×
Ad

ದೇಶದಲ್ಲಿ ಜಾತೀಯತೆ ವಿಜೃಂಭಿಸುತ್ತಿದೆ: ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ

Update: 2018-11-07 22:33 IST

ಬೆಂಗಳೂರು, ನ.7: ನಮ್ಮ ದೇಶದಲ್ಲಿ ಜಾತ್ಯತೀತತೆ ಎನ್ನುವುದು ಸವಕಲು ನಾಣ್ಯವಾಗಿದ್ದು, ಜಾತೀಯತೆ ವಿಜೃಂಭಿಸುತ್ತಿದೆ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಹೇಳಿದ್ದಾರೆ.

ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಏರ್ಪಡಿಸಿದ್ದ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದಲ್ಲಿ ಜಾತೀಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಮಾನವೀಯ ರೀತಿಯಲ್ಲಿ ವರ್ತಿಸಲಾಗುತ್ತಿದೆ. ನಮ್ಮದು ಹಲವು ಜಾತಿ, ಧರ್ಮಗಳಿಂದ ಕೂಡಿರುವ ರಾಷ್ಟ್ರ. ಹೀಗಾಗಿ, ಯಾವುದೇ ಒಬ್ಬ ಸಾಧನೆ ಮಾಡಿರುವ ವ್ಯಕ್ತಿಯನ್ನು ಜಾತಿಗೆ ಸೀಮಿತ ಮಾಡಬಾರದು ಎಂದು ತಿಳಿಸಿದರು.

ಮಸೀದಿಯಲ್ಲಿ ರಾಜ್ಯೋತ್ಸವ, ಸ್ವಾತಂತ್ರ ದಿನಾಚರಣೆಗಳಿಂದ ಆರಂಭವಾಗಿ ಮದ್ರಸಾಗಳಲ್ಲಿ ಕನ್ನಡ ಕಲಿಕಾ ಶಿಬಿರಗಳನ್ನು ನಡೆಸುತ್ತಾ ಸೌಹಾರ್ದ ಸಮಾವೇಶಗಳನ್ನು ಯಶಸ್ವಿಯಾಗಿ ವೇದಿಕೆ ಆಯೋಜಿಸುತ್ತಿದೆ. ಧರ್ಮವನ್ನು ಮೀರಿ ನಾಡು, ನುಡಿಗಾಗಿ ಶ್ರಮಿಸಿದ, ಶ್ರಮಿಸುತ್ತಿರುವವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಅವರು ಪ್ರಶಂಸಿಸಿದರು.

ವೇದಿಕೆಯ ಅಧ್ಯಕ್ಷ ಸಮೀವುಲ್ಲಾಖಾನ್ ಮಾತನಾಡಿ, ನೂರಾರು ಜನರು ಕೆಂಪೇಗೌಡ ಪ್ರಶಸ್ತಿ ಪಡೆದಿದ್ದರೂ ಪ್ರಾಮಾಣಿಕ ಹಾಗೂ ಅರ್ಹರು ಎಂದೆನಿಸಿದ ಇಬ್ಬರನ್ನು ಆಹ್ವಾನಿಸಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಈ ಇಬ್ಬರೂ ತಮ್ಮ ಸಾರ್ವಜನಿಕ ಬದುಕಿನಲ್ಲಿ ನಿರಂತರವಾಗಿ ಪಾರದರ್ಶಕತೆಯನ್ನು ಕಾಪಾಡಿಕೊಂಡು, ನೈತಿಕ ವೌಲ್ಯಗಳನ್ನು ಉಳಿಸಿ, ಬೆಳೆಸುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸರಕಾರಿ ನೌಕರರ ಒಕ್ಕೂಟದ ಮಾಜಿ ಅಧ್ಯಕ್ಷ ಯು.ಡಿ. ನರಸಿಂಹಯ್ಯ, ಸಾಹಿತಿ ಡಾ. ಜಿ.ಕೃಷ್ಣಪ್ಪ, ಕನ್ನಡಪರ ಹೋರಾಟಗಾರ ಶೇ.ಬೋ. ರಾಧಾಕೃಷ್ಣ, ಕಲಾವಿದ ಎ.ಬಿ.ಬಸವರಾಜ್, ವೇದಿಕೆಯ ಗೌರವ ಸಲಹೆಗಾರ ನಜೀರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News