ರಸ್ತೆ ಮೇಲೆ ಕಸ ಹಾಕುವವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ: ಬಿಬಿಎಂಪಿಗೆ ಹೈಕೋರ್ಟ್ ಸೂಚನೆ

Update: 2018-11-05 15:54 GMT

ಬೆಂಗಳೂರು, ನ.5: ರಸ್ತೆಯ ಮೇಲೆ ಕಸ ಹಾಕುವವರ ವಿರುದ್ಧ ಯಾವುದೇ ಮುಲಾಜಿಗೆ ಒಳಗಾಗದೆ ಕ್ರಿಮಿನಲ್ ಕೇಸು ದಾಖಲಿಸಿ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ಸೂಚನೆ ನೀಡಿದೆ.

ಕಸ ವಿಲೇವಾರಿಗೆ ಸಂಬಂಧಿಸಿದಂತೆ ಅರ್ಜಿದಾರ ನರಸಿಂಹಮೂರ್ತಿ ಸೇರಿ 11 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಸೂಚನೆ ನೀಡಿತು. ಬಿಬಿಎಂಪಿ ಪರ ವಾದಿಸಿದ ಹಿರಿಯ ವಕೀಲ ಡಿ.ಎನ್.ನಂಜುಂಡರೆಡ್ಡಿ ಅವರು, ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‌ಗಳನ್ನೂ ಕಸಮುಕ್ತ ವಾರ್ಡ್‌ಗಳನ್ನಾಗಿ ಮಾಡಲಾಗಿದೆ. ಆದರೆ, ಜನರು ಕಸವನ್ನು ಸ್ವಚ್ಛಗೊಳಿಸಿದ ಸ್ಥಳದಲ್ಲೂ ಕಸವನ್ನು ಹಾಕುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಮಾಹೇಶ್ವರಿ ಅವರು, ಜನರು ಏಕೆ ಹೀಗೆ ಮಾಡುತ್ತಾರೆ, ಗಸ್ತು ಪೊಲೀಸರು ಏನು ಮಾಡುತ್ತಿದ್ದಾರೆ. ಸ್ವಚ್ಛಗೊಳಿಸಿದ ಜಾಗದಲ್ಲಿ ಕಸ ಹಾಕುವವರ ವಿರುದ್ಧ ಪೌರಾಡಳಿತ ಕಾಯ್ದೆ ಪ್ರಕಾರ ಕ್ರಿಮಿನಲ್ ಕೇಸು ಹಾಕಿ. ಇದು ಕಾನೂನಿಗೆ ತೋರಿರುವ ಅಗೌರವ. ಇವರೆಲ್ಲಾ ಏನಂದುಕೊಂಡಿದ್ದಾರೆ. ಇವರಿಗೆಲ್ಲ ನಾಗರಿಕ ಪ್ರಜ್ಞೆ ಇಲ್ಲವೇ ಎಂದು ಸರಕಾರಿ ವಕೀಲರನ್ನು ಪ್ರಶ್ನಿಸಿದರು. ಮುಂದಿನ ವಿಚಾರಣೆ ವೇಳೆಗೆ ಈ ರೀತಿ ಕಸ ಚೆಲ್ಲುವವರ ವಿರುದ್ಧ ಜರುಗಿಸುವ ಕ್ರಮಗಳ ಕುರಿತು ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿ, ಎಲ್ಲ ಅಂಕಿ ಅಂಶಗಳನ್ನು ನೀಡಿ ಎಂದು ವಿಚಾರಣೆಯನ್ನು ಡಿ.15ಕ್ಕೆ ಮುಂದೂಡಿತು.

ಸಾಮಾಜಿಕ ಕಾರ್ಯಕರ್ತನ ಅಹವಾಲಿಗೆ ಮನ್ನಣೆ: ಕಲಾಪದ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಎಂ.ಮಹೇಶ್ ರೆಡ್ಡಿ, ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪರಿಹಾರಕ್ಕೆ ಬಿಬಿಎಂಪಿ ಬಳಿ ಸಮರ್ಪಕ ಸಿಬ್ಬಂದಿಯೇ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಕೆಲವು ಪರಿಹಾರ ಮಾರ್ಗಗಳಿವೆ. ಅವುಗಳನ್ನು ನ್ಯಾಯಪೀಠ ಆಲಿಸಬೇಕು ಎಂದು ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ನಿಮ್ಮ ಅಹವಾಲನ್ನು ಬಿಬಿಎಂಪಿ ಅಥವಾ ಸರಕಾರದ ಪರ ವಕೀಲರಿಗೆ ಲಿಖಿತವಾಗಿ ಸಲ್ಲಿಸಿ ಎಂದು ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News