ಒಂದೂ ಎಸೆತ ಮುಗಿಸದೆ ಒಂದು ವಿಕೆಟ್ ಪಡೆದ ಕೊಹ್ಲಿ

Update: 2018-11-05 08:45 GMT

ಹೊಸದಿಲ್ಲಿ, ನ.5: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ದಾಖಲೆ ಬರೆಯುತ್ತಿದ್ದಾರೆ. ಹಲವರ ದಾಖಲೆ ಮುರಿಯುತ್ತಾರೆ. ತನ್ನ ಹೆಸರಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದ್ದಾರೆ. ಕೊಹ್ಲಿ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ಬೌಲಿಂಗ್‌ನಲ್ಲೂ ದಾಖಲೆ ಬರೆದಿದ್ದಾರೆ.

ಸೋಮವಾರ (ನ.5) 30ನೇ ಹರೆಯಕ್ಕೆ ಕಾಲಿಟ್ಟಿರುವ ಎಡಗೈ ಮಧ್ಯಮ ವೇಗಿ ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ತಾನು ಬೌಲಿಂಗ್ ನಡೆಸಿದ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಚೊಚ್ಚಲ ವಿಕೆಟ್ ಕಬಳಿಸಿದ್ದಾರೆ. ಇದೊಂದು ದಾಖಲೆಯಾಗಿದೆ. ಟ್ವೆಂಟಿ -20ಯಲ್ಲಿ ಒಟ್ಟು 8 ಮಂದಿ ಈ ಸಾಧನೆ ಮಾಡಿದ್ದಾರೆ. ಈ ಪೈಕಿ ಕೊಹ್ಲಿ ಈ ಸಾಧನೆ ಮಾಡಿದ್ದ 6ನೇ ಬೌಲರ್. ಆದರೆ ಕೊಹ್ಲಿ ವೈಡ್ ಎಸೆತದಲ್ಲಿ ವಿಕೆಟ್ ಪಡೆದು ದಾಖಲೆ ಬರೆದಿದ್ದಾರೆ.

132 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ 19 ಮಂದಿ ಟೆಸ್ಟ್‌ನಲ್ಲಿ ಮತ್ತು 18ಮಂದಿ ಬೌಲರ್‌ಗಳು ತಮ್ಮ ಓವರ್‌ನ ಮೊದಲ ಎಸೆತದಲ್ಲಿ ವಿಕೆಟ್ ಉಡಾಯಿಸಿ ದಾಖಲೆ ಬರೆದಿದ್ದಾರೆ.

 ಆಗಸ್ಟ್ 31, 2011ರಂದು ಇಂಗ್ಲೆಂಡ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ನಡೆದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ ಕೊಹ್ಲಿ ಅವರು ಇಂಗ್ಲೆಂಡ್‌ನ ಕೆವಿನ್ ಪೀಟರ್ಸನ್ ವಿಕೆಟ್ ಉಡಾಯಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

 ಈ ಟ್ವೆಂಟಿ-20 ಪಂದ್ಯ ನಾನಾ ಕಾರಣಗಳಿಂದಾಗಿ ಗಮನ ಸೆಳೆದಿದೆ. ಗೋಡೆ ಖ್ಯಾತಿಯ ಕಲಾತ್ಮಕ ದಾಂಡಿಗ ರಾಹುಲ್ ದ್ರಾವಿಡ್ ಅವರು ನಿವೃತ್ತಿಗೂ ಮುನ್ನ ಆಡಿದ್ದ ಏಕೈಕ ಟ್ವೆಂಟಿ-20 ಇದಾಗಿದೆ. ಅಲ್ಲದೆ ಭಾರತದ ಟೆಸ್ಟ್ ತಂಡದ ಉಪ ನಾಯಕ ಅಜಿಂಕ್ಯ ರಹಾನೆ , ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಅವರು ಇದೇ ಪಂದ್ಯದಲ್ಲಿ ಟ್ವೆಂಟಿ-20 ಕ್ರಿಕೆಟ್ ರಂಗ ಪ್ರವೇಶಿಸಿದ್ದರು. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ 19.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟಾಗಿತ್ತು. ಗೆಲುವಿಗೆ 166 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತಂಡ 7 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 60 ರನ್ ಗಳಿಸಿತ್ತು. ಇಂಗ್ಲೆಂಡ್ ಗೆಲುವಿಗೆ 78 ಎಸೆತಗಳಲ್ಲಿ 106 ರನ್ ಗಳಿಸಬೇಕಿತ್ತು. ಆಗ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ವಿರಾಟ್ ಕೊಹ್ಲಿಯನ್ನು ಬೌಲಿಂಗ್‌ಗೆ ಇಳಿಸುವ ಯೋಚನೆ ಬಂತು. ಅವರು ಕೊಹ್ಲಿಯತ್ತ ಚೆಂಡು ಎಸೆದರು.

ಕೊಹ್ಲಿ ಅಷ್ಟರ ತನಕ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಬೌಲಿಂಗ್ ನಡೆಸಿರಲಿಲ್ಲ. ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಆದೇಶದಂತೆ ವಿರಾಟ್ ಕೊಹ್ಲಿ ತನ್ನ ಮೊದಲ ಓವರ್‌ನಲ್ಲಿ ಕೆವಿನ್ ಪೀಟರ್ಸನ್‌ಗೆ ಬೌಲಿಂಗ್ ನಡೆಸಿದರು. ಆದರೆ ಎಸೆತ ವೈಡ್ ಆಗಿತ್ತು. ಪೀಟರ್ಸನ್ ಬ್ಯಾಟ್‌ನ್ನು ವಂಚಿಸಿದ ಚೆಂಡು ವಿಕೆಟ್ ಕೀಪರ್ ಧೋನಿ ಕೈ ಸೇರಿತ್ತು. ಪೀಟರ್ಸನ್ ಚೆಂಡು ಎಲ್ಲಿ ಹೋಯಿತು ಎಂದು ತಿರುಗಿ ನೋಡುವಷ್ಟರಲ್ಲಿ ಧೋನಿ ವಿಕೆಟ್ ಹಿಂದುಗಡೆ ತನ್ನ ಕೈಚಲಕ ಪ್ರದರ್ಶಿಸಿದ್ದರು. ಸ್ಟಂಪಿಂಗ್ ಮೂಲಕ ಧೋನಿ ಅವರು ಪೀಟರ್ಸನ್‌ಗೆ ಪೆವಿಲಿಯನ್ ಹಾದಿ ತೋರಿಸಿದ್ದರು. ಕೊಹ್ಲಿಗೆ ತಾನು ಎಸೆದ ಮೊದಲ ಓವರ್‌ನ ಮೊದಲ ಎಸೆತವನ್ನು ಪೂರ್ಣಗೊಳಿಸದೆ ವಿಕೆಟ್ ( 0.0-0-0-1)ಪಡೆದರು. ಅದು ಕೂಡಾ ಅಮೂಲ್ಯವಾದ ವಿಕೆಟ್ ಅವರ ಖಾತೆಗೆ ಜಮೆ ಆಗಿತ್ತು. ಪೀಟರ್ಸನ್ 33 ರನ್(23ಎ, 5ಬೌ) ಗಳಿಸಿ ಕೊಹ್ಲಿಗೆ ವಿಕೆಟ್ ಒಪ್ಪಿಸಿದ್ದರು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 3 ಓವರ್‌ಗಳಲ್ಲಿ 22 ರನ್ ನೀಡಿ 1 ವಿಕೆಟ್ ಪಡೆದರು. ಭಾರತ ವಿರುದ್ಧ ಇಂಗ್ಲೆಂಡ್ ಇನ್ನೂ 3 ಎಸೆತಗಳು ಬಾಕಿ ಇರುವಾಗಲೇ 169 ರನ್ ಗಳಿಸಿ 6 ವಿಕೆಟ್‌ಗಳ ಅಂತರದಲ್ಲಿ ಜಯ ದಾಖಲಿಸಿತು.

  ಚೊಚ್ಚಲ ಪಂದ್ಯವನ್ನಾಡಿದ ಅಜಿಂಕ್ಯ ರಹಾನೆ ಈ ಪಂದ್ಯದಲ್ಲಿ ಮೊದಲ ಅರ್ಧಶತಕ(61) ದಾಖಲಿಸಿದ್ದರು. ದ್ರಾವಿಡ್ 31 ರನ್ ಗಳಿಸಿದರು. ಆದರೆ ಇಂಗ್ಲೆಂಡ್‌ನ ಹೇಲ್ಸ್ (0) ಖಾತೆ ತೆರೆಯದೆ ನಿರ್ಗಮಿಸಿದರು. ಬಟ್ಲರ್‌ಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ.

 ಹಲವು ದಾಖಲೆಗಳ ವೀರ ವಿರಾಟ್ ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 62 ಪಂದ್ಯಗಳನ್ನು ಆಡಿದ್ದಾರೆ. 4 ವಿಕೆಟ್ ಉಡಾಯಿಸಿದ್ದಾರೆ. ಅವರಿಗೆ ಶತಕ ಗಳಿಸಲು ಸಾಧ್ಯವಾಗಿಲ್ಲ. 18 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 90ರನ್. ಒಟ್ಟು ರನ್ 2102

73 ಟೆಸ್ಟ್‌ಗಳಲ್ಲಿ ಕೊಹ್ಲಿ ಗಳಿಸಿದ ರನ್ 6331, ಶತಕ 24 ಹಾಗೂ ಅರ್ಧಶತಕ 19, ವಿಕೆಟ್ 0, ಗರಿಷ್ಠ ವೈಯಕ್ತಿಕ ಸ್ಕೋರ್ 243

216 ಏಕದಿನ ಪಂದ್ಯಗಳಲ್ಲಿ ರನ್ 10232, ಶತಕ 38, ಅರ್ಧಶತಕ 48, ವಿಕೆಟ್ 4, ಗರಿಷ್ಠ ವೈಯಕ್ತಿಕ ಸ್ಕೋರ್ 183ರನ್.

  ವಿರಾಟ್ ಕೊಹ್ಲಿಗೆ ಟೆಸ್ಟ್‌ನಲ್ಲಿ ತ್ರಿಶತಕ, ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಮತ್ತು ಟ್ವೆಂಟಿ- 20 ಕ್ರಿಕೆಟ್‌ನ ಲ್ಲಿ ಶತಕ ಈ ವರೆಗೆ ಸಾಧ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News