ಕೈಗಾರಿಕೆಗಳಿಗೆ ಕೋಟಿಗಟ್ಟಲೆ ಹಣ ಹೂಡುವ ಬದಲು ದನ ಸಾಕಣೆಯಿಂದ ಶೀಘ್ರ ಆದಾಯ ಗಳಿಸಬಹುದು: ಬಿಪ್ಲಬ್ ದೇಬ್

Update: 2018-11-05 08:06 GMT

ಅಗರ್ತಲ, ನ.5: ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರಕಾರವು 5,000 ಕುಟುಂಬಗಳಿಗೆ ದನಗಳನ್ನು ವಿತರಿಸುವ ಯೋಜನೆಯನ್ನು ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಘೋಷಿಸಿದ್ದಾರೆ.

ದನ ಸಾಕಣೆಯೂ ಯುವಕರಿಗೆ ಒಂದು ಉದ್ಯೋಗ ಎಂದು ಈ ಹಿಂದೆಯೂ ವಾದಿಸಿದ್ದ ಬಿಪ್ಲಬ್ ದೇಬ್, “ದೊಡ್ಡ ಕೈಗಾರಿಕೆಗಳು 2,000 ಮಂದಿಗೆ ಉದ್ಯೋಗ ಸೃಷ್ಟಿಸಲು ರೂ 10,000 ಕೋಟಿ ಹೂಡಿಕೆ ಮಾಡಬೇಕಾದರೆ,  10,000 ದನಗಳನ್ನು 5,000 ಕುಟುಂಬಗಳಿಗೆ ನೀಡಿದರೆ ಜನರು ಆರು ತಿಂಗಳಲ್ಲಿ ಹಣ ಗಳಿಸಲು ಆರಂಭಿಸಬಹುದು'' ಎಂದಿದ್ದಾರೆ.

ಮುಖ್ಯಮಂತ್ರಿಯಾಗುವ ಮುನ್ನ ಜಿಮ್ ತರಬೇತುದಾರರಾಗಿದ್ದ ಬಿಪ್ಲಬ್ ದೇಬ್ ತಾವೇ ತಮ್ಮ ನಿವಾಸದಲ್ಲಿ ದನಗಳನ್ನು ಸಾಕಿ ಇತರರಿಗೆ ಉದಾಹರಣೆಯಾಗುವುದಾಗಿ ಹೇಳಿದ್ದಾರೆ.

``ನಮ್ಮ ಮನೆಯಲ್ಲಿ ಸಾಕಿದ ದನಗಳ ಹಾಲನ್ನೇ ನಾವು ಸೇವಿಸುತ್ತೇವೆ. ಇದು ತ್ರಿಪುರಾದ ಜನರಿಗೆ ಸ್ಫೂರ್ತಿಯಾಗುವುದಲ್ಲದೆ ಅಪೌಷ್ಠಿಕಾಂಶತೆಯನ್ನೂ ಹೋಗಲಾಡಿಸಲು ಸಹಕಾರಿ,'' ಎಂದು ಅವರು ತಿಳಿಸಿದ್ದಾರೆ.

ನಿರುದ್ಯೋಗಿಗಳಾಗಿ ಉಳಿಯುವ ಬದಲು ಪದವೀಧರರೂ  ದನ ಸಾಕಬೇಕೆಂದು ಈ ವರ್ಷದ ಎಪ್ರಿಲ್ ತಿಂಗಳಲ್ಲಿ ಯುವಕರಿಗೆ ಸಲಹೆ ನೀಡಿದ್ದ ಮುಖ್ಯಮಂತ್ರಿ ``ಪ್ರತಿಯೊಂದು ಕುಟುಂಬ ದನ ಸಾಕಣೆ ನಡೆಸಬೇಕು. ಒಂದು ಲೀಟರ್ ಹಾಲಿಗೆ ರು 50 ಇದೆ. ಕಳೆದ ಹತ್ತು ವರ್ಷಗಳಿಂದ ಒಬ್ಬ ಪದವೀಧರ ಉದ್ಯೋಗ ಅರಸುತ್ತಿರುವ ಬದಲು ದನ ಸಾಕಿದ್ದರೆ ಇಷ್ಟು ಹೊತ್ತಿಗಾಗಿ ಆತನ ಬ್ಯಾಂಕ್ ಖಾತೆಯಲ್ಲಿ ರೂ 10 ಲಕ್ಷ ಇರುತ್ತಿತ್ತು,'' ಎಂದಿದ್ದರು.

ಪದವೀಧರರು ದನ ಸಾಕಣೆ, ಕೋಳಿ ಅಥವಾ ಹಂದಿ ಸಾಕಣಿಕೆ ಕೈಗೊಂಡರೆ ಅವರ ಘನತೆ ಕುಂದುವುದೆಂಬ ನಂಬಿಕೆಯೇ  ಹಲವರು ನಿರುದ್ಯೋಗಿಗಳಾಗಿ ಉಳಿಯುವಂತಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News