ಬೆಂಗಳೂರು: ದಲಿತ ಮುಖಂಡರ ಬಿಡುಗಡೆಗೆ ಆಗ್ರಹಿಸಿ ಧರಣಿ
ಬೆಂಗಳೂರು, ನ. 4: ದಲಿತ ಶೋಷಣ್ ಮುಕ್ತಿ ಮಂಚ್‌ನ ಮಧ್ಯಪ್ರದೇಶ ಮುಖಂಡ ಪ್ರಫಲ್ ಸೇರಿದಂತೆ ಬಂಧಿತ ದಲಿತ ಮುಖಂಡರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕರ್ನಾಟಕ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಆಗ್ರಹಿಸಿದ್ದಾರೆ.
ರವಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಮಿತಿಯ ನೇತೃತ್ವದಲ್ಲಿ ಕೇಂದ್ರ ಸರಕಾರದ ದಲಿತ ವಿರೋಧಿ ನೀತಿ ಖಂಡಿಸಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಪ್ರಿಲ್ 2ರಂದು ರಾಷ್ಟ್ರದಾದ್ಯಂತ ನಡೆದ ಬಂದ್‌ನಲ್ಲಿ ಮುಂದಾಳತ್ವ ವಹಿಸಿದ್ದ ದಲಿತ ನಾಯಕರ ವಿರುದ್ಧ ಸುಳ್ಳು ಕೇಸು ಹಾಕಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಕೂಡಲೇ ಬಂಧಿತ ದಲಿತ ಮುಖಂಡರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ದಲಿತ ಸಂಘಟನೆಗಳ ಒಕ್ಕೂಟ ನೀಡಿದ ಭಾರತ್ ಬಂದ್‌ಗೆ ಕರೆಯಲ್ಲಿ ವಿವಿಧ ರಾಜ್ಯಗಳಲ್ಲಿ ನಡೆದ ಗೋಲಿಬಾರ್‌ಗೆ 13 ಮಂದಿ ದಲಿತರು ಬಲಿಯಾಗಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರದ ಕೊರೆಗಾವ್ ಮುಂತಾದೆಡೆ ಭೀಮ್ ಆರ್ಮಿ ಹಾಗೂ ಸ್ವಾಭಿಮಾನಿ ಸಂಘರ್ಷ ಸಮಿತಿ, ದಲಿತ ಶೋಷಣ್ ಮುಕ್ತಿ ಮಂಚ್‌ನ ಮುಖಂಡರ ಮೇಲೆ ಸುಳ್ಳು ಕೇಸ್ ಹಾಕಿ ಬಂಧಿಸಿರುವುದು ಖಂಡನೀಯ ಎಂದರು.
ಅಸಮಾನತೆಯಿಂದ ಕೂಡಿದ ಜಾತಿ ವ್ಯವಸ್ಥೆಯನ್ನು ಜೀವಂತವಾಗಿರಿಸಿ, ಮೀಸಲಾತಿ ವ್ಯವಸ್ಥೆ ತೆಗೆದು ಹಾಕಬೇಕೆನ್ನುವ ನಿಲುವು ಸಂವಿಧಾನ ಬಾಹಿರವಾಗುತ್ತದೆ. ದೇಶದ ರಾಜಧಾನಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಸಂವಿಧಾನವನ್ನೇ ಸುಟ್ಟು ಹಾಕಿದ ಸಂಘಪರಿವಾರದ ದೇಶದ್ರೋಹದ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಸಂವಿಧಾನವನ್ನು ಬದಲಾಯಿಸಲು ಸಂಚು ಹಾಕುತ್ತಿರುವ ಜನಪ್ರತಿನಿಧಿಗಳ ಧೋರಣೆ ದೇಶ ವಿರೋಧಿ ನಿಲುವು ಎಂದು ಟೀಕಿಸಿದರು.
ದಲಿತರ ಮೇಲೆ ಶೆ.66ರಷ್ಟು ದೌರ್ಜನ್ಯ ಹೆಚ್ಚಾಗಿವೆ ಎಂಬುದು ಸರಕಾರದ ಅಂಕಿ- ಅಂಶಗಳಿಂದ ಕಂಡು ಬರುತ್ತಿದ್ದು, ದೇಶದಲ್ಲಿ ದಲಿತರ ಸ್ಥಿತಿಯನ್ನು ಹೇಳುತ್ತವೆ. ದಲಿತರ ಮೇಲಿನ ಹಲ್ಲೆ ಪ್ರಕರಣಗಳು 2.35ಲಕ್ಷ ದೇಶದಲ್ಲಿ ನಡೆದರೆ, ರಾಜ್ಯದಲ್ಲಿ 10 ಸಾವಿರ ಪ್ರಕರಣಗಳು ಜರುಗಿವೆ. ಅಲ್ಲದೆ, ಬಿಜೆಪಿ ಆಡಳಿತವಿರುವ ರಾಜ್ಯದಲ್ಲೆ ಹೆಚ್ಚು ದೌರ್ಜನ್ಯಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ನೌಕರರ ಭಡ್ತಿ ಮೀಸಲು ಬೇಡಿಕೆಯ ಬಗ್ಗೆ ಕೇಂದ್ರ, ವ್ಯವಸ್ಥಿತವಾಗಿ ಸುಪ್ರೀಂ ಕೋರ್ಟ್ ಮೂಲಕ ದಮನ ನೀತಿ ಅನುಸರಿಸಿದೆ. ಹೀಗಾಗಿ ಇದ್ದ ಅಲ್ಪ ಸ್ವಲ್ಪ ಪ್ರಾತಿನಿಧ್ಯವನ್ನು ಕಸಿದುಕೊಂಡು ನೌಕರರ ಭಡ್ತಿ ಸೌಲಭ್ಯ ವಂಚನೆ ಮಾಡಿದೆ. ದಲಿತರ ಶ್ರೇಯಸ್ಸನ್ನು ಬಯಸದ ಕೇಂದ್ರ ಸರಕಾರದ ದಲಿತ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಮುಂದೆ ಡಿ.20ರಂದು ಪಾರ್ಲಮೆಂಟ್ ಅಧಿವೇಶನದ ವೇಳೆ ದಲಿತ ಸಂಘಟನೆಗಳು ಪಾರ್ಲಿಮೆಂಟ್ ಚಲೋ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಸಮಿತಿಯ ಸಂಚಾಲಕ ಎನ್.ನಾಗರಾಜು ಮಾತನಾಡಿ, ತಳಸಮುದಾಯದ ದನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ದಲಿತ-ಶೋಷಿತ ಸಮುದಾಯದ ಜನರ ಪ್ರಗತಿಗಾಗಿ ಸಾಕಷ್ಟು ಚಿಂತನೆ ನಡೆಸಿ, ಸಂವಿಧಾನದಲ್ಲಿ ಅವುಗಳನ್ನು ಅಳವಡಿಸಿದ್ದರು. ಆದರೆ, ಸಂವಿಧಾನದ ಆಶಯಗಳು ಇಂದಿಗೂ ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಮಿತಿಯ ಎನ್.ರಾಜಣ್ಣ, ಎಚ್.ಜಿ.ನಾಗಣ್ಣ ಪಾಲ್ಗೊಂಡಿದ್ದರು.