ಟಿಪ್ಪು ಜಯಂತಿಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಿ: ವಾಟಾಳ್ ನಾಗರಾಜ್

Update: 2018-11-07 12:37 GMT

ಬೆಂಗಳೂರು, ನ. 7: ತನ್ನ ಎರಡು ಮಕ್ಕಳನ್ನು ದೇಶಕ್ಕಾಗಿ ಒತ್ತೆ ಇಟ್ಟಂತಹ ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು ಹಾಗೂ ಟಿಪ್ಪು ಪ್ರತಿಮೆಯನ್ನು ಸಂಸತ್ ಮುಂದೆ ಸ್ಥಾಪಿಸಬೇಕೆಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಕಂಡಂತಹ ಶೂರ ನಾಡಿನಲ್ಲಿ ಜನಿಸಿದ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಯರು ಪಾಲ್ಗೊಳ್ಳಬೇಕು ಎಂದು ಹೇಳಿದರು.

ವಿಶ್ವದ ಇತಿಹಾಸದಲ್ಲಿ ದೇಶಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟ ಏಕೈಕ ವೀರ ಹಾಗೂ ಕನ್ನಂಬಾಡಿ ಅಣೆಕಟ್ಟೆಯ ಶಂಕುಸ್ಥಾಪನೆ ಮಾಡಿರುವ ದೇಶಪ್ರೇಮಿ. ಕೆಲವರು ಇತಿಹಾಸವನ್ನು ತಿರುಚಿ ಟಿಪ್ಪು ದೇವಸ್ಥಾನ ಭಂಜಕ ಎನ್ನುತ್ತಾರೆ. ಆದರೆ, ಟಿಪ್ಪು ಅನೇಕ ಹಿಂದೂ ದೇವಾಲಯಗಳ ಜೀಣೋದ್ಧಾರಕ್ಕೆ ಶ್ರಮಿಸಿದ್ದಾನೆ. ಅಲ್ಲದೆ, ಬೆಂಗಳೂರಿನ ಟಿಪ್ಪುವಿನ ಬೇಸಿಗೆ ಅರಮನೆಯ ಪಕ್ಕದಲ್ಲಿರುವ ಕೋಟೆ ವೆಂಕಟರಮಣ ದೇವಸ್ಥಾನದ ಜೀರ್ಣೊದ್ಧಾರ ಮಾಡಿಸಿರುವುದು ಟಿಪ್ಪು ಎಂದು ಮಾಹಿತಿ ನೀಡಿದರು.

ಮಾಜಿ ರಾಷ್ಟ್ರಪತಿ ದಿ.ಅಬ್ದುಲ್ ಕಲಾಂ ರಾಕೆಟ್ ಕಂಡು ಹಿಡಿದಿದ್ದು ಟಿಪ್ಪು ಎಂದು ತಿಳಿಸಿದ್ದಾರೆ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಾಜ್ಯಕ್ಕೆ ಭೇಟಿ ನೀಡಿದಾಗ ಟಿಪ್ಪುವಿನ ಗುಣಗಾನ ಮಾಡಿದ್ದಾರೆ. ಆದರೆ, ಟಿಪ್ಪು ಜಯಂತಿಯನ್ನು ರಾಜಕೀಯವಾಗಿ ಪರಿಗಣಿಸಿರುವುದು ಸರಿಯಲ್ಲ. ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ವಿಧಾನಸೌಧದಲ್ಲಿ ಮಾಡುತ್ತೇವೆ ಎಂದು ಹೇಳಿ, ರವೀಂದ್ರ ಕಲಾಕ್ಷೇತ್ರದಲ್ಲಿ ಮಾಡುತ್ತಿರುವುದು ಸರಕಾರಕ್ಕೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಒಕ್ಕೂಟವು ನ.10ರಂದು ಟಿಪ್ಪು ಜಯಂತಿಯನ್ನು ಜನ್ಮಸ್ಥಳವಾದ ದೇವನಹಳ್ಳಿಯಲ್ಲಿ ಆಚರಿಸಲಿದ್ದು, ನ.20ರಂದು ಶ್ರೀರಂಗಪಟ್ಟಣದ ಅರಮನೆಯಿಂದ ಸಮಾಧಿಯವರೆಗೂ ಟಿಪ್ಪು ಜ್ಯೋತಿಯನ್ನು ಕೊಂಡೊಯ್ಯಲಾಗುತ್ತದೆ ಎಂದರು.

ಕನ್ನಡಿಗರ ಸಮಗ್ರ ಬೇಡಿಕೆಗಳಿಗೆ ಒತ್ತಾಯಿಸಿ ನ.12ರ 11.30ಕ್ಕೆ ಮೈಸೂರು ಬ್ಯಾಂಕ್ ವೃತ್ತದಿಂದ ಕಂಪೇಗೌಡ ಬಸ್ ನಿಲ್ದಾಣದವರೆಗೆ ಜಾಥಾ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ಮುಬಾರಕ್, ಪ್ರಸನ್ನಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News