ಟಿ.ಸುನಂದಮ್ಮ ಹಾಸ್ಯ ಸಾಹಿತ್ಯದ ಅಗ್ರಗಣ್ಯ ಲೇಖಕಿ: ಡಾ.ವಸುಂಧರಾ ಭೂಪತಿ

Update: 2018-11-04 13:27 GMT

ಬೆಂಗಳೂರು, ನ.4: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಟಿ.ಸುನಂದಮ್ಮ ಅಗ್ರಗಣ್ಯ ಹಾಸ್ಯ ಲೇಖಕಿಯಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಸಾಕಷ್ಟು ಲೇಖಕಿಯರು ಬೆಳಕಿಗೆ ಬಂದರು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ತಿಳಿಸಿದರು.

ರವಿವಾರ ಮಹಿಳಾ ಅಧ್ಯಯನ ಕೇಂದ್ರ ಸಹಯೋಗದೊಂದಿಗೆ ಗಣೇಶ ಚಾರಿಟಬಲ್ ಟ್ರಸ್ಟ್ ನಗರದ ಕಸಾಪದಲ್ಲಿ ಆಯೋಜಿಸಿದ್ದ ಹಿರಿಯ ಲೇಖಕಿ ದಿ.ಟಿ.ಸುನಂದಮ್ಮ ಸ್ಮರಣೆ ಮತ್ತು ಸುನಂದಮ್ಮ ಸಾಹಿತ್ಯ ಸಂಪುಟ-1 ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಹಳ ದಿನಗಳ ಹಿಂದೆ ಲೇಖಕಿ ಸುನಂದಮ್ಮರನ್ನು ಪತ್ರಿಕೆಯೊಂದಕ್ಕೆ ಸಂದರ್ಶನ ಮಾಡುವ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಹಾಸ್ಯ ಸಾಹಿತ್ಯ ಓದುಗರಿಗೆ ಮುದ ನೀಡುವಂತಹದ್ದೆ. ಆದರೆ, ಸ್ವಲ್ಪ ಎಚ್ಚರ ತಪ್ಪಿದರೂ ಅವಮಾನಕ್ಕೆ, ಆಶ್ಲೀಲಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಅತ್ಯಂತ ಎಚ್ಚರಿಕೆಯಿಂದ ಬರೆಯಬೇಕು ಎಂಬ ಚಿಂತನೆಯನ್ನು ಹಂಚಿಕೊಂಡಿದ್ದರು ಎಂದು ಅವರು ಸ್ಮರಿಸಿದರು.

ಹಾಸ್ಯ ಸಾಹಿತಿ ಪ್ರೊ.ಅ.ರಾ. ಮಿತ್ರ ಮಾತನಾಡಿ, ಸಾಂಪ್ರದಾಯಿಕ ಪರಿಸರದಲ್ಲಿ ಮಹಿಳೆಯರು ಗಟ್ಟಿಯಾಗಿ ನಗುವುದೂ ನಿಷಿದ್ಧವಾಗಿದ್ದ ಕಾಲದಲ್ಲಿ, ತಮ್ಮ ಹಾಸ್ಯದ ಬುಟ್ಟಿಯಲ್ಲಿದ್ದ ಚುರುಕಿನ ಬರಹಗಳನ್ನು ಹಂಚುತ್ತ ಎಲ್ಲರನ್ನೂ ಮನಸಾರೆ ನಗಿಸಿದ ಅವರೊಬ್ಬ ಅದ್ಭುತ ‘ಅಕ್ಷರ ಕೊರವಂಜಿ' ಎಂದರು.

ಮಾಜಿ ಸಚಿವೆ ಡಾ.ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ಲೇಖಕಿ ಸುನಂದಮ್ಮ ಹಾಸ್ಯ ಬರಹಗಾರ್ತಿ ಮಾತ್ರವಲ್ಲ. ಸದಾ ಹಸ್ಮನುಖಿಯಾಗಿದ್ದರು. ಯಾವುದೇ ಒಂದು ಸುದ್ದಿ, ವಿಷಯವನ್ನು ಹಾಸ್ಯದಲ್ಲಿಯೆ ಹೇಳಿ, ನಗು ಮೂಡಿಸುತ್ತಿದ್ದರು. ಮುಂದಿನ ಸಂಪುಟದಲ್ಲಿ ತಾನೂ ಅವರ ಬಗ್ಗೆ ಬರೆಯಲು ಇಚ್ಚಿಸಿದ್ದೇನೆ ಎಂದು ನುಡಿದರು.

ಲೇಖಕಿ ಪ್ರೊ.ಭುವನೇಶ್ವರಿ ಹೆಗಡೆ ಮಾತನಾಡಿ, ಲೇಖಕಿ ಟಿ.ಸುನಂದಮ್ಮ ಕನ್ನಡ ಹಾಸ್ಯ ಸಾಹಿತ್ಯಕ್ಕೆ ವಿಶಿಷ್ಟತೆಯನ್ನು ತಂದುಕೊಟ್ಟವರು. ಹಾಸ್ಯ ಸಾಹಿತ್ಯದ ಹಿರಿಯಕ್ಕ ಎಂದೇ ಹೆಸರುವಾಸಿಯಾಗಿದ್ದ ಅವರು, ಸ್ವಾತಂತ್ರ ಹೊರಾಟಗಾರ್ತಿಯೂ ಆಗಿದ್ದರು. ಹಾಗೂ ತಮ್ಮ ಮೊನಚು ಬರಹಗಳಿಂದ ಪ್ರಸಿದ್ಧರಾಗಿದ್ದರು ಎಂದು ತಿಳಿಸಿದರು.

ಸಾಮಾಜಿಕ ನೋವು - ನಲಿವುಗಳನ್ನು ವಿಡಂಬನಾತ್ಮಕವಾಗಿ ಕೃತಿಗಿಳಿಸುವುದು ಹಾಸ್ಯ ಸಾಹಿತ್ಯ. ಆದರೆ, ಇಂದು ಹಾಸ್ಯ ಸಾಹಿತ್ಯ ಎಂಬುದು ಕೇವಲ ಪದಗಳ ಜೋಡಣೆಗೆ ಸೀಮಿತಗೊಂಡಿದೆ. ಹಾಸ್ಯ ಸಾಹಿತ್ಯದ ಬೆಳವಣಿಗೆ, ವಿಮರ್ಶೆ ಕುರಿತು ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಾದರೂ, ಹಾಸ್ಯ ಸಾಹಿತ್ಯಕ್ಕೆ ಪ್ರಾಮುಖ್ಯತೆ ದೊರೆಯಲಿ ಎಂದು ಅವರು ಆಶಿಸಿದರು. ಕಾರ್ಯಕ್ರಮದಲ್ಲಿ ಲೇಖಕಿಯರಾದ ಶಾಂತಾ ನಾಗರಾಜ್, ಡಾ.ಆರ್, ಪೂರ್ಣಿಮಾ, ಡಾ.ಎನ್. ಗಾಯತ್ರಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News