ಜನ ಬಿಜೆಪಿಯನ್ನು ತಿರಸ್ಕರಿಸಿರುವುದು ಸ್ವಾಗತಾರ್ಹ: ಸಿಪಿಎಂ ರಾಜ್ಯ ಕಾರ್ಯದರ್ಶಿ ಶ್ರೀರಾಮರೆಡ್ಡಿ
ಬೆಂಗಳೂರು, ನ.7: ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನ ಸಭಾ ಚುನಾವಣೆಯಲ್ಲಿ ಜನತೆ ಶಿವಮೊಗ್ಗ ಹೊರತುಪಡಿಸಿ ಉಳಿದ ಕಡೆ ಬಿಜೆಪಿಯನ್ನು ತಿರಸ್ಕರಿಸಿರುವುದು ಸ್ವಾಗತಾರ್ಹ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದ್ದಾರೆ.
ಎರಡು ವಿಧಾನಸಭಾ ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳು ಉಳಿಸಿಕೊಂಡಿವೆ. ರಾಮನಗರ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಚುನಾವಣೆಯ ಪೂರ್ವದಲ್ಲಿಯೇ ಕಣದಿಂದ ನಿವೃತ್ತಿ ಘೋಷಿಸಿ ಬಿಜೆಪಿಗೆ ತೀವ್ರ ಮುಖ ಭಂಗ ಉಂಟಾಗಿತ್ತು. ಈ ಫಲಿತಾಂಶಗಳು ಕೋಮುವಾದವನ್ನು ತಿರಸ್ಕರಿಸಿದ ಹಾಗೂ ಜಾತ್ಯತೀತತೆಯನ್ನು ಎತ್ತಿ ಹಿಡಿದ ಫಲಿತಾಂಶಗಳಾಗಿದ್ದು ಸ್ವಾಗತಾರ್ಹವಾಗಿವೆ. ಜಾತ್ಯತೀತ ಶಕ್ತಿಗಳು ಒಗ್ಗೂಡಿ ಕೋಮುವಾದಿ ಶಕ್ತಿಯ ವಿರುದ್ದ ನಿಂತಿದ್ದು ಈ ಫಲಿತಾಂಶದ ಮೂಲವಾಗಿದೆ ಎಂದು ಹೇಳಿದ್ದಾರೆ.
ಬಳ್ಳಾರಿ, ಜಮಖಂಡಿ, ಮಂಡ್ಯ ಹಾಗೂ ರಾಮನಗರದ ಜನತೆ ಕೋಮುವಾದಿ ಬಿಜೆಪಿಗೆ ಈ ಉಪ ಚುನಾವಣೆಗಳಲ್ಲಿ ಭಾರೀ ಮುಖಭಂಗ ಅನುಭವಿಸುವಂತೆ ಮಾಡಿ ಅದಕ್ಕೆ ಸರಿಯಾದ ಪಾಠವನ್ನು ಕಲಿಸಿದ್ದಾರೆ. ಈ ಫಲಿತಾಂಶವು ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಿದೆ. ಕೋಮುವಾದಿ ಬಿಜೆಪಿಯ ವಿರುದ್ಧ ಜಾತ್ಯತೀತ ಶಕ್ತಿಗಳು ಮತ್ತಷ್ಟು ಬಲವಾಗಿ ಒಗ್ಗೂಡಿ ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸಿದಲ್ಲಿ, ರಾಜ್ಯದಲ್ಲಿ ಇಂತಹದ್ದೆ ಆದ ಫಲಿತಾಂಶ ನೀಡುವುದಾಗಿ ಜನರು ಮುನ್ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಮತದಾರರ ಭಾವನೆಗಳನ್ನು ಗೌರವಿಸುವ ಹೊಣೆಗಾರಿಕೆ ಮೈತ್ರಿ ಸರಕಾರದ ಮೇಲಿದೆ. ಅದನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಸಂರಕ್ಷಿಸಲು ಮತ್ತು ಅದೇ ರೀತಿ ಜನರನ್ನು ತೀವ್ರ ಸಂಕಷ್ಟಕ್ಕೆ ದೂಡುವ ಜಾಗತೀಕರಣದ ದುರ್ನೀತಿಗಳನ್ನು ಕೈ ಬಿಟ್ಟು ಜನಪರವಾದ ಆರ್ಥಿಕ ನೀತಿಗಳನ್ನು ಜಾರಿಗೆ ತರಲು ಗಂಭೀರವಾದ ಕ್ರಮವಹಿಸಬೇಕೆಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.