ಪತ್ರಿಕೋದ್ಯಮ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭವಿದು: ಜಿ.ಎನ್.ರಂಗನಾಥರಾವ್
ಬೆಂಗಳೂರು, ನ.3: ಕಾರ್ಪೊರೇಟ್ ಹಿಡಿತದಲ್ಲಿರುವ ಪತ್ರಿಕೋದ್ಯಮಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭ ಬಂದಿದೆ ಎಂದು ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥ ರಾವ್ ತಿಳಿಸಿದರು.
ಶನಿವಾರ ಭಾರತೀಯ ವಿದ್ಯಾಭವನ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ನಗರದಲ್ಲಿ ಆಯೋಜಿದ್ದ ಭಾರತೀಯ ವಿದ್ಯಾಭವನ ಪತ್ರಿಕೋದ್ಯಮ ವಿಭಾಗದ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನ ದಿನಗಳಲ್ಲಿ ಪತ್ರಿಕೋದ್ಯಮ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ, ಜನತೆ ಅಗತ್ಯವಾದ ಮಾಹಿತಿಯನ್ನು ನೀಡುವಂತಹ ಕ್ಷೇತ್ರವಾಗಿತ್ತು. ಆದರೆ, ಇವತ್ತಿನ ದಿನಗಳಲ್ಲಿ ಪತ್ರಿಕೋದ್ಯಮ ತನ್ನೆಲ್ಲ ಮೌಲ್ಯಗಳನ್ನು ಕಾರ್ಪೊರೇಟ್ ಕ್ಷೇತ್ರದಲ್ಲಿ ಮಾರಿಕೊಂಡಿದೆ ಎಂದು ವಿಷಾದಿಸಿದರು.
ನೀತಿ ಸಂಹಿತಿ ಅಗತ್ಯವಿದೆ: ಇವತ್ತು ಪತ್ರಿಕೋದ್ಯಮ ಸಾಗುತ್ತಿರುವ ಹಾದಿ ನೋಡಿದರೆ ಭಯವಾಗುತ್ತಿದೆ. ಹೀಗಾಗಿ ಕಾರ್ಪೊರೇಟ್, ಬಂಡವಾಳಶಾಹಿಗಳಿಂದ ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಾದರೆ, ನೀತಿ ಸಂಹಿತೆ ಹಾಕಿಕೊಂಡು ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.
ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ ಪತ್ರಿಕೋದ್ಯಮ ಹಾಗೂ ಆಕಾಶವಾಣಿಯಲ್ಲಿ ಮೌಲ್ಯಯುತವಾದ ಚಿಂತನೆಗಳು ಮೂಡಿ ಬರುತ್ತಿದ್ದವು. ಹೀಗಾಗಿ ಆ ದಿನಗಳ ಬರಹಗಳು ಹಾಗೂ ಆಕಾಶವಾಣಿಯ ಪ್ರಸಾರಗೊಂಡಿರುವ ಧ್ವನಿ ಸುರಳಿಗಳನ್ನು ಪುನಃ ಓದುವಂತಹ, ಕೇಳುವಂತಹ ಅವಕಾಶವನ್ನು ಈಗಿನ ಪತ್ರಕರ್ತರಿಗೆ ಕಲ್ಪಿಸಿಕೊಡಬೇಕಿದೆ ಎಂದು ಅವರು ಆಶಿಸಿದರು.
ಕನ್ನಡದಲ್ಲಿ ಸಾಂಸ್ಕೃತಿಕ ಪತ್ರಿಕೋದ್ಯಮ ಹಿಂದುಳಿದಿದೆ. ರಂಗಭೂಮಿ, ಸುಗಮಸಂಗೀತ ಹಾಗೂ ಪುಸ್ತಕಗಳ ಕುರಿತು ಮೌಲ್ಯಯುತವಾಗಿ ವಿಮರ್ಶೆ ಮಾಡುವವರೆ ಇಲ್ಲವಾಗಿದ್ದಾರೆ. ಹಿರಿಯ ಪತ್ರಕರ್ತರಿಂದ ಯುವ ಪತ್ರಕರ್ತರು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಕಲಿಯಬೇಕಿದೆ ಎಂದು ಅವರು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಇವತ್ತು ಪತ್ರಿಕೋದ್ಯಮವನ್ನು ಬ್ರೇಕಿಂಗ್ ನ್ಯೂಸ್ ಮಟ್ಟಕ್ಕೆ ಇಳಿಸಿದ್ದೇವೆ. ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಪ್ರತಿಯೊಂದು ಸುದ್ದಿ, ಕಾರ್ಯಕ್ರಮಗಳನ್ನು ಜನತೆ ಅನುಮಾನದಿಂದ ನೋಡುವಂತೆ ಮಾಡಿದ್ದೇವೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಈ ವೇಳೆ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಉಪಸ್ಥಿತರಿದ್ದರು.