×
Ad

ಅಗತ್ಯಬಿದ್ದರೆ ಜನಾರ್ದನ ರೆಡ್ಡಿಯ ಬಂಧನ: ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್

Update: 2018-11-07 16:04 IST
ಜನಾರ್ದನ ರೆಡ್ಡಿ

ಬೆಂಗಳೂರು, ನ.7: ಅ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ವಂಚನೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಅಗತ್ಯ ಬಂದರೆ  ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ನಗರದ  ಆಯುಕ್ತರ  ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ  ಅವರು, ಜನಾರ್ದನ್  ರೆಡ್ಡಿ ಅವರನ್ನು ಬಂಧಿಸುವ ಅಗತ್ಯ ಬಿದ್ದರೆ ನಾವು ಅವರನ್ನು ಬಂಧಿಸುತ್ತೇವೆ. ಈ ಪ್ರಕರಣಕ್ಕೆ ಅಗತ್ಯವಿರುವ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆ್ಯಂಬಿಡೆಂಟ್‌ ಸಂಸ್ಥೆ ಮೇಲೆ ನಡೆದ ಇಡಿ ದಾಳಿ ವೇಳೆ ಏನೆಲ್ಲ ಆಗಿತ್ತು ಎಂಬುದರ ಕುರಿತೂ ತನಿಖೆ ನಡೆಸುತ್ತೇವೆ ಎಂದರು.

ನಗರದ ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ್ಯಂಬಿಡೆಂಟ್  ಹೆಸರಿನ ಸಂಸ್ಥೆ ತಮ್ಮ  ಕಂಪೆನಿಯಲ್ಲಿ  ಹೂಡಿಕೆ  ಮಾಡಿದರೆ  ಹೆಚ್ಚಿನ  ಹಣ ನೀಡುವುದಾಗಿ ಹೇಳಿಕೊಂಡಿತ್ತು. ಸಾಕಷ್ಟು ಕಡೆಯಿಂದ ಹಣ ಈ ಸಂಸ್ಥೆಗೆ ಹರಿದು ಬಂದಿತ್ತು.  ಈ ವೇಳೆ ಕೆಲವರಿಗೆ ಹಣ ವಾಪಾಸ್ಸು ಸಿಕ್ಕಿದೆ. ಆಗ ಅವರು ಮತ್ತೆ  ಹೆಚ್ಚಿನ  ಹಣ ಹೂಡಿಕೆ ಮಾಡಿದ್ದಾರೆ. ಆದರೆ ಕೆಲವರು ಹಣ ವಾಪಸ್ಸು ಸಿಗಲಿಲ್ಲ ಎಂದು ದೂರು ನೀಡಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ  ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್  ಕುಮಾರ್  ಮತ್ತು ಡಿಸಿಪಿ ಎಸ್.ಗಿರೀಶ್ ನೇತತ್ವದ ತಂಡ, ಫರೀದ್ ಹಾಗೂ ರಮೇಶ್  ಎಂಬುವರನ್ನು ಬಂಧಿಸಿದ್ದಾರೆ. ಅದು ಅಲ್ಲದೆ, ಫರೀದ್ ವಿರುದ್ಧ ಈಗಾಗಲೇ ಇಡಿ  ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಚಿನ್ನದ ಗಟ್ಟಿ: ಫರೀದ್, ಜನಾರ್ದನ ರೆಡ್ಡಿ ಹಾಗೂ ಈತನ ಆಪ್ತ ಆಲಿ ಖಾನ್ ಅವರೊಂದಿಗೆ ಸಭೆ ನಡೆಸಿ 20 ಕೋಟಿ ರೂ. ನೀಡುವುದಾಗಿ ಹೇಳಿದ್ದು, ಅದೇ ರೀತಿ, 20 ಕೋಟಿ ರೂ. ಅನ್ನು ಚಿನ್ನದ ರೂಪದಲ್ಲಿ ನೀಡುವಂತೆ ಜನಾರ್ದನ ರೆಡ್ಡಿ ಹೇಳಿದ್ದಾರೆ. ಅದರಂತೆ ಆರೋಪಿ ಫರೀದ್, ಅಲಿಖಾನ್‌ಗೆ ಪರಿಚಯವಿರುವ ಬಳ್ಳಾರಿಯ ರಾಜಮಹಲ್ ಫ್ಯಾನ್ಸಿ ಜ್ಯುವೆಲ್ಲರ್ಸ್ ರಮೇಶ್ ಎಂಬವರ ಮೂಲಕ ಬೆಂಗಳೂರಿನ ಅಂಬಿಕಾ ಸೇಲ್ಸ್ ಕಾರ್ಪೋರೇಷನ್ ಕೊಠಾರಿ ಅವರ ಬಳಿ 18 ಕೋಟಿ ಮೊತ್ತದ 57 ಕೆಜಿ ಚಿನ್ನವನ್ನು ಖರೀದಿ ಮಾಡಿ ಅದನ್ನು ಜನಾರ್ದನ ರೆಡ್ಡಿಗೆ ತಲುಪಿಸಿರುವ ಅಂಶ ಬೆಳಕಿಗೆ ಬಂದಿದೆ ಎಂದು ಆಯುಕ್ತರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News