×
Ad

ಬೆಂಗಳೂರು: ಪಟಾಕಿ ಸಿಡಿತದಿಂದ 20ಕ್ಕೂ ಅಧಿಕ ಮಂದಿಗೆ ಗಾಯ; ದೃಷ್ಟಿ ಕಳೆದುಕೊಂಡ ಬಾಲಕಿ

Update: 2018-11-07 20:36 IST

ಬೆಂಗಳೂರು, ನ.7: ನಗರದಲ್ಲಿ ಕಳೆದೆರಡು ದಿನಗಳಿಂದ ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿತದಿಂದ 20 ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಇಬ್ಬರು ಬಾಲಕಿಯರು ಗಂಭೀರ ಗಾಯಗೊಂಡು ಶಾಶ್ವತವಾಗಿ ಕಣ್ಣು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. 

ಬೆಳಕಿನ ಹಬ್ಬ, ಕತ್ತಲೆಯಿಂದ ಬೆಳಕಿನ ಕಡೆಗೆ ಕೊಂಡೊಯ್ಯುವ ದೀಪಾವಳಿಯಲ್ಲಿ ಟ್ಯಾನರಿ ರಸ್ತೆಯ ನಿವಾಸಿ 13 ವರ್ಷದ ಸಾದಿಕಾ ಬಾನು ಹೂವಿನ ಕುಂಡ ಹಚ್ಚಲು ಹೋಗಿ ಅದರ ಕಿಡಿಗಳು ಕಣ್ಣಿಗೆ ತಾಗಿ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ. ಶಸಚಿಕಿತ್ಸೆ ನಡೆಸಿದ ಮಿಂಟೋ ಆಸ್ಪತ್ರೆ ವೈದ್ಯರು ದೃಷ್ಟಿ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಬೊಮ್ಮನಹಳ್ಳಿಯ ಆರು ವರ್ಷದ ಬಾಲಕಿ ದಿವ್ಯಾಗೆ ಚಿಕಿತ್ಸೆ ನೀಡಲಾಗುತ್ತಿದ್ದು, ದೃಷ್ಟಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ದೇವನಹಳ್ಳಿ ಬಳಿಯ ಜೋಗನಹಳ್ಳಿ ಗ್ರಾಮದ 7 ವರ್ಷದ ಬಾಲಕ ಮೋನೇಶ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಟಂಬಾಂಬ್ ಪಟಾಕಿ ಹಚ್ಚುತ್ತಿದ್ದಾಗ ಅದು ಸಿಡಿದು ಒಬ್ಬನ ಕಣ್ಣಿನ ಹಾನಿಯಾಗಿದೆ. ಕಣ್ಣಿನ ಕಾರ್ನಿಯ ಹರಿದಿರುವುದರಿಂದ ಶಸ್ತ್ರ ಚಿಕಿತ್ಸೆ ನಡೆಸಬೇಕಿದ್ದು, ದೃಷ್ಟಿ ಬರುವ ಕುರಿತು ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ನಗರದ ವಿವಿಧ ಕಡೆಗಳಲ್ಲಿ ಸುಮಾರು 20 ಕ್ಕೂ ಅಧಿಕ ಜನರಿಗೆ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾಗಿದ್ದು, ಮಿಂಟೋನಲ್ಲಿ ಮೂವರು ಒಳರೋಗಿಗಳಾಗಿ ದಾಖಲಾಗಿದ್ದು, 9 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಪಟಾಕಿ ಹಚ್ಚಲು ಕೈಯಲ್ಲಿ ಊದುಕಡ್ಡಿ ಹಿಡಿದಿದ್ದ 3 ವರ್ಷದ ಬಾಲಕನಿಗೆ ಅದರ ಕಿಡಿ ತಾಗಿ ಕಣ್ಣಿಗೆ ಸಮಸ್ಯೆಯಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದು ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಈತನೂ ಸೇರಿದಂತೆ ನಾರಾಯಣ ನೇತ್ರಾಲಯದಲ್ಲಿ ನಾಲ್ವರು ಪಟಾಕಿ ಹಾನಿಗೆ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ವರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ರಾಜರಾಜೇಶ್ವರಿನಗರದ ಬಂಗಾರಪ್ಪನಗರ ನಿವಾಸಿ ಎಂ.ಭರತ್, ಎಚ್‌ಎಸ್‌ಆರ್ ಲೇಔಟ್‌ನ ಮುಹಮ್ಮದ್ ಗುಲಾಂ ರಬ್ಬಾನಿ, ಗಂಗೊಂಡನಹಳ್ಳಿಯ ಶಬ್ಬೀರ್, ಎಜಿಎಸ್ ಬಡಾವಣೆಯ ಗಾಯತ್ರಿ ಮತ್ತಿತರರು ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿಟಿಎಂ ಬಡಾವಣೆಯಲ್ಲಿ ಸಿಡಿಸಿದ ಪಟಾಕಿ ಕಿಡಿಯಿಂದ ರಸ್ತೆಯಲ್ಲಿ ಬಿದ್ದಿದ್ದ ತ್ಯಾಜ್ಯಕ್ಕೆ ಬೆಂಕಿ ತಗುಲಿ, ಬೆಂಕಿಯ ಕೆನ್ನಾಲಿಗೆಗೆ ಮರ ಸುಟ್ಟು ಹೋಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಪ್ರತಿ ವರ್ಷ ದೀಪಾವಳಿಯಂದು ಪಟಾಕಿ ಹಚ್ಚುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದರೂ ಹಾನಿಗೊಳಗಾಗುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ವೈದ್ಯರು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News