ಟಿಬೆಟ್ ಸಮಸ್ಯೆಯನ್ನು ಚರ್ಚಿಸಲು ಟಿಬೆಟನ್ ಸಂಸತ್ ಸದಸ್ಯ ಪೆಮಾ ದಲೇಕ್ ಮನವಿ

Update: 2018-11-07 12:39 GMT

ಬೆಂಗಳೂರು, ನ. 7: ಭಾರತ ಹಾಗೂ ಚೀನಾ ಸರಕಾರಗಳು ರಾಜತಾಂತ್ರಿಕ ಸಭೆಯನ್ನು ನಡೆಸುವಾಗ ಟಿಬೆಟ್ ಸಮಸ್ಯೆಯನ್ನು ಚರ್ಚಿಸುವಂತೆ ಟಿಬೆಟನ್ ಸಂಸತ್ ಸದಸ್ಯ ಪೆಮಾ ದಲೇಕ್ ಮನವಿ ಮಾಡಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಬೆಟ್ ಸಮಸ್ಯೆ ಬಗೆಹರಿಸಲು ಭಾರತ ಸರಕಾರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಚೀನಾದ ಮೇಲೆ ರಾಜತಾಂತ್ರಿಕವಾಗಿ ಒತ್ತಡ ತರಬೇಕು. ಬೌದ್ಧ ಧರ್ಮಗುರು ದಲೈಲಾಮಾ ಹಾಗೂ ಚೀನಾ ಸರಕಾರಗಳ ನಡುವೆ ಮಾತುಕತೆಗಳನ್ನು ನಡೆಸಲು ಭಾರತ ಸರಕಾರ ಪ್ರಭಾವ ಬೀರಬೇಕು ಎಂದು ಹೇಳಿದರು.

ಟಿಬೆಟ್ ಪ್ರದೇಶದಲ್ಲಿ ಚೀನೀ ವಲಸಿಗರನ್ನು ಬೃಹತ್ ಪ್ರಮಾಣದಲ್ಲಿ ನೆಲೆಯೂರಲು ಚೀನಾ ಸರಕಾರ ಅವಕಾಶ ಕಲ್ಪಿಸುತ್ತಿದೆ. ದೇಶದ ಗಡಿ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸುತ್ತಿದೆ. ಟಿಬೆಟನ್ನರ ಭಾಷೆ, ಸಂಸ್ಕೃತಿಯ ಮೇಲೆ ಆಕ್ರಮಣ ಮಾಡದಂತೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರತ ಒತ್ತಡ ಹಾಕಬೇಕು ಎಂದು ವಿನಂತಿಸಿದರು.

ಟಿಬೆಟಿಯನ್ನರ ಸಂಸ್ಕೃತಿ-ಪರಂಪರೆಯನ್ನು ನಾಶ ಮಾಡುತ್ತಿರುವ ಚೀನಾವು ಬೌದ್ಧ ಗುರು ದಲೈಲಾಮ ಅವರನ್ನು ಟಿಬೆಟ್ ಗೆ ಆಹ್ವಾನಿಸಬೇಕು ಎಂದು ಒತ್ತಾಯಿಸಿ ಟಿಬೆಟಿಯನ್ನರು ಚೀನಾ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದಾಗ 153 ಜನರನ್ನು ಕ್ರೂರವಾಗಿ ದಮನ ಮಾಡಲಾಯಿತು. ಚೀನಾ ಸರಕಾರ ರಾಜಕೀಯ ಕಾರಣಕ್ಕಾಗಿ ಟಿಬೆಟಿಯನ್ನರಿಗೆ ಚಿತ್ರಹಿಂಸೆ ನೀಡುತ್ತಿರುವುದನ್ನು ಖಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News