ಸೌದಿ ಅರೇಬಿಯಾದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ

Update: 2018-11-05 05:11 GMT

ದಮ್ಮಾಮ್, ನ.5: ಸೌದಿ ಅರೇಬಿಯಾದ ಅಲ್-ಖೋಬರ್ ನಗರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಭ್ರಮದ 'ಕನ್ನಡ ಡಿಂಡಿಮ 'ಬಾರಿಸಲಾಯಿತು. ಅನಿವಾಸಿ ಭಾರತೀಯ ಸಂಘಟನೆ ಇಂಡಿಯನ್ ಸೋಶಿಯಲ್ ಫೋರಂ ಪೂರ್ವ ಪ್ರಾಂತ್ಯ ಕರ್ನಾಟಕ ಘಟಕದ ವತಿಯಿಂದ ಅಲ್ ಖೋಬರ್ ನ ಗಲ್ಫ್ ದರ್ಬಾರ್ ರೆಸ್ಟೋರೆಂಟ್ ನಲ್ಲಿ ಶುಕ್ರವಾರ ಆಯೋಜಿಸಿದ್ದ ಅದ್ಧೂರಿಯ ಕಾರ್ಯಕ್ರಮದಲ್ಲಿ 'ಹಚ್ಚೇವು ಕನ್ನಡದ ದೀಪ' ಕಿರುಪ್ರಹಸನ ಪ್ರದರ್ಶನ, ಸಾಧಕರಿಗೆ ಸನ್ಮಾನ, ನಾಡಗೀತೆಯೊಂದಿಗೆ ರಾಜ್ಯೋತ್ಸವವನ್ನು ಅವಿಸ್ಮರಣೀಯವನ್ನಾಗಿಸಿತು. 

ಕಾರ್ಯಕ್ರಮವನ್ನು ನಾಡಧ್ವಜ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಲಾಯಿತು. ಸಭಾ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಐಎಸ್ಎಫ್ ಪೂರ್ವ ಪ್ರಾಂತ್ಯದ ಅಧ್ಯಕ್ಷ ಮುಹಮ್ಮದ್ ಶರೀಫ್ ವಹಿಸಿದ್ದರು. ಐಎಸ್ಎಫ್ ರಾಜ್ಯ ಸಮಿತಿಯ ಸದಸ್ಯ ಎ.ಎಂ.ಆರಿಫ್ ಜೋಕಟ್ಟೆ ರಾಜ್ಯೋತ್ಸವದ ಸಂದೇಶ ನೀಡಿ,  ಕನ್ನಡ ನಾಡು ನುಡಿಯ ಬಗ್ಗೆ ಬೆಳಕು ಚೆಲ್ಲಿದರು.

ಮುಖ್ಯ ಅತಿಥಿಗಳಾಗಿ ಇಂಡಿಯಾ ಫ್ರಟರ್ನಿಟಿ ಫೋರಂ ದಮ್ಮಾಮ್ ಘಟಕದ ಅಧ್ಯಕ್ಷ ಸಾಜಿದ್ ವಳವೂರು, ಕಾರ್ಕಳ ಅಸೋಸಿಯೇಶನ್ ಸೌದಿ ಅರೇಬಿಯಾ (ಕೆ.ಎ.ಎಸ್.ಎ.)ದ ಮೊಹ್ಸಿನ್, ರಿಝಾಯತ್ ಸ್ಪೆರೋ ಸಂಸ್ಥೆಯ ನಿಸಾರ್, ಇಂಡಿಯನ್ ಎಂಬಾಸ್ಸಿ‌ ಸ್ಕೂಲ್ ದಮ್ಮಾಮ್ ಇದರ ಸಯ್ಯದ್ ಸಫದಾರ್, ಜಮೀಯತುಲ್ ಫಲಾಹ್ ಮುಖಂಡ ಶೇಕ್ ನಿಝಾಮುದ್ದೀನ್, ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಪ್ರತಿನಿಧಿ ಹಾತಿಮ್ ಕಂಚಿ ಮುಂತಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಾಡ ಗೀತೆಯೊಂದಿಗೆ ಚಾಲನೆ ನೀಡಲಾಯಿತು. ಕರ್ನಾಟಕದ ವೈವಿಧ್ಯತೆಯನ್ನು ಸಾರುವ ಸಾಕ್ಷ್ಯಚಿತ್ರವು ನೆರೆದಿದ್ದ ಸಭಿಕರಲ್ಲಿ ಕನ್ನಡ ಪ್ರೇಮವನ್ನು ತುಂಬಿತು. ನಂತರ ಐಎಸ್ಎಫ್ ದಮ್ಮಾಮ್ ಘಟಕದ ಕಲಾವಿದರು ಪ್ರದರ್ಶಿಸಿದ ಕರ್ನಾಟಕ ಭಾಷಾ ವೈವಿಧ್ಯ ಮತ್ತು‌ ವಿಶಾಲ ಹೃದಯವಂತಿಕೆಯನ್ನು ಸಾರುವ ಕಿರು ನಾಟಕವು ನೆರೆದಿದ್ದ ಕನ್ನಡ ಪ್ರೇಮಿಗಳನ್ನು ರಂಜಿಸಿತು. ಸಭಿಕರಿಗೆ ರಸಪ್ರಶ್ನೆ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿತ್ತು. 

ಇದೇ ಸಂದರ್ಭ ರಾಜ್ಯೋತ್ಸವದ ಅಂಗವಾಗಿ ಅನಿವಾಸಿ ಕನ್ನಡಿಗರ ಸಾಧಕ‌ ಸಂಘಟನೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು. 24 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದಿ ಕಾರ್ಯಚರಿಸುತ್ತಿದ್ದು ನಾಡಿನಲ್ಲಿ ಯತೀಂ ಖಾನ, ಬೋರ್ಡಿಂಗ್ ಮದ್ರಸ, ಹಿಫ್ಲುಲ್ ಕುರ್ ಆನ್ , ಶರೀಅತ್ ಕಾಲೇಜು, ಮಹಿಳೆಯರ ಕಾಲೇಜು, ಎಂಬಿತ್ಯಾದಿಯಾಗಿ‌ ಬಹು ಕ್ಷೇತ್ರದಲ್ಲಿ ತನ್ನ‌ ಶಿಕ್ಷಣ ಸೇವೆ ಸಲ್ಲಿಸುತ್ತಿರುವ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ಡಿಕೆಎಸ್.ಸಿ) ಪರವಾಗಿ ಪ್ರತಿನಿಧಿಗಳಾದ ಹಾತಿಮ್ ಕಂಚಿ, ಅಝೀಝ್ ಮೂಡುತೊಟ, ಇಸ್ಮಾಯೀಲ್ ಮತ್ತು‌ ಬಶೀರ್ ಸ್ಮರಣಿಕೆಯನ್ನು ಸ್ವೀಕರಿಸಿದರು. 
30 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿದ್ದು ಸೇವಾನಿರತ ಸೌದಿ ಅರೇಬಿಯಾದ ಅನಿವಾಸಿ ಕನ್ನಡಿಗರ ಮೊದಲ ಸಂಘಟನೆ ಎಂಬ ಹೆಗ್ಗಳಿಕೆ ಇರುವ ಮತ್ತು ಭೌತಿಕ ‌ಮತ್ತು ಲೌಕಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಕಾರ್ಯಚರಿಸುತ್ತಿರು‌ವ ಜಮೀಯತುಲ್ ಫಲಾಹ್ ಪರವಾಗಿ ನಿಝಾಮ್ ಶೇಕ್, ಇಮ್ರಾನ್ ಕಾರ್ಕಳ, ಶರೀಫ್ ಕಾರ್ಕಳ, ಅಝೀಮ್ ಆಲಂ ಸ್ಮರಣಿಕೆಯನ್ನು ಸ್ವೀಕರಿಸಿದರು.

ಸ್ಮರಣಿಕೆಗಳನ್ನು ಐ.ಎಸ್.ಎಫ್. ಅಧ್ಯಕ್ಷ ಮುಹಮ್ಮದ್ ಶರೀಫ್, ರಾಜ್ಯ ಸಮಿತಿಯ ಸದಸ್ಯರಾದ ಆರಿಫ್ ಜೋಕಟ್ಟೆ, ಶರೀಫ್ ಅಡ್ಡೂರ್ ನೀಡಿ ಗೌರವಿಸಿದರು.

ಐಎಸ್ಎಫ್ ಸದಸ್ಯ ಶರೀಫ್ ಕೃಷ್ಣಾಪುರ ಸ್ವಾಗತಿಸಿದರು. ಇರ್ಷಾದ್ ಹಳೆಯಂಗಡಿ ಕಾರ್ಯಕ್ರಮ ನಿರೂಪಿಸಿದರು. ರಿಝ್ವಾನ್ ಸಾಸ್ತಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News