ಬೆಂಗಳೂರು: 75 ಲಕ್ಷ ರೂ. ದೋಚಿ ಪರಾರಿಯಾದ ಎಟಿಎಂ ವಾಹನದ ಚಾಲಕ

Update: 2018-11-07 13:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.7: ಎಟಿಎಂ ಕೇಂದ್ರಗಳಿಗೆ ಹಣ ತುಂಬಿಸುವ ವಾಹನದ ಚಾಲಕನೇ ಜೊತೆಯಲ್ಲಿದ್ದ 75 ಲಕ್ಷ ನಗದು ದೋಚಿ ಪರಾರಿಯಾಗಿರುವ ಆರೋಪ ಇಲ್ಲಿನ ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. 

ಕೆಜಿ ಹಳ್ಳಿಯ ಆಕ್ಸಿಸ್ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ಹಣ ಹಾಕಲು ಗುತ್ತಿಗೆ ಪಡೆದಿದ್ದ ರೈಟಂ ಕಂಪೆನಿಯ ವಾಹನವು ಕಳೆದ ನ.5 ರಂದು ರಾತ್ರಿ 7:30ರ ಸುಮಾರಿಗೆ ಕೇಂದ್ರದ ಬಳಿ ಬಂದಾಗ, ಅದರಲ್ಲಿದ್ದ ಚಾಲಕ, ಜೊತೆಯಲ್ಲಿದ್ದ ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು 75 ಲಕ್ಷ ಹಣವನ್ನು ದೋಚಿದ್ದಾನೆ ಎನ್ನಲಾಗಿದೆ. ದೋಚಿದ ಹಣವನ್ನು ಮತ್ತೊಂದು ವಾಹನದಲ್ಲಿ ಹಾಕಿಕೊಂಡು ತಾನು ಚಲಾಯಿಸಿಕೊಂಡು ಬಂದಿದ್ದ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಜೊತೆಯಲ್ಲಿದ್ದ ಭದ್ರತಾ ಸಿಬ್ಬಂದಿಗೆ ಸ್ವಲ್ಪಹೊತ್ತಿನ ನಂತರ ವಿಷಯ ಗೊತ್ತಾಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ಕೆಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ರಾಹುಲ್‌ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News