ಮಹಾಘಟಬಂಧನ್‌ಗೆ ಮತ್ತಷ್ಟು ಶಕ್ತಿ: ದೇವೇಗೌಡ-ಚಂದ್ರಬಾಬು ನಾಯ್ಡು ಮಹತ್ವದ ಮಾತುಕತೆ

Update: 2018-11-07 13:54 GMT
ದೇವೇಗೌಡ-ಚಂದ್ರಬಾಬು ನಾಯ್ಡು

ಬೆಂಗಳೂರು, ನ.7: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್ ರಚನೆಗೆ ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶವು ಮತ್ತಷ್ಟು ಶಕ್ತಿ ನೀಡಿದೆ. ಈ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಜೊತೆಗೆ ಎಲ್ಲ ಪ್ರಾದೇಶಿಕ ಪಕ್ಷಗಳು ಕೈ ಜೋಡಿಸಲು ಮುಂದಾಗಿವೆ. ಇತ್ತೀಚೆಗಷ್ಟೇ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಇದೀಗ ಉಪ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭೂತಪೂರ್ವ ಗೆಲುವು ಸಾಧಿಸಿರುವುದರಿಂದ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಚಂದ್ರಬಾಬು ನಾಯ್ಡು, ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದಕ್ಕಾಗಿ ಶುಭ ಕೋರಿದ್ದಲ್ಲದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅನುಸರಿಸಬೇಕಾದ ರಣತಂತ್ರದ ಕುರಿತು ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದ್ದಾರೆ ಎನ್ನಲಾಗಿದೆ.

ರಾಷ್ಟ್ರಮಟ್ಟದ ಮಹಾಘಟಬಂಧನ್ ತಮ್ಮ ನೇತೃತ್ವದಲ್ಲಿ ರಚನೆಯಾದರೆ ಒಳ್ಳೆಯದು ಎಂಬ ಪ್ರಸ್ತಾವನೆಯನ್ನು ದೇವೇಗೌಡರ ಮುಂದೆ ಚಂದ್ರಬಾಬು ನಾಯ್ಡು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಲೋಕಸಭಾ ಚುನಾವಣೆಗೆ ಈ ಫಲಿತಾಂಶವು ದಿಕ್ಸೂಚಿಯಾಗಲಿದೆ. ಈ ಮಹಾ ಮೈತ್ರಿ ಮುಂದುವರೆಯಲಿ, ಅದಕ್ಕೆ ನಮ್ಮ ಬೆಂಬಲವು ಇರಲಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಇದೇ ವಿಚಾರವಾಗಿ ಚರ್ಚಿಸಲು ಚಂದ್ರಬಾಬು ನಾಯ್ಡು ನಾಳೆ (ನ.8ರಂದು) ಬೆಂಗಳೂರಿಗೆ ಆಗಮಿಸುತ್ತಿದ್ದು, ಮಧ್ಯಾಹ್ನ 3 ಗಂಟೆಗೆ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಮಾತುಕತೆಯನ್ನು ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News