ಸಚಿವ ಸಂಪುಟ ವಿಸ್ತರಣೆ-ನಿಗಮ ಮಂಡಳಿ ನೇಮಕಾತಿಗೆ ದೇವೇಗೌಡ ಸೂಚನೆ

Update: 2018-11-07 16:09 GMT

ಬೆಂಗಳೂರು, ನ.7: ಉಪ ಚುನಾವಣೆಯ ಫಲಿತಾಂಶದಿಂದ ಹರ್ಷಗೊಂಡಿರುವ ಆಡಳಿತರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವರಿಷ್ಠರು, ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳ ನೇಮಕಾತಿ ಪ್ರಕ್ರಿಯೆಯನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಜೊತೆ ಚರ್ಚಿಸಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಇನ್ನೂ ವಿಳಂಬ ಮಾಡದೆ ಸಚಿವ ಸಂಪುಟದಲ್ಲಿ ಖಾಲಿಯಿರುವ ಸ್ಥಾನಗಳು ಹಾಗೂ ನಿಗಮ, ಮಂಡಳಿಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.

ಸಂಪುಟ ವಿಸ್ತರಣೆ ವೇಳೆ ಸಣ್ಣಪುಟ್ಟ ಅಸಮಾಧಾನಗಳು ಉಂಟಾಗುವುದು ಸಹಜ. ಅದನ್ನು ನಾವು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬಹುದು. ಆದರೆ, ಅಸಮಾಧಾನವನ್ನೆ ನೆಪವಾಗಿಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡದೆ ಮುಂದೂಡಿಕೊಂಡು ಬಂದಲ್ಲಿ ಮುಂದಿನ ದಿನಗಳಲ್ಲಿ ಮೈತ್ರಿ ಸರಕಾರದ ಪಾಲಿಗೆ ಕಂಟಕವಾಗಿ ಪರಿಣಮಿಸಬಹುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ಗೂ ದೇವೇಗೌಡ ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದೇ ತಿಂಗಳ 25 ರೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕು. ನಿಗಮ, ಮಂಡಳಿಗಳ ನೇಮಕಾತಿಯನ್ನು ಪೂರ್ಣಗೊಳಿಸಬೇಕು. ಈ ಸಂಬಂಧ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರಮುಖ ನಾಯಕರು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ದೇವೇಗೌಡ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ದೇವೇಗೌಡರ ಮನವಿಗೆ ಸ್ಪಂದಿಸಿರುವ ಕೆ.ಸಿ.ವೇಣುಗೋಪಾಲ್, ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದು, ನ.16ರಂದು ಸ್ವದೇಶಕ್ಕೆ ಹಿಂದಿರುತ್ತೇನೆ. ಆನಂತರ, ಕೂಡಲೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ, ಈ ಅವಧಿಯಲ್ಲಿ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಿಗೆ ವೇಣುಗೋಪಾಲ್ ತಿಳಿಸಿದ್ದಾರೆ ಎನ್ನಲಾಗಿದೆ.

ರಾಹುಲ್ ಜೊತೆ ಸಿಎಂ ಚರ್ಚೆ: ಸಚಿವ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶೀಘ್ರವೇ ಹೊಸದಿಲ್ಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಜೊತೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ಇದೇ ವೇಳೆ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ವಿಷಯದ ಕುರಿತು ಚರ್ಚೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News