ನಗರದ ಸುಸ್ಥಿರತೆಗೆ ಅಪಾರ್ಟ್‌ಮೆಂಟ್‌ಗಳ ಛಾವಣಿ ಮೇಲೆ ಸೋಲಾರ್ ಅಳವಡಿಕೆ: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ

Update: 2018-11-03 16:10 GMT

ಬೆಂಗಳೂರು, ನ. 3: ನಗರದ ಸುಸ್ಥಿರತೆಯನ್ನು ಕಾಪಾಡಲು ಅಪಾರ್ಟ್‌ಮೆಂಟ್‌ಗಳ ಮೇಲ್ಛಾವಣಿ ಮೇಲೆ ಸೋಲಾರ್ ಅಳವಡಿಸಲು ಉಪಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ತಿಳಿಸಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಬೆಂಗಳೂರು ಅಪಾರ್ಟ್‌ಮೆಂಟ್ಸ್ ಫೆಡರೇಷನ್‌ನಿಂದ ಬ್ಯಾಂಬೂಸ್ ಎಂಬ ನಗರವ್ಯಾಪಿ ತಾರಸಿ ಮೇಲಿನ ಸೌರ ಉಪಕ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೋಲಾರ್ ರೂಫ್ ಟಾಪ್ಸ್ ಅಳವಡಿಕೆಯಿಂದ ಬೃಹತ್ ಪ್ರಮಾಣದ ವೆಚ್ಚದ ಉಳಿತಾಯ ಸಾಧ್ಯವಿರುತ್ತದೆಯಲ್ಲದೆ, ಇದು ವಿದ್ಯುತ್ ಬಿಲ್‌ಗಳ ಮೊತ್ತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಮುಕ್ತ ಮತ್ತು ಅಗಣಿತವಾಗಿರುವ ನವೀಕರಿಸಬಹುದಾದ ಶಕ್ತಿಮೂಲವನ್ನು ಬಳಸುವುದರೊಂದಿಗೆ ಸಮಾಜ ಪರಿಸರಕ್ಕೆ ಕೊಡುಗೆ ನೀಡುತ್ತದೆ ಎಂದು ಹೇಳಿದರು.

ತಾರಸಿ ಮೇಲಿನ ಸೋಲಾರ್ ವ್ಯವಸ್ಥೆ 25 ವರ್ಷಗಳಿಗೂ ಹೆಚ್ಚಿನ ದೀರ್ಘಬಾಳಿಕೆಯೊಂದಿಗೆ ಹೆಚ್ಚುವರಿ ಲಾಭಗಳನ್ನು ಒಳಗೊಂಡಿದೆ. ಹೊಗೆ, ಶಬ್ದ ಮಾಲಿನ್ಯದ ಯಾವುದೇ ಅಸುರಕ್ಷ ಸಮಸ್ಯೆಗಳು ಇರುವುದಿಲ್ಲ. ಅಲ್ಲದೆ, ಇಂಧನವನ್ನು ಸಂಗ್ರಹಿಸಬೇಕಾದ ಯಾವುದೇ ಅಗತ್ಯವೂ ಇರುವುದಿಲ್ಲ ಅಭಿಪ್ರಾಯಪಟ್ಟರು.

ಬ್ಯಾಂಬೂಸ್‌ನ ಉದ್ದೇಶಗಳನ್ನು ಕುರಿತು ಬಿಎಎಫ್‌ನ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಮಾತನಾಡಿ, ಅಪಾರ್ಟ್‌ಮೆಂಟ್‌ಗಳು ಮತ್ತು ನಿವಾಸಿಗಳ ಕಲ್ಯಾಣ ಸಂಘಗಳ ಸಮುದಾಯಗಳಿಗೆ, ಅತ್ಯುತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ಬ್ಯಾಂಬೂಸ್ ಒಂದು ವೇದಿಕೆಯಾಗಿದೆ. ಜತೆಗೆ ಈ ಕ್ರಮಗಳನ್ನು ಪ್ರತಿ ಅಪಾರ್ಟ್‌ಮೆಂಟ್ ಮತ್ತು ನಿವಾಸಿಗಳ ಕಲ್ಯಾಣ ಸಂಘಗಳ ಸಮುದಾಯದಲ್ಲಿ ಜಾರಿಗೆ ತರುವ ದೃಷ್ಟಿಯಿಂದ ಕೂಡ ಇದು ಉತ್ತಮ ಅವಕಾಶವಾಗಿದೆ ಎಂದರು.

ಬಿಎಎಫ್‌ನ ಖಜಾಂಚಿ ವಿಕ್ರಮ್ ರೈ ಮಾತನಾಡಿ, ಹೆಚ್ಚು ಉತ್ತಮವಾದ ಬೆಂಗಳೂರನ್ನು ನಿರ್ಮಿಸಲು ಸಹಾಯ ಮಾಡುವ ಕ್ರಮಗಳನ್ನು ಆರಂಭಿಸಿರುವ ನೂರಾರು ಅಪಾರ್ಟ್‌ಮೆಂಟ್ ಸಂಕೀರ್ಣಗಳ ಭಾಗವಹಿಸುವಿಕೆಯನ್ನು ಕಾರ್ಯಕ್ರಮದಲ್ಲಿ ತಿಳಿಸಲಾಯಿತು ಎಂದರು.

ಬಿಎಎಫ್‌ನ ಅಧ್ಯಕ್ಷ ಆರ್. ಬಾಲಸುಬ್ರಮಣಿಯನ್ ಮಾತನಾಡಿ, ನೀರು, ತ್ಯಾಜ್ಯ ಮತ್ತು ವಿದ್ಯುತ್ ನಿರ್ವಹಣೆಯಲ್ಲಿ ಆದ್ಯಪ್ರವರ್ತಕ ಉಪಕ್ರಮಗಳನ್ನು ಅನುಷ್ಠಾನಕ್ಕೆ ತರುವುದರೊಂದಿಗೆ ನಗರದ ಸುಸ್ಥಿರತೆಗೆ ಅಪಾರ ಕೊಡುಗೆಯನ್ನು ಅಪಾರ್ಟ್‌ಮೆಂಟ್‌ಗಳು ನೀಡುತ್ತಿವೆ ಎಂದರು.

ಸರಕಾರ, ಬೆಸ್ಕಾಮ್ ಹಾಗೂ ಬಿಎಎಫ್‌ಗಳು ಸಹಭಾಗಿತ್ವ ಕೈಗೊಂಡು ಮುಂದಿನ ಎರಡು ವರ್ಷಗಳಲ್ಲಿ ಅಪಾರ್ಟ್‌ಮೆಂಟ್‌ಗಳಲ್ಲಿ ಕನಿಷ್ಠ ಸಾವಿರ ರೂಫ್‌ಟಾಪ್ ಸೋಲಾರ್ ವ್ಯವಸ್ಥೆಗಳ ಅನುಷ್ಠಾನದ ಗುರಿ ಸಾಧಿಸಲು ಒಪ್ಪಿಗೆ ನೀಡಿವೆ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News