದ ಸೊನ್ನೆಗೆ ಕಾದಂಬರಿಗಳು ಬಯಲುಸೀಮೆಯ ಗ್ರಾಮೀಣ ಸಂಸ್ಕೃತಿಯನ್ನು ಚಿತ್ರಿಸುವ ಗೌಡರ ಅನರ್ಘ್ಯ ಕೃತಿಗಳು. ಭೂಮಿಗೆ ಬಂದ ಗಂಧರ್ವ ಹೆಸರಾಂತ ಸಂಗೀತಗಾರರಾದ ಭೈರವಿ ಕೆಂಪೇಗೌಡರ ಬಾಳನ್ನು ಚಿತ್ರಿಸುವ ಅಪೂರ್ವ ಕಾದಂಬರಿ. ಸರೋಜಿನೀದೇವಿ ಕೃತಿಯು ವ್ಯಕ್ತಿತ್ವದ ಅನುತ್ಪ್ರೇಕ್ಷಿತವೂ ವಾಸ್ತವಿಕವೂ ರೋಚಕವೂ ಆದ ರಮ್ಯ ನಿರೂಪಣೆಯನ್ನು ಒಳಗೊಂಡ ಜೀವನಚಿತ್ರ. ಗೌಡರು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದಾಗ ರಚಿಸಿದ ಬೆಟ್ಟದಿಂದ ಬಟ್ಟಲಿಗೆ ಅಥವಾ ಕಾಫಿಯ ಕಥೆ ಬಹು ಸ್ವಾರಸ್ಯಕರ.

ನಾಗೇಗೌಡರ ಸೃಜನಶೀಲ ಬರವಣಿಗೆಯಂತೆಯೇ ಅನುವಾದ ಸಾಹಿತ್ಯವು ಕೂಡಾ ಕೇವಲ ರೂಪಾಂತರವಾಗಿಯಷ್ಟೇ ಉಳಿಯದೆ ಪುನರ್ ಅವತರಣ ಕ್ರಿಯೆಯನ್ನು ಸಾಧಿಸಿದೆ. ಸರ್ ವಾಲ್ಟರ್ ಸ್ಕಾಟ್‌ನ ಕೃತಿರತ್ನ ಕೆನಿಲ್‌ವರ್ತ್‌ದಿಂದ ಮೊದಲುಗೊಂಡು ಪ್ರವಾಸಿ ಕಂಡ ಇಂಡಿಯಾದ ಎಂಟು ಮಹಾ ಸಂಪುಟಗಳಿಗೂ ಈ ಮಾತು ಅನ್ವಯಿಸುತ್ತದೆ. ಇಂಗ್ಲಿಷ್ ಭಾಷೆಯ ಮೇಲೆ ವಿದ್ವತ್ಪೂರ್ಣ ಹಿಡಿತವನ್ನು ಹೊಂದಿರುವ ಗೌಡರು ಆ ಭಾಷೆಯನ್ನು ಪೂರ್ಣ ಪ್ರಮಾಣದಲ್ಲಿ ಕನ್ನಡದ ಜಾಯಮಾನಕ್ಕೆ ಒಗ್ಗಿಸಿಕೊಂಡಿದ್ದಾರೆ. ಪ್ರವಾಸಿ ಕಂಡ ಇಂಡಿಯಾದ ಪುಟಗಳನ್ನು ತಿರುವುವಾಗ ಗತಕಾಲದ ಭಾರತೀಯ ಸಂಸ್ಕೃತಿಯ ವೈಭವದ ಚಿತ್ರಪಟವನ್ನು ನಮ್ಮ ಕಣ್ಮುಂದೆ ಸುರುಳಿ ಬಿಚ್ಚಿ ಹರಡಿದಂತೆ ಭಾಸವಾಗುತ್ತದೆ. ಗೌಡರ ಈ ಕೃತಿ ಶ್ರೇಣಿಯನ್ನು ಬಹುವಾಗಿ ಮೆಚ್ಚಿಕೊಂಡ ರಾಷ್ಟ್ರಕವಿ ಕುವೆಂಪು ಅವರು ನಾಗೇಗೌಡರು ಕನ್ನಡ ಸಾಹಿತ್ಯ ವಾಹಿನಿಗೆ ಒಂದು ಹೊಸ ಹೊಳೆ ಸಂಗಮಿಸುವಂತೆ ಮಾಡಿ ಕನ್ನಡಿಗರ ಹೃದಯಶ್ರೀ ನೆರೆಯುಕ್ಕುವಂತೆ ಮಾಡಿದ್ದಾರೆ, ಈ ಬೃಹತ್ ಪ್ರವಾಸ ಕಥನ ಕೃತಿಯ ಮೂಲಕ ಎಂದು ಆಡಿರುವ ಮಾತುಗಳು ಎಚ್.ಎಲ್. ನಾಗೇಗೌಡರ ಅನುವಾದಕ್ಕೆ ಭಾಷ್ಯ ಬರೆದಂತಿವೆ

.

ನಾಗಸಿರಿ ಶೀರ್ಷಿಕೆಯ ಅಡಿಯಲ್ಲಿ ಹೊರಬಂದಿರುವ ಗೌಡರ ಜೀವನ ಚರಿತ್ರೆಯು ಜೀವನ ಯಾತ್ರೆ, ವಿದೇಶ ಯಾತ್ರೆ, ಚುನಾವಣಾ ಯಾತ್ರೆ, ಜಾನಪದ ಯಾತ್ರೆ - ಎಂಬ ನಾಲ್ಕು ಭಾಗಗಳನ್ನು ಒಳಗೊಂಡಿದ್ದು 2,500 ಪುಟಗಳ ಅವರ ಆತ್ಮಕಥೆಯು ಪ್ರಾಮಾಣಿಕ ನಿರೂಪಣೆ, ಆತ್ಮ ನಿರೀಕ್ಷಣೆ, ವಿಚಾರಶಕ್ತಿಗಳಿಂದ ಕೂಡಿದ್ದು ಇತರರಿಗೆ ಆದರ್ಶಪ್ರಾಯವಾದುದಾಗಿದೆ. ಯಾವ ಭಾಷೆಯಲ್ಲೂ ಇಲ್ಲದ ಬೃಹತ್ ಆತ್ಮಕಥೆ ಎಂದು ಮನಸಾರೆ ಕೊಂಡಾಡಿದ್ದಾರೆ ಡಾ.ಜಿ.ಎಸ್. ಶಿವರುದ್ರಪ್ಪನವರು.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇತರ ಸಂಘ ಸಂಸ್ಥೆಗಳ ಮೂಲಕ ಜಾನಪದೀಯ ಚಟುವಟಿಕೆಗಳಿಗೆ ಪ್ರೇರಕವಾದ ನಾಗೇಗೌಡರು ಅತ್ಯುತ್ತಮ ಜಾನಪದ ಸಂಗ್ರಾಹಕರು, ಸಂಶೋಧಕರಾಗಿ ಹೆಸರಾಗಿದ್ದಾರೆ. ಸೋಬಾನೆ ಚಿಕ್ಕಮ್ಮನ ಪದಗಳು, ಪದವೇ ನಮ್ಮ ಎದೆಯಲ್ಲಿ, ಹೆಳವರು ಮತ್ತು ಅವರ ಕಾವ್ಯಗಳು, ದುಂಡುಮಲ್ಲಿಗೆ ಹೂ ಬುಟ್ಟೀಲಿ ಬಂದಾವ - ಇವು ಒಂದೊಂದು ಜಾನಪದ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಗಳಾಗಿವೆ. ಕರ್ನಾಟಕ ಜಾನಪದ ಪರಂಪರೆಯನ್ನು ಕನ್ನಡೇತರರಿಗೆ ಮತ್ತು ಪಾಶ್ಚಾತ್ಯರಿಗೆ ತಿಳಿಯಪಡಿಸುವ ಉದ್ದೇಶದಿಂದ ನಾಗೇಗೌಡರು ಪ್ರೊ. ಎಚ್.ಎ. ರಾಮಕೃಷ್ಣ ಅವರೊಂದಿಗೆ ಸಂಯುಕ್ತವಾಗಿ ಪ್ರಕಟಿಸಿರುವ ಎಸೆನ್ಷಿಯಲ್ಸ್ ಆಫ್ ಕರ್ನಾಟಕ ಫೋಕ್‌ಲೋರ್ ಏಕೈಕ ಇಂಗ್ಲಿಷ್ ಕೃತಿಯು ಕರ್ನಾಟಕದ ಸಮಗ್ರ ಜಾನಪದ ಪರಂಪರೆಯನ್ನು ಸ್ಥೂಲವಾಗಿ ಪ್ರತಿಬಿಂಬಿಸುತ್ತದೆ. ನಾಗೇಗೌಡರ ಪ್ರಧಾನ ಸಂಪಾದಕತ್ವದಲ್ಲಿ ಹೊರಬಂದಿರುವ ಸಹಸ್ರ ಪುಟಗಳ ಕನ್ನಡ ಜಾನಪದ ಕೋಶ ಕೃತಿಯು ಪ್ರತ್ಯೇಕವಾಗಿ ಜಾನಪದಕ್ಕೆ ಮೀಸಲಾದ ಶಬ್ದಾರ್ಥ ನಿಘಂಟು. ಜಾನಪದ ಆಸಕ್ತರು, ಅಭ್ಯಾಸಿಗಳು, ಸಂಶೋಧಕರಿಗೆ ಇದೊಂದು ಅಮೂಲ್ಯ ಆಕರ ಗ್ರಂಥ; ವಿಶ್ವಕೋಶ ಕ್ಷೇತ್ರದಲ್ಲಿ ಮೈಲುಗಲ್ಲು. ನಾಗೇಗೌಡರು ತಮ್ಮ ಎಂಬತ್ತೆಂಟರ ಇಳಿವಯಸ್ಸಿನಲ್ಲಿ ರಚಿಸಿರುವ ಕುವೆಂಪು ಕಂಡ ಕಾಡು, ನಾ ಕಂಡ ಕುವೆಂಪು ಎಂಬ ಎರಡು ಸುದೀರ್ಘ ಲೇಖನಗಳನ್ನು ಒಳಗೊಂಡಿರುವ ಮಲೆನಾಡ ವಾಲ್ಮೀಕಿ ಎಂಬ ಕೃತಿಯು ನಾಗೇಗೌಡರು ಮತ್ತು ರಾಷ್ಟ್ರಕವಿ ಕುವೆಂಪು ಅವರ ನಡುವಿದ್ದ ಭಾವನಾತ್ಮಕ ಸಂಬಂಧವನ್ನು ತಿಳಿಸಿಕೊಡುವುದರೊಂದಿಗೆ ಕುವೆಂಪು ವಿಚಾರಧಾರೆಯ ಹೊಸ ಹೊಳಹುಗಳನ್ನು ಪರಿಚಯಿಸುತ್ತದೆ.

ಗ್ರಾಮೀಣ ಬದುಕಿನಲ್ಲಿ ಬೆರೆತು ಹೋಗಿರುವ ನಾಗೇಗೌಡರ ಬರವಣಿಗೆಯು ಎಲ್ಲಿಯೂ ತೊಡಕಿಲ್ಲದೆ, ನಿರರ್ಗಳವಾಗಿ ಓದಿಸಿಕೊಂಡು ಹೋಗುವ ಗುಣವನ್ನುಳ್ಳದ್ದು. ಜನಪದ ಭಾಷೆಯನ್ನು ಅದರ ಎಲ್ಲಾ ಸತ್ವದೊಂದಿಗೆ ಅವರಷ್ಟು ಪರಿಣಾಮಕಾರಿಯಾಗಿ ದುಡಿಸಿಕೊಂಡ ಮತ್ತೊಬ್ಬ ಲೇಖಕ ಕನ್ನಡ ಸಾಹಿತ್ಯದಲ್ಲಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಸಂಕೀರ್ಣತೆಯಿಂದ ಹೊರತಾದ, ವಿದ್ವತ್ ಭಾರದಿಂದ ನರಳದ, ಆಡು ಭಾಷೆಯ ಗ್ರಾಮ್ಯ ನುಡಿಗಟ್ಟುಗಳು, ಪದಪುಂಜಗಳು, ನವಿರಾದ ಹಾಸ್ಯದೊಂದಿಗೆ ರೋಚಕತೆಯನ್ನುಂಟು ಮಾಡುತ್ತವೆ. ತಿಳಿಯಾದ, ಹದಗೊಂಡ, ದಟ್ಟ ವಾಸ್ತವಿಕ ಪ್ರಜ್ಞೆಯಿಂದ ಕೂಡಿದ ನಾಗೇಗೌಡರ ಕೃತಿಗಳಲ್ಲಿ ಉದ್ದಕ್ಕೂ ಪಾಯಸದಲ್ಲಿ ಗೋಡಂಬಿ, ದ್ರಾಕ್ಷಿ, ಕೊಬ್ಬರಿ ಚೂರುಗಳಂತೆ ಗಾದೆಗಳು, ಆಡುಮಾತುಗಳು, ನಾಣ್ಣುಡಿ, ಪಡೆನುಡಿಗಳು ದೊರೆಯುತ್ತವೆ ಎಂದಿರುವ ಶ್ರೀ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮಾತು ಅಕ್ಷರಶಃ ಸತ್ಯ.

ಜಗತ್ತಿನ ಬಹು ಭಾಗಗಳಲ್ಲಿ ಪ್ರವಾಸ ಮಾಡಿ ಅರಿವು ಪಡೆದಿರುವ ಗೌಡರು ತಾವು ಭೇಟಿ ನೀಡಿದ ದೇಶಗಳ ಬಾಳು ಬದುಕುಗಳನ್ನು ತಮ್ಮ ‘ನಾ ಕಂಡ ಪ್ರಪಂಚ’ ಪ್ರವಾಸ ಕಥನ ಕೃತಿಯ ಮೂಲಕ ಚೇತೋಹಾರಿಯಾದ ಸರಸ ಬರವಣಿಗೆಯಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ. ನಾನು ಓದಿರತಕ್ಕಂಥಾ ಪ್ರವಾಸ ಸಾಹಿತ್ಯದ ಪೈಕಿ ಮುಚ್ಚುಮರೆ ಇಲ್ಲದೆ ಹೇಳುವುದಾದರೆ ಇದು ಅತ್ಯುತ್ತಮವಾದ ಪ್ರವಾಸ ಸಾಹಿತ್ಯ - ಇದು ದೇ. ಜವರೇಗೌಡರ ಬಿಚ್ಚುಮನಸ್ಸಿನ ಅಭಿಪ್ರಾಯ. ಜನಪದ ಸಂಗೀತವನ್ನು ಕುರಿತಾದಂತೆ ನಾಗೇಗೌಡರು ರಚಿಸುತ್ತಿರುವ ಪ್ರಬುದ್ಧ ಕೃತಿ ಜನಪದ ಸಂಗೀತವು ಸಿದ್ಧತೆಯ ಹಂತದಲ್ಲಿದೆ. ಕಳೆದ 24 ವರ್ಷಗಳಿಂದ ನಾಗೇಗೌಡರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಾ ಬಂದಿರುವ ಕನ್ನಡದ ಏಕೈಕ ತ್ರೈಮಾಸಿಕ ‘ಜಾನಪದ ಜಗತ್ತು’ ಪತ್ರಿಕೆ ಕರ್ನಾಟಕದ ಜಾನಪದಕ್ಕೆ ಸಂಬಂಧಪಟ್ಟಂತೆ ಹೊಸ ಹೊಸ ವಿಚಾರಗಳನ್ನು ಪ್ರಕಟಿಸುತ್ತಾ ಬಂದಿದೆ; ಕರ್ನಾಟಕದ ಜಾನಪದ ಕ್ಷಿತಿಜವನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ 1963ರಲ್ಲಿ ವಸ್ತು ಸಂಗ್ರಹಾಲಯವೊಂದನ್ನು ಸ್ಥಾಪಿಸಿದ ಗೌಡರ ಸಾಂಸ್ಕೃತಿಕ ಪ್ರೇಮ ದೊಡ್ಡದು. ಜಾನಪದ ಸಂರಕ್ಷಣೆ, ಸಂವರ್ಧನೆ, ಪ್ರಚಾರ ಹಾಗೂ ಪ್ರಸಾರಗಳನ್ನು ಪ್ರಧಾನ ಆಶಯಗಳನ್ನಾಗಿರಿಸಿಕೊಂಡು 1979ರಲ್ಲಿ ಗೌಡರು ಸ್ಥಾಪಿಸಿದ ಕರ್ನಾಟಕ ಜಾನಪದ ಪರಿಷತ್ತು (ಟ್ರಸ್ಟ್/ಪ್ರತಿಷ್ಟಾನ) ನಾಡಿನಾದ್ಯಂತ ಜಾನಪದ ಚಟುವಟಿಕೆಗಳಿಗೆ ನಾಂದಿ ಹಾಡಿತು. ಸುಮಾರು 2000 ಗಂಟೆಗಳ ಕಾಲ ಕೇಳಬಹುದಾದಷ್ಟು ಜನಪದ ಗೀತೆಗಳ ಧ್ವನಿಮುದ್ರಣ, 800 ಗಂಟೆಗಳ ಕಾಲ ನೋಡಬಹುದಾದಷ್ಟು ವೀಡಿಯೊ ಚಿತ್ರೀಕರಣ, ಒಂದು ಸಾವಿರಕ್ಕೂ ಹೆಚ್ಚು ವರ್ಣ ಪಾರದರ್ಶಿಕೆಗಳು ನಾಗೇಗೌಡರ ಜಾನಪದ ಭಂಡಾರದಲ್ಲಿವೆ. ಜನಪದ ಕಲೆ, ಸಂಸ್ಕೃತಿ, ಆಚರಣೆಗಳನ್ನು ಕುರಿತಾದಂತೆ ನಾಗೇಗೌಡರ ಮಾರ್ಗದರ್ಶನದಲ್ಲಿ ಮೂಡಿಬಂದ ಸಿರಿಗಂಧ ಎಂಬ ಜಾನಪದ ಸಾಕ್ಷ್ಯ ಚಿತ್ರವು 108 ಕಂತುಗಳಲ್ಲಿ ಬೆಂಗಳೂರು ದೂರದರ್ಶನದಿಂದ ಪ್ರಸಾರವಾಗಿದ್ದು ಆಬಾಲವೃದ್ಧರಾದಿಯಾಗಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿದೆ. ಇಷ್ಟಲ್ಲದೆ ಆರು ವರ್ಷ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಮೊದಲ ಅಧ್ಯಕ್ಷರಾಗಿ ಮುಂದಿನ 25 ವರ್ಷಗಳಿಗೆ ಸಾಕಾಗುವಷ್ಟು ರಚನಾತ್ಮಕ ಕಾರ್ಯಯೋಜನೆಗಳನ್ನು ರೂಪಿಸಿ, ಅವುಗಳಲ್ಲಿ ಅನೇಕವನ್ನು ಅನುಷ್ಠಾನಕ್ಕೆ ತಂದವರು ಗೌಡರು.

ಕನ್ನಡ ನಾಡಿನ 20ನೆಯ ಶತಮಾನದ ಚರಿತ್ರೆಯ ಅದ್ಭುತಗಳಲ್ಲಿ ಒಂದು, ನಾಗೇಗೌಡರ ರೂಪಿಸಿದ ಜಾನಪದ ಲೋಕ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ರಾಮನಗರದ ಬಳಿ ಸುಮಾರು 15 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗಿರುವ ಜಾನಪದ ಲೋಕವು ನಾಗೇಗೌಡರು ಕಂಡ ಹಲವು ವರ್ಷಗಳ ಕನಸಿನ ಕೂಸು. ಇಂದು ಅದು ದೇಶದ ಅತ್ಯಂತ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿ ಬೆಳವಣಿಗೆ ಸಾಧಿಸಿದೆ.

ನಾಗೇಗೌಡರ ಆಶಯಗಳಿಗೆ ಅನುಗುಣವಾಗಿ ಜಾನಪದ ಲೋಕವು ಸದಾಕಾಲ ಜಾನಪದೀಯ ಚಟುವಟಿಕೆಗಳಿಂದ ತುಂಬಿ ತುಳುಕಾಡುತ್ತಿದೆ. ಫೆಬ್ರವರಿಯಲ್ಲಿ ಲೋಕೋತ್ಸವ, ಜುಲೈನಲ್ಲಿ ಗಾಳಿಪಟ ಉತ್ಸವ, ಅಕ್ಟೋಬರ್‌ನಲ್ಲಿ ದಸರಾ ಉತ್ಸವಗಳನ್ನು ನಿಯತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವರ್ಷಪೂರ್ತಿ ಜಾನಪದ ಪ್ರಸಾರ - ಅಭಿವೃದ್ಧಿಗೆ ಸಂಬಂಧಪಟ್ಟಂತೆ ವಿಚಾರ ಸಂಕಿರಣಗಳು, ಸಂಶೋಧನಾ ಕಮ್ಮಟಗಳು, ಅಭಿರುಚಿ ಶಿಬಿರಗಳು, ಜನಪದ ಕಲೆಗಳ ತರಬೇತಿ, ಜನಪದ ಸಂಗೀತ ಕಲಿಕೆ ಶಿಬಿರಗಳು, ಜನಪದ ಗೀತಗಾಯನ ಸ್ಫರ್ಧೆಗಳು, ಜನಪದ ನಾಟಕ ಸಪ್ತಾಹಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಪ್ರತೀ ವರ್ಷ ಫೆಬ್ರವರಿ ತಿಂಗಳಲ್ಲಿ ಅದ್ದೂರಿಯಾಗಿ ಆಚರಿಸಲ್ಪಡುತ್ತಿರುವ ಜಾನಪದ ಲೋಕೋತ್ಸವ ಸಮಾರಂಭದಲ್ಲಿ, ಬೆಳಕಿಗೆ ಬಾರದ ಹಳ್ಳಿಗಾಡಿನ ಮೂಲೆ ಮುಡುಕುಗಳಲ್ಲಿ ಅಜ್ಞಾತವಾಗಿ ಉಳಿದುಹೋಗಿರುವ ಜನಪದ ಕಲಾವಿದರನ್ನು ಹೆಂಗಸರು ಗಂಡಸರೆನ್ನದೆ ಗುರುತಿಸಿ, ಅವರನ್ನು ಸಾರ್ವಜನಿಕ ವೇದಿಕೆಗೆ ಕರೆತಂದು ಸಾವಿರಾರು ಜನರ ಸಮ್ಮುಖದಲ್ಲಿ ಸೋಬಾನೆ ಚಿಕ್ಕಮ್ಮ ಪ್ರಶಸ್ತಿ, ದೊಡ್ಡಮನೆ ಪ್ರಶಸ್ತಿ, ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿ ಸನ್ಮಾನಿಸುವ ಕೆಲಸವನ್ನು ನಾಗೇಗೌಡರು ಹಲ ವರ್ಷಗಳಿಂದಲೂ ನಿರಂತರವಾಗಿ ನಡೆಸಿಕೊಂಡು ಬಂದರು. ಪ್ರತೀ ವರ್ಷ 30ಕ್ಕೂ ಹೆಚ್ಚು ಕಲಾವಿದರುಗಳು ನಗದು ಹಣ, ಫಲಕ, ಶಾಲು, ಸೀರೆ - ಖಣಗಳೊಂದಿಗೆ ಈ ಪ್ರಶಸ್ತಿಗಳನ್ನು ಸ್ವೀಕರಿಸುತ್ತಾ ಬಂದಿದ್ದಾರೆ.

ನಾಗೇಗೌಡರು ಆಡಳಿತ, ಸಾಹಿತ್ಯ ಮತ್ತು ಜಾನಪದ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಅಮೋಘವಾದ ಸೇವೆಗಾಗಿ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (1974), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1988), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ (1990), ಕರ್ನಾಟಕ ನಾಟಕ ಅಕಾಡಮಿ ಫೆಲೋಶಿಪ್ (1992), ಅಖಿಲ ಭಾರತ 64ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೌರವ (1995), 1995ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯತ್ವ ಮತ್ತು ಅದೇ ವರ್ಷದ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಜರುಗಿದ ದಕ್ಷಿಣ ಭಾರತ ರಾಜ್ಯಗಳ ಶಾಸಕರ ಸಮ್ಮೇಳನದಲ್ಲಿ, ಇಡೀ ದಕ್ಷಿಣ ರಾಜ್ಯಗಳಲ್ಲೇ ಅತ್ಯಂತ ಹಿರಿಯ ಶಾಸಕರೆಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡರ ಉಪಸ್ಥಿತಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ಅವರಿಂದ ಸನ್ಮಾನ, ಪ್ರೇರಣಾ ಪ್ರಶಸ್ತಿ (1999), ಎಸ್.ಡಿ. ಜಯರಾಂ ಪ್ರಶಸ್ತಿ, ಮಂಗಳೂರಿನ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ (2002), - ಭಾರತದ ಸಾರ್ವಜನಿಕ ಸಂಪರ್ಕ ಸಂಸ್ಥೆಯ ವಿಆರ್‌ಎಸ್‌ಟಿ ಎಕ್ಸಲೆನ್ಸಿ ಪ್ರಶಸ್ತಿ (2002), ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಚುಂಚಶ್ರೀ ಪ್ರಶಸ್ತಿ (2002), ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ನಾಡೋಜ ಪ್ರಶಸ್ತಿ (2002) - ಇವು ಗೌಡರಿಗೆ ಸಂದ ಪ್ರಶಸ್ತಿಗಳು ಹಾಗೂ ಗೌರವಗಳು.

ಇಷ್ಟಲ್ಲದೆ, ನೂರಾರು ದನಿ-ಧಾಟಿಗಳಲ್ಲಿ, ಸಹಸ್ರಾರು ಸೊಲ್ಲು-ಪಲ್ಲವಿಗಳಿಂದ ಶೋಭಿತರಾದ ಜನಪದ ಸಂಗೀತ, ವೈವಿಧ್ಯಮಯ ನೃತ್ಯಗಳು ಹಾಗೂ ಬಹು ಮನರಂಜನೆಯ ಯಕ್ಷಗಾನ, ನಾಟಕ ಇತ್ಯಾದಿಗಳನ್ನು ಹಳ್ಳಿಯ ಕಲಿಯದವರಿಂದ ನಗರದ ಕಲಿತವರಿಗೆ ಕಲಿಸುವ ಸಲುವಾಗಿ ಹಾಗೂ ಜನಪದ ಭಾಷೆಯಲ್ಲಿ ಸಮೃದ್ಧವಾಗಿರುವ ಲಕ್ಷಾಂತರ ಪದಗಳನ್ನೊಳಗೊಂಡ ಸಮಗ್ರ ಜಾನಪದ ಕೋಶದ ರಚನೆಗಾಗಿ ಬೆಂಗಳೂರಿನಲ್ಲಿ ಜಾನಪದ ಸಿರಿಭುವನವನ್ನೇ ಸ್ಥಾಪಿಸಿದ್ದಾರೆ. ಕನ್ನಡ ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಎಂದಿಗೂ ಅಳಿಸಿಹಾಕಲಾಗದ ಹೆಜ್ಜೆ ಗುರುತುಗಳನ್ನು ಊರಿರುವ ಶ್ರೀ ಎಚ್.ಎಲ್. ನಾಗೇಗೌಡರು ಜಾನಪದ ಸಾಧನೆಯ ಮೇರು ಶಿಖರ. ಜಾನಪದ ಜಗದ್ಗುರು ಎಂದೇ ಖ್ಯಾತರಾಗಿದ್ದ ನಾಡೋಜ ಸನ್ಮಾನ್ಯ ಶ್ರೀ ನಾಗೇಗೌಡರು ದಿನಾಂಕ 22, ಸೆಪ್ಟಂಬರ್ 2005ರಂದು ವಿಧಿವಶರಾದರು.

Writer - ಡಾ. ಚಕ್ಕೆರೆ ಶಿವಶಂಕರ್

contributor

Editor - ಡಾ. ಚಕ್ಕೆರೆ ಶಿವಶಂಕರ್

contributor

Similar News