×
Ad

ಪಟಾಕಿ ಮುಕ್ತ ದೀಪಾವಳಿ ಆಚರಣೆ: ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ

Update: 2018-11-04 22:13 IST

ಬೆಂಗಳೂರು, ನ.4: ಪಟಾಕಿಗಳಿಂದ ಹೊರಬರುವ ಹೊಗೆಯಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗಲಿವೆ. ಹೀಗಾಗಿ, ಪಟಾಕಿ ರಹಿತ ದೀಪಾವಳಿ ಆಚರಿಸುವಂತೆ ಕ್ರಿಸ್ಪ್ ಸಂಸ್ಥೆ ವತಿಯಿಂದ ನಗರದಲ್ಲಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕ್ರಿಸ್ಪ್ ಸಂಸ್ಥೆಯ ಅಧ್ಯಕ್ಷ ಕುಮಾರ್ ಜಹಾಂಗೀದಾರ್ ಜತೆ ಹತ್ತಾರು ಸಂಸ್ಥೆಗಳ ಮುಖಂಡರು ಹಾಗೂ ಮಕ್ಕಳೊಂದಿಗೆ ನಗರದ ಪ್ರೆಸ್‌ಕ್ಲಬ್ ಬಳಿಯ ಎಡ್ಬರ್ಡ್ ಪ್ರತಿಮೆ ಬಳಿ ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸುವ ಮೂಲಕ ಪಟಾಕಿ ರಹಿತ ಹಬ್ಬ ಆಚರಿಸುವಂತೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಮಾರ್ ಜಹಾಂಗೀದಾರ್, ಪಟಾಕಿಗಳನ್ನು ಬಳಕೆ ಮಾಡುವುದರಿಂದ ಮಾಲಿನ್ಯ ಹೆಚ್ಚಾಗಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಕಾರಣದಿಂದಾಗಿ ಇತ್ತೀಚಿಗೆ ಸುಪ್ರೀಂಕೋರ್ಟ್ ಪಟಾಕಿಗಳ ಮೇಲೆ ನಿಯಂತ್ರಣ ಹೇರಿದೆ. ಹೀಗಾಗಿ, ಪಟಾಕಿಗಳನ್ನು ಬಳಸದಂತೆ ಈ ಬಾರಿ ದೀಪಾವಳಿಯನ್ನು ಆಚರಣೆ ಮಾಡೋಣ ಎಂದರು.

ಹಬ್ಬಗಳ ಸಂದರ್ಭದಲ್ಲಿ ಹೂವು, ಹಣ್ಣು, ತೆಂಗು, ಬಟ್ಟೆ, ಪ್ಲಾಸ್ಟಿಕ್ ಮತ್ತಿತರೆ ವಸ್ತುಗಳಿಂದ ಪರಿಸರ ಮಾಲಿನ್ಯವಾಗುತ್ತದೆ. ಆದರೆ, ಈ ಹಬ್ಬದ ಸಂದರ್ಭದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಅಪಾರ ಪ್ರಮಾಣದಲ್ಲಿ ವಾಯು ಮಾಲಿನ್ಯಗೊಳ್ಳುತ್ತದೆ. ಅಲ್ಲದೆ, ಈಗಾಗಲೇ ನಗರದಲ್ಲಿ ಮಿತಿ ಮೀರಿ ವಾಯು ಮಾಲಿನ್ಯವಾಗಿದೆ. ಈ ನಿಟ್ಟಿನಲ್ಲಿ ಜನರು ಮಾಲಿನ್ಯ ರಹಿತವಾದ ಹಬ್ಬವನ್ನು ಆಚರಣೆ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಪಟಾಕಿಗಳಿಂದ ಹೊರಬರುವ ಹೊಗೆಯಿಂದ ಕ್ರೋನಿಕ್ ಅಬ್‌ಸ್ಟ್ರಕ್ಟಿವ್ ಪಲ್ಮನರಿ ಕಾಯಿಲೆ, ಅಕ್ಯೂಟ್ ರೆಸ್ಪಿರೇಟರಿ ಇನ್‌ಫೆಕ್ಷನ್, ಬ್ರಾಂಕೇಟಿಸ್ ಅಸ್ಥಮಾ, ಉಸಿರಾಟದ ತೊಂದರೆ, ಕಿವುಡತನ, ಕುರುಡುತನ, ಅಧಿಕ ರಕ್ತದೊತ್ತಡ, ಹೃದಯಾಘಾತ, ನಿದ್ರಾಹೀನತೆ, ಕಿಡ್ನಿ ವೈಫಲ್ಯ, ಅಸ್ತಮಾ, ಜ್ವರ, ವಾಂತಿ, ಚರ್ಮದ ರೋಗಗಳು, ನಾಸಿಯಾ ಮತ್ತು ಮಾನಸಿಕ ದೌರ್ಬಲ್ಯ ಸೇರಿದಂತೆ ಮತ್ತಿತರೆ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾಗಿ, ಪಟಾಕಿಗಳನ್ನು ನಿಷೇಧ ಮಾಡೋಣ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News