ರೋಶಿನಿ ಯೋಜನೆ: ನ.14 ರಿಂದ ದೂರದರ್ಶನದಲ್ಲಿ ಇಂಗ್ಲಿಷ್ ಶಿಕ್ಷಣ ಚಾನೆಲ್ ಆರಂಭ
ಬೆಂಗಳೂರು, ನ.3: ರೋಶಿನಿ ಯೋಜನೆ ಅಡಿಯಲ್ಲಿ ನ.14ರಿಂದ ದೂರದರ್ಶನದಲ್ಲಿ ಇಂಗ್ಲಿಷ್ ಶಿಕ್ಷಣ ಚಾನೆಲ್ ಆರಂಭ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಸಹಾಯಕ ಆಯುಕ್ತೆ(ಶಿಕ್ಷಣ) ಪಲ್ಲವಿ ಹೇಳಿದರು.
ಶನಿವಾರ ಬಿಬಿಎಂಪಿಯ ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ರೋಶಿನಿ ಯೋಜನೆಯಡಿ ಶಾಲಾ-ಶಿಕ್ಷಕರಿಗೆ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಲಿಕೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವಂತೆ ಚಾನೆಲ್ ಮಾಡಲಾಗುತ್ತಿದೆ. ನ.14 ರಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅದನ್ನು ಉದ್ಘಾಟಿಸಲಿದ್ದಾರೆ ಎಂದರು.
ಪಾಲಿಕೆಯ ಸರಕಾರಿ ಕಾಲೇಜು ವಿದ್ಯಾರ್ಥಿಗಳ ವಿಷಯದ ಆಸಕ್ತಿಗೆ ಅನುಗುಣವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ಸಾಮಾನ್ಯ ಬೋರ್ಡ್ ಪರೀಕ್ಷೆ ನಡೆಸಲಾಗುವುದು. ವಿಶೇಷ ಪರಿಣಿತಿ ಹೊಂದಿದ ತಜ್ಞರಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿಸಲಾಗುತ್ತದೆ. ಈ ವೇಳೆ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿ ಮತ್ತು ಶಾಲೆಗೆ ಬಹುಮಾನವನ್ನೂ ನೀಡಲಾಗುತ್ತದೆ ಎಂದು ಹೇಳಿದರು.
21 ನೆ ಶತಮಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಉನ್ನತೀಕರಣಗೊಳ್ಳುತ್ತಿದ್ದು, ಶಿಕ್ಷಕರು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು. ಈ ನಿಟ್ಟಿನಲ್ಲಿ ರೋಶಿನಿ ಯೋಜನೆ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗೆ ಸರಕಾರಿ ಶಾಲೆಗಳು ಸೆಡ್ಡು ಹೊಡೆಯಲಿವೆ. ಶಾಲಾ- ಕಾಲೇಜು ಅಭಿವೃದ್ಧಿಗೆ ಪಾಲಿಕೆ ಸದಾ ಬದ್ಧವಾಗಿದ್ದು, ಅಗತ್ಯ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ರೋಶಿನಿ ಯೋಜನೆಯ ನಿರ್ದೇಶಕಿ ರೋಶಿನಿ ಕುಮಾರ್ ಮಾತನಾಡಿ, 21ನೇ ಶತಮಾನದ ತಂತ್ರಜ್ಞಾನಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೊಂದಿಕೊಳ್ಳಬೇಕಿದೆ. ಪಠ್ಯ ಸೇರಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇಂಟರ್‌ನೆಟ್, ಇಂಗ್ಲಿಷ್, ಕೌಶಲಕ್ಕೆ ಬೇಕಾದ ಶಿಕ್ಷಣ ರೋಶಿನಿ ಯೋಜನೆಯಡಿ ನೀಡಲಾಗುವುದು ಎಂದರು.
ಕಾರ್ಯಾಗಾರದಲ್ಲಿ ಟೆಕ್ ಅವಂತ್ ಗಾರ್ಡ್ ಸಂಸ್ಥೆಯ ಸಿಇಒ ಅಲಿಸೇಠ್, ದೂರದರ್ಶನದ ಸಹಾಯಕ ನಿರ್ದೇಶಕ ರಾಜಕುಮಾರ್ ಉಪಾಧ್ಯಾಯ, ನಿವೃತ್ತ ಐಆರ್‌ಎಸ್ ಅಧಿಕಾರಿ ಎಂ.ಜಿ. ಕೋದಂಡರಾಮ್ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಶಾಲಾ- ಕಾಲೇಜು ಶಿಕ್ಷಕರು ಭಾಗವಹಿಸಿದ್ದರು.