ಬಿಡಿಎ ಭೂ ಸರ್ವೆಗೆ ಆದೇಶ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

Update: 2018-11-03 15:09 GMT

ಬೆಂಗಳೂರು, ನ. 3: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ವ್ಯಾಪ್ತಿಯಲ್ಲಿನ ಆಸ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಭೂ ಸರ್ವೆ ನಡೆಸುವಂತೆ ಸೂಚನೆ ನೀಡಿದ್ದು, ಮಾರ್ಚ್ ಒಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ಬಿಡಿಎ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಬಹಳ ವರ್ಷಗಳ ಹಿಂದೆ ಬಿಡಿಎ ಭೂ ಸರ್ವೆ ನಡೆದಿತ್ತು. ಪ್ರಸ್ತುತ ಬಿಡಿಎ ವ್ಯಾಪ್ತಿಯಲ್ಲಿ ಎಷ್ಟು ಎಕರೆ ಭೂಮಿ ಇದೆ ಎಂಬ ಸ್ಪಷ್ಟ ಚಿತ್ರಣವಿಲ್ಲ. ಹೀಗಾಗಿ ಹೊಸದಾಗಿ ಸರ್ವೆ ನಡೆಸಲು ಸೂಚಿಸಿದ್ದು, ಮೂರು ತಿಂಗಳೊಳಗೆ ಸಮೀಕ್ಷೆ ನಡೆಸಲು ಗಡುವು ನೀಡಿದ್ದೇನೆ ಎಂದು ಹೇಳಿದರು.

ಶಿವರಾಂ ಕಾರಂತ್ ಲೇಔಟ್‌ನಲ್ಲಿ ನೋಟಿಫಿಕೇಷನ್ ಮಾಡಿ, ಮೂರು ತಿಂಗಳಲ್ಲಿ ನಿವೇಶನ ಹಂಚಿಕೆ ಮಾಡುವಂತೆ ನ್ಯಾಯಾಲಯ ತೀರ್ಪು ನೀಡಿದೆ. ಒಟ್ಟು 3546 ಎಕರೆ ಭೂಮಿ ಇದ್ದು, ಇದರಲ್ಲಿ ನಮಗೆ 800 ಎಕರೆ ಸಂದಾಯವಾಗಿದೆ. ಉಳಿದ ಜಾಗವನ್ನು ನೋಟಿಫೈ ಮಾಡಿ, ವಹಿಸಿಕೊಳ್ಳಬೇಕು. ಈಗಿನ ಮಾರುಕಟ್ಟೆ ಆಧಾರದ ಮೇಲೆ ಪರಿಹಾರ ನೀಡಬೇಕಿದೆ. ಅಧಿಕಾರಿಗಳಿಗೆ ಶೀಘ್ರವೇ ಹಂಚಿಕೆ ಮಾಡುವಂತೆ ಸೂಚಿಸಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.

ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡುವುದರಲ್ಲಿ ಯಾವುದೇ ಗೊಂದಲ ಬೇಡ. 65 ಕಿ.ಮೀ. ರಸ್ತೆ ನಿರ್ಮಾಣಕ್ಕೆ 17 ಸಾವಿರ ಕೋಟಿ ರೂ.ವೆಚ್ಚವಾಗಲಿದೆ. ಭೂ ಸ್ವಾದೀನಕ್ಕೆ 6,200 ಕೋಟಿ ರೂ.ಗಳಾಗಲಿದೆ. ಎಂಟು ಪಥದ ರಸ್ತೆಯ ಮಧ್ಯ ಭಾಗದಲ್ಲಿ ಮೆಟ್ರೋ ಲೈನ್ ತರಲೂ ಪ್ರಸ್ತಾವಿಸಲಾಗಿದೆ. ಬಿಡಿಎ ಹಂತದಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ಶೀಘ್ರವೇ ಸಂಪುಟದಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದರು.

ಕೆಂಪೇಗೌಡ ಬಡಾವಣೆಯಲ್ಲಿ 5 ಸಾವಿರ ನಿವೇಶನಗಳ ಪೈಕಿ 4971 ಸೈಟುಗಳಿಗೆ ಹಕ್ಕು ಪತ್ರ ನೀಡಿದ್ದೇವೆ. ಅವರಿಗೆ ಹಣ ಕಟ್ಟಲು 3 ತಿಂಗಳು ಅವಕಾಶವಿದೆ. ಮೂರು ತಿಂಗಳ ಬಳಿಕ ಶೇ.18ರಷ್ಟು ದಂಡ ಕಟ್ಟಬೇಕು. ದಂಡವಿಲ್ಲದೆ ಇನ್ನೊಂದು ತಿಂಗಳು ವಿಸ್ತರಿಸಲು ಅವಕಾಶ ಕೇಳಿದ್ದು, ಸಿಎಂ ಜತೆ ಚರ್ಚೆ ಮಾಡಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಅರ್ಕಾವತಿ ಬಡಾವಣೆಯಲ್ಲಿನ 3,600ಜನರು ಪರ್ಯಾಯ ನಿವೇಶನ ಕೇಳಿದ್ದರು, ಅವರಿಗೆ ಕೆಂಪೇಗೌಡದಲ್ಲಿ ನೀಡಿದ್ದೇವೆ. ಇದರಿಂದ ಬಿಡಿಎಗೆ ಕೊಂಚ ನಷ್ಟವಾಗಿದೆ ಎಂದು ಪರಮೇಶ್ವರ್ ಇದೇ ವೇಳೆ ಮಾಹಿತಿ ನೀಡಿದರು.

ಟೌನ್‌ಶಿಪ್ ನಿರ್ಮಾಣ: ‘ವಿಷನ್ ಬೆಂಗಳೂರು-2050’ ಯೋಜನೆ ಸಿದ್ಧಪಡಿಸಲು ತೀರ್ಮಾನ ಮಾಡಿದ್ದೇವೆ. ಹೊಸಕೋಟೆ, ದೊಡ್ಡಬಳ್ಳಾಪುರ, ಆನೇಕಲ್, ದಾಬಸ್‌ಪೇಟೆ ಈ ಪ್ರದೇಶಗಳಿಗೆ ಲಿಂಕ್ ಮಾಡಲು ಬಿಎಂಆರ್‌ಡಿಎ ವತಿಯಿಂದ ಯೋಜನೆ ಸಿದ್ಧಪಡಿಸಿದ್ದೇವೆ. ಪೆರಿಫೆರಲ್ ರಿಂಗ್ ರಸ್ತೆ ಮೂಲಕ ಈ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಇಲ್ಲಿ ಟೌನ್‌ಶಿಪ್ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ನಗರವನ್ನೇ ಅವಲಂಬನೆ ಮಾಡುವುದು ಕಡಿಮೆಯಾಗಲಿದೆ ಎಂದರು.

ಈ ಮೊದಲು 2031 ವಿಷನ್ ಸಿದ್ಧಪಡಿಸಲಾಗಿತ್ತು. ಇದೆ ಯೋಜನೆಯನ್ನು ಪರಿಷ್ಕರಿಸಿದ್ದು, ಅದನ್ನು ವಿಸ್ತರಿಸಿ 2050 ವಿಷನ್‌ಗೆ ಮಾಡಲಿದ್ದೇವೆ. ಈ ಯೋಜನೆ ಪ್ರಾರಂಭ ಹಂತದಲ್ಲಿದ್ದು ಸರಕಾರದ ಹಂತದಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಅವರು ಹೇಳಿದರು.

ಬಿಡಿಎ ಭವನ ನಿರ್ಮಾಣ: ಬಿಡಿಎ ಕಚೇರಿಯಲ್ಲಿ ಸಾಕಷ್ಟು ಪ್ರಮುಖ ಕಡತಗಳು ಸಣ್ಣ ಕಟ್ಟಡದಲ್ಲಿ ಇರುವುದು ಹೆಚ್ಚು ಸುರಕ್ಷಿತವಲ್ಲ. ಈ ದೃಷ್ಟಿಯಿಂದ ಬಿಡಿಎ ಭವನ ನಿರ್ಮಾಣದ ಚಿಂತನೆ ಮಾಡಿದ್ದು, ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲು ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News