×
Ad

ಮತದಾರರನ್ನು ಓಲೈಸಲು ತಂತ್ರ: ನಗರದ ರಸ್ತೆಗಳಿಗೆ ಮರುನಾಮಕರಣ ಪ್ರಸ್ತಾಪ; ಆರೋಪ

Update: 2018-11-03 23:00 IST

ಬೆಂಗಳೂರು, ನ.3: ಮತದಾರರನ್ನು ಓಲೈಸುವ ಉದ್ದೇಶದಿಂದ ಬಿಬಿಎಂಪಿ ಸದಸ್ಯ ಅಜ್ಮಲ್ ಬೇಗ್ ನಗರದ ರಸ್ತೆಗಳಿಗೆ ಮುಸ್ಲಿಮ್ ಸಮುದಾಯದ ಹೆಸರುಗಳನ್ನು ಇಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಉತ್ತರಪ್ರದೇಶ ಸರಕಾರ ಹೆಸರನ್ನು ಮರು ನಾಮಕರಣ ಮಾಡಿದ ನಂತರ, ಇಲ್ಲಿನ ಸ್ಥಳೀಯ ಪಾಲಿಕೆ ಬಾಪೂಜಿ ನಗರದ ಸದಸ್ಯ ಅವರು ಪ್ರತಿನಿಧಿಸುವ ಕೆಲವು ರಸ್ತೆಗಳಿಗೆ ಮುಸ್ಲಿಮ್ ಸಮುದಾಯಕ್ಕೆ ಸೇರಿದವರ ಹೆಸರು ನಾಮಕರಣ ಮಾಡಬೇಕು ಎಂದು ಪಾಲಿಕೆಗೆ ಶಿಫಾರಸ್ಸು ಮಾಡಿದ್ದಾರೆ. ಈ ಸಂಬಂಧ ಅವರು ಪ್ರತಿಕ್ರಿಯಿಸಿದ್ದು, ನಮ್ಮ ಸಮುದಾಯದಿಂದ ಅರ್ಜಿಗಳು ಬಂದಿದ್ದರಿಂದ ನಾನು ಪ್ರಸ್ತಾಪ ಸಲ್ಲಿಸಿದ್ದೆ ಹೊರತು ಸ್ವಾರ್ಥಕ್ಕೆ ಅಲ್ಲ ಎಂದು ಹೇಳಿದ್ದಾರೆ.

ಯಾವ ರಸ್ತೆಗೆ ಮರು ನಾಮಕರಣ: ಖಾದ್ರಿ ಶಾಮಣ್ಣ ಅಂಡರ್ ಪಾಸ್‌ನ ಪೈಪ್‌ಲೈನ್ ರಸ್ತೆಗೆ ಗಫೂರ್ ರಸ್ತೆ, ಸುನ್ನಿ ಚೌಕದಿಂದ ಮೈಸೂರು ರಸ್ತೆವರೆಗಿನ ಪೈಪ್ ಲೈನ್ ರಸ್ತೆಗೆ ಸುಬಾನಿಯಾ ಮಸೀದಿ ಹೆಸರು, ಸಂತೋಷ್ ಟೆಂಟ್‌ನಿಂದ ಶೋಭಾ ಟೆಂಟ್‌ವರೆಗಿನ ರಸ್ತೆಗೆ ಜಾಮಿಯಾ ಮಸೀದಿ ಹೆಸರು, ಶಾಮಣ್ಣ ಗಾರ್ಡನ್ 6ನೇ ಕ್ರಾಸ್ ರಸ್ತೆಗೆ ಖುದಾದತ್ ಮಸೀದಿ ಹೆಸರು, ಬಾಪೂಜಿನಗರ 1ನೇ ಮುಖ್ಯ ರಸ್ತೆಗೆ ಹೀರಾ ಮಸೀದಿ ಎಂದು ನಾಮಕರಣ ಮಾಡುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏಕಾಏಕಿ ಏನನ್ನೂ ಮಾಡಲು ಸಾಧ್ಯವಿಲ್ಲ. ಅವರು ಮರು ನಾಮಕರಣ ಮಾಡಬೇಕು ಎಂಬ ಪ್ರಸ್ತಾಪವನ್ನು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಅನಂತರ ಅದನ್ನು ರಾಜ್ಯ ಸರಕಾರಕ್ಕೆ ಕಳುಹಿಸಲಿದ್ದು, ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News