×
Ad

ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರಾಜಧನ ನಷ್ಟ: ಆರೋಪ

Update: 2018-11-03 22:03 IST

ಬೆಂಗಳೂರು, ನ. 3: ತಮಿಳುನಾಡಿನಿಂದ ನಗರಕ್ಕೆ ಪ್ರತಿದಿನ 8ರಿಂದ 9 ಸಾವಿರ ಲೋಡು ಜಲ್ಲಿ ಹಾಗೂ ಎಂ.ಸ್ಯಾಂಡ್ ಸರಬರಾಜು ಮಾಡಲಾಗುತ್ತಿದ್ದು, ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರಾಜಧನ ನಷ್ಟವಾಗುತ್ತಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಒನರ್ಸ್‌ ಅಸೋಸಿಯೇಷನ್ಸ್ ಆರೋಪಿಸಿದೆ.

ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಸಂಜೀವ ಹಟ್ಟಿಹೊಳೆ ಮಾತನಾಡಿ, ತಮಿಳುನಾಡಿನ ರಾಜಧನ ಪ್ರತಿ ಟನ್‌ಗೆ 30ರೂ. ಗಳಿದ್ದು, ಕರ್ನಾಟಕದಲ್ಲಿ ರಾಜಧನ 90ರೂ.ಗಳಿದೆ. ಹೀಗಾಗಿ, ಪಕ್ಕದ ರಾಜ್ಯಗಳಿಂದ ಸಾವಿರಾರು ಲೋಡು ಜಲ್ಲಿ ಹಾಗೂ ಎಂ.ಸ್ಯಾಂಡ್ ರಾಜ್ಯಕ್ಕೆ ಸರಬರಾಜು ಆಗುತ್ತಿರುವುದು ಖಂಡನೀಯ ಎಂದರು.

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಆಂಧ್ರಪ್ರದೇಶದ ಗಡಿಯಲ್ಲಿದ್ದು, ಆಂಧ್ರಪ್ರದೇಶದ ಜಲ್ಲಿ ಮತ್ತು ಕ್ವಾರಿ ಮಾಲಕರು 3 ಜಿಲ್ಲೆಗಳಿಗೆ ಜಲ್ಲಿ ಹಾಗೂ ಎಂ ಸ್ಯಾಂಡ್ ಅನ್ನು ರಾಜ್ಯಕ್ಕೆ ರಾಜಧನವಿಲ್ಲದೆ ಸಾಗಿಸುತ್ತಿರುವುದರಿಂದ ನಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್‌ನ 2011ರ ಆದೇಶದಂತೆ ರಾಜ್ಯ ಸರಕಾರ ಕ್ರಷರ್ ಹಾಗೂ ಗಣಿಗಾರಿಕೆ ಸುರಕ್ಷಿತ ವಲಯ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೂ ರಾಜ್ಯದ ಕ್ರಷರ್ ಮಾಲಕರಿಗೆ ಯಾವುದೇ ಸುರಕ್ಷತೆಯನ್ನು ಒದಗಿಸಿರುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News