ಚುನಾವಣೆ ಗೆಲ್ಲಲು ಕಾಂಗ್ರೆಸ್, ಜೆಡಿಎಸ್ ನಿಂದ ಹಣ, ಅಧಿಕಾರದ ದುರುಪಯೋಗ: ಯಡಿಯೂರಪ್ಪ

Update: 2018-11-07 13:38 GMT

ಬೆಂಗಳೂರು, ನ.6: ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಮತ ಚಲಾಯಿಸಿದ ಎಲ್ಲ ಮತದಾರರಿಗೂ ನನ್ನ ಅಭಿನಂದನೆಗಳು. ಐದು ಕ್ಷೇತ್ರಗಳ ಮತದಾರರ ತೀರ್ಪನ್ನು ನಾನು ಮತ್ತು ನಮ್ಮ ಪಕ್ಷ ಸ್ವೀಕರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದ್ದಾರೆ.

ಈ ಚುನಾವಣೆಯಲ್ಲಿ ಹಣ ಮತ್ತು ಹೆಂಡದ ಪಾತ್ರ ಬಹಳಷ್ಟಿದೆ. ಮತ್ತು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಹಣ ಮತ್ತು ಅಧಿಕಾರ ದುರುಪಯೋಗಪಡಿಸಿಕೊಂಡು ಚುನಾವಣೆಯನ್ನು ಗೆದ್ದಿವೆ ಎಂದು ಅವರು ಆರೋಪಿಸಿದ್ದಾರೆ.

ಬಳ್ಳಾರಿ ಮತ್ತು ಜಮಖಂಡಿಯಲ್ಲಿ ನಾವು ಗೆದ್ದಿದ್ದರೆ ಸಮಾಧಾನವಿರುತ್ತಿತ್ತು. ಶಿವಮೊಗ್ಗದಲ್ಲಿ ನಾವು ಬಹಳಷ್ಟು ಅಂತರದಿಂದ ಗೆಲ್ಲುತ್ತೇವೆ ಎಂದು ನಿರೀಕ್ಷಿಸಿದ್ದೆವು. ಜೆಡಿಎಸ್ ಹಣದ ಹೊಳೆ ಹರಿಸಿದೆ, ನಾವು ಅದರಲ್ಲಿ ಈಜಿಕೊಂಡು ದಡ ಸೇರಿದ್ದೇವೆ ಎಂದು ಅವರು ಹೇಳಿದ್ದಾರೆ.

ಶಿವಮೊಗ್ಗದಲ್ಲಿ 52,500 ಮತಗಳ ಅಂತರದಿಂದ ನಾವು ಗೆದ್ದಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದ್ದರೂ ಇಷ್ಟು ಅಂತರ ಸಾಧಿಸಿದ್ದು ಒಂದು ಸಾಹಸವೇ. ಇದರ ಜೊತೆಗೆ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ 2 ಲಕ್ಷ 44 ಸಾವಿರದಷ್ಟು ಮತಗಳನ್ನು ಪಡೆದಿದ್ದು ನಮಗೆ ಸಮಾಧಾನ ತಂದಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಇದು ಸಹಕಾರಿಯಾಗುತ್ತದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್‌ನವರು ರಾಜಕೀಯ ಕುತಂತ್ರ ಮಾಡುವಲ್ಲಿ ನಿಸ್ಸೀಮರು. ಇದನ್ನು ಈ ಉಪ ಚುನಾವಣೆಯಲ್ಲಿ ಸಾಬೀತುಪಡಿಸಿದ್ದಾರೆ. ಜೆಡಿಎಸ್‌ನ ಪ್ರಜಾಪ್ರಭುತ್ವ ವಿರೋಧಿ ನಡೆ ರಾಮನಗರದಲ್ಲಿ ಬಯಲಿಗೆ ಬಂತು. ಜೆಡಿಎಸ್ ಮತ್ತು ಕಾಂಗ್ರೆಸ್‌ನ ರಾಜಕೀಯ ಕುತಂತ್ರಗಳ ಬಗ್ಗೆ ನಾವು ಎಚ್ಚರದಿಂದಿರಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಪಕ್ಷ ಸೋತಿದೆ ಎಂದು ಕೈಕಟ್ಟಿ ಕೂರುವುದಿಲ್ಲ. ನಾವು ಸೋತದ್ದು ಬಳ್ಳಾರಿ ಮಾತ್ರ. ನಮ್ಮ ಸೋಲನ್ನು ಆತ್ಮಾವಲೋಕನ ಮಾಡಿಕೊಂಡು ಮುಂದಿನ 2019ರ ಚುನಾವಣೆಯನ್ನು ಗೆಲ್ಲುವತ್ತ ನಮ್ಮ ದೃಷ್ಟಿಯನ್ನು ಹರಿಸುತ್ತೇವೆ. 2019ರ ಚುನಾವಣೆಯಲ್ಲಿ ಮೋದಿಯವರ ಸಾಧನೆ ಮತ್ತು ಜನಪ್ರಿಯತೆ ನಮ್ಮ ಪಕ್ಷದ ಸಂಘಟನೆಯನ್ನು ಒಟ್ಟುಗೂಡಿಸಿ ನಾವು ಚುನಾವಣೆಯನ್ನು ಎದುರಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಯಾವುದೇ ಸಂದೇಹವಿಲ್ಲದೆ, ರಾಜ್ಯದಲ್ಲಿ 22-23 ಲೋಕಸಭಾ ಸ್ಥಾನಗಳನ್ನು ನಾವು ಗೆಲ್ಲುತ್ತೇವೆ. ಆದಷ್ಟು ಬೇಗ ನಾನು ಪಕ್ಷ ಸಂಘಟನೆಯ ಜೊತೆಗೆ ರಾಜ್ಯ ಪ್ರವಾಸ ಕೈಗೊಳ್ಳುತ್ತೇನೆ. ಇದೇ ಸಮಯದಲ್ಲಿ ಈ ದೋಸ್ತಿ ಸರಕಾರದ ಅಧಿಕಾರ ದಾಹವನ್ನು ಜನರ ಮುಂದಿಡುತ್ತೇವೆ. ಒಂದು ಬಲಿಷ್ಠ ವಿರೋಧ ಪಕ್ಷವಾಗಿ ನಮಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಅನ್ನು ಎದುರಿಸುವ ಶಕ್ತಿ ಇದೆ. ಅದನ್ನು ಮುಂದಿನ ದಿನಗಳಲ್ಲಿ ಮಾಡಿ ತೋರಿಸುತ್ತೇವೆ ಎಂದು ಯಡಿಯೂರಪ್ಪ ಪ್ರಕಟನೆಯಲ್ಲಿ ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News