ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದೀರಾ ?

Update: 2018-11-08 11:19 GMT

ಹೆಚ್ಚಿನ ದೇಶಗಳು ತಮ್ಮ ವೀಸಾ ನಿಯಮಗಳನ್ನು ಕಠಿಣಗೊಳಿಸುತ್ತಿರುವ ಮಧ್ಯೆಯೇ ವಿವಿಧ ದೇಶಗಳ ಈ 12 ಹೊಸ ವೀಸಾ ನಿಯಮಗಳು ಭಾರತೀಯರಿಗೆ ನೆಮ್ಮದಿಯನ್ನು ತಂದಿವೆ. ರಜಾಕಾಲದಲ್ಲಿ ವಿದೇಶ ಪ್ರವಾಸವನ್ನು ಕೈಗೊಳ್ಳುವ ಯೋಜನೆ ನಿಮ್ಮದಾಗಿದ್ದರೆ ಭೇಟಿ ನೀಡುವ ದೇಶವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ನೂತನ ಮಾರ್ಗಸೂಚಿಗಳನ್ನೊಮ್ಮೆ ಓದಿ......

► ದುಬೈ ಮತ್ತು ಅಬುಧಾಬಿ

ನೀವು ಜು.15 ಮತ್ತು ಸೆ.15ರ ನಡುವೆ ಈ ಎರಡು ಸ್ಥಳಗಳಲ್ಲಿ ರಜಾ ದಿನಗಳನ್ನು ಕಳೆಯುವ ಯೋಜನೆಯನ್ನು ಹೊಂದಿದ್ದರೆ 18 ವರ್ಷಕ್ಕಿಂತ ಕಡಿಮೆ ಪ್ರಾಯದ ನಿಮ್ಮ ಅವಲಂಬಿತರಿಗಾಗಿ ವೀಸಾ ಶುಲ್ಕವನ್ನು ನೀವು ಪಾವತಿಸಬೇಕಿಲ್ಲ. ಆದರೆ ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಲು ಮಕ್ಕಳು ತಮ್ಮ ಹೆತ್ತವರೊಂದಿಗಿರಬೇಕು.

ಇನ್ನೊಂದು ಹೊಸ ನಿಯಮವು ಭಾರತದಿಂದ ದುಬೈ ಮತ್ತು ಅಬುಧಾಬಿಗಳ ಮೂಲಕ ಇತರ ದೇಶಗಳಿಗೆ ಪ್ರಯಾಣಿಸುವವರಿಗೆ 48 ಗಂಟೆಗಳ ಸಿಂಧುತ್ವವನ್ನು ಹೊಂದಿರುವ ಉಚಿತ ಟ್ರಾನ್ಸಿಟ್ ವೀಸಾ ಪಡೆಯಲು ಅವಕಾಶವನ್ನು ಕಲ್ಪಿಸುತ್ತದೆ. ಕೇವಲ ಸುಮಾರು 930 ರೂ.ಗಳನ್ನು ಪಾವತಿಸುವ ಮೂಲಕ ಈ ವೀಸಾದ ಅವಧಿಯನ್ನು 96 ಗಂಟೆಗಳಿಗೆ ವಿಸ್ತರಿಸಿಕೊಳ್ಳಬಹುದು.

► ಉಝ್ಬೆಕಿಸ್ತಾನ್

ಈಗ ಭಾರತೀಯ ಪ್ರಯಾಣಿಕರು ಉಝ್ಬೆಕಿಸ್ತಾನಕ್ಕೆ ಭೇಟ ನೀಡುವಾಗ ‘ಲೆಟರ್ ಆಫ್ ಇನ್ವಿಟೇಷನ್(ಆಹ್ವಾನ ಪತ್ರ)’ ಅನ್ನು ಸಲ್ಲಿಸಬೇಕಿಲ್ಲ. ಆನ್‌ಲೈನ್ ವೀಸಾಕ್ಕಾಗಿ ಅರ್ಜಿ ಸಲ್ಲಿಸಿ,ಉಝ್ಬೆಕಿಸ್ತಾನಕ್ಕೆ ಆಗಮನದ ಬಳಿಕ ಅದನ್ನು ತೋರಿಸುವುದಷ್ಟೇ ನಿಮ್ಮ ಕೆಲಸ. ಅಲ್ಲದೆ ಈ ವೀಸಾ ದೇಶದಲ್ಲಿ 30 ದಿನಗಳವರೆಗೆ ವಾಸವಾಗಿರಲು ನಿಮಗೆ ಅವಕಾಶ ನೀಡುತ್ತದೆ.

► ಜಪಾನ್

ಜಪಾನ್ ಕೂಡ ಭಾರತೀಯರಿಗೆ ತನ್ನ ವೀಸಾ ನಿಯಮಗಳನ್ನು ಸಡಿಲಿಸಿದ್ದು, ಸುಲಭವಾದ ಬಹು ಪ್ರವೇಶ ವೀಸಾಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ನಿಮ್ಮ ಭೇಟಿಯ ಅವಧಿಯಲ್ಲಿ ನಿಮ್ಮ ಹಣಕಾಸು ಸಾಮರ್ಥ್ಯವನ್ನು ರುಜುವಾತು ಪಡಿಸುವ ದಾಖಲೆಗಳೊಂದಿಗೆ ವೀಸಾ ಅರ್ಜಿಯನ್ನು ಸಲ್ಲಿಸಿದರೆ ಸಾಕು. ‘ಅರ್ಜಿದಾರ ಉದ್ಯೋಗ ಪ್ರಮಾಣಪತ್ರ’ ಮತ್ತು ‘ಬಹು ಪ್ರವೇಶ ವೀಸಾಕ್ಕೆ ಅರ್ಜಿ ಸಲ್ಲಿಸುವ ಕಾರಣವನ್ನು ತೋರಿಸುವ ವಿವರಣಾ ಪತ್ರ’ ಇವುಗಳು ಇನ್ನು ಮುಂದೆ ಅಗತ್ಯವಾಗಿಲ್ಲ. ಅಲ್ಲದೆ ಭಾರತೀಯ ವಿವಿಗಳಲ್ಲಿ ಪ್ರವೇಶ ಪಡೆದಿರುವ/ಪದವೀಧರರಾಗಿರುವ ವಿದ್ಯಾರ್ಥಿಗಳು ಇನ್ನು ಮುಂದೆ ಜಪಾನ್ ವೀಸಾಕ್ಕಾಗಿ ಹಣಕಾಸು ದಾಖಲೆಗಳನ್ನು ಸಲ್ಲಿಸಬೇಕಿಲ್ಲ.

► ಮ್ಯಾನ್ಮಾರ್

ಭಾರತದಿಂದ ಮ್ಯಾನ್ಮಾರ್‌ಗೆ ರಸ್ತೆ ಪ್ರಯಾಣವು ಈಗ ಸುಲಭಗೊಂಡಿದೆ. ಈಗ ಮ್ಯಾನ್ಮಾರ್‌ನ್ನು ಪ್ರವೇಶಿಸಲು ಭಾರತೀಯ ಪ್ರಯಾಣಿಕರಿಗೆ ವಿಶೇಷ ಭೂ ಮಾರ್ಗ ಅನುಮತಿ ಅಗತ್ಯವಿಲ್ಲ. ಪ್ರಯಾಣವನ್ನು ಆರಂಭಿಸುವ ಮುನ್ನ ಇ-ವೀಸಾಕ್ಕೆ ಅರ್ಜಿ ಸಲ್ಲಿಸಿ,ಚೆಕ್‌ಪೋಸ್ಟ್‌ನಲ್ಲಿ ಅದನ್ನು ಸಲ್ಲಿಸಿದರೆ ಸಾಕು. 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಮ್ಯಾನ್ಮಾರ್‌ನ ಇ-ವೀಸಾ ನಿಮ್ಮ ಕೈಸೇರುತ್ತದೆ ಮತ್ತು ಆ ದೇಶಕ್ಕೆ ನಿಮ್ಮ ಪ್ರವೇಶದ ಬಳಿಕ 28 ದಿನಗಳ ಸಿಂಧುತ್ವ ಹೊಂದಿರುತ್ತದೆ.

► ಸೌದಿ ಅರೇಬಿಯ

 ಸರಕಾರವು ಕೈಗೊಂಡಿರುವ ಐತಿಹಾಸಿಕ ಕ್ರಮದಿಂದಾಗಿ 25 ವರ್ಷಕ್ಕೂ ಮೇಲಿನ ಮಹಿಳೆಯರು ಪುರುಷರ ಬೆಂಗಾವಲು ಹೊಂದಿಲ್ಲದಿದ್ದರೂ ವೀಸಾಗಳನ್ನು ಪಡೆಯಬಹುದಾಗಿದೆ.

► ಕಝಕಸ್ತಾನ್

ಹಲವಾರು ಇತರ ದೇಶಗಳಂತೆ ಕಝಕಸ್ತಾನ್ ಕೂಡ ಈಗ ಭಾರತೀಯರಿಗೆ 30 ದಿನಗಳ ಸಿಂಧುತ್ವ ಹೊಂದಿರುವ ಇ-ವೀಸಾಗಳ ನೀಡಿಕೆಯನ್ನು ಆರಂಭಿಸಿದೆ. ಇದರ ಜೊತೆಗೆ ನೀವು ಯಾವುದೇ ದೇಶಕ್ಕೆ ಕಝಕ್ ಏರ್‌ಲೈನ್ ಮೂಲಕ ಪ್ರಯಾಣಿಸಿದರೆ ನಿಮಗೆ ಕಝಕಸ್ತಾನ್‌ಕ್ಕೆ 72 ಗಂಟೆಗಳ ಅವಧಿಯ ಉಚಿತ ವೀಸಾ ಲಭಿಸುತ್ತದೆ.

► ಝಿಂಬಾಬ್ವೆ

ಆಫ್ರಿಕಾ ಭೇಟಿಯ ಅದ್ಭುತ ಅನುಭವ ಪಡೆಯುವುದು ಇನ್ನು ಕಷ್ಟವಾಗುವುದಿಲ್ಲ. ಝಿಂಬಾಬ್ವೆ ಈಗ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಆಗಮನದ ವೇಳೆ ವೀಸಾ ನೀಡಿಕೆಯನ್ನು ಆರಂಭಿಸಿದೆ.

► ಫ್ರಾನ್ಸ್

ನೀವು ಫ್ರಾನ್ಸ್‌ನ ಯಾವುದೇ ವಿಮಾನ ನಿಲ್ದಾಣದ ಅಂತರರಾಷ್ಟ್ರೀಯ ವಲಯದ ಮೂಲಕ ಹಾದು ಹೋಗುವುದಿದ್ದಲ್ಲಿ ಏರ್‌ಪೋರ್ಟ್ ಟ್ರಾನ್ಸಿಟ್ ವೀಸಾಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿಲ್ಲ.

► ಓಮನ್

ನೀವು ಅಮೆರಿಕ,ಕೆನಡಾ,ಆಸ್ಟ್ರೇಲಿಯಾ,ಬ್ರಿಟನ್,ಜಪಾನ್ ಅಥವಾ ಶೆಂಗನ್‌ಗಾಗಿ ವೀಸಾ ಹೊಂದಿದ್ದರೆ ಓಮನ್‌ನಲ್ಲಿ ಆಗಮನದ ವೇಳೆ ವೀಸಾಕ್ಕೆ ನೀವು ಅರ್ಹರಾಗಿರುತ್ತೀರಿ. ಈ ವೀಸಾ 30 ದಿನಗಳ ಸಿಂಧುತ್ವ ಹೊಂದಿರುತ್ತದೆ. ಈ ನೂತನ ನಿಯಮವು ನಿಮ್ಮ ಅವಲಂಬಿತರು ನಿಮ್ಮ ಜೊತೆಯಲ್ಲಿದ್ದಷ್ಟು ಸಮಯ ಆಗಮನದ ವೇಳೆ ವೀಸಾ ಪಡೆಯಲು ಅವಕಾಶ ಕಲ್ಪಿಸುತ್ತದೆ.

► ಇಸ್ರೇಲ್

ಇಸ್ರೇಲ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಿ2 ವರ್ಗದ ವೀಸಾಕ್ಕಾಗಿ ಅರ್ಜಿ ಶುಲ್ಕವನ್ನು 1,700 ರೂ.ಗಳಿಂದ 1,100 ರೂ.ಗಳಿಗೆ ತಗ್ಗಿಸಿದೆ. ಬಿ2 ವೀಸಾ ವರ್ಗವು ಪ್ರವಾಸಿ ಉದ್ದೇಶ,ವ್ಯವಹಾರ ಮಾತುಕತೆ ಮತ್ತು ಸಮ್ಮೇಳನಗಳಿಗಾಗಿ ವೀಸಾಗಳನ್ನೊಳಗೊಂಡಿದೆ.

► ಯುಎಇ

ಇದು ಭಾರತೀಯ ಹೂಡಿಕೆದಾರರು ಹಾಗೂ ವಿಜ್ಞಾನ,ಔಷಧಿ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿಯ ವಿಶೇಷಜ್ಞರು ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದಾದ ಇನ್ನೊಂದು ತಾಣವಾಗಿದೆ. ಯುಎಇ ಈಗ ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ 10 ವರ್ಷಗಳ ಕೆಲಸದ ವೀಸಾವನ್ನು ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News