ಸ್ಥಳನಾಮಗಳು

Update: 2018-11-03 17:09 GMT

ಪ್ರಪಂಚದ ಯಾವುದೇ ದೇಶದ ಯಾವುದೇ ಹಳ್ಳಿಗೂ ಒಂದಿಲ್ಲೊಂದು ಹೆಸರು ಇದ್ದೇ ಇರುತ್ತದೆ. ಮನುಷ್ಯ, ಭಾಷೆಯನ್ನು ಕಂಡುಕೊಂಡು ಒಂದೆಡೆ ನೆಲೆನಿಂತು ಮರಗಿಡ ಕಲ್ಲು ಮಣ್ಣಿಗೆಲ್ಲ ಹೆಸರು ಕೊಟ್ಟು, ವಸ್ತು ವ್ಯಕ್ತಿನಾಮಗಳನ್ನು ರೂಢಿಗೆ ತಂದಾಗಲೇ ಸ್ಥಳನಾಮಗಳು ಸೃಷ್ಟಿಗೊಂಡವು.

ಹಲವು ಜನರ ಗುಂಪು ಅಥವಾ ಒಂದೇ ಊರಿನ ಜನ ಒಂದೆಡೆ ವಾಸಿಸುವಾಗ ಅದೇ ಅವರ ಪ್ರಪಂಚವಾಗಿದ್ದಾಗ ಅಂತಹ ಸ್ಥಳಗಳಿಗೆ ಹೆಸರು ಕೊಟ್ಟುಕೊಳ್ಳುವ ಅಗತ್ಯವಿರದು. ಮನುಷ್ಯ ತನ್ನ ಅಂಗಾಂಗಗಳನ್ನು ಮೊದಲ್ಗೊಂಡು ಕಣ್ಣಿಗೆ ಕಾಣುವ, ಕಿವಿಗೆ ಕೇಳುವ, ಸ್ಪರ್ಶಕ್ಕೆ ನಿಲುಕುವ ವಸ್ತು ವಿಷಯಗಳಿಗೆಲ್ಲ ಹೆಸರು ಕೊಡುತ್ತಾ ನಡೆದ. ಜನಗಳಿಗೆ ಊರೂರುಗಳ ಸಂಪರ್ಕ ಏರ್ಪಟ್ಟು, ಸಂಬಂಧಗಳು ಬೆರೆತಾಗ ಸ್ಥಳನಾಮಗಳ ಆವಶ್ಯಕತೆಯನ್ನು ಕಂಡುಕೊಂಡ. ಆಯಾಯ ಸ್ಥಳ ಅಥವಾ ಊರವರೇ ಅವರವರ ಊರುಗಳಿಗೆ ಹೆಸರು ರೂಪಿಸಿಕೊಂಡದ್ದಕ್ಕಿಂತ ಸುತ್ತಲ ಊರವರು ಆ ಊರಿನ ವೈಶಿಷ್ಟಕ್ಕನ್ವಯಿಸಿ ಹೆಸರು ಕೊಟ್ಟು ಕರೆದರು. ಮುಂದೆ ಅದೇ ಆ ಊರಿನ ಸ್ಥಳನಾಮವಾಯಿತು.

ಬಹುಮಟ್ಟಿಗೆ ಆರಂಭದಲ್ಲಿ ಪ್ರಾಕೃತಿಕ ವಿಶಿಷ್ಟಗಳಿಗನುಗುಣವಾಗಿ ಸ್ಥಳನಾಮಗಳು ರೂಪಿತಗೊಂಡವು. ಶಿವಮೊಗ್ಗ ಜಿಲ್ಲೆ ಹೊನ್ನಾಳಿ ತಾಲೂಕಿನ ಈ ಸ್ಥಳನಾಮಗಳನ್ನು ಗಮನಿಸಿ; ದಿಡಗೂರು ತುಂಗಭದ್ರಾ ನದಿಯ ದಡದ ಮೇಲಿನ ಊರು. ನದಿಯ ದಡದ ಊರು ದಡದೂರು ಆಗಿ ದಿಡದೂರು ಕ್ರಮೇಣವಾಗಿ ದಿಡಗೂರು ಆಗಿದೆ. ದಡ ಮತ್ತು ದಿಡ ಒಂದೇ ಅರ್ಥವನ್ನು ಧ್ವನಿಸುವ ಪದಗಳಾಗಿವೆ.

ಸೌಳಂಗ ಎಂಬ ಊರು ಬಳಿ ದೊಡ್ಡಕೆರೆ ಇದೆ. ಈಗ್ಗೆ ಕೆಲವು ದಶಕಗಳ ಹಿಂದೆ ಸಾಬೂನು ಬಳಕೆಗೆ ಬರುವ ಮೊದಲು ಚೌಳು ಅಥವಾ ಸೌಳು ಎನ್ನುವ ಒಂದು ಬಗೆಯ ಬೂದಿಯಂತಹ ಮಣ್ಣು ಇಲ್ಲವೆ ಅಂಟುವಾಳ ಮರದ ಕಾಯಿಗಳನ್ನು ಬಟ್ಟೆ ಒಗೆಯಲು ಮತ್ತು ಸ್ನಾನಕ್ಕೆ ಬಳಸುತ್ತಿದ್ದರು. ಇವನ್ನು ಹಚ್ಚಿಕೊಂಡಾಗ ಸಾಬೂನಿನಂತೆ ಸ್ವಲ್ಪ ನೊರೆಯು ಬರುತ್ತದೆ. ಇದನ್ನು ಚೌಳು ಮಣ್ಣು ಹೆಚ್ಚಾಗಿರುವ ಭಾಗಕ್ಕೆ ಹೋಗಿ ಬಾಚಿಕೊಂಡು ಬರುತ್ತಾರೆ. ಇಂತಹ ಚೌಳು ಹೆಚ್ಚಾಗಿ ದೊರೆಯುತ್ತಿದ್ದ ಅಂಗಳದ ಬಳಿಯಲ್ಲಿ ಜನ ವಾಸಿಸತೊಡಗಿದಂತೆ ಊರಾದಾಗ ಚೌಳು ಅಂಗಳ ಎಂಬುದು ಚೌಳಂಗಳ ಎಂದಾಗಿ ಚಕಾರ ಸಕಾರವಾಗಿ ಸೌಳಂಗಳ ಕ್ರಮೇಣವಾಗಿ ಸೌಳಂಗ ಆಗಿದೆ. ಸ್ಥಳನಾಮಗಳ ಹುಟ್ಟಿನ ಹಿನ್ನೆಲೆಯ ಕಾರಣಗಳನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು.

1. ಪ್ರಾಕೃತಿಕ ಕಾರಣಗಳು

2. ಪುರಾಣ ಐತಿಹ್ಯಾತ್ಮಕ ಕಾರಣಗಳು

3. ವ್ಯಕ್ತಿಗತ ಕಾರಣಗಳು

4. ಕಸುಬಿನ ಕಾರಣಗಳು

5. ಜನಾಂಗೀಯ ಕಾರಣಗಳು

1. ಪ್ರಾಕೃತಿಕ ಕಾರಣಗಳು

ಸ್ಥಳದ ಸುತ್ತಲ ಪರಿಸರ ವಿಶೇಷಗಳನ್ನು ಗಮನಿಸಿ ಬೇರೊಂದು ಸ್ಥಳಕ್ಕಿಂತ ಭಿನ್ನವಾದ ಅಂಶಗಳನ್ನು ಗುರುತಿಸಿ ಅಂತಹ ಸ್ಥಳಗಳಿಗೆ ಹೆಸರು ಕೊಟ್ಟಿರುವುದನ್ನು ನೋಡಬಹುದು. ತಗ್ಗಿನಲ್ಲಿರುವ ಹಳ್ಳಿ ತಗ್ಗಿ ಹಳ್ಳಿ, ಗುಡ್ಡದ ಬಳಿ ಇರುವ ಊರು ಗುಡ್ಡಳ್ಳಿ. ಸುತ್ತಲೂ ಕೋಟೆ ಇರುವ ಊರು ಸುತ್ತುಕೋಟೆ, ಹೊಳೆಯ ಪಕ್ಕದ ಹಟ್ಟಿ ಹೊಳೆಹಟ್ಟಿ, ಭದ್ರಾನದಿ ದಡದಲ್ಲಿರುವ ಊರು ಭದ್ರಾವತಿ. ಇದರ ಹಿಂದಿನ ಹೆಸರು ಬೆಂಕಿಪುರ. (ಕಾರ್ಖಾನೆ ಹೊಗೆ ಕೊಳವೆಯಿಂದೇಳುವ ಬೆಂಕಿಯಂಥ ಹೊಗೆ ನೋಡಿದರೆ ಈಗಲೂ ಅದೇ ಹೆಸರಿದ್ದರೆ ಸರಿ ಎನಿಸುತ್ತಿತ್ತೇನೊ)

ಹೊನ್ನಾಳಿಗೆ ಒಂಬತ್ತು ಕಿ.ಮೀ. ದೂರದ ಊರು ಕುರುವ. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟಿನಲ್ಲಿ ಕುರುವ, ಕುರ್ವ, ಕುಳುಂಬ ಎಂಬ ಸಮಾನ ಪದಗಳ ಪಟ್ಟಿಯಿದ್ದು, ನೀರಿನಿಂದ ಸುತ್ತುವರಿದ ಪ್ರದೇಶ; ದ್ವೀಪ; ನಡುಗಡ್ಡೆ; ಅಂತರೀಪ ಎಂಬ ಅರ್ಥಗಳನ್ನು ಕೊಡಲಾಗಿದೆ. ಈ ಊರು ಒಂದು ಪಕ್ಕದಲ್ಲಿ ಅಂದರೆ ಪೂರ್ವದಲ್ಲಿ ತುಂಗಭದ್ರಾ ಹರಿದರೆ ಪಶ್ಚಿಮದಲ್ಲಿ ಹಳ್ಳ ಹರಿಯುತ್ತದೆ. ಉತ್ತರಕ್ಕೆ ಹಿರೇಹಳ್ಳ ಎಂಬ ದೊಡ್ಡ ಹಳ್ಳ ಹರಿಯುತ್ತದೆ. ಮಳೆಗಾಲ ಬಂದರೆ ಹೊಳೆಯ ಒತ್ತಿನಿಂದಾಗಿ ಊರು ಒಂದು ರೀತಿ ನಡುಗಡ್ಡೆಯಾಗುತ್ತದೆ. ಇದನ್ನು ನೋಡಿಯೆ ಈ ಊರಿಗೆ ಕುರುವ ಎಂದಿಟ್ಟಿದ್ದಾರೆ. ಇನ್ನೊಂದು ಮುಖ್ಯ ಅಂಶವೆಂದರೆ ಈ ಊರಿಗೆ ಸೇರಿ ಹರಿಯುವ ಹೊಳೆ ತುಂಗಭದ್ರಾ ಹುಟ್ಟುವಾಗ ಬೇರೆ ಬೇರೆ ಹುಟ್ಟಿ ಕೂಡಲಿ ಎಂಬಲ್ಲಿ ಕೂಡಿ ಒಂದಾಗಿ ಮುಂದೆ ಸಾಗುತ್ತವೆ. ಅವು ಪುನಃ ಈ ಕುರುವದ ಬಳಿ ಎರಡು ಹೋಳಾಗಿ ನೂರಾರು ಎಕರೆಯಷ್ಟು ಪ್ರದೇಶವನ್ನು ಮಧ್ಯೆ ಬಿಟ್ಟು ಸುತ್ತಲೂ ಹರಿಯುತ್ತವೆ. ಈ ಹೊಳೆ ಮಧ್ಯದ ಪ್ರದೇಶವನ್ನು ಗಡ್ಡೆ ಎಂದು ಕರೆಯುತ್ತಾರೆ. ಇಲ್ಲಿ ರಾಮಾಯಣದ ಶ್ರೀರಾಮ ಸ್ಥಾಪಿಸಿದ್ದೆಂದು ಹೇಳುವ ಲಿಂಗದ ಗುಡಿ ಇದೆ. ಇದು ಕುರುವಕ್ಕೆ ಸೇರಿದ್ದಾದ್ದರಿಂದ ಕುರುವ ಗಡ್ಡೆ ಎಂದೆ ಹೇಳುವುದು ಸಾಮಾನ್ಯ. ಈ ಕುರುವ ಈಗ ಹೊಳೆ ಪಕ್ಕದಿಂದ ಒಂದು ಕಿ.ಮೀ. ಆಚೆಯ ಬೇರೆಯ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಈಗಿರುವ ಊರನ್ನು ದೃಷ್ಟಿಯಲ್ಲಿಟ್ಟು ನೋಡಿದರೆ ದ್ವೀಪವೇ ಆಗಿಲ್ಲ.

ಹೊನ್ನಾಳಿಗೆ ಆರೇಳು ಕಿ.ಮೀ. ದೂರದಲ್ಲಿ ಯರೆಹಳ್ಳಿ ಎಂಬ ಊರಿದೆ. ಈ ಊರ ಸುತ್ತಲಿನ ಹೊಲವೆಲ್ಲ ಯರೆಯೆ. ಅಂದರೆ ಕಪ್ಪುನೆಲ. ಯರೆ ಭೂಮಿಯಲ್ಲಿರುವ ಊರು ಯರೆಹಳ್ಳಿ ಎಂದಾಯಿತು. ಚಿಕ್ಕಮಗಳೂರು ತಾಲೂಕು, ಅರಸೀಕೆರೆ ತಾಲೂಕಿನಲ್ಲಿ ಸಹ ಒಂದು ಯರೆಹಳ್ಳಿ ಇದೆ.

ಸೊರಟೂರು ಹೊನ್ನಾಳಿ ತಾಲೂಕಿನ ಇನ್ನೊಂದು ಗ್ರಾಮ. ಬಹುಶಃ ಈ ಊರು ರೂಪುಗೊಂಡಾಗ ವಕ್ರ ವಕ್ರವಾಗಿ ಸೊರಟಾಗಿದ್ದಿತೆಂದು ಕಾಣುತ್ತದೆ. ಆದ್ದರಿಂದ ಈ ಊರನ್ನು ಸೊರಟೂರು ಎಂದರು. ಇದು ದಿನ ಬಳಕೆಯಲ್ಲಿ ಸಕಾರ ಹೋಗಿ ಚಕಾರವಾಗಿ ಚೊಲ್ಟೂರು ಆಗಿದೆ. ಆದರೆ ಅರ್ಥಕ್ಕೇನೂ ತೊಂದರೆಯಿಲ್ಲ. ಸೊಟ್ಟ ಚೊಟ್ಟ ಎಂಬುವು ಸಮಾನಾರ್ಥ ಪದಗಳು. ಹೀಗೆಯೇ ಸೌಟನ್ನು ಚೌಟು ಎಂದು ಬಳಸುವುದನ್ನು ಗಮನಿಸಬಹುದು. ಒಂದೊಂದು ಪ್ರದೇಶ ಒಂದೊಂದು ವಿಶೇಷ ಮರಗಿಡಗಳಿಂದ ತುಂಬಿರುತ್ತದೆ. ಅಂತಹ ಪ್ರದೇಶದಲ್ಲಿರುವ ಊರಿಗೆ ಸಹಜವಾಗಿಯೇ ಆ ವಿಶೇಷ ಮರಗಿಡ ಹೂವಿನ ಹೆಸರು ಬರುತ್ತದೆ. ಹೊನ್ನಾಳಿ ತಾಲೂಕಿನ ಸುರಹೊನ್ನೆ, ಮಲ್ಲಿಗೇನಹಳ್ಳಿ ಮೊದಲಾದ ಊರುಗಳನ್ನು ನೋಡಬಹುದು. ಈಗ ಮಲೆನಾಡ ಸೆರಗಿನ ಊರಾಗಿರುವ ಈ ಹಳ್ಳಿಗಳು ಹಿಂದೆ ಮಲೆನಾಡಲ್ಲೇ ಇದ್ದು ಈ ಹೂವುಗಳಿಂದ ತುಂಬಿದ್ದರಿಂದಲೇ ಈ ಹೆಸರುಗಳು ಬಂದಿವೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಒಂದು ಹಳ್ಳಿ ಸಾಲೂರು. ಈ ಊರು ಮುಖ್ಯ ರಸ್ತೆಯ ಅಕ್ಕಪಕ್ಕಕ್ಕೆ ಸಾಲಾಗಿದೆ. ಸಾಲಾಗಿರುವ ಊರು ಸಾಲೂರು ಆಯಿತು.

2. ಪುರಾಣ ಐತಿಹ್ಯಾತ್ಮಕ ಕಾರಣಗಳು

ಪುರಾಣಗಳು ನಮ್ಮ ಸಂಸ್ಕೃತಿಯ ಎಲ್ಲಾ ಮುಖಗಳ ಮೇಲೂ ತಮ್ಮ ಛಾಪು ಮೂಡಿಸಿವೆ. ನಮ್ಮ ಸಂಸ್ಕೃತಿಯ ಒಳಸೆರಗಲೆಲ್ಲ ಬೆಸೆದು ಹೋಗಿವೆ. ಇಲ್ಲಿ ಒಂದು ನಾಯಿ ನಾರಾಯಣನಾಗುತ್ತದೆ. ಅದನ್ನು ಒದೆಯಬಾರದೆಂಬ ನಂಬಿಕೆ ಇದೆ. ನಾಯಿಯನ್ನು ಒದೆಯಬೇಡಿ, ಒದ್ದರೆ ಕಚ್ಚುತ್ತದೆ ಎಂದು ಹೇಳಿದರೆ ಗಂಭೀರವಾಗಿ ತೆಗೆದುಕೊಳ್ಳದಿರುವ ಸಾಧ್ಯತೆಯು ಇರುವುದರಿಂದ ಅದಕ್ಕೆ ದೈವ ಭಾವ ಕೊಟ್ಟಿದ್ದಾರೆ. ಹೀಗೆಯೇ ಕಾಗೆ ಶನಿರಾಯನ ವಾಹನ ಹೊಡೆಯಬಾರದು, ಅಳಿಲು ರಾಮನ ಬಂಟ. ಹೀಗೆ ಎಲ್ಲಾ ವಿಷಯಗಳಲ್ಲೂ ಪುರಾಣ ನುಸುಳಿದೆ. ನಮ್ಮ ಊರುಗಳೂ ಅಷ್ಟೇ ಹನುಮನಹಳ್ಳಿ, ರಾಮೇಶ್ವರ, ರಾಂಪುರ, ನಾರಾಯಣಪುರ, ಮಲ್ಲಿಕಾರ್ಜುನ ನಗರ, ಶಿವಪುರ, ಶಂಕರಪುರ ಮೊದಲಾದ ಸ್ಥಳನಾಮಗಳನ್ನು ಗಮನಿಸಬಹುದು.

ಐತಿಹ್ಯಾತ್ಮಕ ಅಂಶಗಳೇ ಮುಖ್ಯವಾಗಿರುವ ಸ್ಥಳನಾಮಗಳು ನಮ್ಮಲ್ಲಿ ಸಾಕಷ್ಟಿವೆ. ಶಿಕಾರಿಪುರ ತಾಲೂಕಿನ ಹೊನ್ನಾಳಿ ಮಾರ್ಗದ ಹತ್ತಿರದಲ್ಲಿರುವ ಊರು ಗೊಗ್ಗ. ಈ ಊರ ಮುಖ್ಯ ದೇವರು ಗೊಗ್ಗಮ್ಮ. ಈ ಊರಿಗೆ ಸಮೀಪದ ಗುಡ್ಡದ ಮೇಲೆ ಕಲ್ಲಲ್ಲಿ ಒಡೆದು ಮೂಡಿದೆ ಎಂದು ಹೇಳುವ ಮೂರ್ತಿ ಇದೆ ಎಂದು ಹೇಳುತ್ತಾರೆ. ಹಿಂದೆ ಉತ್ತರ ಕರ್ನಾಟಕ (ಬಹುಶಃ ಹರಪನಹಳ್ಳಿ) ಭಾಗದಲ್ಲಿ ಗೊಗ್ಗಮ್ಮ ಮತ್ತು ಆಕೆಯ ಸಹೋದರರು ಇದ್ದಾಗ, ಸುಂದರಿಯಾದ ಈಕೆಯನ್ನು ನೋಡಿದ ಪಾಳೇಗಾರನೊಬ್ಬ ಬಯಸುತ್ತಾನೆ. ಆದರೆ ಈಕೆ ಒಪ್ಪುವುದಿಲ್ಲ ರಾತ್ರೋ ರಾತ್ರಿ ಗಾಡಿ ಕಟ್ಟಿಕೊಂಡು ಹೊಳೆದಾಟ ಬರುತ್ತಾರೆ. ವಿಷಯ ತಿಳಿದ ಪಾಳೇಗಾರ ತನ್ನ ಸೈನ್ಯದೊಂದಿಗೆ ಬೆನ್ನಟ್ಟಿ ಬರುತ್ತಾನೆ. ಈಕೆಯ ಸಹೋದರರು ಈಗಿನ ಗೊಗ್ಗಕ್ಕೆ ಸಮೀಪ ಬರುವ ವೇಳೆಗೆ ಹೋರಾಡಿ ಸಾಯುತ್ತಾರೆ. ಈಕೆ ಮಾತ್ರ ಹೇಗೋ ಈ ಗುಡ್ಡ ಸೇರುತ್ತಾಳೆ. ಪಾಳೇಗಾರ ಸುತ್ತಲೂ ಪಹರೆ ಬಿಟ್ಟು ಗುಡ್ಡ ಹತ್ತುತ್ತಾನೆ. ಆಕೆಯ ಬಳಿಗೆ ಬರುವ ವೇಳೆಗೆ ಎಲ್ಲರಿಗೂ ಹಸಿವಾಗಿರುತ್ತದೆ. ಆಕೆಯನ್ನು ಕೇಳಿದಾಗ ಆಕೆ ಮೂರು ಮುದ್ದೆ ಮಾಡುತ್ತಾಳೆ. ಅದರಲ್ಲಿಯ ಅರ್ಧ ಮುದ್ದೆ ಎಲ್ಲರಿಗೂ ಸಾಕಾಗುತ್ತದೆಯಂತೆ. ಅನಂತರ ಆಕೆ ಅಲ್ಲೆ ಕಲ್ಲಾದಳು. ಆ ಮುದ್ದೆಗಳು ಕಲ್ಲಾಗಿ ಹಾಗೆಯೇ ಇವೆ ಎಂದು ಹೇಳುತ್ತಾರೆ. ಈಗಲೂ ಈ ಮನೆತನಕ್ಕೆ ಸೇರಿದ ಮನೆಗಳಿವೆ. ವರ್ಷದ ಹಬ್ಬದಲ್ಲಿ ಅವರು ಅಮ್ಮನಿಗೆ ಹೆಡಿಗೆಯಲ್ಲಿ ಎಡೆ ಒಯ್ಯುತ್ತಾನೆ.

ಒಟ್ಟಿನಲ್ಲಿ ಏನೇ ಬಂದರೂ ತನ್ನ ಶೀಲ ಕಳೆದುಕೊಳ್ಳದ ಈಕೆ ಜನರ ಮನೋಭಾವದಲ್ಲಿ ದೇವರಾಗುತ್ತಾಳೆ. ಈ ಕಾರಣದಿಂದ ಈಕೆಯ ಹೆಸರೇ ಈ ಊರಿಗೆ ಬಂತು ಎಂದು ಹೇಳುತ್ತಾರೆ. ಕಲ್ಲು, ಮಣ್ಣು, ಮರ-ಮುಟ್ಟುಗಳಲ್ಲಿ ದೇವರನ್ನು ಕಾಣುತ್ತ ಬಂದಿದ್ದಾರೆ ನಮ್ಮ ಜನ. ಮರದ ಬಳ್ಳಿಯೊಂದು ನಾಗರ ಹೆಡೆಯಂತಿದ್ದರೆ ಅದಕ್ಕೆ ಪೂಜೆ ಮಾಡುತ್ತಾರೆ. ಜನ ಹಿಂಡುಗಟ್ಟಿ ನೋಡಲು ಬರುತ್ತಾರೆ. ಅದೇ ಒಂದು ಆಕರ್ಷಕ ಸ್ಥಳವಾಗಿ ಬಿಡುವ ಸಂದರ್ಭವೇ ಹೆಚ್ಚು. ಶಿವಮೊಗ್ಗ ನಗರದ ನೆಹರೂ ರಸ್ತೆ ಪಕ್ಕದ ಮನೆಯೊಂದರ ಮುಂದಿನ ಮರದಲ್ಲೊಂದು ನಾಗರ ಹೆಡೆಯಾಕಾರದಲ್ಲಿದ್ದುದು ಗೋಚರಿಸಿತು. ಆಗಲೇ ಅದಕ್ಕಾಗಿ ಪೂಜೆ ಪುನಸ್ಕಾರಗಳು ನಡೆದವು. ಅಲ್ಲದೆ ಅಲ್ಲಿ ಆ ಹೆಡೆಯ ಮೇಲೆ ಕೃಷ್ಣನ ಆಕಾರವನ್ನು ಆರೋಪಿಸತೊಡಗಿದ್ದನ್ನು ನೋಡಿದರೆ ನಮ್ಮ ಜನರ ಧಾರ್ಮಿಕ ಮನೋಭಾವ ಹೇಗೆಂಬುದನ್ನು ಗ್ರಹಿಸಬಹುದು.

ಹೀಗೆಯೇ ಅನೇಕಾನೇಕ ಬಂಡೆಗಳು ಕಲ್ಲುಗಳು ಪ್ರಾಕೃತಿಕವಾಗಿ ನೀರಿನ ಸೆಳವಿಗೆ ಸಿಕ್ಕಿ ಸವೆದೂ, ಕಲ್ಲುಗಳ ಪದರ ಕಳಚಿದಾಗಲೊ ಏನೇನೋ ಆಶ್ಚರ್ಯಕರ ಆಕಾರಗಳು ಮೂಡಿರುವುದನ್ನು ಕಾಣಬಹುದು. ನಾವು ಅದರ ಆಕಾರವನ್ನು ದೇವರು ದೈವಗಳಿಗೆ ಸಮೀಕರಿಸಿದಾಗ ಅವು ಉದ್ಭವ ಮೂರ್ತಿಗಳಾಗುತ್ತವೆ. ಬೆಂಗಳೂರು ಬಸವನಗುಡಿಯ ಗಣಪತಿ ಹಾಗೂ ವಿಜಯನಗರದ ಬಳಿಯ ಆಂಜನೇಯ ಮೊದಲಾದ ದೇವರುಗಳ ಮೂರ್ತಿಗಳನ್ನು ಗಮನಿಸಬಹುದು. ಬೆನವನ ಆಕಾರದ ಕಿರು ಬಂಡೆಯೊಂದು ಗೋಚರವಾದಾಗ ಅದನ್ನು ಪೂಜಿಸಿ, ಅದರ ಸುತ್ತ ಊರು ರೂಪಿತವಾದಾಗ ಅದು ಬೆನವನಹಳ್ಳಿ, ಬೆನಕನಹಳ್ಳಿ ಎಂದಾಗಬಹುದು. ಹೊನ್ನಾಳಿಗೆ ಐದಾರು ಮೈಲಿ ದೂರದ ಊರು ಬೆನಕನಹಳ್ಳಿಗೆ ಹೀಗಾಗಿಯೇ ಈ ಹೆಸರು ಬಂದಿರುವುದು.

3. ವ್ಯಕ್ತಿಗತ ಕಾರಣಗಳು

ವ್ಯಕ್ತಿಯ ಪ್ರಸಿದ್ಧಿ, ವೈಶಿಷ್ಟ, ವೈಚಿತ್ರ, ಗುಣಗಳೂ ಸಹ ಸ್ಥಳನಾಮಗಳಿಗೆ ಕಾರಣವಾಗುತ್ತವೆ. ಪ್ರಪಂಚದಲ್ಲೆಲ್ಲ ಈ ತರದ ಸ್ಥಳನಾಮಗಳಿರುವುದನ್ನು ಕಾಣಬಹುದು, ಅಮೆರಿಕ ಸ್ವಾತಂತ್ರ ಹೋರಾಟಗಾರ ಹಾಗೂ ಪ್ರಥಮ ಅಧ್ಯಕ್ಷರು ಆಗಿದ್ದ ಜಾರ್ಜ್ ವಾಷಿಂಗ್ಟನ್‌ರ ಹೆಸರು ಆ ದೇಶದ ರಾಜಧಾನಿಯಾದ ವಾಷಿಂಗ್‌ಟನ್ ನಗರಕ್ಕಿರುವುದು, ರಶ್ಯಾದ ಕ್ರಾಂತಿಯ ನೇಕಾರ ಲೆನಿನ್‌ರ ಹೆಸರು ಲೆನಿನ್‌ಗ್ರಾಡ್ ಎಂಬ ನಗರಕ್ಕಿರುವುದು, ಅಷ್ಟೇಕೆ ನಮ್ಮ ಮೈಸೂರು ರಾಜರುಗಳ ಹೆಸರುಗಳೇ ಸ್ಥಳನಾಮಗಳಾಗಿರುವ ಕೃಷ್ಣರಾಜಪುರ, ಕೃಷ್ಣರಾಜಪೇಟೆ, ಜಯಚಾಮರಾಜೇಂದ್ರನಗರ ಮೊದಲಾದವುಗಳನ್ನು ಇಲ್ಲಿ ಉಲ್ಲೇಖಿಸಬಹುದು. ಅಲ್ಲದೆ ಈಗಲೂ ನಮ್ಮ ನಗರಗಳ ಬಡಾವಣೆಗಳಿಗೆ ಗಾಂಧಿನಗರ, ತಿಲಕ್‌ನಗರ, ರಾಜಾಜಿನಗರ, ಇಂದಿರಾನಗರ ಎಂದೆಲ್ಲ ಹೊಸ ಹೆಸರು ಕೊಡುತ್ತಿರುವುದನ್ನು ಗಮನಿಸಬಹುದು. ಹಾಗೆ ನೋಡಿದರೆ ಈ ಹೆಸರುಗಳೆಲ್ಲ ಸ್ವಭಾವತಃ ಬಳಕೆಗೆ ಬಂದವಲ್ಲ. ಹೊಸದಾಗಿ ಒತ್ತಾಯವಾಗಿ ಬಳಕೆಗೆ ತಂದಂತಹವೇ ಹೆಚ್ಚನ್ನಬಹುದು. ಆದರೆ ಸ್ಥಳನಾಮಗಳು ಯಾವುದೇ ಒತ್ತಾಯವಿಲ್ಲದೆ ಸಹಜವಾಗಿ ಬಳಕೆಗೆ ಬಂದು ಅವೇ ಉಳಿದುಬಿಡುತ್ತವೆ. ಹೆಸರಾದ ವ್ಯಕ್ತಿ ಬೋರನಿದ್ದ ಊರು ಬೋರಸಂದ್ರ ಆಗಬಹುದು. ಕಾಲಾನಂತರದಲ್ಲಿ ಶಿಷ್ಟರ ಕೈಗೆ ಸಿಕ್ಕು ಅದು ಭೈರಸಂದ್ರ ಆಗಬಹುದು. ಹೊನ್ನಾಳಿ ತಾಲೂಕಿನ ಈ ಕೆಳಗಿನ ಕೆಲ ಊರುಗಳನ್ನು ಗಮನಿಸಿ: ಗಂಗನ ಕೋಟೆ, ಮಾದನ ಬಾವಿ, ಕಂಕನಹಳ್ಳಿ, ಕೆಂಚಿಕೊಪ್ಪ (ಕೆಂಚಿಯ ಕೊಪ್ಪ) ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ, ಶಿವಮೊಗ್ಗ ತಾಲೂಕಿನ ಸೋಮನ ಕೊಪ್ಪ, ಮೊದಲಾದವನ್ನು ಗಮನಿಸಬಹುದು. ಇವು ಸ್ಪಷ್ಟವಾಗಿ ವ್ಯಕ್ತಿಯ ಹೆಸರುಗಳನ್ನೊಳಗೊಂಡವೆಂಬುದು ಗೊತ್ತಾಗುತ್ತದೆ. ಹಾಡೋನಹಳ್ಳಿ ಶಿವಮೊಗ್ಗ ತಾಲೂಕಿನ ಒಂದು ಹಳ್ಳಿ. ದೊಡ್ಡಬಳ್ಳಾಪುರ ತಾಲೂಕಿನಲ್ಲೂ ಈ ಹೆಸರಿನ ಊರಿದೆ. ಇದನ್ನು ಬಿಡಿಸಿದರೆ ಹಾಡುವವನ ಹಳ್ಳಿ ಎಂದಾಗುತ್ತದೆ. ಪ್ರಸಿದ್ಧ ಹಾಡುಗಾರ (ಬಹುಶಃ ಜಾನಪದ)ನೊಬ್ಬ ಇಲ್ಲಿದ್ದು ಅದೇ ಆ ಸ್ಥಳದ ಹೆಸರಿಗೆ ಮೂಲವಾಗಿರುವ ಸಾಧ್ಯತೆ ಹೆಚ್ಚು. ಒಟ್ಟಿನಲ್ಲಿ ಹಾಡುಗಾರನ ಅಥವಾ ಹಾಡುವವನಹಳ್ಳಿ ಹಾಡೋನಹಳ್ಳಿ ಆಗಿದೆ.

4. ಕಸುಬಿನ ಕಾರಣಗಳು

ಮನುಷ್ಯ ಅಲೆಮಾರಿ ಜೀವನದಿಂದ ನೆಲೆನಿಂತು ಬೇಸಾಯ ಪಶುಪಾಲನಾದಿ ಕೆಲಸಗಳಿಗೆ ತೊಡಗಿದಂತೆ ಬೇಸಾಯದ ಉಪಕರಣಗಳನ್ನು ಸಿದ್ಧಗೊಳಿಸುವ ಕಸುಬುದಾರರ ಅಗತ್ಯ ಉಂಟಾಯಿತು. ಬೆಳೆ ಬೆಳೆಯುವ ರೈತರು ಬೇಸಾಯವನ್ನೇ ಕಸುಬಾಗಿಸಿಕೊಂಡಂತೆ ಕಮ್ಮಾರ, ಬಡಗಿ ಮೊದಲಾದವರು ತಮ್ಮ ಜೀವನ ನಿರ್ವಹಣೆಗೆ ಆಯಾಯ ಕಸುಬುಗಳನ್ನೇ ಅವಲಂಬಿಸಿದರು. ಇಂತಹ ಕಸುಬುದಾರರೇ ಮುಖ್ಯವಾಗಿರುವ ತಾಣಗಳು ಆ ಕಸುಬಿನ ಅಂಕಿತವನ್ನೊಳಗೊಂಡ ಸ್ಥಳನಾಮಗಳನ್ನು ಹೊಂದಿದವು. ಹೊನ್ನಾಳಿ ತಾಲೂಕಿನ ಈ ಕೆಲವು ಸ್ಥಳನಾಮಗಳನ್ನು ಗಮನಿಸಿ. ಕಮ್ಮಾರರೇ ಮುಖ್ಯವಾಗಿದ್ದಂತಹ ಸ್ಥಳ ಕಮ್ಮಾರಗಟ್ಟಿಯಾಯಿತು. ಚೆಬ್ಬಲು, ಪುಟ್ಟೆ, ಹೆಡಿಗೆ, ಜಲ್ಲೆ, ಕಣಜ ಮೊದಲಾದ ಬಿದಿರಿನ ವಸ್ತುಗಳನ್ನು ಮಾಡುವ ಕೊರಚರೇ ವಾಸವಾಗಿರುವ ಹಳ್ಳಿ ಕೊಡಚೀಗನಹಳ್ಳಿ ಎಂದಾಗಿದೆ. ಕೊರಚರು ಎಂಬುದನ್ನು ಕೊಡಚರು ಎಂದೂ ಕರೆಯುವುದಿದೆ. ಕಂಚುಗಾರರು ಅಂದರೆ ಕಂಚಿನ ಸಾಮಾನುಗಳನ್ನು ಮಾಡುವವರೇ ಇರುವ ಸ್ಥಳ ಕಂಚುಗಾರನಹಳ್ಳಿ ಎನಿಸಿತು. (ಚನ್ನಗಿರಿ ತಾ॥

5. ಜನಾಂಗೀಯ ಕಾರಣಗಳು

ಒಂದು ಕಸುಬಿಗೆ ಅಂಟಿಕೊಂಡ ಒಂದೇ ಆಚಾರ ವಿಚಾರಕ್ಕಂಟಿದ ಅಥವಾ ಒಂದೇ ಜಾತಿಯ ಜನ ಒಂದೆಡೆ ವಾಸವಾಗುಳ್ಳ ಸ್ಥಳಗಳಿಗೆ ಅವರವರ ಜಾತಿ ಜನಾಂಗದ ಹೆಸರೇ ಅವರವರ ಸ್ಥಳಗಳಿಗೆ ಬಂದವು. ಶಿವಮೊಗ್ಗ ಜಿಲ್ಲೆಯ ಗೊಲ್ಲರಹಳ್ಳಿ, ಬೇಡರ ಹೊಸಹಳ್ಳಿ, ಜೋಗಿಹಳ್ಳಿ ಮೊದಲಾದವುಗಳನ್ನು ಗಮನಿಸಬಹುದು. ಗೊಲ್ಲರೇ ಇರುವ ಹಳ್ಳಿ ಗೊಲ್ಲರ ಹಳ್ಳಿಯಾಯಿತು. ಜೋಗೇರು ಇರುವ ಹಳ್ಳಿ ಜೋಗಿಹಳ್ಳಿ ಆಯಿತು. ಈ ಮೇಲಿನ ಕಾರಣಗಳಲ್ಲದೆ ಇನ್ನೂ ಅನೇಕ ಅಂಶಗಳು ಸ್ಥಳನಾಮಗಳಿಗೆ ಕಾರಣವಾಗುತ್ತವೆ. ದೊಡ್ಡತ್ತಿನಹಳ್ಳಿ ಹೊನ್ನಾಳಿ ತಾಲೂಕಿನ ಒಂದು ಹಳ್ಳಿ. ಉಳಲು ಎಳೆಯಲು ಎಲ್ಲದರಲ್ಲೂ ಸಾಮಾನ್ಯ ಎತ್ತಿಗಿಂತ ಬಹುಗಟ್ಟಿಯಾದ ಎತ್ತೊಂದು ಇಲ್ಲಿದ್ದು ಇದೇ ಸ್ಥಳನಾಮಕ್ಕೆ ಕಾರಣವಾಗಿದೆ. ದೊಡ್ಡ ಎತ್ತಿನ ಹಳ್ಳಿ ಬಳಕೆಯಲ್ಲಿ ಸವೆದು ದೊಡ್ಡತ್ತಿನಹಳ್ಳಿ ಆಗಿದೆ. ಹೀಗೆಯೇ ಚಿಕ್ಕಮಗಳೂರು ಜಿಲ್ಲೆ ಕಡೂರಿಗೆ ಸಮೀಪದ ಹೊರಿತಿಮ್ಮನಹಳ್ಳಿಯನ್ನು ಇಲ್ಲಿ ಹೆಸರಿಸಬಹುದು.

ಹೊನ್ನಾಳಿಯ ಹಿರೇಕಲ್ಮಠಕ್ಕೆ ಮೈಸೂರು ರಾಜರು ಒಡೆಯರ್ ಎಂಬ ಬಿರುದು ಕೊಟ್ಟು ಹತ್ತು ಊರುಗಳನ್ನು ಜಹಗೀರು ಕೊಟ್ಟರಂತೆ. ಆದರೆ ದೇವರು ಕೊಟ್ಟರೂ ಪೂಜಾರಿ ಕೊಡ ಎಂಬಂತೆ ಕಾರಣಿಕ ಹತ್ತು ಊರುಗಳಿಗೆ ಬದಲು ಒಡರತ್ತೂರನ್ನು ಕೊಡಲಾಗಿದೆ ಎಂದು ಒಂದೇ ಊರು ಎಂಬ ಅರ್ಥ ಬರುವಂತೆ ದಾಖಲಿಸಿದ. ಹಾಗಾಗಿ ಆ ಊರಿಗೆ ಒಡೇರತ್ತೂರು ಎಂಬ ಹೆಸರು ಬಂತಂತೆ. ಈ ಊರಿನ ನೂರಾರು ಎಕರೆ ಜಮೀನು ಮೇಲಿನ ಮಠಕ್ಕೆ ಸೇರಿರುವುದು ಮೇಲಿನ ಕಡೆಗೆ ಒತ್ತು ಕೊಡುತ್ತದೆ. ಸಾಮಾನ್ಯವಾಗಿ ಸ್ಥಳನಾಮವಾಗಿ ಕೊನೆಯಲ್ಲಿ ವಾಸ್ತವ್ಯ ಸೂಚಕ ಪದಗಳಾದ ಹಳ್ಳಿ, ಹಟ್ಟಿ, ದೊಡ್ಡಿ, ಸಂದ್ರ, ಕೆರೆ, ಕಟ್ಟೆ, ಕೊಳ, ಕೊಪ್ಪ, ಊರು, ಪುರ, ಪಟ್ಣ ಮೊದಲಾದವು ಸೇರಿರುತ್ತವೆ. ಸ್ಥಳನಾಮಗಳಲ್ಲಿ ಲಿಖಿತ ರೂಪದಲ್ಲಿರುವ ಹೆಸರು ಒಂದಾದರೆ ಕರೆಯುವ ಹೆಸರು ಇನ್ನೊಂದಾಗಿರುವುದೂ ಉಂಟು. ಬಸವನಹಳ್ಳಿ ಎರಡು ದಾಖಲಾಗಿರುವ ಹೊನ್ನಾಳಿ ತಾಲೂಕಿನ ಈ ಊರಿಗೆ ಸಗಾನಹಳ್ಳಿ ಎಂದು ಕರೆಯುತ್ತಾರೆ. ಹಳ್ಳಿಗರು ಸ್ಥಳನಾಮಗಳನ್ನು ಅಡಕಗೊಳಿಸಿ ಕರೆಯುವುದು ಸಾಮಾನ್ಯ. ಗೋಪಗೊಂಡನ ಹಳ್ಳಿಯನ್ನು ಗೋಪಾನಹಳ್ಳಿ ಎಂದು, ಗೋವಿನಕೋವಿಯನ್ನು ಗ್ವಾನ್ನ್ಯೇವಿ, ಹರಳ ಹಳ್ಳಿಯನ್ನು ಹಳ್ಳಳ್ಳಿ ಎಂದು ಕರೆಯುತ್ತಾರೆ.

ಹೀಗೆ ಒಂದೊಂದು ಸ್ಥಳನಾಮಗಳು ಒಂದಲ್ಲೊಂದು ವಿಶಿಷ್ಟಾಂಶಗಳಿಂದ ರೂಪಿತಗೊಂಡಿರುತ್ತವೆ. ಒಂದೊಂದು ಸ್ಥಳನಾಮವು ಒಂದೊಂದು ಅಧ್ಯಯನವಾಗಬಲ್ಲಷ್ಟು ಹಿನ್ನೆಲೆ ಉಳ್ಳವು. ಸ್ಥಳನಾಮಗಳ ಅಧ್ಯಯನ ಎಂದರೆ ಸ್ಥಳನಾಮಗಳ ಮಹಾರಾಶಿಯನ್ನು ನಶ್ಯದ ಡಬ್ಬಿಯಿಂದ ಅಳದಂತೆ, ಅಗೆೆದಷ್ಟು ಒಸರುತ್ತಿರುತ್ತದೆ. ಬಗೆದಷ್ಟು ಮೊಗೆದಷ್ಟು ಸಿಕ್ಕುತ್ತಲೇ ಇರುತ್ತದೆ.

ಸ್ಥಳನಾಮಗಳಲ್ಲಿ ಹಲವು ವೈಶಿಷ್ಟಗಳು ಇರುವಂತೆಯೇ ತಮಾಷೆಯೆನಿಸುವ ಮುಜುಗರ ಉಂಟುಮಾಡುವ ಹೆಸರುಗಳು ಕಾಣಸಿಗುತ್ತವೆ. ಭಾರತವು ಸೇರಿದಂತೆ ಇನ್ನಿತರ ಹಲವು ದೇಶಗಳಲ್ಲಿ ಹೀಗೆ ಅಸಹಜ ಎನಿಸುವ ಊರಿನ ಹೆಸರುಗಳ ನಾಮಫಲಕಗಳು ಇಲ್ಲಿವೆ.

Writer - ಕುರುವ ಬಸವರಾಜ್

contributor

Editor - ಕುರುವ ಬಸವರಾಜ್

contributor

Similar News