ದೀಪಾವಳಿ ಹಬ್ಬದ ವಿಶೇಷ: ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು
ಬೆಂಗಳೂರು, ನ.5: ನಗರದಲ್ಲಿ ದೀಪಾವಳಿಗೆ ಮೂರು ದಿನಗಳು ಬಾಕಿ ಇರುವಂತೆಯೇ ವಿವಿಧ ಮಾರುಕಟ್ಟೆಗಳಲ್ಲಿ ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದ್ದು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
ದೀಪಾವಳಿ ಹಬ್ಬದ ವಿಶೇಷವಾದ ಕಜ್ಜಾಯ ತಯಾರಿಕೆಗೆ ಬೇಕಾದ ಬೆಲ್ಲ, ಅಕ್ಕಿ, ಎಣ್ಣೆ, ತುಪ್ಪ ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ನಗರದ ಜನತೆ ರವಿವಾರದಿಂದಲೇ ಆರಂಭ ಮಾಡಿದ್ದು, ಸೋಮವಾರವೂ ಹೆಚ್ಚಿನ ಜನಸಂದಣಿಯಿಂದ ಕೂಡಿತ್ತು. ಮಾರುಕಟ್ಟೆಗಳಲ್ಲಿ ದೀಪಾವಳಿ ಹಬ್ಬದ ವ್ಯಾಪಾರ ಜೋರಾಗಿತ್ತು.
ಹಬ್ಬದ ಅಂಗವಾಗಿ ಹಾಪ್‌ಕಾಮ್ಸ್ ಮಳಿಗೆಗಳು ಹಾಗೂ ಮಾರುಕಟ್ಟೆಗಳಲ್ಲಿ ಹಣ್ಣು ತರಕಾರಿಗಳ ಬೆಲೆಗಳಲ್ಲಿ ಏರಿಕೆಯಾಗದಿರುವುದು ಸಾರ್ವಜನಿಕರಿಗೆ ಸ್ವಲ ಸಮಾಧಾನ ತಂದಿದೆ. ದೀಪಗಳ ಹಬ್ಬಕ್ಕೆ ವಿವಿಧ ರೀತಿಯ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಮಹಿಳೆಯರನ್ನು ಆಕರ್ಷಿಸುತ್ತಿವೆ. ತೇಲುವ ದೀಪಗಳು, ಸಿನ್ಟೆಡ್ ದೀಪಗಳು, ಲ್ಯಾಂಪ್ ದೀಪಗಳಿಗೆ ಬೇಡಿಕೆ ಹೆಚ್ಚಿವೆ. ತುಳಸಿಕಟ್ಟೆ ದೀಪಗಳು, ಕಾರಂಜಿ ದೀಪಗಳು, ಮಣ್ಣಿನ ಹಣತೆಗಳು ಹೆಂಗೆಳೆಯರ ಮನ ಸೆಳೆಯುತ್ತಿವೆ.