ಐಪಿಎಲ್ ಅನುಭವ ರಾಷ್ಟ್ರೀಯ ತಂಡ ಸೇರಲು ನೆರವು: ಖಲೀಲ್ ಅಹ್ಮದ್

Update: 2018-11-07 18:36 GMT

ಹೊಸದಿಲ್ಲಿ, ನ.7: ಭಾರತೀಯ ಕ್ರಿಕೆಟ್ ತಂಡ ಸೇರುವ ಯುವ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವ ನೆರವಾಗುತ್ತದೆ ಎಂದು ಎಡಗೈ ವೇಗಿ ಟೀಂ ಇಂಡಿಯಾದ ಯುವ ಆಟಗಾರ ಖಲೀಲ್ ಅಹ್ಮದ್ ಹೇಳಿದ್ದಾರೆ

ರಾಜಸ್ಥಾನದ ಟೊಂಕ್ ಜಿಲ್ಲೆಯವರಾದ ಖಲೀಲ್ ಏಶ್ಯ ಕಪ್‌ನಲ್ಲಿ ಉತ್ತಮ ನಿರ್ವಹಣೆ ನೀಡಿದ್ದರೂ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟ್ವೆಂಟಿ-20 ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ. ನವೆಂಬರ್ 6ರಂದು ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಕೆರೆಬಿಯನ್ ತಂಡದ ಇಬ್ಬರು ಅಗ್ರ ಆಟಗಾರರನ್ನು ಪೆವಿಲಿಯನ್‌ಗಟ್ಟುವ ಮೂಲಕ ಖಲೀಲ್ ಭಾರತಕ್ಕೆ ಮುನ್ನಡೆ ದೊರೆಯುವಂತೆ ಮಾಡಿದ್ದರು. ಟೀ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಜೊತೆ ತಾನೇ ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸುವುದಾಗಿ ಖಲೀಲ್ ಅವರು ಹಂಗಾಮಿ ನಾಯಕ ರೋಹಿತ್ ಶರ್ಮಾರನ್ನು ಒಪ್ಪಿಸಿದ್ದರು ಎಂದು ಖುದ್ದು ಶರ್ಮಾ ನಂತರ ಒಪ್ಪಿಕೊಂಡಿದ್ದಾರೆ. ‘‘ನನಗೆ ಜವಾಬ್ದಾರಿ ಎಂದರೆ ಇಷ್ಟ. ನಾನು ಬಾಲ್ಯ ದಿಂದಲೂ ಭಾರತಕ್ಕಾಗಿ ಆಡಬೇಕೆಂಬ ಕನಸು ಕಾಣುತ್ತಿದ್ದೆ. ಈಗ ನಾನದನ್ನು ಸಾಧಿಸಿದ್ದೇನೆ. ಈಗ ನಾನು ಒತ್ತಡ ಅನುಭವಿಸಿದರೆ ನಾನು ನನ್ನ ಸಾಮರ್ಥ್ಯಕ್ಕನುಸಾರ ಆಡಲು ಸಾಧ್ಯವಿಲ್ಲ ಎಂದು ಖಲೀಲ್ ತಿಳಿಸಿದ್ದಾರೆ. ಭಾರತ ತಂಡಕ್ಕೆ ಆಯ್ಕೆಯಾದಾಗ ಟ್ವೆಂಟಿ-20ಯಲ್ಲಿ ಆಡಿರುವ ಅನುಭವ ನಿಮಗೆ ಬಹಳಷ್ಟು ನೆರವಾಗುತ್ತದೆ. ನೀವು ಆಗಲೇ ಅನೇಕ ಅಂತರ್‌ರಾಷ್ಟ್ರೀಯ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಂ ಹಂಚಿರುವುದರಿಂದ ನಿಮ್ಮ ಆಟದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಅಗತ್ಯವಿರುವುದಿಲ್ಲ ಎಂದು ಖಲೀಲ್ ಅಭಿಪ್ರಾಯಿಸಿದ್ದಾರೆ. 20ರ ಹರೆಯದ ಖಲೀಲ್ ಇಂಡಿಯನ್ ಪ್ರೀಮಿ ಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News