ಅವ್ಯವಹಾರದ ಸುಳಿಯಲ್ಲಿ ಇಂಡಿಯನ್‌ ವಾಲಿಬಾಲ್

Update: 2018-11-04 06:09 GMT

ಎಲ್ಲಿ ಹಣಗಳಿಸುವ ಉದ್ದೇಶವಿರುತ್ತದೆಯೋ ಅಲ್ಲಿ ಕ್ರೀಡೆಯ ಉದ್ಧ್ದಾರ ಬಹಳ ಕಡಿಮೆ. ಒಬ್ಬರನ್ನೊಬ್ಬರು ಕಾಲೆಳೆಯುತ್ತಿದ್ದರೆ ಕ್ರೀಡೆ ಅವನತಿಯ ಹಾದಿ ಹಿಡಿಯುತ್ತದೆ ಎಂಬುದಕ್ಕೆ ಭಾರತದ ವಾಲಿಬಾಲ್ ಫೆಡರೇಷನ್‌ನ ಸ್ಥಿತಿ ಉತ್ತಮ ಉದಾಹರಣೆ. ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ನಡುವಿನ ಪ್ರತಿಷ್ಠೆಯ ಹಗ್ಗಜಗ್ಗಾಟದಿಂದ ಈಗ ದೇಶದಲ್ಲಿ ವಾಲಿಬಾಲ್ ಕ್ರೀಡೆ ನಿಂತುಹೋದಂತಾಗಿದೆ. ಕೇರಳ, ಕರ್ನಾಟಕ ಹಾಗೂ ರಾಜಸ್ಥಾನದಲ್ಲಿ ಹೊರತು ಪಡಿಸಿದರೆ ಇತರ ರಾಜ್ಯಗಳಲ್ಲಿ ವಾಲಿಬಾಲ್ ಸಮರ್ಪಕವಾಗಿ ನಡೆಯುತ್ತಿಲ್ಲ. ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್ ನಡೆಯದೆ ಹಲವು ವರ್ಷಗಳೇ ಗತಿಸಿದವು. ವಾಲಿಬಾಲ್ ಫೆಡರೇಷನ್‌ನಲ್ಲಿ ನಡೆದ ಅವ್ಯವಹಾರ ಈಗ ದಿಲ್ಲಿ ಹೈಕೋರ್ಟ್‌ನಲ್ಲಿದೆ. ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಅತ್ಯಂತ ಹೀನಾಯ ಪ್ರದರ್ಶನ ತೋರಿದೆ. ವಾಲಿಬಾಲ್ ತರಬೇತಿ ಶಿಬಿರ, ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟಗಳು ವಿರಳವಾಗುತ್ತಿವೆ. ಇನ್ನು ಹಣ ಮಾಡುವ ಉದ್ದೇಶದಿಂದ ಪ್ರೊ ವಾಲಿಬಾಲ್ ಲೀಗ್ ಹುಟ್ಟಿಕೊಂಡಿದ್ದು, ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಹಿಂದಿನ ಇಂಡಿಯನ್ ವಾಲಿಬಾಲ್ ಲೀಗ್ ನಶಿಸಿಹೋಗಿದ್ದು, ಭಾರತ್ ವಾಲಿಬಾಲ್ ಲೀಗ್ ಕೂಡ ಯೋಜನೆಯಲ್ಲೇ ಉಳಿದುಕೊಂಡಿದೆ.

ಕಳೆದ ಮೂರು ವರ್ಷಗಳಿಂದ ಭಾರತೀಯ ವಾಲಿಬಾಲ್‌ನಲ್ಲಿ ಬರೀ ಟೀಕೆಯ ಸರ್ವ್ ನಡೆಯುತ್ತಿದೆ. ಮಾತಿನ ಸ್ಮಾಶ್ ಹಾಗೂ ಬ್ಲಾಕ್‌ಗಳು ಕಂಡು ಬರುತ್ತಿವೆ. ವಾಲಿಬಾಲ್ ಫೆಡರೇಷನ್‌ನ ಪದಾಧಿಕಾರಿಗಳ ರಚನೆಯಲ್ಲಿ ಹುಟ್ಟಿಕೊಂಡ ವಿವಾದ ಈಗ ಹಣಕಾಸಿನ ಅವ್ಯವಹಾರ ಬಯಲಾಗುವವರೆಗೂ ತಲುಪಿದೆ. ಇದರೊಂದಿಗೆ ಭಾರತೀಯ ವಾಲಿಬಾಲ್ ಸಂಸ್ಥೆಗೆ ತಾತ್ಕಾಲಿಕ ನಿಷೇಧವನ್ನೂ ಹೇರಲಾಗಿದೆ.

ರಾಜಕೀಯದ ಪ್ರಭಾವ, ವೈಯಕ್ತಿಕ ದ್ವೇಷ ಹಾಗೂ ಭ್ರಷ್ಟಾಚಾರದ ಆರೋಪಗಳಿಂದಾಗಿ ಭಾರತದಲ್ಲಿ ಈಗ ವಾಲಿಬಾಲ್ ಕ್ರೀಡೆ ನಿಂತುಹೋಗಿದೆ. ಕೇಂದ್ರ ಕ್ರೀಡಾ ಸಚಿವಾಲಯ ಬಜೆಟ್‌ನಲ್ಲಿ ನೀಡುವ ಹಣದ ಪ್ರಮಾಣವನ್ನೂ ಕಡಿಮೆ ಮಾಡಿದೆ. ಮುರುಗನ್, ರಾಮವತಾರ್, ರಾಜ್ ಕುಮಾರ್, ಶ್ರೀಧರನ್ ಹಾಗೂ ವಾಸನ್ ಅವರನ್ನೊಳಗೊಂಡ ತಂಡವೊಂದು ವ್ಯವಸ್ಥಿತ ರೀತಿಯಲ್ಲಿ ಭಾರತ ವಾಲಿಬಾಲ್ ಸಂಸ್ಥೆಯನ್ನು ಅವನತಿಯ ಅಂಚಿಗೆ ತಲುಪಿಸಿದೆ. ಇದರಿಂದಾಗಿ ದೇಶದಲ್ಲಿ ಯಾವುದೇ ರೀತಿಯ ಟೂರ್ನಿಗಳು ನಡೆಯುತ್ತಿಲ್ಲ. ಮನ ಬಂದಂತೆ ಸಭೆಗಳನ್ನು ಕರೆಯುವುದು, ಕೇವಲ ಚೆನ್ನೈಗೆ ಸೀಮಿತವಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು ಭಾರತೀಯ ವಾಲಿಬಾಲ್ ಫೆಡರೇಷನ್‌ನ ನಿತ್ಯದ ಕೆಲಸವಾಗಿದೆ. ಫೆಡರೇಷನ್‌ನಲ್ಲಿ ಎರಡು ಬಣ ಹುಟ್ಟಿಕೊಂಡಿರುವುದು ಈ ಎಲ್ಲ ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ.

 ಸಂಸ್ಥೆಯ ಹಣಕಾಸಿನ ಲೆಕ್ಕಾಚಾರವನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಈ ವಿವಾದ ಈಗ ಹೆಮ್ಮರವಾಗಿ ಬೆಳೆದಿದ್ದು, ದೇಶದ ಕ್ರೀಡಾಪಟುಗಳಿಗೆ ಇದರಿಂದ ಅನ್ಯಾಯವಾಗಿದೆ. ವಾಲಿಬಾಲ್ ಫೆಡರೇಷನ್‌ನ ಅಧ್ಯಕ್ಷ ಚೌಧರಿ ಅವಧೇಶ್ ಕುಮಾರ್ ಹಾಗೂ ರಾಮವತಾರ್ ಸಿಂಗ್ ಜಾಖರ್ ಇಬ್ಬರೇ ವಾಲಿಬಾಲ್ ಪರ ಹಗ್ಗಜಗ್ಗಾಟ ನಡೆಸುತ್ತಿದ್ದಾರೆ. ಒಬ್ಬರು ಸತ್ಯದ ಪರವಿದ್ದರೆ, ಕಾರ್ಯದರ್ಶಿ ರಾಮವತಾರ್ ಅನ್ಯಾಯದ ಪರ ನಿಂತಿದ್ದಾರೆ.

ಪ್ರಧಾನ ಕಾರ್ಯದರ್ಶಿ ಜಾಖರ್ ಮಾಜಿ ವಾಲಿಬಾಲ್ ಆಟಗಾರ. ಆದರೆ ಹಣಕಾಸಿನ ಲೆಕ್ಕಾಚಾರದಲ್ಲಿ ತಿಮಿಂಗಿಲಗಳ ಪರವಾಗಿ ನಿಂತಿರುವುದೇ ಸಮಸ್ಯೆ ಇಷ್ಟು ಬಿಗಡಾಯಿಸಲು ಕಾರಣವಾಯಿತು. ಇಂಡಿಯನ್ ವಾಲಿಬಾಲ್ ಲೀಗ್ ಹಾಗೂ ಬೀಚ್ ವಾಲಿಬಾಲ್ ಲೀಗ್ ನಡೆಸಲು ಉದ್ದೇಶಿಸಿದಾಗ ಎಲ್ಲರ ಬಣ್ಣ ಬಯಲಾಯಿತು. ರಾಮವತಾರ್ ‘ಬೇಸ್‌ಲೈನ್’ ಎಂಬ ಸ್ಪೋರ್ಟ್ಸ್ ಮಾರ್ಕೆಟಿಂಗ್ ಕಂಪೆನಿಗೆ ಲೀಗ್ ನಡೆಸಲು ಅವಕಾಶ ಕಲ್ಪಿಸಿದರು. ಕೆಲ ದಿನಗಳು ಕಳೆಯುತ್ತಿದ್ದಂತೆ ಅಧ್ಯಕ್ಷರಾದ ಅವಧೇಶ್ ಕುಮಾರ್ ‘ಸ್ಪೋರ್ಟ್ಸ್ ಲೈವ್’ ಎಂಬ ಕಂಪೆನಿಗೆ ಎರಡು ಲೀಗ್‌ಗಳನ್ನು ನಡೆಸಲು ಆದೇಶಿಸಿದರು. ಇದಕ್ಕಾಗಿ ಪ್ರತ್ಯೇಕ ಸಭೆಗಳನ್ನು ನಡೆಸಲಾಯಿತು. ವಿವಾದ ಅಂತರ್‌ರಾಷ್ಟ್ರೀಯ ವಾಲಿಬಾಲ್ ಫೆಡರೇಷನ್‌ನ ಮೆಟ್ಟಿಲಿಗೇರಿತು. ಇಬ್ಬರೂ ಪ್ರತ್ಯೇಕ ತುರ್ತು ಎಂಜಿಎ ನಡೆಸಿದರು. ಅಂತಿಮವಾಗಿ ಇಬ್ಬರೂ ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ಜಾಖರ್ ನಡೆಸಿದ ಸಭೆಯಲ್ಲಿ ಉಪಾಧ್ಯಕ್ಷ ವಿಜಯ್ ಡಾಂಗೆ ಅಸಾಂವಿಧಾನಿಕ ಎಂದು ಆದೇಶಿಸಿದರು. ಇದರೊಂದಿಗೆ ವಾಲಿಬಾಲ್ ಫೆಡರೇಷನ್‌ನಲ್ಲಿ ಎರಡು ಬಣ ನಿತ್ಯವೂ ಕಚ್ಚಾಡುವುದು ಸಾಮಾನ್ಯವಾಯಿತು. ಇದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ದಕ್ಕೆಯನ್ನುಂಟು ಮಾಡಿರುವುದು ಸ್ಪಷ್ಟ. ರಾಮವತಾರ್ ಹಾಗೂ ಅವರ ಬಣದ ಅವ್ಯವಹಾರ ಸಿಬಿಐ ನ್ಯಾಯಾಲಯದವರೆಗೂ ತಲುಪಿತು. ಎರಡೂ ಕಡೆಯವರಿಂದಲೂ ಹೇಳಿಕೆಗಳನ್ನು ಕೋರ್ಟ್ ಪಡೆದುಕೊಂಡಿದೆ. ಆಟಗಾರರ ಹೆಸರಿನಲ್ಲಿ ರಾಮವತಾರ್ ಬಣ ಸಾಕಷ್ಟು ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಮಧ್ಯಂತರ ಸಮಿತಿ ರಚಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ವೈಯಕ್ತಿಕ ದ್ವೇಷದ ಮೂಲಕ ವಾಲಿಬಾಲ್ ಅವನತಿಯ ಹಾದಿ ಹಿಡಿಯಿತು.

ಕೇಂದ್ರ ಕ್ರೀಡಾ ಇಲಾಖೆ ಬಿಡುಗಡೆ ಮಾಡಿದ ಹಣಕ್ಕೆ ಎಲ್ಲಿಯೂ ಲೆಕ್ಕಾಚಾರ ಇಲ್ಲದಂತಾಗಿದೆ. ಕರ್ನಾಟಕ ರಾಜ್ಯ ವಾಲಿಬಾಲ್ ಸಂಸ್ಥೆಯ ಕಾರ್ಯದರ್ಶಿ ನಂದ ಕುಮಾರ್ ಹೋರಾಟ ಮುಂದುವರಿಸಿದ ಕಾರಣ ರಾಮವತಾರ್ ಅವರ ಬಣದ ಅವ್ಯವಹಾರ ನಿತ್ಯವೂ ಬೆಳಕಿಗೆ ಬರುತ್ತಿದೆ. ಹಣ ವ್ಯಯಮಾಡಿದ ಬಗ್ಗೆ ಎಲ್ಲಿಯೂ ದಾಖಲೆಗಳು ಸಿಗುತ್ತಿಲ್ಲ. ಆದರೆ ವೈಯಕ್ತಿಕ ಖಾತೆಗೆ ಹಣ ಜಮೆ ಆಗಿರುವುದು ಬೆಳಕಿಗೆ ಬಂದಿದೆ.

ಈಗ ವಾಲಿಬಾಲ್ ಫೆಡರೇಷನ್‌ಗೆ ಅಧ್ಯಕ್ಷರೇ ಇಲ್ಲ, ಸರಕಾರದಿಂದಲೂ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಇದರಿಂದಾಗಿ ಚಟುವಟಿಕೆಗಳೂ ನಿಂತುಹೋಗಿವೆ. ಅಂತರ್‌ರಾಷ್ಟ್ರೀಯ ವಾಲಿಬಾಲ್ ಸಂಸ್ಥೆ ಕೂಡ ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತಂದಿದೆ. ಅಧ್ಯಕ್ಷರ ಹೆಸರಿನಲ್ಲಿ ಪತ್ರವ್ಯವಹಾರ ನಡೆಸುವುದು ಕೂಡ ಕಾನೂನು ಬಾಹಿರ ಎಂಬುದನ್ನು ಸ್ಪಷ್ಟಪಡಿಸಿದೆ. ಈ ನಡುವೆ ರಾಮವತಾರ್ ಬಣ ವಾಸುದೇವನ್ ಅವರನ್ನು ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಈ ಬಗ್ಗೆಯೂ ತಕರಾರು ಹುಟ್ಟಿಕೊಂಡಿದೆ. ಈ ರಾಮವತಾರ್ ಜಾಖರ್ ಬೆಂಗಳೂರಿನಲ್ಲಿ ನಡೆಯುತ್ತಿರುವ ಮೇಯರ್ ಕಪ್ ಬಗ್ಗೆಯೂ ಧ್ವನಿ ಎತ್ತಿರುವುದು ಬೇಸರದ ಸಂಗತಿ. ಇದು ಅನಧಿಕೃತ ಟೂರ್ನಿ, ಇದರಲ್ಲಿ ದೇಶದ ಯಾವುದೇ ವಾಲಿಬಾಲ್ ಆಟಗಾರರು ಪಾಲ್ಗೊಳ್ಳುವಂತಿಲ್ಲ ಎಂದು ಪತ್ರ ಬರೆದಿದ್ದರು. ಆದರೆ ಮೇಯರ್ ಕಪ್ ಅತ್ಯಂತ ಯಶಸ್ವಿಯಾಗಿ ನಡೆದುಹೋಯಿತು.

ಇಷ್ಟೆಲ್ಲ ವಿವಾದಗಳ ನಡುವೆಯೂ ಭಾರತೀಯ ಕ್ರೀಡಾ ಇಲಾಖೆ ವಾಲಿಬಾಲ್ ಸಂಸ್ಥೆಗೆ ಹಣ ಬಿಡುಗಡೆ ಮಾಡಿದೆ. ಯಾವುದೇ ಅಂತರ್‌ರಾಷ್ಟ್ರೀಯ ಟೂರ್ನಿಯಲ್ಲಿ ಆಟಗಾರರು ಪಾಲ್ಗೊಳ್ಳದಿದ್ದರೂ ಈ ಹಣ ಎಲ್ಲಿಗೆ ಸೇರಿತು ಎಂಬುದಕ್ಕೆ ದಾಖಲೆಗಳಿಲ್ಲ ಎನ್ನಲಾಗುತ್ತಿದೆ. ಸುಮಾರು 430 ಕೋಟಿ ರೂ.ಗಳನ್ನು ಭಾರತೀಯ ವಾಲಿಬಾಲ್ ಸಂಸ್ಥೆಯ ಪದಾಧಿಕಾರಿಗಳು ಅಸಮರ್ಪಕವಾಗಿ ಬಳಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈಗ ಕ್ರೀಡಾಕ್ಷೇತ್ರಗಳಲ್ಲಿ ಹೆಚ್ಚು ವೃತ್ತಿಪರತೆ ಎಲ್ಲಿ ಕಂಡುಬರುತ್ತಿದೆಯೋ ಅಲ್ಲಿ ಹಣ ಹರಿದುಬರುತ್ತಿದೆ. ಲೀಗ್‌ಗಳನ್ನು ನಡೆಸುವ ಮೂಲಕ ಸಾಕಷ್ಟು ಹಣ ಒಟ್ಟುಗೂಡಿಸಬಹುದು. ಇದರಿಂದಾಗಿ ಅವುಗಳನ್ನು ವೃತ್ತಿಪರ ಲೀಗ್ ಎಂದು ಕರೆಯುತ್ತಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ‘ಇಂಡಿಯನ್ ಪ್ರೀಮಿಯರ್ ಲೀಗ್’ ನಡೆಸುತ್ತದೆ. ಇಲ್ಲಿ ಹಣದ ಹೊಳೆ ಹರಿಯುತ್ತದೆ. ವಾಲಿಬಾಲ್‌ನಲ್ಲೂ ಅದೇ ರೀತಿಯ ಲೀಗ್ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ಫೆಬ್ರವರಿಯಲ್ಲಿ ಪ್ರೊ ವಾಲಿಬಾಲ್ ಲೀಗ್ ದೇಶಾದ್ಯಂತ ನಡೆಯಲಿದೆ. ಈ ಕಾರಣಕ್ಕಾಗಿ ಕೂಡಲೇ ವಾಲಿಬಾಲ್ ಸಂಸ್ಥೆಗೆ ಅಧ್ಯಕ್ಷರೊಬ್ಬರನ್ನು ತರಾತುರಿಯಲ್ಲಿ ನಿಯೋಜಿಸಲಾಗಿದೆ. ಈ ಮೂಲಕ ವಾಲಿಬಾಲ್ ಸಂಸ್ಥೆ ಆಯೋಜಿಸಲು ಉದ್ದೇಶಿಸಿರುವ ಇಂಡಿಯನ್ ವಾಲಿಬಾಲ್ ಅಥವಾ ಭಾರತ್ ವಾಲಿಬಾಲ್ ಲೀಗ್ ನಡೆಯುವುದು ಸಂಶಯ.

 ಸಂಸ್ಥೆಯ ಹಣಕಾಸಿನ ಲೆಕ್ಕಾಚಾರವನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಈ ವಿವಾದ ಈಗ ಹೆಮ್ಮರವಾಗಿ ಬೆಳೆದಿದ್ದು, ದೇಶದ ಕ್ರೀಡಾಪಟುಗಳಿಗೆ ಇದರಿಂದ ಅನ್ಯಾಯವಾಗಿದೆ. ವಾಲಿಬಾಲ್ ಫೆಡರೇಷನ್‌ನ ಅಧ್ಯಕ್ಷ ಚೌಧರಿ ಅವಧೇಶ್ ಕುಮಾರ್ ಹಾಗೂ ರಾಮವತಾರ್ ಸಿಂಗ್ ಜಾಖರ್ ಇಬ್ಬರೇ ವಾಲಿಬಾಲ್ ಪರ ಹಗ್ಗಜಗ್ಗಾಟ ನಡೆಸುತ್ತಿದ್ದಾರೆ.

Writer - ಸೋಮಶೇಖರ ಪಡುಕರೆ

contributor

Editor - ಸೋಮಶೇಖರ ಪಡುಕರೆ

contributor

Similar News