ಮುಂದಿನ ವಿಚಾರಣೆವರೆಗೆ ವೇಳಾಪಟ್ಟಿ ಪ್ರಕಟಿಸುವುದಿಲ್ಲ: ಹೈಕೋರ್ಟ್‌ಗೆ ತಿಳಿಸಿದ ಸರಕಾರ

Update: 2018-11-05 16:50 GMT

ಬೆಂಗಳೂರು, ನ.5: ರಾಜ್ಯ ವಕ್ಫ್ ಮಂಡಳಿಯ ಚುನಾವಣೆಗೆ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯಿಂದ ರಾಜ್ಯ ಬಾರ್ ಕೌನ್ಸಿಲ್‌ನ ಹಾಲಿ ಮುಸ್ಲಿಂ ಸದಸ್ಯರ ಹೆಸರನ್ನು ತೆಗೆದು ಹಾಕಿರುವ ವಿಚಾರಕ್ಕೆ ಸಂಬಂಧಿಸಿದ ಅರ್ಜಿಯ ಮುಂದಿನ ವಿಚಾರಣೆವರೆಗೆ ವೇಳಾಪಟ್ಟಿ ಪ್ರಕಟಿಸುವುದಿಲ್ಲ ಎಂದು ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ವಕ್ಫ್ ಮಂಡಳಿಯ ಮತದಾರರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆದು ಹಾಕಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ರಾಜ್ಯ ಬಾರ್ ಕೌನ್ಸಿಲ್‌ನ ಸದಸ್ಯ ಆಸೀಫ್ ಅಲಿ ಶೇಕ್ ಹುಸೇನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ರಾಜ್ಯ ಬಾರ್ ಕೌನ್ಸಿಲ್‌ಗೆ ನಡೆದ ಚುನಾವಣೆಯಲ್ಲಿ ಆಸೀಫ್ ಅಲಿ ಸದಸ್ಯರಾಗಿ ಚುನಾಯಿತರಾಗಿದ್ದರು. ವಕ್ಫ್ ಕಾಯ್ದೆ-1995ರ ಸೆಕ್ಷನ್ 14(1) (ಬಿ) ಅನ್ವಯ ಬಾರ್ ಕೌನ್ಸಿಲ್‌ನ ಹಾಲಿ ಮುಸ್ಲಿಂ ಸದಸ್ಯರು ವಕ್ಫ್ ಮಂಡಳಿಯ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಅದೇ ರೀತಿಯಾಗಿ ವಕ್ಫ್ ಮಂಡಳಿಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಹೆಸರು ಸೇರ್ಪಡೆಗೆ ಆಸೀಫ್ ಅಲಿ ಕೂಡ ಅರ್ಜಿ ಸಲ್ಲಿಸಿದ್ದರು. ಚುನಾವಣಾಧಿಕಾರಿಯೂ ಆದ ಬೆಂಗಳೂರು ಪ್ರಾದೇಶಿಕ ಆಯುಕ್ತರು ಮತದಾರರ ಪಟ್ಟಿಯಲ್ಲಿ ಆಸೀಫ್ ಅಲಿ ಹೆಸರು ಸೇರ್ಪಡೆಗೊಳಿಸಿದ್ದರು.

ಆದರೆ, ಆಸೀಫ್ ಅಲಿಯ ಹೆಸರು ಬಾರ್ ಕೌನ್ಸಿಲ್‌ನ ಸದಸ್ಯರ ಕರಡುಪಟ್ಟಿಯಲ್ಲಿದೆ. ಸುಪ್ರೀಂಕೋರ್ಟ್ ಗೆಜೆಟ್ ಅಧಿಸೂಚನೆ ಹೊರಡಿಸಿದಾಗ ಮಾತ್ರ ಸದಸ್ಯರ ಪಟ್ಟಿ ಅಂತಿಮ ಮತ್ತು ಅಧೀಕೃತವಾಗುತ್ತದೆ. ಹೀಗಾಗಿ, ಈ ಹಂತದಲ್ಲಿ ಆಸೀಫ್ ಅಲಿಯವರನ್ನು ಬಾರ್ ಕೌನ್ಸಿಲ್‌ನ ಚುನಾಯಿತ ಸದಸ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ವಕ್ಫ್ ಮಂಡಳಿಯ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸಿದ್ದಕ್ಕೆ ಅಬ್ದುಲ್ ರಹಮಾನ್ ಖಾನ್ ಉಸ್ಮಾನಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಂತೆ ಆಸೀಫ್ ಅಲಿಯವರ ಹೆಸರನ್ನು ವಕ್ಫ್ ಮಂಡಳಿಯ ಮತದಾರರ ಪಟ್ಟಿಯಿಂದ ಕೈಬಿಟ್ಟು 2018ರ ಅ.10ರಂದು ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರು. ಇದೀಗ ಈ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News