×
Ad

ಬೆದರಿಸಿ ಹಣ ವಸೂಲಿ ಆರೋಪ: ಮತ್ತೊಬ್ಬ ಆರೋಪಿ ಸೆರೆ

Update: 2018-11-04 19:14 IST

ಬೆಂಗಳೂರು, ನ.4: ಸಂಘಟನೆಯೊಂದರ ಹೆಸರಿನಲ್ಲಿ ಹಣ ವಸೂಲಿ, ಮೀಟರ್ ಬಡ್ಡಿ ದಂಧೆ ಆರೋಪದಡಿ ಬಂಧಿತನಾಗಿರುವ ಲಯನ್ ಬಾಲಕೃಷ್ಣ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಹುಬ್ಬಳ್ಳಿ ಮೂಲದ ದಾದಾಪೀರ್ ಹಲಗೇರಿ ಬಂಧಿತ ಆರೋಪಿ ಎಂದು ಸಿಸಿಬಿ ತಿಳಿಸಿದೆ.

ಲಯನ್ ಬಾಲಕೃಷ್ಣ ಎಂಬಾತ, ದಲಿತ ಸಂರಕ್ಷಕ ಸಮಿತಿ ಹೆಸರಿನ ಸಂಘಟನೆಯೊಂದನ್ನು ಸ್ಥಾಪಿಸಿಕೊಂಡು, ಮನೆಯನ್ನೆ ಕಚೇರಿ ಮಾಡಿಕೊಂಡಿದ್ದ. ಜೊತೆಗೆ ಬಡ್ಡಿ ವ್ಯವಹಾರ ಮಾಡುತ್ತಾ ಸಾರ್ವಜನಿಕರಿಂದ ದುಬಾರಿ ಬಡ್ಡಿ ವಸೂಲಿ ಮಾಡುತ್ತಿದ್ದ. 2014ನೆ ಸಾಲಿನಲ್ಲಿ ರಾಜು ಎಂಬುವರಿಗೆ ಬಿಡಿಎ ನಿವೇಶನ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ.ಗಳನ್ನು ಪಡೆದುಕೊಂಡು ವಂಚಿಸಿದ್ದ ಆರೋಪದಡಿ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತದನಂತರ, ನಗರದ ಪೊಲೀಸ್ ಆಯುಕ್ತರು ಪ್ರಕರಣದ ಮುಂದಿನ ತನಿಖೆಯನ್ನು ಸಿಸಿಬಿ ಘಟಕಕ್ಕೆ ವಹಿಸಿದ್ದರು ಎಂದು ಡಿಸಿಪಿ ಎಸ್.ಗಿರೀಶ್ ತಿಳಿಸಿದರು.

ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಅ.23ರಂದು ಇಂದಿರಾನಗರದ ಎ.ನಾರಾಯಣಪುರದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿ, ಲಯನ್ ಬಾಲಕೃಷ್ಣ ಅನ್ನು ವಶಕ್ಕೆ ಪಡೆದು, 1.28 ಲಕ್ಷ ನಗದು, ಎರಡು ಪಿಸ್ತೂಲು, ಹಲವು ಚೆಕ್‌ಗಳು ಹಾಗೂ ಮತ್ತಿತರ ದಾಖಲಾತಿಗಳನ್ನು ಜಪ್ತಿ ಮಾಡಿಲಾಗಿತ್ತು.

ವಿಚಾರಣಾ ವೇಳೆ ಬಾಲಕೃಷ್ಣ, ತನ್ನ ಸಹಚರ ಹುಬ್ಬಳ್ಳಿ ಮೂಲದ ದಾದಾಪೀರ್ ಹಲಗೇರಿ ಸೇರಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಬಗ್ಗೆ ಆರ್‌ಟಿಐನಲ್ಲಿ ಮಾಹಿತಿ ಪಡೆದು, ಸಂಬಂಧಪಟ್ಟ ಇಂಜಿನಿಯರ್ ಮತ್ತು ಕಟ್ಟಡಗಳ ಮಾಲಕರಿಗೆ ಬೆದರಿಸಿ, ಅವರಿಂದ ಸುಲಿಗೆ ಮಾಡುತ್ತಿದ್ದಾಗಿಯೂ ಮಾಹಿತಿ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News