ಗುಜರಾತ್ ಮಾಜಿ ಗೃಹಸಚಿವ ಹರೇನ್ ಪಾಂಡ್ಯ ಕೊಲೆ: ಸಿಬಿಐ ಮಾಡಿದ್ದು ಯಾವ ಸೀಮೆಯ ತನಿಖೆ?

Update: 2018-11-07 17:19 GMT

ಗುಜರಾತ್ ನಲ್ಲಿ ಆಂತರಿಕ ಭಿನ್ನಮತದಿಂದ ಪದಚ್ಯುತಗೊಂಡ ಕೇಶುಭಾಯಿ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ 1998ರಿಂದ 2001ರ ಅವಧಿಯಲ್ಲಿ ಹರೇನ್ ಪಾಂಡ್ಯ ಗೃಹಸಚಿವರಾಗಿದ್ದರು. ಪಾಂಡ್ಯ ಹಾಗೂ ಹೊಸ ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಡುವಿನ ಸಂಘರ್ಷ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ನೇತೃತ್ವದ ಸಿಟಿಝನ್ಸ್ ಟ್ರಿಬ್ಯೂನಲ್ ಸೇರಿದಂತೆ ಎರಡು ಬಾರಿ ಪಾಂಡ್ಯ ನೀಡಿದ್ದ ಸಾಕ್ಷ್ಯದವರೆಗೂ ವ್ಯಾಪಿಸಿತ್ತು.

ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ ಮೋದಿ, ಪಾಂಡ್ಯ ಅವರನ್ನು ಗೃಹಖಾತೆಯಿಂದ ವರ್ಗಾಯಿಸಿ, ಕಿರಿಯ ಕಂದಾಯ ಸಚಿವರನ್ನಾಗಿ ಮಾಡಿದರು. 2002ರ ಆಗಸ್ಟ್ ವೇಳೆಗೆ ಮೋದಿ, ಪಾಂಡ್ಯ ಅವರನ್ನು ಸಂಪುಟದಿಂದ ಕಿತ್ತುಹಾಕಿದರು. ಅಕ್ಟೋಬರ್‍ನಲ್ಲಿ ಮುಂದಿನ ಚುನಾವಣೆಗೆ ಪಾಂಡ್ಯ ಅವರಿಗೆ ಟಿಕೆಟ್ ಕೂಡಾ ನಿರಾಕರಿಸಿದರು. ಗೋಧ್ರೋತ್ತರ ಗಲಭೆಯ ಬಳಿಕ ನಡೆದ ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಚುಕ್ಕಾಣಿ ಹಿಡಿದಿತ್ತು.

ಹಲವು ಮಂದಿಯನ್ನು ತಳಮಟ್ಟದಲ್ಲೇ ಇಡಲು ಇಷ್ಟು ಸಾಕಾಗಿತ್ತು. ವಿರೋಧದ ಇತರ ಮೂಲಗಳನ್ನು ಕೂಡಾ ಹೀಗೆಯೇ ದಮನಿಸಲಾಯಿತು. ಸಂಜಯ್ ಜೋಶಿ ನೆನಪಿದೆಯೇ?... ನಿಮ್ಮ ನೆನಪಿನಲ್ಲಿ ಇಲ್ಲ ಎಂದಾದರೆ ಅಲ್ಲಿಗೆ ಮುಗಿಯಿತು ಎಂಬ ಅರ್ಥ.

ಇಷ್ಟಾಗಿಯೂ ಪಾಂಡ್ಯ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಎಂದೂ ಹೆದರಿದ್ದಿಲ್ಲ. ಮಾಜಿ ಗೃಹ ಸಚಿವರಾಗಿ ಎರಡು ಆಯೋಗಗಳ ಮುಂದೆ ಸಾಕ್ಷ್ಯ ನುಡಿದಿದ್ದ ಅವರಿಗೆ, ಕಳೇಬರಗಳನ್ನು ಎಲ್ಲಿ ಮಣ್ಣು ಮಾಡಲಾಗಿದೆ ಎನ್ನುವುದು ಚೆನ್ನಾಗಿ ತಿಳಿದಿತ್ತು.

ಗುಜರಾತ್‍ನಲ್ಲಿ ಇಂಥದ್ದೇ ಪರಿಸ್ಥಿತಿಯಲ್ಲಿ ಮತ್ತೊಬ್ಬ ರಾಜಕಾರಣಿ ಕೂಡಾ ಹತ್ಯೆಯಾದರು. ಅವರು ಕಾಂಗ್ರೆಸ್‍ನ ರವೂಫ್ ವಲೀವುಲ್ಲಾ. 1992ರ ಅಕ್ಟೋಬರ್‍ನಲ್ಲಿ ಅಹ್ಮದಾಬಾದ್‍ನ ಮಧುಬನ್ ಕಟ್ಟಡದಿಂದ ಹೊರಟಿದ್ದ ಅವರು ಹತ್ಯೆಯಾದರು. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಗ್ಯಾಂಗ್‍ ಸ್ಟರ್‍ಗಳ ಹೆಸರನ್ನೊಳಗೊಂಡ ದುಷ್ಟಕೂಟದ ಆಗಷ್ಟೇ ಟೈಪ್ ಆದ ಪಟ್ಟಿ ಅವರ ಕೈಯಲ್ಲಿತ್ತು. ವಲೀವುಲ್ಲಾ ಹತ್ಯೆಗೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲಾಯಿತು. ಆದರೆ ಆ ಪಟ್ಟಿ ಮಾತ್ರ ನಾಪತ್ತೆಯಾಯಿತು.

ಪಾಂಡ್ಯ 2003ರ ಮಾರ್ಚ್ 26ರಂದು ಹತ್ಯೆಯಾದರು. ತಮ್ಮ ಸ್ವಕ್ಷೇತ್ರದ ಹೃದಯಭಾಗದಲ್ಲಿದ್ದ ಲಾ ಗಾರ್ಡನ್‍ ಎದುರು ಕಾರಿನಲ್ಲಿ ಪಾಂಡ್ಯ ಹತ್ಯೆಯಾಗಿದ್ದಾರೆ ಎಂದು ಪೊಲೀಸರು, ವಿಚಾರಣೆ ನಡೆಸಿದ ಅಟಾರ್ನಿ ಮತ್ತು ಸಿಬಿಐ ತನಿಖಾಧಿಕಾರಿಗಳು ಹೇಳಿದ್ದರು. ಸ್ವಲ್ಪವಷ್ಟೇ ಕಿಟಕಿ ತೆರೆದಿದ್ದ ಕಾರಿನಿಂದ ಐದು ಸುತ್ತು ಅವರ ಮೇಲೆ ಗುಂಡು ಹಾರಿಸಲಾಗಿದೆ. ಕತ್ತು ಮತ್ತು ವೃಷಣ ಸೇರಿದಂತೆ ಅವರಿಗೆ ಏಳು ಕಡೆ ಗಾಯಗಳಾಗಿದ್ದವು ಎಂದು ಬಹಿರಂಗಪಡಿಸಿದ್ದರು.

ಚಾಲಕನ ಬದಿಯ ಕಿಟಕಿ 2-3 ಇಂಚು ಇಳಿಸಿದ್ದು, ಹೊರತುಪಡಿಸಿ ಎಲ್ಲ ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಿದ್ದ ಸಣ್ಣ ಮಾರುತಿ ಕಾರನ್ನು ಕಲ್ಪಿಸಿಕೊಳ್ಳಿ. ಬಳಿಕ ಒಬ್ಬ ಎತ್ತರದ ವ್ಯಕ್ತಿ ಚಕ್ರದ ಹಿಂದೆ ನಿಂತಾಗ ಆತನ ಕತ್ತು ಮತ್ತು ವೃಷಣದ ಸ್ಥಾನವನ್ನು ಕಲ್ಪಿಸಿಕೊಳ್ಳಿ. ಅಂತಿಮವಾಗಿ ಚಾಲಕನ ಬದಿಯ ಬಾಗಿಲ ಬಳಿ ಶೂಟರ್ ಒಬ್ಬ ನಿಂತಿರುವುದು ಕಲ್ಪಿಸಿಕೊಳ್ಳಿ.

ಏಳು ಗುಂಡು ತಗುಲಿದ ಗಾಯಗಳಿದ್ದವು ಹಾಗೂ ಗರಿಷ್ಠ ಆರು ಗುಂಡು ಹೊಕ್ಕ ಗಾಯಗಳಿದ್ದವು. ಆದರೆ ಐದು ಗುಂಡು ಮಾತ್ರ ಪತ್ತೆಯಾಗಿತ್ತು. ಎಲ್ಲವೂ ದೇಹದಲ್ಲಿದ್ದವು ಹಾಗೂ ಒಂದು ಕೂಡಾ ಕಾರಿನಲ್ಲಿ ಇರಲಿಲ್ಲ.

ಗುಂಡು ಹೊಕ್ಕ ಗಾಯ ಪಾಂಡ್ಯ ಅವರ ಕತ್ತಿನ ಭಾಗದಲ್ಲಿ ಕಂಡುಬಂದಿದ್ದು, ಇದು ಎಡಕ್ಕೆ ಕೆಳಮುಖವಾಗಿ ಕಂಡುಬಂದಿತ್ತು. ಆದರೆ ವೃಷಣದಲ್ಲಿ ಕಂಡುಬಂದ ಗುಂಡು ಬಲಬದಿಗೆ ಹಾಗೂ ಮೇಲ್ಮುಖವಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ನುಡಿದ ಸಾಕ್ಷ್ಯದಂತೆ, ಈ ಗಾಯವಾಗಲು ಪಿಸ್ತೂಲು ಕೆಳಮಟ್ಟದಲ್ಲಿರಬೇಕಿತ್ತು ಹಾಗೂ ವೃಷಣದ ಎಡಭಾಗದಲ್ಲಿ ಮೇಲ್ಮುಖವಾಗಿ ಕಂಡುಬಂದಿರುವುದರಿಂದ ಕಾರಿನಿಂದ ಶೂಟ್ ಮಾಡಿರುವ ಸಾಧ್ಯತೆ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಅವರ ಗುಪ್ತಾಂಗದಿಂದ ಸಾಕಷ್ಟು ರಕ್ತಸ್ರಾವ ಆಗಿದ್ದರೂ, ಒಂದು ಹನಿ ರಕ್ತ ಕೂಡಾ ಕಾರಿನ ಸೀಟಿನಲ್ಲಿರಲಿಲ್ಲ. ಈ ಪುರಾವೆಯನ್ನು ನೋಡಿದ ಯಾರು ಕೂಡಾ ಇದು ಅಸಂಭವ ಎಂದು ಹೇಳಬಹುದಿತ್ತು.

ಇಂತಹ ಪ್ರಕರಣ ವಿಚಾರಣ ಹಂತಕ್ಕೆ ಬಂದಾಗ, ಅಚ್ಚರಿಯಲ್ಲಿ ಅಚ್ಚರಿ ಎಂಬಂತೆ 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಈ ತೀರ್ಪು ನೀಡಿದ ಕೆಲವೇ ದಿನಗಲಲ್ಲಿ ನ್ಯಾಯಾಧೀಶೆ ಸೋನಿಯಾ ಗೋಕಣಿ ಹೈಕೋರ್ಟ್‍ಗೆ ಬಡ್ತಿ ಹೊಂದಿದರು.

ಹತ್ಯೆ ಪ್ರಕರಣದ ಪ್ರಮುಖ ಹಂತ

ಯಾವುದೇ ಪ್ರಕರಣದಲ್ಲಿ ಅಪರಾಧ ನಡೆದ ಸ್ಥಳ ಹಾಗೂ ಮೊದಲಿನ 48 ಗಂಟೆಗಳ ತನಿಖೆ ಅತ್ಯಂತ ಪ್ರಮುಖವಾಗುತ್ತದೆ. ಬಹುತೇಕ ರಾಜ್ಯಗಳು ಇಂತಹ ಪ್ರಕರಣ ನಿಭಾಯಿಸಲು ಸ್ಪೆಷಲ್ ಬ್ರಾಂಚ್ ಅಥವಾ ಕ್ರೈಂ ಬ್ರಾಂಚ್‍ಗಳನ್ನು ಹೊಂದಿರುತ್ತವೆ. ಸಾಮಾನ್ಯ ಪ್ರಕರಣಗಳಲ್ಲಿ ಗುಜರಾತ್ ಪೊಲೀಸ್ ಇಲಾಖೆಯ ಅಪರಾಧ ವಿಭಾಗ ತಕ್ಷಣ ಮಾಜಿ ಗೃಹ ಸಚಿವರ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕಾಗಿತ್ತು. ಆದರೆ ಪಾಂಡ್ಯ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೊದಲ ದಿನವೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ, ಕ್ರೈಂಬ್ರಾಂಚ್ ಇದರಲ್ಲಿ ಹಸ್ತಕ್ಷೇಪ ಮಾಡಲಿಲ್ಲ ಎನ್ನುವುದು ಸರ್ಕಾರಿ ವಕೀಲರ ವಾದ. ಮೊದಲ 48 ಗಂಟೆಗಳ ಕಾಲ, ತನಿಖೆಯನ್ನು ಎಲ್ಲಿಸ್ ಬ್ರಿಜ್ ಠಾಣೆಯ ಹಿರಿಯ ಪೊಲೀಸ್ ಇನ್‍ಸ್ಪೆಕ್ಟರ್ ವೈ.ಎ.ಶೇಖ್ ಎನ್ನುವವರು ನಿಭಾಯಿಸಿದರು ಎನ್ನುವುದು ಪ್ರಾಸಿಕ್ಯೂಶನ್‍ನ ವಾದ.

ಶೇಖ್ ನೇತೃತ್ವದಲ್ಲಿ ಸಂಚಾರಿ ವಿಧಿವಿಜ್ಞಾನ ತಂಡ ಕಾರನ್ನು ಪರಿಶೀಲನೆ ನಡೆಸಿದ್ದು, ಕಾರಿನಲ್ಲಿ ಯಾವುದೇ ರಕ್ತದ ಕಲೆಗಳು ಕಾಣಸಿಕ್ಕಿರಲಿಲ್ಲ. ಗುಂಡು ಹೊಡೆದ ಕಾರಣದಿಂದ ಕಾರಿಗೆ ಯಾವ ಹಾನಿಯೂ ಆಗಿರಲಿಲ್ಲ. ಆದರೆ ಸಿಬಿಐ ಈ ವರದಿಯನ್ನು ಅಧ್ಯಯನ ಮಾಡಿಲ್ಲ ಅಥವಾ ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದ ಅಂಶಗಳಿಗೂ ಇದಕ್ಕೂ ತಾಳೆಯಾಗುತ್ತದೆಯೇ ಎನ್ನುವುದನ್ನು ನೋಡಿಲ್ಲ ಎಂದು ತನಿಖಾಧಿಕಾರಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದರು.

ವಿಚಾರಣೆ ವೇಳೆ, ಶೇಖ್ ದ್ವಿಪಾತ್ರ ನಿರ್ವಹಿಸಿದರು. ಅಪರಾಧ ಸ್ಥಳದಿಂದ ಎಲ್ಲ ಪುರಾವೆಗಳು ನಾಪತ್ತೆಯಾದ ಅಥವಾ ಅಸಮರ್ಥತೆಯಿಂದ ಅದನ್ನು ಸಂಗ್ರಹಿಸಲೇ ಇಲ್ಲ ಎಂಬ ಹೊಣೆಯನ್ನು ಅವರೇ ಹೊತ್ತುಕೊಂಡರು. ಅವರ ಏಕೈಕ ಕೆಲಸವೆಂದರೆ ಬೇರೆ ಪ್ರತಿಯೊಬ್ಬ ಪೊಲೀಸನನ್ನು ತನಿಖೆಯಿಂದ ಹೊರಗಿಟ್ಟದ್ದು.

ಆದರೆ ಸಮಸ್ಯೆ ಎಂದರೆ, ಅಪರಾಧ ಸ್ಥಳಕ್ಕೆ ಭೇಟಿ ನೀಡಿದವರಲ್ಲಿ ಶೇಖ್ ಮೊದಲಿಗರಲ್ಲ ಮಾತ್ರವಲ್ಲ, ಮೊದಲ ಐದು ಮಂದಿಯ ಪೈಕಿಯೂ ಅವರು ಸೇರಿರಲಿಲ್ಲ. ತನಿಖಾ ಪ್ರಕ್ರಿಯೆಯ ಪರವಾಗಿ ಅವರು ನಿಂತಾಗ, ಮೊದಲ ಎರಡು ದಿನಗಳ ಸಂಪೂರ್ಣ ಯಜಮಾನಿಕೆಯನ್ನು ವಹಿಸಿಕೊಂಡರು ಮತ್ತು ಘಟನಾ ಸ್ಥಳದಲ್ಲಿ ಎಲ್ಲ ಅವಧಿಯಲ್ಲೂ ನಿಯೋಜಿತರಾಗಿರುವಂತೆ ನೋಡಿಕೊಂಡಿದ್ದರು.

ಬದಲಾಗಿ ಅಂದು ಅಪರಾಧ ವಿಭಾಗದ ಡಿವೈಎಸ್ಪಿಯಾಗಿದ್ದ ಡಿ.ಜಿ.ವಂಝಾರಾ ಎರಡು ಸ್ಥಳಗಳಲ್ಲಿ ಸ್ಪಷ್ಟವಾಗಿ ಗುರುತಿಸಿಕೊಂಡಿದ್ದರು. ಒಂದು ಮರಣೋತ್ತರ ಪರೀಕ್ಷೆ ಕೊಠಡಿಯ ಒಳಗೆ ಹಾಗೂ ಇನ್ನೊಂದು ಘಟನೆ ನಡೆದ ಸ್ಥಳದಲ್ಲಿ.

ಅಪರಾಧ ಸ್ಥಳವನ್ನು ಹೇಗೆ ನಿರ್ವಹಿಸಬೇಕು ಎನ್ನುವುದನ್ನು ಭಾರತೀಯ ಪೊಲೀಸ್ ಸಂಹಿತೆ ಸ್ಪಷ್ಟವಾಗಿ ಹಾಗೂ ವಿಸ್ತೃತವಾಗಿ ಸೂಚಿಸಿದೆ. ತನಿಖಾಧಿಕಾರಿಗಳು ವಿಶೇಷ ತರಬೇತಿ ಹೊಂದಿದವರಾಗಿರಬೇಕು ಮತ್ತು ಕಾಲಕಾಲಕ್ಕೆ ಈ ಬಗ್ಗೆ ಪರೀಕ್ಷೆಗೆ ಒಳಪಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಅಧಿಕೃತ ವಾಹನದಲ್ಲಿ ಸದಾ ತನಿಖಾ ಕಿಟ್ ಹೊಂದಿರಬೇಕು. ಅಪರಾಧ ಸ್ಥಳದ ತನಿಖೆ ಕೇವಲ ಚಿತ್ರಗಳಿಗಷ್ಟೇ ಅಲ್ಲ. ಇದು ತೀರಾ ವಾಸ್ತವ. ಭಾರತೀಯ ತನಿಖಾಧಿಕಾರಿಗಳು ಇದಕ್ಕೆ ತಪ್ಪಿದ್ದಾರೆ ಎಂದಾದರೆ, ಕೆಲವೊಮ್ಮೆ ‘ನಿರ್ದಿಷ್ಟ ಕಾರಣ’ಗಳಿಗಾಗಿ ಹಾಗೆ ಮಾಡಿರುತ್ತಾರೆ.

ಅಜಾಗರೂಕತೆಯಿಂದ ವಂಝಾರಾ ಫೋಟೊ

ಶೇಖ್ ಅವರು ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಸೇರಿದಂತೆ ಪಾಂಡ್ಯ ಅಂತ್ಯಕ್ರಿಯೆಗೆ ಆಗಮಿಸಿದ ಅತಿಗಣ್ಯರ ಭದ್ರತೆ ಆಯೋಜಿಸುವ ಸಲುವಾಗಿ ಹೊರಕ್ಕೆ ಹೋಗಿದ್ದಾಗ, ಆ ಸ್ಥಳದಲ್ಲಿ ವಂಝಾರಾ ಇದ್ದ ಚಿತ್ರವನ್ನು ಅಪರಾಧ ವಿಭಾಗದ ಛಾಯಾಗ್ರಾಹಕ ಅಜಾಗರೂಕತೆಯಿಂದ ಸೆರೆಹಿಡಿದಿದ್ದರು. ಪಾಟಿಸವಾಲಿನ ವೇಳೆ ಶೇಖ್ ಅವರನ್ನು ಈ ಬಗ್ಗೆ ಕೇಳಿದಾಗ, ಶೇಖ್ ಶಬ್ದಗಳಿಗಾಗಿ ತಡವರಿಸಿದ್ದರು. ಆದರೆ ಪ್ರಕರಣದ ಪ್ರಮುಖ ಪುರಾವೆ ಎನಿಸಿದ ಬೆರಳಚ್ಚು ಮುದ್ರಣವನ್ನು ಕಾರಿನಿಂದ ಅಂದು ಸಂಗ್ರಹಿಸಲೇ ಇಲ್ಲ. ಇನ್ನೊಂದು ಪ್ರಮುಖ ಅಂಶವೆಂದರೆ ಪಾಂಡ್ಯ ಅವರ ಫೋನ್ ಕರೆಯ ವಿವರಗಳು. ಆ ದಿನ ಮುಂಜಾನೆ ಹಲವು ಮಂದಿ ಅವರಿಗೆ ಕರೆ ಮಾಡಿದ್ದರೂ, ಅವರ ಫೋನ್‍ನಲ್ಲಿ ಯಾವ ಮಿಸ್ಟ್ ಕಾಲ್  ಕೂಡಾ ಕಂಡುಬರಲಿಲ್ಲ. ನಾಪತ್ತೆಯಾಗಿರುವ ಮೂರನೇ ಅಂಶವೆಂದರೆ,  ಮುಂಜಾನೆ ವಾಯುವಿಹಾರಕ್ಕೆ ಹೊರಟಿದ್ದರು ಎನ್ನಲಾದ ಮೃತವ್ಯಕ್ತಿಯ ಚಪ್ಪಲಿ.

ಪಾಂಡ್ಯ ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ ಕೂಡಾ ವಂಝಾರಾ ಹಾಜರಿದ್ದರು. ಇದರ ಸಮರ್ಥನೆಗೆ ಎನ್ನುವಂತೆ ಸಂಬಂಧವೇ ಇಲ್ಲದ ಹಲವು ಮಂದಿ ಕೂಡಾ ಆ ಕೊಠಡಿಯಲ್ಲಿದ್ದರು. ಆದರೆ ವಂಝಾರಾ ನಿರಂತರವಾಗಿ ಹೊರಗೆ- ಒಳಗೆ ಹೋಗಿ ಬರುತ್ತಿದ್ದುದು ಕಂಡುಬರುತ್ತಿತ್ತು. ಪಾಂಡ್ಯ ದೇಹದಿಂದ ಪ್ರತಿಯೊಂದು ಗುಂಡು ಹೊರತೆಗೆಯುವಾಗ ಕೂಡಾ ವಂಝಾರಾ ಪ್ರತ್ಯಕ್ಷವಾಗುತ್ತಿದ್ದರು ಹಾಗೂ ಪತ್ರಕರ್ತರತ್ತ ಕೈಸನ್ನೆ ಮಾಡಿ ಗುಂಡಿನ ಸಂಖ್ಯೆಯನ್ನು ಹೇಳುತ್ತಿದ್ದರು. ಐದನೇ ಗುಂಡು ಹೊರತೆಗೆದಾಗ ಅವರು ಹೊರಕ್ಕೆ ಬಂದರು.

ಇಷ್ಟಾಗಿಯೂ ಒಟ್ಟು ಏಳು ಗಾಯಗಳಿದ್ದವು. ಆ ಪೈಕಿ ಕನಿಷ್ಠ ಆರು ಗುಂಡು ಹೊಕ್ಕ ಗಾಯಗಳು. ಕೇವಲ ಐದು ಗುಂಡುಗಳು ಮಾತ್ರ ಅವರ ದೇಹದಲ್ಲಿ ಪತ್ತೆಯಾಗಿದ್ದು, ಕಾರಿನಲ್ಲಿ ಯಾವ ಗುಂಡೂ ಸಿಕ್ಕಿರಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ, ಪಾಂಡ್ಯ ದೇಹದಿಂದ ಹೊರತೆಗೆದ ಗುಂಡುಗಳು, ನ್ಯಾಯಾಲಯದಲ್ಲಿ ಹಾಜರುಪಡಿಸಿದ ಗುಂಡಿನ ವಿವರಣೆಗಳಿಗೆ ಹೋಲಿಕೆಯಾಗಿಲ್ಲ. ಮೂವರು ವೈದ್ಯರು ಸಹಿ ಮಾಡಿದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಿಳಿಬಣ್ಣದ ಲೋಹದ ಗುಂಡುಗಳು ಎಂದು ಉಲ್ಲೇಖಿಸಲಾಗಿದೆ. ಅಂದರೆ ಇದು ಪಿಸ್ತೂಲಿನಲ್ಲಿ ಬಳಕೆಯಾಗುವ ಜಾಕೆಟೆಡ್ ಕ್ಯುಪ್ರೊ ನಿಕ್ಕಲ್ ಗುಂಡುಗಳು. ಆದರೆ ನ್ಯಾಯಾಲಯದಲ್ಲಿ ಸಲ್ಲಿಸಿದ ಗುಂಡುಗಳು ಬೂದುಮಿಶ್ರಿತ ಕಪ್ಪುಬಣ್ಣದ ಸತುವಿನ ಗುಂಡುಗಳಾಗಿದ್ದು, ಇವುಗಳನ್ನು ರಿವಾಲ್ವರ್‍ ನಲ್ಲಿ ಬಳಸಲಾಗುತ್ತದೆ. ಈ ಗುಂಡುಗಳ ತುದಿಗೆ ಹಾನಿಯಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಲಾಗಿತ್ತು. ಆದರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಇವುಗಳ ತುದಿ ಸರಿಯಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇವು ಕ್ಷುಲ್ಲಕ ಭಿನತೆಗಳೇನೂ ಅಲ್ಲ. ಇವು ಹೇಗೆ ಮಾರ್ಪಾಡಾದವು?, ತಪ್ಪಾಗಿ ವಿವರಿಸಲಾಗಿದೆಯೇ?, ಯಾವ ಕಾರಣಕ್ಕಾಗಿ, ಯಾರಿಂದ, ಯಾರ ಆದೇಶದಂತೆ?.. ಯಾರೇ ಆಗಿರಲಿ, ಈ ಘಟನೆಯ ಬಳಿಕ ಕೆಲವೇ ಸಮಯದಲ್ಲಿ ಹತ್ಯೆಯಾದ ಮೂವರು ಗ್ಯಾಂಗ್ ಸ್ಟರ್‍ಗಳಾದ ಸೊಹ್ರಾಬುದ್ದೀನ್, ತುಳಸೀರಾಂ ಪ್ರಜಾಪತಿ ಅಥವಾ ನಯೀಮುದ್ದೀನ್ ಅವರಂತೂ ಖಂಡಿತಾ ಅಲ್ಲ. ಅಥವಾ ತಮ್ಮ ಜೀವದ ಬಗ್ಗೆ ಬದರಿಕೆ ಇದ್ದ ಯಾರೂ ಅಲ್ಲ. ಮರಣೋತ್ತರ ಪರೀಕ್ಷೆ ಕೊಠಡಿಗೆ ಇವರ್ಯಾರೂ ಬರುವಂತಿರಲಿಲ್ಲ ಹಾಗೂ ಆ ಬಳಿಕ ಕೂಡಾ ಗುಂಡು ಇವರಿಗೆ ಸಿಗುವ ಸಾಧ್ಯತೆ ಇರಲಿಲ್ಲ. ಕೃತ್ಯಕ್ಕೆ ಬಳಸಿದ ಅಸ್ತ್ರ ಯಾವುದು ಎನ್ನುವುದು ಇನ್ನೊಂದು ಕಥೆ.

ಸಿಬಿಐ ತನಿಖೆಗೆ ಸ್ವಲ್ಪ ಸಮಯ ಅಭಯ್ ಚೂಡಾಸಮ ಅವರನ್ನು ನಿಯೋಜಿಸಲಾಗಿತ್ತು. ಆ ಬಳಿಕ ತರುಣ್ ಕುಮಾರ್ ಅಮೃತ್‍ಲಾಲ್ ಬರೋಟ್ (ಟಿ.ಎ.ಬರೋಟ್ ಎಂದೇ ಖ್ಯಾತರು) ನಿಯೋಜಿಸಲ್ಪಟ್ಟರು. ಇಬ್ಬರು ಕೂಡಾ ಸೊಹ್ರಾಬುದ್ದೀನ್ ಹಾಗೂ ಪ್ರಜಾಪತಿ ಪ್ರಕರಣಗಳ ಆರೋಪಿಗಳು. ಚೂಡಾಸಮ 2015ರಲ್ಲಿ ದೋಷಮುಕ್ತರಾದರು. ಬರೋಟ್ ಅವರು ಅಭಿಯೋಜಕರ ಪರವಾಗಿ 114ನೇ ಸಾಕ್ಷಿ. ಇಡೀ ಪ್ರಕರಣದಲ್ಲಿ ಸುಧೀರ್ಘ ಹಾಗೂ ಬಹಿರಂಗ ಸಂಬಂಧ ಹೊಂದಿದ್ದವರು.

ಪಾಂಡ್ಯ ಅವರ ಸ್ನೇಹಿತರು ಹಾಗೂ ಕಾರ್ಯದರ್ಶಿಯ ಹೇಳಿಕೆಗಳನ್ನು ಶೇಖ್ ದಾಖಲಿಸಿಕೊಂಡಿದ್ದರು. ಇವರೆಲ್ಲರೂ ಪೊಲೀಸರಿಗಿಂತ ಮುಂಚಿತವಾಗಿಯೇ ಘಟನಾ ಸ್ಥಳ ತಲುಪಿದ್ದರು. ದೇಹವನ್ನು ಮೊದಲು ನೋಡಿದವರು ಇವರು. ಒಬ್ಬರಂತೂ, ಕಾರಿನ ಬಾಗಿಲು ತೆಗೆದಾಗ, ಪಾಂಡ್ಯ ಅವರ ಮೊಣಕಾಲು ಅಕ್ಷರಶಃ ತನ್ನ ಎದೆಗೆ ತಾಗಿತ್ತು ಎಂದು ಹೇಳಿದ್ದರು. ಆದರೂ ಸಿಬಿಐ ಇವರನ್ನು ಕಡೆಗಣಿಸಿದೆ.

ಘಟನೆ ನಡೆದ ಎರಡೇ ದಿನಗಳಲ್ಲಿ ಸಿಬಿಐ ತನಿಖೆ ಆರಂಭಿಸಿದರೂ, ಪಾಂಡ್ಯ ಅವರ ಫೋನ್, ಕಾರಿನ ಸ್ಥಿತಿ ಅಥವಾ ಮೊದಲ ಬಾರಿಗೆ ಪತ್ತೆಯಾದಾಗ ಕಾರಿನಲ್ಲಿ ಪಾಂಡ್ಯ ಅವರ ದೇಹ ಯಾವ ಸ್ಥಿತಿಯಲ್ಲಿತ್ತು ಎನ್ನುವ ಬಗ್ಗೆ ಕೂಡಾ ಸಿಬಿಐ ತನಿಖೆ ನಡೆಸಲಿಲ್ಲ. ಅಪರಾಧ ಕೃತ್ಯದ ಬಳಿಕ ಸಂಗ್ರಹಿಸಿದ ಅಥವಾ ನಾಪತ್ತೆಯಾದ ಪುರಾವೆಗಳ ಪರಾಮರ್ಶೆಗೂ ಸಿಬಿಐ ಮುಂದಾಗಲಿಲ್ಲ. ಇಷ್ಟಾಗಿಯೂ ಸಿಬಿಐ ಮಾರ್ಚ್ 28ರಂದೇ ಪ್ರಕರಣದ ಸೈಟ್ ಪ್ಲಾನ್ ಸಿದ್ಧಪಡಿಸಿದ್ದು, ಇದರಲ್ಲಿ ಅಸ್ಗರ್ ಅಲಿ ಎಂಬ ಹೆಸರನ್ನು ಅಳಿಸಿ ಹಾಕುವ ಪ್ರಯತ್ನ ನಡೆದಿದ್ದರೂ, ಅದು ಕಂಡುಬರುತ್ತಿತ್ತು. ತೀರಾ ಇತ್ತೀಚಿನವರೆಗೂ ಅವರ ಹೆಸರೇ ನಮಗೆ ತಿಳಿದಿಲ್ಲ ಎನ್ನುವುದು ಸಿಬಿಐ ವಾದ. ಅಲಿ ಹೆಸರನ್ನು ಬಳಿಕ ಸೇರಿಸಿ, ವಿಚಾರಣೆ ನಡೆಸಿ ಶಿಕ್ಷೆಗೆ ಗುರಿಪಡಿಸಲಾಯಿತು. ಅದುವರೆಗೂ ಹೈಕೋರ್ಟ್ ಸಿಬಿಐ ತನಿಖೆಯ ಅಸಂಬದ್ಧತೆಯನ್ನು ನೋಡಿ, ಆತನನ್ನು ಹಾಗೂ ಇತರ 11 ಮಂದಿಯನ್ನು ಆರೋಪಮುಕ್ತಗೊಳಿಸಿತ್ತು.

ಹಾಗಾದರೆ ಸಿಬಿಐ ನಿಖರವಾಗಿ ಏನು ತನಿಖೆ ಮಾಡಿದೆ?, ತನಿಖೆಯಲ್ಲಿ ಅಪರಾಧ ವಿಭಾಗ, ವಂಝಾರಾ ಹಾಗೂ ಅವರ ಸಹೋದ್ಯೋಗಿಗಳ ಪಾತ್ರ ಏನು?, ಸಿಬಿಐಗೆ ಪೂರ್ವದಾಖಲಿತ ಪ್ರತಿಯನ್ನು ನೀಡಲಾಗಿತ್ತೇ ಹಾಗೂ ಯಾರಿಂದ ಇದು ನೀಡಲ್ಪಟ್ಟಿತ್ತು?...

ಪಾಂಡ್ಯ ತನಿಖೆಯಲ್ಲಿ ಪರೋಕ್ಷ, ಆದರೆ ಆಳವಾದ ನಂಟು ಹೊಂದಿದ್ದ ಹಲವು ಮಂದಿ ಅಪರಾಧ ವಿಭಾಗದ ಅಧಿಕಾರಿಗಳು ಕೇಳುವ ಅಂತಿಮ ಪ್ರಶ್ನೆಯೆಂದರೆ, ಪಾಂಡ್ಯ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದೆಯೇ?.

Writer - ಸರಿತಾ ರಾಣಿ, thewire.in

contributor

Editor - ಸರಿತಾ ರಾಣಿ, thewire.in

contributor

Similar News