ಹರೇನ್ ಪಾಂಡ್ಯರನ್ನು ಹತ್ಯೆಗೈಯಲು ‘ಉನ್ನತ ಮಟ್ಟ’ದ ಆದೇಶವಿದೆ ಎಂದಿದ್ದ ವಂಝಾರ?

Update: 2018-11-06 17:54 GMT

ಸೊಹ್ರಾಬುದೀನ್ ಶೇಖ್ ನಕಲಿ ಎನ್‍ಕೌಂಟರ್ ಪ್ರಕರಣದ ಸಾಕ್ಷಿಯೊಬ್ಬ ನೀಡಿದ ಸಾಕ್ಷ್ಯವೀಗ ಬಿಜೆಪಿ ಮುಖಂಡ ಹಾಗೂ ನರೇಂದ್ರ ಮೋದಿಯವರ ಟೀಕಾಕಾರ ಎನಿಸಿದ್ದ ಗುಜರಾತ್ ಮಾಜಿ ಸಚಿವ ಹರೇನ್ ಪಾಂಡ್ಯರ ನಿಗೂಢವಾಗಿ ಹತ್ಯೆ ಪ್ರಕರಣದ ಕಿಡಿ ಮತ್ತೆ ಹತ್ತಿಕೊಳ್ಳುವಂತೆ ಮಾಡಿದೆ. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಆರಂಭಿಕ ಅವಧಿಯ ಕಾರ್ಯವೈಖರಿಯನ್ನು ಪಾಂಡ್ಯ ಕಟುವಾಗಿ ಟೀಕಿಸಿದ್ದರು ಹಾಗೂ 2002ರ ಮುಸ್ಲಿಂ ವಿರೋಧಿ ಹಿಂಸಾಚಾರ ಸಂದರ್ಭದ ಸರ್ಕಾರದ ಸಂಕೀರ್ಣತೆಗಳ ಬಗ್ಗೆ ಅವರು ನೀಡಿದ ಹೇಳಿಕೆಯಿಂದ ಬಿಜೆಪಿ ತೀವ್ರ ಮುಜುಗರ ಎದುರಿಸುವಂತಾಗಿತ್ತು.

ಗುಂಡಿನಿಂದ ಜರ್ಜರಿತವಾಗಿದ್ದ ಪಾಂಡ್ಯ ದೇಹ, 2013ರ ಮಾರ್ಚ್ 26ರಂದು ಅಹ್ಮದಾಬಾದ್‍ನ ಪ್ರಮುಖ ಪಾರ್ಕ್‍ ನ ಎದುರು ಪತ್ತೆಯಾಗಿತ್ತು. ಈ ಪ್ರಕರಣ ನಡೆದು 15 ವರ್ಷ ಕಳೆದರೂ, ಪಾಂಡ್ಯ ಹಂತಕರ ಗುರುತು ಪತ್ತೆಯಾಗಿಲ್ಲ. ಹತ್ಯೆ ಪ್ರಕರಣದಲ್ಲಿ ಸಿಬಿಐ ಆರೋಪಿಗಳೆಂದು ಹೆಸರಿಸಿದ ಎಲ್ಲರೂ ದೋಷಮುಕ್ತರಾಗಿದ್ದಾರೆ. ಹೈಕೋರ್ಟ್‍ನಲ್ಲಿ ವಾದ ಮಂಡಿಸುವ ವೇಳೆ, ಎಷ್ಟು ಗುಂಡು ಪಾಂಡ್ಯ ದೇಹಕ್ಕೆ ತಾಗಿತ್ತು, ಎಷ್ಟು ಬಂದೂಕು ಬಳಸಲಾಗಿತ್ತು ಹಾಗೂ ಹಂತಕರು ಎಷ್ಟು ಮಂದಿ ಇದ್ದರು ಹಾಗೂ ಎಲ್ಲ ಹತ್ಯೆ ನಡೆಯಿತು ಎಂಬ ಮಾಹಿತಿಯನ್ನೂ ನೀಡಲು ಸಾಧ್ಯವಾಗಿರಲಿಲ್ಲ.

ಸೊಹ್ರಾಬುದ್ದೀನ್ ಶೇಖ್, ಆತನ ಪತ್ನಿ ಕೌಸರ್‍ ಬೀ ಮತ್ತು ಸಹಚರ ತುಳಸೀರಾಮ್ ಪ್ರಜಾಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಂದಿ ಪೊಲೀಸ್ ಅಧಿಕಾರಿಗಳ ಮೇಲೆ ಇರುವ ಆರೋಪದ ಬಗ್ಗೆ ಸರ್ಕಾರಿ ವಕೀಲರ ಸಾಕ್ಷಿಯಾಗಿ ಹಾಜರಾಗಿರುವ ಅಝಂ ಖಾನ್ ನೀಡಿದ ಸಾಕ್ಷ್ಯದಂತೆ, "ಗುಜರಾತ್‍ನ ಐಪಿಎಸ್ ಅಧಿಕಾರಿ ಡಿ.ಜಿ.ವಂಝಾರಾ ಅವರು ಹರೇನ್ ಪಾಂಡ್ಯ ಹತ್ಯೆಗೆ ಆದೇಶ ನೀಡಿದ್ದಾಗಿ ಸೊಹ್ರಾಬುದ್ದೀನ್ ನನ್ನ ಬಳಿ ಹೇಳಿಕೊಂಡಿದ್ದರು".

ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವಂಝಾರಾ ಅವರನ್ನು 2017ರ ಆಗಸ್ಟ್ 1ರಂದು ವಿಚಾರಣಾ ನ್ಯಾಯಾಲಯ ಮುಕ್ತಗೊಳಿಸಿತ್ತು. ಈ ಕ್ಷಣದವರೆಗೂ ರಾಜಸ್ಥಾನ ಮತ್ತು ಗುಜರಾತ್ ಪೊಲೀಸರು ಸೇರಿದಂತೆ 22 ಮಂದಿ ಹತ್ಯೆ ಆರೋಪ ಎದುರಿಸುತ್ತಿದ್ದಾರೆ.

ಪಾಂಡ್ಯ ಹತ್ಯೆಯ ಹಿಂದಿನ ರಾಜಕೀಯ ಪಿತೂರಿ ಬಗ್ಗೆ ಸ್ವತಃ ವಂಝಾರಾ ಸಿಬಿಐ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಹತ್ಯೆಗೆ ಕೆಲವೇ ದಿನ ಮೊದಲು ಪಾಂಡ್ಯ ಅವರ ಭದ್ರತಾ ಸೌಲಭ್ಯವನ್ನು ದಿಢೀರನೇ ವಾಪಾಸು ಪಡೆಯಲಾಗಿತ್ತು. ಲಾ ಗಾರ್ಡನ್ ಲೇನ್‍ ನಲ್ಲಿ ಇವರ ದೇಹ ಪತ್ತೆಯಾಗುವ ಎರಡು ದಿನ ಮೊದಲು ಆ ಗಾರ್ಡನ್ ಪರಿಸರದಿಂದ ಎಲ್ಲ ಗಾಡಿಗಳನ್ನು ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿತ್ತು.

ಸೊಹ್ರಾಬುದ್ದೀನ್ ಪ್ರಕರಣದ ತನಿಖೆ ನಡೆಸುವಲ್ಲಿ ಸಿಬಿಐ ಬದ್ಧತೆಯ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿರುವ ನಡುವೆಯೇ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಆರೋಪಮುಕ್ತಗೊಳಿಸಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಏಜೆನ್ಸಿ ನಿರಾಕರಿಸಿದೆ. ಇದೀಗ ಖಾನ್ ಸಾಕ್ಷ್ಯ, ಪಾಂಡ್ಯ ಹತ್ಯೆ ಪ್ರಕರಣದ ಬಗ್ಗೆ ಮರುತನಿಖೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಕೂಗು ಗಟ್ಟಿಯಾಗಲು ಕಾರಣವಾಗಿದೆ.

ಇತರ ಬಿಜೆಪಿ ಮುಖಂಡರಾದ ಗೋರ್ಧನ್ ಝಡಾಪಿಯಾ,, ಸುರೇಶ್ ಪಟೇಲ್ ಮತ್ತು ಜಾನಕ್ ಪರ್ಮಾರ್ ಅವರ ಪ್ರಕರಣಗಳಂತೆ ಹಂತಕರು ತಲೆ ಮರೆಸಿಕೊಂಡಿದ್ದಾರೆ ಎಂದು ಪಾಂಡ್ಯ ಸಾವಿನ ಬಗ್ಗೆ ದೂರು ನೀಡಿರುವ ಪಾಂಡ್ಯ ಅವರ ತಂದೆ, ಸಹೋದರಿ ಮತ್ತು ಪತ್ನಿ ಹೇಳುತ್ತಲೇ ಬಂದಿದ್ದಾರೆ. ಆದರೆ ತನ್ನ ತನಿಖೆ ತಪ್ಪುದಾರಿಯಲ್ಲಿ ಸಾಗಿದೆ ಎಂದು ಒಪ್ಪಿಕೊಳ್ಳಲು ಸಿಬಿಐ ಸಿದ್ಧವಿಲ್ಲ.

"ಪಾಂಡ್ಯ ಹತ್ಯೆಗೆ ಮೇಲಿನಿಂದ ಸೂಚನೆ ಬಂದಿತ್ತು ಎಂದು ಸೊಹ್ರಾಬುದ್ದೀನ್ ಹೇಳಿದ್ದರು"

ಅಝಂ ಖಾನ್ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆಯಲ್ಲಿ, "ಉನ್ನತ ಸ್ಥಾನದಲ್ಲಿ ಇರುವವರಿಂದ ಪಾಂಡ್ಯ ಹತ್ಯೆಗೆ ಸೂಚನೆ ಬಂದಿದೆ ಎಂದು ಸೊಹ್ರಾಬುದ್ದೀನ್ ಹೇಳುತ್ತಿದ್ದರು”…. "ಊಪರ್ ಸೇ ಯಹ್ ಕಾಮ್ ದಿಯಾ ಥಾ" (ಮೇಲಿನಿಂದ ಈ ಕೆಲಸ ನೀಡಲಾಗಿದೆ).

ಸೊಹ್ರಾಬುದ್ದೀನ್ ಮತ್ತು ಪ್ರಜಾಪತಿಯ ಸಹಚರನಾಗಿದ್ದ ಖಾನ್ ಹೇಳುವಂತೆ, " ಸೊಹ್ರಾಬುದ್ದೀನ್ ನ್ ಜತೆಗಿನ ಚರ್ಚೆಯ ವೇಳೆ, ನಯೀಮ್ ಖಾನ್ ಮತ್ತು ಶಾಹೀದ್ ರಾಂಪುರಿ ಅವರ ಜತೆಗೆ ನರೇನ್ ಪಾಂಡ್ಯ ಹತ್ಯೆಗೆ ಗುತ್ತಿಗೆ ದೊರಕಿತ್ತು... ಅವರು ಪಾಂಡ್ಯರನ್ನು ಹತ್ಯೆ ಮಾಡಿದರು. ಇದರಿಂದ ನನಗೆ ಬೇಸರವಾಯಿತು ಹಾಗೂ ಒಳ್ಳೆಯ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ್ದಾಗಿ ನಾನು ಸೊಹ್ರಾಬುದ್ದೀನ್ ಬಳಿ ಹೇಳಿಕೊಂಡಿದ್ದೆ. ಆಗ ವಂಝಾರಾ ಈ ಕೆಲಸ ನೀಡಿದ್ದಾಗಿ ಸೊಹ್ರಾಬುದ್ದೀನ್ ವಿವರಿಸಿದ್ದರು"

ಖಾನ್ ಹೇಳಿಕೆ ಬಗ್ಗೆ ಸಿಬಿಐ ಅಧಿಕಾರಿ ನಿರ್ಲಕ್ಷ್ಯ

ಖಾನ್ 2010ರಲ್ಲೇ ಈ ವಿಷಯವನ್ನು ಸಿಬಿಐ ತನಿಖಾಧಿಕಾರಿ ಎನ್.ಎಸ್.ರಾಜು ಅವರಿಗೆ ಹೇಳಿದ್ದಾಗಿ ಬಹಿರಂಗಪಡಿಸಿದ್ದಾನೆ. "ಆದರೆ ಅವರು ಹೊಸ ಗೊಂದಲ ಸೃಷ್ಟಿಸದಂತೆ ನನಗೆ ಸೂಚಿಸಿದರು" ಎಂದು ಖಾನ್ ಹೇಳುತ್ತಾನೆ.

"ತುಳಸೀರಾಂ ಪ್ರಜಾಪತಿ ಮತ್ತು ಒಬ್ಬ ಹುಡುಗ ಸೊಹ್ರಾಬುದ್ದೀನ್ ಪರವಾಗಿ ಹರೇನ್ ಪಾಂಡ್ಯ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ನಾನು ಸಿಬಿಐ ಅಧಿಕಾರಿಗೆ ಹೇಳಿದ್ದೆ. ನಾನು ಆ ಅಧಿಕಾರಿಗೆ ಹರೇನ್ ಪಾಂಡ್ಯ ಬಗ್ಗೆ ಹೇಳಿದಾಗ, ‘ನನ್ನನ್ನು ಹೊಸ ಗೊಂದಲದಲ್ಲಿ ಸಿಲುಕಿಸಬೇಡ’ ಎಂದು ಅವರು ಹೇಳಿದ್ದು" ಎಂದು ನ್ಯಾಯಾಲಯಕ್ಕೆ ತಿಳಿಸಿದ್ದನ್ನು ‘ಇಂಡಿಯನ್ ಎಕ್ಸ್‍ಪ್ರೆಸ್’ ವರದಿ ಮಾಡಿದೆ.

ಮಾಜಿ ಸಚಿವರ ಹತ್ಯೆ ಬಗ್ಗೆ ಏಕೆ ಕೆಟ್ಟದೆನಿಸಿತು ಎಂಬ ಬಗ್ಗೆ ವಿವರಣೆ ನೀಡಿದ ಖಾನ್, "2002ರ ಹಿಂಸಾಚಾರದ ಬಳಿಕ, ಪಾಂಡ್ಯ ಸಮುದಾಯಗಳನ್ನು ಹತ್ತಿರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು. ಇದರಿಂದ ಅವರ ಹತ್ಯೆ ವಿಚಾರ ನನಗೆ ಬೇಸರ ತರಿಸಿತು ಹಾಗೂ ನಾನು ಸೊಹ್ರಾಬುದ್ದೀನ್ ಗುಂಪನ್ನು ತೊರೆದೆ" ಎಂದು ಸ್ಪಷ್ಟಪಡಿಸಿದ್ದಾರೆ.

ಪಾಂಡ್ಯ ಹತ್ಯೆ ಅಧಿಕೃತ ಹೇಳಿಕೆಯಲ್ಲಿ ಲೋಪ

2002ರ ಮುಸ್ಲಿಂ ವಿರೋಧಿ ಹಿಂಸಾಚಾರದ ಬಗ್ಗೆ ತನಿಖೆ ನಡೆಸುತ್ತಿದ್ದ ನಾಗರಿಕ ನ್ಯಾಯಮಂಡಳಿಯ ಮುಂದೆ ವಿಶ್ವಾಸದಿಂದ ಪಾಂಡ್ಯ ಸಾಕ್ಷ್ಯ ನುಡಿದು, ಮೋದಿ ನೇತೃತ್ವದ ಗುಜರಾತ್ ಸರ್ಕಾರದ ಸಂಕೀರ್ಣತೆಗಳ ಬಗ್ಗೆ ವಿವರ ನೀಡಿದ್ದರು. 2002ರ ಜೂನ್ ಮತ್ತು ಆಗಸ್ಟ್‍ನಲ್ಲಿ ‘ಔಟ್‍ ಲುಕ್’ ನಿಯತಕಾಲಿಕ ಜತೆ ಮಾತನಾಡಿದ್ದ ಪಾಂಡ್ಯಾ, 2002ರ ಫೆಬ್ರವರಿ 27ರಂದು ಆಯೋಜಿಸಿದ್ದ ಸಭೆಯಲ್ಲಿ ಮುಖ್ಯಮಂತ್ರಿಗಳು ಸ್ವತಃ ಗಲಭೆಕೋರರ ಬಗ್ಗೆ ಮೆದು ನೀತಿ ಅನುಸರಿಸುವಂತೆ ಸೂಚಿಸಿದ್ದರು ಮತ್ತು ಹಿಂದೂಗಳು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಸೂಚನೆ ನೀಡಿದ್ದರು” ಎಂದಿದ್ದರು. ಈ ಬಗ್ಗೆ ‘ಔಟ್‍ ಲುಕ್’ ಈ ಕೆಳಗಿನಂತೆ ವರದಿ ಮಾಡಿತ್ತು:

"ಮಾಜಿ ಕಂದಾಯ ಸಚಿವರು, ತಮ್ಮ ಗುರುತಿನ ಬಗ್ಗೆ ಯಾವುದೇ ಸಂದರ್ಭದಲ್ಲಿ ಮಾಹಿತಿ ಬಹಿರಂಗಪಡಿಸಬಾರದು ಎಂದು ಮನವಿ ಮಾಡಿಕೊಂಡಿದ್ದರು. ಇದರಿಂದ ತಮಗೆ ಕೆಡುಕಾಗುತ್ತದೆ ಎಂಬ ಭಯ ಅವರಿಗಿತ್ತು. ಎಲ್ಲೂ ಮೌಖಿಕವಾಗಿ ಕೂಡಾ ನನ್ನ ಹೆಸರು ಬಹಿರಂಗಗೊಳಿಸಿದಂತ ಕೋರಿದ್ದರು. ಯಾವುದೇ ವರದಿಗಳಲ್ಲಿ ನನ್ನ ಹೆಸರು ಉಲ್ಲೇಖಿಸಬಾರದು ಅಥವಾ ಸಚಿವ ಇಲ್ಲವೇ ಬಿಜೆಪಿ ಮುಖಂಡ ಎಂದೂ ಉಲ್ಲೇಖಿಸಲಾರದು. ನೀವು ಬಿಜೆಪಿ ಮುಖಂಡ ಎಂದು ಬರೆದರೆ ನಾನು ಸಾಯುತ್ತೇನೆ; ನೀವು ಸಚಿವ ಎಂದು ಬರೆದರೂ ನಾನು ಸಾಯುತ್ತೇನೆ"

ಏಳು ತಿಂಗಳ ಬಳಿಕ ಪಾಂಡ್ಯ ಹತ್ಯೆಯಾಗಿದ್ದರು

ಗುಜರಾತ್ ಸರ್ಕಾರ ಹಸ್ತಾಂತರಿಸಿದ ಈ ಪ್ರಕರಣದ ತನಿಖೆ ನಡೆಸುವ ವೇಳೆ ಸಿಬಿಐ, ಮುಸ್ಲಿಂ ಮೂಲಭೂತವಾದಿ ಧರ್ಮಗುರು ಮುಫ್ತಿ ಸೂಫಿಯಾನ್ ಅವರ ಆದೇಶದಂತೆ ಪಾಂಡ್ಯ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ದೃಷ್ಟಿಕೋನದಿಂದ ತನಿಖೆ ನಡೆಸಿತ್ತು. 2002ರ ಹಿಂಸಾಚಾರದ ವೇಳೆ ಪಾಂಡ್ಯ ವಹಿಸಿದ್ದ ಪಾತ್ರಕ್ಕೆ ಪ್ರತೀಕಾರವಾಗಿ ಈ ನಿರ್ದೇಶನ ನೀಡಿದ್ದರು ಎಂದು ಆರೋಪಿಸಲಾಗಿತ್ತು. ಪಾಂಡ್ಯ ಹತ್ಯೆಗೆ ಸೂಫಿಯಾನ್ ಪ್ರೇರಣೆ ನೀಡಿದ ವ್ಯಕ್ತಿಗಳ ಬಂಧನವಾಗುವ ಮೊದಲೇ ಸೂಫಿಯಾನ್ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದರು ಎಂದು ಸಿಬಿಐ ಅಭಿಪ್ರಾಯಪಟ್ಟಿತ್ತು. ಆದರೆ ವಿಚಾರಣೆ ವೇಳೆ ಈ ಸಿಬಿಐ ಕತೆ ಸಫಲವಾಗಲಿಲ್ಲ. ಬಹಿರಂಗಗೊಳಿಸಲಾದ ಭೌತಿಕ ದಾಖಲೆಗಳು ಮತ್ತು ವಕೀಲರ ವಾದದ ನಡುವೆ ವ್ಯತ್ಯಾಸಗಳು ಕಂಡುಬಂದವು. ಆದಾಗ್ಯೂ ಕಸ್ಟಡಿಯಲ್ಲಿ ಪಡೆದ ತಪ್ಪೊಪ್ಪಿಗೆ ಹೇಳಿಕೆಗಳ ಆಧಾರದಲ್ಲಿ, 2007ರಲ್ಲಿ 12 ಮಂದಿಗೆ ಶಿಕ್ಷೆಯಾಯಿತು.

ಪ್ರಕರಣದ ವಿಚಾರಣೆಗೆ ಮುನ್ನ, ವಿಚಾರಣೆ ಹಂತದಲ್ಲಿ ಮತ್ತು ವಿಚಾರಣೆ ಬಳಿಕ ಪ್ರಕಟವಾದ ಮಾಧ್ಯಮ ವರದಿಗಳು, ತನಿಖೆಯಲ್ಲಿ ಮೇಲ್ನೋಟಕ್ಕೇ ಕಂಡುಬರುವ ಅಸಂಬದ್ಧತೆ ಮತ್ತು ಸುಳಿವುಗಳ ನಿಗೂಢ ಕಣ್ಮರೆ ಬಗೆಗಿನ ಸಾರ್ವಜನಿಕ ಆತಂಕದ ಬಗ್ಗೆ ಧ್ವನಿ ಎತ್ತಿದ್ದವು. ಇದರ ಆಧಾರದಲ್ಲಿ 2011ರಲ್ಲಿ ಗುಜರಾತ್ ಹೈಕೋರ್ಟ್ 12 ಮಂದಿ ಶಿಕ್ಷಿತರನ್ನು ದೋಷಮುಕ್ತಗೊಳಿಸಿತು. ಹೈಕೋರ್ಟ್, ತನಿಖಾಧಿಕಾರಿಗಳ ಮೇಲೆ ಕಟು ಟೀಕೆ ಮಾಡಿತ್ತು.

"ಈ ಪ್ರಕರಣದ ದಾಖಲೆಗಳಿಂದ ತಿಳಿದುಬರುವ ಅಂಶವೆಂದರೆ, ಶ್ರೀ ಹರೇನ್ ಪಾಂಡ್ಯ ಹತ್ಯೆ ಬಗೆಗಿನ ತನಿಖೆಗಳು ಕಟ್ಟುಕಥೆ ಮತ್ತು ಕಪೋಲ ಕಲ್ಪಿತ ಹಾಗೂ ಹಲವು ಅಪೇಕ್ಷಿತ ಅಂಶಗಳನ್ನು ಬಿಡಲಾಗಿದೆ. ಇದಕ್ಕೆ ಸಂಬಂಧಪಟ್ಟ ತನಿಖಾಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ. ಇವರ ಅನುಭೂತಿ ಕೊರತೆಯಿಂದ ಅನ್ಯಾಯ, ದೊಡ್ಡ ಪ್ರಮಾಣದ ಕಿರುಕುಳವಾಗಿದೆ. ಸಾರ್ವಜನಿಕ ಸಂಪನ್ಮೂಲ ಮತ್ತು ನ್ಯಾಯಾಲಯದ ಅಮೂಲ್ಯ ಸಮಯ ನಷ್ಟವಾಗಿದೆ" ಎಂದು ಕೋರ್ಟ್ ಹೇಳಿತ್ತು.

ಸಿಬಿಐ ತನಿಖೆಯ ನೇತೃತ್ವವನ್ನು ಹಿರಿಯ ಐಪಿಎಸ್ ಅಧಿಕಾರಿ ವೈ.ಸಿ.ಮೋದಿ ವಹಿಸಿದ್ದರು. ಇವರನ್ನು ಮೋದಿ ಸರ್ಕಾರ 2017ರ ಸೆಪ್ಟೆಂಬರ್‍ನಲ್ಲಿ ದೇಶದ ಅತ್ಯುನ್ನತ ಭಯೋತ್ಪಾದಕ ವಿರೋಧಿ ಏಜೆನ್ಸಿ ಎನಿಸಿದ ನ್ಯಾಷನಲ್ ಇನ್‍ವೆಸ್ಟಿಗೇಶನ್ ಏಜೆನ್ಸಿ (ಎನ್ ಐಎ) ಯ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಸಿಬಿಐ ತನಿಖೆ ಬಗ್ಗೆ ತೀವ್ರ ದೋಷಾರೋಪ ಮಾಡಿದ ಹೈಕೋರ್ಟ್, "ತನಿಖಾಧಿಕಾರಿಗಳು ಕಟ್ಟು ಕಥೆ ಹೆಣೆದಿರುವುದು ಸ್ಪಷ್ಟ ಮತ್ತು ದಿಕ್ಕು ತಪ್ಪಿಸಿದ್ದಾರೆ. ಪೊಲೀಸ್ ಕಸ್ಟಡಿ ವೇಳೆ ಪೊಲೀಸ್ ಅಧಿಕಾರಿಯ ಮುಂದೆ ಪಡೆದ ತಪ್ಪೊಪ್ಪಿಗೆ ಹೇಳಿಕೆಯನ್ನು ಸುರಕ್ಷಿತವಾಗಿ ಅವಲಂಬಿಸಿ ಶಿಕ್ಷಿಸುವಂತಿಲ್ಲ" ಎಂದು ಹೇಳಿತ್ತು.

ಹೈಕೋರ್ಟ್ ತೀರ್ಪಿನ ಬಳಿಕ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿ, ಹತ್ಯೆಗೆ ಬಳಸಿದ್ದ ಬಂದೂಕು ವಾಸ್ತವವಾಗಿ ಉದಯಪುರದಲ್ಲಿ ಅಂದರೆ ಸೊಹ್ರಾಬುದ್ದೀನ್ ನ ಮನೆಯಲ್ಲಿ ಪತ್ತೆಯಾಗಿದ್ದು, ಸಿಬಿಐ ಇದನ್ನು ಅಹ್ಮದಾಬಾದ್‍ನಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಗೆ ಹೇಳಿದೆ ಎಂದು ಪ್ರಶ್ನಿಸಿತ್ತು.

"ಕೃತ್ಯಕ್ಕೆ ಬಳಸಲಾದ ಶಸ್ತ್ರಾಸ್ತ್ರಗಳು ಅಹ್ಮದಾಬಾದ್‍ನಲ್ಲಿ ಪತ್ತೆಯಾಗಿವೆ ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ಹೇಳಿದೆ. ಈ ಪ್ರಕರಣ ಬಿದ್ದುಹೋಗಲು ಪ್ರಮುಖ ಕಾರಣವೆಂದರೆ, ಆ ಶಸ್ತ್ರಾಸ್ತ್ರಕ್ಕೂ, ದೇಹದ ಬಳಿಕ ಪತ್ತೆಯಾದ ಗುಂಡಿಗೂ ಹೋಲಿಕೆ ಆಗದಿರುವುದು. ಇದು ಹತ್ಯೆಗೆ ಬಳಸಿದ ಅಸ್ತ್ರವೆಂದು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಿದ ಬಂದೂಕು, ನಿಜವಾಗಿ ಕೃತ್ಯಕ್ಕೆ ಬಳಸಿದ ಆಯುಧ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ" ಎಂದು ವರದಿ ತಿಳಿಸಿತ್ತು.

ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ವಿಚಾರಣೆ ನಡೆಸಿ ಆದೇಶ ನೀಡಿದ ಸಂದರ್ಭದಲ್ಲಿ ಕಂಡುಬಂದ ಈ ವ್ಯತ್ಯಾಸದಿಂದಾಗಿ, ಪಾಂಡ್ಯ ಪ್ರಕರಣದ ಬಗ್ಗೆ ಹೊಸ ತನಿಖೆ ನಡೆಸಲು ಸಿಬಿಐ ನಿರಾಕರಿಸಿತ್ತು. ಇದರ ಬದಲು ಆರೋಪಮುಕ್ತಗೊಳಿಸಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಾ ಹೋಗಿದ್ದು, ಇದೀಗ ಪ್ರಕರಣ ಸುಪ್ರೀಂಕೋರ್ಟ್ ಮುಂದೆ ಇದೆ.

ಸೊಹ್ರಾಬುದ್ದೀನ್ ಬಂಧನಕ್ಕೆ ರಾಜಕೀಯ ಒತ್ತಡ ಇತ್ತು ಎಂದಿದ್ದ ಪ್ರಜಾಪತಿ

ಮುಂಬೈ ವಿಚಾರಣಾ ನ್ಯಾಯಾಲಯದ ಮುಂದೆ ಶನಿವಾರ ಸಾಕ್ಷಿ ಹೇಳಿದ ಖಾನ್, 2005ರ ನವೆಂಬರ್‍ನಲ್ಲಿ ಸೊಹ್ರಾಬುದ್ದೀನ್ ಹತ್ಯೆಯಾದ ವಿಚಾರ ತಿಳಿಯಿತು ಎಂದಿದ್ದಾನೆ. ಇದಾದ ಕೆಲ ದಿನಗಳಲ್ಲಿ ಉದಯ್‍ಪುರ ಕೇಂದ್ರೀಯ ಕಾರಾಗೃಹದಲ್ಲಿ ಪ್ರಜಾಪತಿಯನ್ನು ಭೇಟಿಯಾಗಿದ್ದು, ಮೋಸದಿಂದ ಸೊಹ್ರಾಬುದ್ದೀನ್ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಮಾಡಲಾಯಿತು ಎಂದು ಆತ ಹೇಳಿಕೊಂಡಿದ್ದ ಎಂದು ವಿವರಿಸಿದ್ದಾರೆ. ಖಾನ್ ಹೇಳಿಕೆಯ ಪ್ರಕಾರ, ಸೊಹ್ರಾಬುದ್ದೀನ್ ಬಂಧನಕ್ಕೆ ರಾಜಕೀಯ ಒತ್ತಡ ಇದೆ ಎಂದು ಸ್ವತಃ ಪೊಲೀಸರೇ ಹೇಳಿದ್ದರು ಎಂದು ಪ್ರಜಾಪತಿ ಮಾಹಿತಿ ನೀಡಿದ್ದ.

"ವಂಝಾರಾ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸೊಹ್ರಾಬುದ್ದೀನ್ ಬಂಧನ ಬಯಸಿದ್ದರು. ಐದಾರು ತಿಂಗಳ ಬಳಿಕ ಅವರನ್ನು ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ತುಳಸೀರಾಂ ಹೇಳುವಂತೆ ಸೊಹ್ರಾಬುದ್ದೀನ್ ಮತ್ತು ಕೌಶಬ್‍ಬೀ ಅವರನ್ನು ಗುಜರಾತ್‍ನಲ್ಲಿ ಫಾರ್ಮ್‍ಹೌಸ್‍ನಲ್ಲಿ ಹತ್ಯೆ ಮಾಡಲಾಯಿತು" ಎನ್ನುವುದು ಖಾನ್ ಪ್ರತಿಪಾದನೆ.

ಪ್ರಜಾಪತಿಗೆ ಜೀವಭಯ ಇತ್ತು ಹಾಗೂ ತನ್ನ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಅಹ್ಮದಾಬಾದ್ ನ್ಯಾಯಾಲಯಕ್ಕೆ ಆತ ದೂರನ್ನೂ ನೀಡಿದ್ದ ಎಂದು ಉದಯ್‍ಪುರ ಮೂಲದ ಗ್ಯಾಂಗ್‍ಸ್ಟರ್ ಖಾನ್ ಬಹಿರಂಗಪಡಿಸಿದ್ದಾನೆ. "ತುಳಸೀರಾಮ್‍ನನ್ನು ಕೊನೆಯ ಬಾರಿಗೆ ನಾನು ಭೇಟಿಯಾದದ್ದು 2006ರ ಡಿಸೆಂಬರ್ 23-24ರಂದು. ನನ್ನ ವಿರುದ್ಧ ಬಾಕಿ ಇದ್ದ ಹಳೆಯ ಕಳ್ಳತನ ಪ್ರಕರಣದಲ್ಲಿ ನನ್ನನ್ನು ಕಸ್ಟಡಿಗೆ ಪಡೆದಾಗ. ಆಗ ಆತನನ್ನು ಕೋರ್ಟ್ ವಿಚಾರಣೆಗಾಗಿ ಅಹ್ಮದಾಬಾದ್‍ಗೆ ಕರೆ ತರಲಾಗಿತ್ತು. ನಮ್ಮಿಬ್ಬರಲ್ಲಿ ಒಬ್ಬರನ್ನು ಹತ್ಯೆ ಮಾಡುವುದು ಖಚಿತ ಎಂದು ಆತ ಆಗ ಹೇಳಿದ್ದ" ಎಂದು ಖಾನ್ ತಿಳಿಸಿದ್ದಾನೆ.

ಪೊಲೀಸರು ಖಾನ್ ನನ್ನು ಹಳೆಯ ಪ್ರಕರಣವೊಂದರ ಸಂಬಂಧ ಕಸ್ಟಡಿಗೆ ಪಡೆದು ಉದ್ದೇಶಪೂರ್ವಕವಾಗಿ ಖಾನ್ ಹಾಗೂ ಪ್ರಜಾಪತಿಯನ್ನು ಬೇರ್ಪಡಿಸಿದ್ದರು. ಬಳಿಕ ಗುಜರಾತ್‍ಗೆ ಕರೆದೊಯ್ಯುವಾಗ ತುಳಸೀರಾಂ ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡಿದ್ದ ಹಾಗೂ ಎನ್‍ಕೌಂಟರ್‍ ನಲ್ಲಿ ಆತನನ್ನು ಹತ್ಯೆ ಮಾಡಲಾಗಿದೆ ಎನ್ನುವುದು ಪೊಲೀಸರ ಪ್ರತಿಪಾದನೆ.

ಸೊಹ್ರಾಬುದ್ದೀನ್ ಹತ್ಯೆಗೂ ಪಾಂಡ್ಯ ಹತ್ಯೆಗೂ ನಂಟಿದೆ ಎಂದು ಖಾನ್ ಹೇಳಿರುವುದು ಇದೇ ಮೊದಲಲ್ಲ. "ಈ ಪ್ರತಿಷ್ಠಿತ ಪ್ರಕರಣಗಳ ಸಂಭಾವ್ಯ ನಂಟು ಸಿಬಿಐ ತನಖೆಯಿಂದ ತಿಳಿದುಬಂದಿದ್ದು, 2010ರ ಜುಲೈನಲ್ಲಿ ಈ ಸಂಬಂಧ ಆರೋಪಪಟ್ಟಿಯನ್ನು ಸಿಬಿಐ ಸಲ್ಲಿಸಿದೆ" ಎಂದು 2001ರಲ್ಲಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. "ಪಾಂಡ್ಯ ಹತ್ಯೆ ಪ್ರಕರಣದಲ್ಲಿ ಸೊಹ್ರಾಬುದ್ದೀನ್ ಸಿಕ್ಕಿಹಾಕಿಕೊಳ್ಳುವುದನ್ನು ತಡೆದಿದ್ದಾಗಿ ಈ ಪ್ರಕರಣದ ಆರೋಪಿ, ಐಪಿಎಸ್ ಅಧಿಕಾರಿ ಅಭಯ್ ಚೂಡಾಸಮ ತನ್ನ ಬಳಿ ಹೇಳಿದ್ದರು ಎಂದು ಪ್ರಮುಖ ಸಾಕ್ಷಿ ಮತ್ತು ಸೊಹ್ರಾಬುದ್ದೀನ್ ಸಹಚರ ಅಝಂ ಖಾನ್ ಸ್ಪಷ್ಟಪಡಿಸಿದ್ದಾನೆ.

ಎನ್‍ಕೌಂಟರ್ ಹತ್ಯೆಗೆ ಸರ್ಕಾರದ ಜಾಗೃತ ನೀತಿ ಕಾರಣ ಎಂದು ದೂರಿದ್ದ ವಂಜಾರಾ

ಪಾಂಡ್ಯ ಹಾಗೂ ಸೊಹ್ರಾಬುದ್ದೀನ್ ಹತ್ಯೆಗೆ ಮೇಲಧಿಕಾರಿಗಳು ಆದೇಶ ನೀಡಿದ್ದರು ಎಂಬ ಖಾನ್ ಪ್ರತಿಪಾದನೆ, 2013ರಲ್ಲಿ ವಂಜಾರಾ ನೀಡಿದ ರಾಜೀನಾಮೆ ಪತ್ರದಲ್ಲೂ ಪ್ರತಿಧ್ವನಿಸಿದೆ.

ಸಾಬರಮತಿ ಕೇಂದ್ರೀಯ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಅವಧಿಯಲ್ಲಿ ಅಂದರೆ 2013ರ ಸೆಪ್ಟೆಂಬರ್ 1ರಂದು ವಂಜಾರಾ, ಗುಜರಾತ್‍ನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈ ಬರೆದಿದ್ದರು. "ನಾನು ಹಾಗೂ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಇತರ ಅಧಿಕಾರಿಗಳು ಸರ್ಕಾರದ ಜಾಗೃತ ನೀತಿಯನ್ನು ಅನುಷ್ಠಾನಗೊಳಿಸಿದ್ದು ಮಾತ್ರ" ಎಂದು ಪ್ರತಿಪಾದಿಸಿದ್ದರು.

"ಗುಜರಾತ್ ಸಿಐಡಿ/ ಕೇಂದ್ರದ ಸಿಬಿಐ ನನ್ನನ್ನು ಮತ್ತು ಇತರ ಅಧಿಕಾರಿಗಳನ್ನು ಬೇರೆ ಬೇರೆ ಎನ್‍ಕೌಂಟರ್ ಪ್ರಕರಣಗಳಲ್ಲಿ ಬಂಧಿಸಿದ್ದು, ನಕಲಿ ಎನ್‍ಕೌಂಟರ್ ಎನ್ನಲಾದ ಪ್ರಕರಣಗಳಿಗೆ ಹೊಣೆಗಾರರನ್ನಾಗಿ ಮಾಡಿದೆ. ಇದು ನಿಜವಾದರೆ, ಸೊಹ್ರಾಬುದ್ದೀನ್, ತುಳಸೀರಾಂ, ಸಿದ್ದಿಕಿ ಜಮಾಲ್ ಮತ್ತು ಇಶ್ರತ್ ಜಹಾನ್ ಹೀಗೆ ನಾಲ್ಕು ಭಿನ್ನ ಎನ್‍ಕೌಂಟರ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖಾಧಿಕಾರಿಗಳು ನೀತಿಯನ್ನು ರೂಪಿಸಿದವರನ್ನೂ ಬಂಧಿಸಬೇಕು. ನಾವು ತಳಮಟ್ಟದ ಅಧಿಕಾರಿಗಳಾಗಿ, ಸರ್ಕಾರದ ಜಾಗೃತ ನೀತಿಯನ್ನು ಅನುಷ್ಠಾನಗೊಳಿಸಿರುವುದು ಮಾತ್ರ.  ಸರ್ಕಾರ ತೀರಾ ಸಮೀಪದಿಂದ ನಮಗೆ ಸ್ಫೂರ್ತಿ ನೀಡುತ್ತಿತ್ತು; ಮಾರ್ಗದರ್ಶನ ನೀಡುತ್ತಿತ್ತು ಮತ್ತು ಮೇಲ್ವಿಚಾರಣೆ ನಡೆಸುತ್ತಿತ್ತು. ಈ ಎಲ್ಲ ಕಾರಣಗಳಿಂದ ನನ್ನ ದೃಢವಾದ ಅಭಿಪ್ರಾಯವೆಂದರೆ, ಸರ್ಕಾರದ ಸ್ಥಳ ಗಾಂಧಿನಗರದ ಬದಲಾಗಿ, ನವಿ ಮುಂಬೈನ ತಲೋಜಾ ಕೇಂದ್ರೀಯ ಕಾರಾಗೃಹ ಅಥವಾ ಅಹ್ಮದಾಬಾದ್‍ನ ಸಾಬರಮತಿ ಕೇಂದ್ರೀಯ ಕಾರಾಗೃಹವಾಗಿರಬೇಕು" ಎಂದು ಬರೆದಿದ್ದರು.

ಸರ್ಕಾರ ಮತ್ತು ಜೈಲುಪಾಲಾದ ಅಧಿಕಾರಿಗಳ ನಡುವೆ ಸಮಾನಾಂತರ ರೇಖೆಯನ್ನು ಎಳೆದ ವಂಜಾರಾ, "ನಾವು ಒಂದೇ ದೋಣಿಯಲ್ಲಿ ಪಯಣಿಸುತ್ತಿದ್ದೇವೆ ಹಾಗೂ ಜತೆಯಾಗೇ ಈಜಬೇಕು ಅಥವಾ ಮುಳುಗಬೇಕು" ಎಂದು ವ್ಯಾಖ್ಯಾನಿಸಿದ್ದರು.

ಕೃಪೆ : thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News