ದೀಪಾವಳಿ ಹಬ್ಬ ಹಿನ್ನೆಲೆ: ಮಾಲಿನ್ಯ ತಪಾಸಣೆಗೆ ಮಂಡಳಿ ಸಿದ್ಧತೆ
ಬೆಂಗಳೂರು, ನ.4 : ನಗರದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹಾಗೂ ನಂತರದ ದಿನಗಳಲ್ಲಿ ಮಾಲಿನ್ಯ ತಪಾಸಣೆ ನಡೆಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ.
ನಗರದಲ್ಲಿರುವ 21 ಕಡೆಗಳಲ್ಲಿ ಹೊಂದಿರುವ ವಾಯು ಮಾಲಿನ್ಯ ಮಾಪನ ಕೇಂದ್ರಗಳಲ್ಲಿ ಹಾಗೂ ಮಂಡಳಿಯ ಎರಡು ಮೊಬೈಲ್ ಕೇಂದ್ರಗಳ ಮೂಲಕ ನಗರದಲ್ಲಿ ವಾಯು ಮಾಲಿನ್ಯ ತಪಾಸಣೆ ನಡೆಸಲು ಮಂಡಳಿ ಮುಂದಾಗಿದೆ. ಹಬ್ಬಕ್ಕೆ ಮೊದಲೇ ಮೂರು ದಿನಗಳು ಹಾಗೂ ಹಬ್ಬದ ದಿನಗಳಲ್ಲಿ ಮಾಲಿನ್ಯ ತಪಾಸಣೆ ನಡೆಸಿ ವರದಿ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ.
ಪಟಾಕಿ ಬಳಕೆ ಮೇಲೆ ನಿಯಂತ್ರಣ ಹೇರಿದ ಪರಿಣಾಮವಾಗಿ ಪ್ರಸಕ್ತ ಸಾಲಿನಲ್ಲಿ ವಾಯು ಮಾಲಿನ್ಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಮಂಡಳಿ ಅಂದಾಜಿಸಿದ್ದು, ದೀಪಾವಳಿ ಪ್ರಯುಕ್ತ ಪ್ರತಿವರ್ಷ ಪಟಾಕಿ ಸಿಡಿತ ಹೆಚ್ಚಾಗಿರುವುದರಿಂದ ಮಾಲಿನ್ಯ ಪ್ರಮಾಣವೂ ಹೆಚ್ಚಾಗಿರುತ್ತದೆ. ಆದರೆ, ಈ ಬಾರಿ ರಾತ್ರಿ 8 ರಿಂದ 10 ಗಂಟೆ ವರೆಗೆ ಮಾತ್ರ ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಪಟಾಕಿ ಸಿಡಿಸಲು ಸಮಯ ನಿಗದಿಪಡಿಸಲಾಗಿದೆ. ಅದರಂತೆ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಲಿದೆ. ಮಂಡಳಿಯ ಅಧಿಕಾರಿಗಳು ಮಾಪನ ಕೇಂದ್ರಗಳಲ್ಲಿನ ಮಾಹಿತಿ ಹಾಗೂ ಎರಡು ಮೊಬೈಲ್ ತಪಾಸಣಾ ಕೇಂದ್ರಗಳ ಮೂಲಕ ಮಾಲಿನ್ಯ ತಪಾಸಣೆ ನಡೆಸಲಿದ್ದಾರೆ ಎಂದು ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.