×
Ad

ನ.8: ಕಣ್ಣಿಯತ್ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಗೆ ಚಾಲನೆ

Update: 2018-11-07 21:36 IST

ಬೆಂಗಳೂರು, ನ.7: ಕಾಸರಗೋಡು ಜಿಲ್ಲೆಯ ಬದಿಯಡ್ಕದ ಕಣ್ಣಿಯತ್ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ಬೆಂಗಳೂರು ಶಾಖೆಯ ಉದ್ಘಾಟನಾ ಸಮಾರಂಭವನ್ನು ನ.8ರಂದು ರಾತ್ರಿ 9 ಗಂಟೆಗೆ ಆರ್.ಟಿ.ನಗರ ಸಮೀಪದ ಮುನಿರೆಡ್ಡಿ ಪಾಳ್ಯದ ಅಸ್ಲಂ ಪ್ಯಾಲೇಸ್‌ನಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಸಂಚಾಲಕ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಶಾಹಿದ್ ತೆಕ್ಕಿಲ್ ತಿಳಿಸಿದರು.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮಾರಂಭವನ್ನು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್‌ ಅಹ್ಮದ್‌ ಖಾನ್ ಉದ್ಘಾಟಿಸಲಿದ್ದು, ಕಣ್ಣಿಯತ್ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿಯ ಅಧ್ಯಕ್ಷ ಯು.ಎಂ.ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಶಾಸಕ ಎನ್.ಎ.ಹಾರೀಸ್, ವಿಧಾನಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ರಿಝ್ವಿನ್ ಅರ್ಶದ್, ಮಲಬಾರ್ ಮುಸ್ಲಿಮ್ ಅಸೋಸಿಯೇಷನ್ ಅಧ್ಯಕ್ಷ ಎನ್.ಎ.ಮುಹಮ್ಮದ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ಪಿ.ಬಿ.ಅಬ್ದುಲ್ ರಝಾಕ್ ಅವರಿಗೆ ಕಾಸರಗೋಡಿನ ಶಾಸಕ ಎನ್.ಎ.ನೆಲ್ಲಿಕ್ಕುಣ್ಣು ನುಡಿನಮನ ಸಲ್ಲಿಸಲಿದ್ದಾರೆ. ಅಂತರ್‌ರಾಷ್ಟ್ರೀಯ ಖ್ಯಾತಿಯ ವಾಗ್ಮಿ ಖಲೀಲ್ ಹುದವಿ ಆಶೀರ್ವಚನ ನೀಡಲಿದ್ದಾರೆ ಎಂದು ಶಾಹೀದ್ ತಿಳಿಸಿದರು.

ಕಣ್ಣಿಯತ್ ಅಹಮದ್ ಮುಸ್ಲಿಯಾರ್ ಇಸ್ಲಾಮ್ ಧರ್ಮದ ಪ್ರಮುಖ ಧಾರ್ಮಿಕ ಗುರುಗಳಲ್ಲಿ ಒಬ್ಬರು. ಅವರು ಕಾಸರಗೋಡಿನ ಬದಿಯಡ್ಕದಲ್ಲಿ ಸ್ಥಾಪಿಸಿದ ಕಣಿಯತ್ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿ ಕನ್ನಡ, ಇಂಗ್ಲಿಷ್ ಹಾಗೂ ಅರೇಬಿಕ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಅಕಾಡೆಮಿಯಲ್ಲೂ ಕನ್ನಡ, ಇಂಗ್ಲಿಷ್ ಹಾಗೂ ಅರೇಬಿಕ್ ಮಾಧ್ಯಮದಲ್ಲಿ ಶಿಕ್ಷಣ ಒದಗಿಸಲಾಗುವುದು. ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News