ಬಿಜೆಪಿಯವರಿಗೆ ದೇಶದ ಭದ್ರತೆ-ಆರ್ಥಿಕ ಅಭಿವೃದ್ಧಿ ಬಗ್ಗೆ ಸ್ಪಷ್ಟ ಯೋಜನೆಗಳಿಲ್ಲ: ದಿನೇಶ್‌ ಗುಂಡೂರಾವ್

Update: 2018-11-05 16:44 GMT

ಬೆಂಗಳೂರು, ನ.5: ಬಿಜೆಪಿಯವರಿಗೆ ದೇಶದ ಭದ್ರತೆ, ಉದ್ಯೋಗ, ಆರ್ಥಿಕ ಅಭಿವೃದ್ಧಿ ಕುರಿತು ಸ್ಪಷ್ಟವಾದ ಯಾವುದೇ ಯೋಜನೆಗಳಿಲ್ಲ. ಆದುದರಿಂದಲೇ, ಹಿಂದುತ್ವ ಎಂಬ ಭಾವನಾತ್ಮಕ ವಿಷಯವನ್ನು ತೇಲಿ ಬಿಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2013ರಲ್ಲಿ ನಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿ ದೇಶಕ್ಕೆ ಮಾದರಿಯಾಗಿದ್ದೇವೆ. ಇತರೆ ರಾಜ್ಯಗಳು ನಮ್ಮಲ್ಲಿ ಬಂದು, ಮಾಹಿತಿ ಪಡೆದು ತಮ್ಮ ತಮ್ಮ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದರು.

ಅದೇ ಮಾದರಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುವುದು ಎಂಬ ಸುಳಿವನ್ನು ನೀಡಿದ ದಿನೇಶ್ ಗುಂಡೂರಾವ್, ಒಂದು ವೇಳೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಏರ್ಪಟ್ಟರೆ ಆಗ ಈ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು.

ರಾಜ್ಯದ ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ನಾಳೆ ಪ್ರಕಟಗೊಳ್ಳಲಿದ್ದು, ಮುಂದಿನ ಲೋಕಸಭಾ ಚುನಾವಣೆಯ ಬುನಾದಿಯನ್ನು ಈ ಉಪ ಚುನಾವಣೆಯ ಫಲಿತಾಂಶ ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅವರು ಹೇಳಿದರು.

ಮಂಡ್ಯ ಹಾಗೂ ರಾಮನಗರದಲ್ಲಿ ನಾವು ಸದೃಢವಾಗಿದ್ದೇವೆ. ಆದರೆ, ಸಮ್ಮಿಶ್ರ ಸರಕಾರವಿರುವುದರಿಂದ ನಾವು ಒಬ್ಬರಿಗೊಬ್ಬರು ಪರಸ್ಪರ ಸಹಕಾರ ನೀಡುತ್ತಿದ್ದೇವೆ. ಈ ಚುನಾವಣೆಯ ಫಲಿತಾಂಶವು ಎರಡು ಪಕ್ಷಗಳಿಗೂ ಉತ್ತೇಜನ ನೀಡಲಿದೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಸೋಲು ಒಪ್ಪಿಕೊಂಡಿದೆ. ಆದುದರಿಂದಲೇ. ನಮ್ಮ ಸರಕಾರದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡುತ್ತಿದೆ. ತಮ್ಮ ಸೋಲಿಗೆ ಸಬೂಬುಗಳನ್ನು ಹೇಳಿಕೊಳ್ಳಲು ಕಾರಣಗಳನ್ನು ಹುಡುಕಿಕೊಳ್ಳುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.

ಇವಿಎಂ ಸಂಶಯಾತೀತವಾಗಿರಲಿ: ಚುನಾವಣೆ ವ್ಯವಸ್ಥೆಯ ಮೇಲೆ ಯಾರಾದರೂ ನಿಯಂತ್ರಣ ಹೇರಿದರೆ ಅದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಆದುದರಿಂದಲೇ, ನಾವು ಇವಿಎಂಗಳಿಗೆ ಸಂಬಂಧಿಸಿದಂತೆ ತಜ್ಞರಿಂದ ಹ್ಯಾಕಥಾನ್ ಮಾಡಿಸಿ ಸಂಶಯವನ್ನು ದೂರ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಆದರೆ, ಅವರು ನಮ್ಮ ಮನವಿಗೆ ಸ್ಪಂದಿಸಲು ಸಿದ್ಧರಿಲ್ಲ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಪ್ರತಿಭಟಿಸಲು ಹಕ್ಕಿದೆ: ಟಿಪ್ಪು ಸುಲ್ತಾನ್ ಜಯಂತಿ ವಿರೋಧಿಸಿ ನ.9ರಂದು ಬಿಜೆಪಿ ಕರೆ ನೀಡಿರುವ ಪ್ರತಿಭಟನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆ ಮಾಡಲು ಎಲ್ಲರಿಗೂ ಹಕ್ಕಿದೆ. ನಾವು ನರೇಂದ್ರಮೋದಿ ರೀತಿ ಸರ್ವಾಧಿಕಾರಿ ಧೋರಣೆ ಅನುಸರಿಸುವುದಿಲ್ಲ ಎಂದರು. ಆದರೆ, ಹಿಂಸಾತ್ಮಕ ಪರಿಸ್ಥಿತಿ ಸೃಷ್ಟಿ ಮಾಡುತ್ತೇವೆ. ಈ ರಾಜ್ಯದಲ್ಲಿ ಅನಾಹುತ ಆಗುತ್ತದೆ ಎಂದು ಉದ್ದೇಶಪೂರ್ವಕವಾಗಿ ವಾತಾವರಣ ಕೆಡಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಟಿಪ್ಪು ಬಗ್ಗೆ ಅವರಿಗೆ ಇರುವ ಅಭಿಪ್ರಾಯ ವ್ಯಕ್ತಪಡಿಸಲಿ. ನಾವು ಆರೆಸ್ಸೆಸ್ ಈ ದೇಶಕ್ಕೆ ಏನು ಕೊಡುಗೆ, ತ್ಯಾಗ ಮಾಡಿದೆ ಎಂಬುದನ್ನು ಪ್ರಶ್ನಿಸುತ್ತೇವಲ್ಲ? ಎಂದು ಅವರು ಹೇಳಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನಾಳೆ ಬೆಂಗಳೂರಿಗೆ ಬರುತ್ತಿದ್ದು, ನಿಗಮ ಮಂಡಳಿಗಳ ನೇಮಕಾತಿ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸುತ್ತೇವೆ ಎಂದು ದಿನೇಶ್‌ ಗುಂಡೂರಾವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ್, ವಿಧಾನಪರಿಷತ್ ಸದಸ್ಯ ರಿಝ್ವಿನ್ ಅರ್ಶದ್ ಉಪಸ್ಥಿತರಿದ್ದರು.

ರೈತರ ಸಾಲ ಮನ್ನಾ ಯೋಜನೆ ಸುಲಭವಾಗಿ ಅನುಷ್ಠಾನವಾಗಬಾರದು ಎಂಬುದು ಕೇಂದ್ರ ಸರಕಾರದ ಉದ್ದೇಶ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಯಾವ ರೀತಿ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಮಾಡಲು ಒಪ್ಪಿಗೆ ನೀಡುತ್ತೇವೆ ನೋಡೋಣ ಎಂದು ಹೇಳಿದ್ದರು. ಈ ಬಗ್ಗೆ ಅವರು ಯಾವತ್ತೂ ಸಕಾರಾತ್ಮಕವಾಗಿ ಸ್ಪಂದನೆ ಮಾಡಿಲ್ಲ. ರೈತರ ಅನುಕೂಲಕ್ಕಾಗಿ ಕೇಂದ್ರದ ನೆರವು ಕೊಡಿಸುತ್ತೇವೆ ಎಂದು ಹೇಳಿಲ್ಲ.

-ದಿನೇಶ್‌ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News