ಮೈತ್ರಿ ಸರಕಾರದ ಆಡಳಿತಕ್ಕೆ ಸಂದ ಜನಮನ್ನಣೆ: ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್

Update: 2018-11-07 17:37 GMT

ಬೆಂಗಳೂರು, ನ.7: ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶವು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಆಡಳಿತಕ್ಕೆ ಸಂದ ಜನ ಮನ್ನಣೆಯಾಗಿದೆ. ಈ ಗೆಲುವು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದ್ದು, ರಾಜ್ಯದ ಮತದಾರರ ಒಲವು ಯಾರ ಕಡೆಗಿದೆ ಎನ್ನುವುದನ್ನು ಬಿಂಬಿಸಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ತಿಳಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ರಾಷ್ಟ್ರದಲ್ಲಿ ಬಿಜೆಪಿಯ ಅವನತಿಯಾಗಲಿದೆ ಎನ್ನುವ ಸೂಕ್ಷ್ಮ ಸಂದೇಶವನ್ನು ರಾಜ್ಯದ ಮತದಾರರು ನೀಡಿದ್ದಾರೆ. ರಾಜ್ಯದಲ್ಲಿ ರೂಪಿತಗೊಂಡಿರುವ ಕೋಮುವಾದಿಗಳ ವಿರುದ್ಧದ ಜಾತ್ಯತೀತ ಶಕ್ತಿಗಳ ಮೈತ್ರಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ ಜನರ ಒಳಿತಿಗಾಗಿ ಕೆಲಸ ಮಾಡದೇ ಕಾಲ ಕಳೆದಿದೆ. ಪ್ರಧಾನಮಂತ್ರಿ ಸಾವಿರಾರು ಕೋಟಿ ರೂ.ಗಳ ರಫೇಲ್ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದಾರೆ. ಇಂತಹ ವೈಫಲ್ಯ ಮುಚ್ಚಿಡಲು ಧಾರ್ಮಿಕ ಭಾವನೆಗಳಿಗೆ ಕೊಳ್ಳಿ ಇಟ್ಟು, ದುರ್ಲಾಭ ಪಡೆಯಲು ಕೇಂದ್ರ ಯತ್ನಿಸುತ್ತಿದೆ ಎಂದು ಅವರು ದೂರಿದ್ದಾರೆ.

ಈ ಕಾರಣಕ್ಕಾಗಿಯೇ ಬಿಜೆಪಿ ನಾಯಕರು ಉತ್ತರದಲ್ಲಿ ಅಯೋಧ್ಯಾ ಮತ್ತು ದಕ್ಷಿಣದಲ್ಲಿ ಶಬರಿಮಲೆ ವಿಚಾರದಲ್ಲಿ ಸಲ್ಲದ ರಾಜಕೀಯ ಮಾಡುತ್ತಿದ್ದಾರೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ, ಸಿಬಿಐ ಮುಂತಾದ ಶಾಸನಬದ್ಧ ಸಂಸ್ಥೆಗಳನ್ನು ಬಿಜೆಪಿ ಬಹಳ ದುರುಪಯೋಗ ಮಾಡಿಕೊಂಡಿದೆ. ಈ ಸ್ವಾಯತ್ತ ಸಂಸ್ಥೆಗಳು ಬಿಜೆಪಿ ನಾಯಕರು ಹೇಳಿದಂತೆ ಕೇಳುವ ರಣಹದ್ದುಗಳಾಗಿವೆ ಎಂದು ವೆಂಕಟೇಶ್ ಟೀಕಿಸಿದ್ದಾರೆ.

ಕೇಂದ್ರ ಸರಕಾರ ಈಗ ಆರ್‌ಬಿಐನಲ್ಲೂ ಹಸ್ತಕ್ಷೇಪ ಮಾಡಿ, ತನ್ನ ಹಣಕಾಸು ವೈಫಲ್ಯ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ. ಕರ್ನಾಟಕದ ಈ ಉಪ ಚುನಾವಣೆ ಫಲಿತಾಂಶ ಕೇಂದ್ರದ ಕೋಮುವಾದಿ ಸರಕಾರಕ್ಕೆ ಮತ್ತು ಬಿಜೆಪಿ ಮುಖಂಡರಿಗೆ ಪಾಠ. ಮುಂದಿನ ಸಾರ್ವತ್ರಿಕ ಚುನಾವಣೆಯ ಸಮಯಕ್ಕೆ ದೊಡ್ಡ ಮಟ್ಟದಲ್ಲಿ ಕೋಮು ಸಾಮರಸ್ಯ ಕದಡಿ ಲಾಭ ಪಡೆಯಲು ಬಿಜೆಪಿ ಯತ್ನಿಸುವುದನ್ನು ತಳ್ಳಿ ಹಾಕಲಾಗದು ಎಂದು ಅವರು ಹೇಳಿದ್ದಾರೆ.

ಇಂತಹ ಹುನ್ನಾರಕ್ಕೆ ಆಸ್ಪದ ಕೊಡದೇ ಜನರಲ್ಲಿ ಜಾಗೃತಿ ಮೂಡಿಸಿ, ಸದ್ಭಾವನೆ ಹರಡುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದು ದೇಶವನ್ನು ಸರಿದಾರಿಯಲ್ಲಿ ಮುನ್ನಡೆಸುವ ಗುರುತರ ಹೊಣೆಗಾರಿಕೆ ಕಾಂಗ್ರೆಸ್ ನೇತೃತ್ವದ ಜಾತ್ಯತೀತ ಪಕ್ಷಗಳ ಮಹಾ ಮೈತ್ರಿಕೂಟದ ಮೇಲಿದೆ ಎಂದು ವೆಂಕಟೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News