ದಕ್ಷಿಣ ಕೊರಿಯಾದ ಚಿತ್ರವನ್ನು ಸಾಬರಮತಿ ನದಿ ತೀರ ಎಂದು ಟ್ವೀಟ್ ಮಾಡಿದ ಅಹ್ಮದಾಬಾದ್ ಮೇಯರ್!

Update: 2018-11-08 11:17 GMT

ಅಹ್ಮದಾಬಾದ್, ನ.8: ಅಹ್ಮದಾಬಾದ್ ಮುನಿಸಿಪಲ್ ಕಾರ್ಪೊರೇಶನ್‍ಗೆ ದೊಡ್ಡ ಮುಜುಗರವುಂಟು ಮಾಡುವ ಬೆಳವಣಿಗೆಯಲ್ಲಿ ಸಾಬರಮತಿ ನದಿ ತೀರ ಎಂದು ನಗರದ ಮೇಯರ್ ಬಿಜಲ್ ಪಟೇಲ್ ಟ್ವೀಟ್ ಮಾಡಿದ ಚಿತ್ರವೊಂದು ವಾಸ್ತವವಾಗಿ ದಕ್ಷಿಣ ಕೊರಿಯಾದ ಸಿಯೋಲ್ ನಗರದ್ದಾಗಿದೆ. ನವೆಂಬರ್ 6ರಂದು ಬಿಜಲ್ ಪಟೇಲ್ ಈ ನಿರ್ದಿಷ್ಟ ಫೋಟೋ ಟ್ವೀಟ್ ಮಾಡಿ, “ಇದು ಸಿಂಗಾಪುರ, ಮಲೇಷ್ಯಾ, ದುಬೈಯಲ್ಲ, ಇದು ನಮ್ಮ ಅಮ್ದಾವಾದ್ ನಗರ #ಮರುಅಮ್ದಾವಾದ್ #ರಿವರ್ ಫ್ರಂಟ್ ರಾತ್ರಿ ವೈಮಾನಿಕ ದೃಶ್ಯ” ಎಂದು ಬರೆದಿದ್ದರು.

ಈ ನಿರ್ದಿಷ್ಟ ಚಿತ್ರವನ್ನು ಮೊದಲು ಟ್ವೀಟ್ ಮಾಡಿದ ಟ್ವಿಟರ್ ಹ್ಯಾಂಡಲ್ ಮನೀಶ್ ತಿಲ್ವಾನಿ ಎಂಬವರಿಗೆ ಸೇರಿತ್ತಲ್ಲದೆ ಈ ವ್ಯಕ್ತಿಯನ್ನು ಸಚಿವ ಪಿಯುಷ್ ಗೋಯಲ್ ಕಚೇರಿ ಸಹಿತ ಹಲವು ಬಿಜೆಪಿ ನಾಯಕರು ಫಾಲೋ ಮಾಡುತ್ತಿದ್ದಾರೆ. ಈ ವ್ಯಕ್ತಿಯ ಟ್ವೀಟ್ ಅನ್ನೇ ಅಹ್ಮದಾಬಾದ್ ಮೇಯರ್ ಟ್ವೀಟ್ ಮಾಡಿದ್ದರು. ಆದರೆ ವೈಮಾನಿಕದ ಆಂಗ್ಲ ಪದ ‘ಏರಿಯಲ್’ ಅನ್ನು ಮಾತ್ರ ತಪ್ಪಾಗಿ  ಉಚ್ಛರಿಸಲಾಗಿದೆ. ವಾಸ್ತವವಾಗಿ ತಿಲ್ವಾನಿಯ ಟ್ವೀಟ್‍ನಲ್ಲಿ ಮೇಯರ್ ಅವರನ್ನೂ ಟ್ಯಾಗ್ ಮಾಡಲಾಗಿತ್ತು.

ಸೋಶಿಯಲ್ ಮೀಡಿಯಾ ಕನ್ವೀನರ್ ಬಿಜೆವೈಎಂ ಕರ್ನಾವತಿ ಎಂಬ ಪರಿಚಯವಿರುವ ಟ್ವಿಟರಿಗ ವೃಶಾಂತ್ ಮರ್ಚಂಟ್ ಅವರು ಕೂಡ ಇಂತಹುದೇ ಟ್ವೀಟ್ ಮಾಡಿದ್ದರು.

altnews.in ಈ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‍ಗೆ ಒಡ್ಡಿದಾಗ ಇದೇ ಚಿತ್ರ  ಪ್ರವಾಸಿ ವೆಬ್‍ಸೈಟ್ ಟ್ರಿಪ್ ಅಡ್ವೈಸರ್‍ನಲ್ಲಿರುವುದು ಪತ್ತೆಯಾಗಿತ್ತು. ಈ ಚಿತ್ರವನ್ನು ದಕ್ಷಿಣ ಕೊರಿಯಾದ ಹನ್ ನದಿಯ ಸಮೀಪದ ರೆಸ್ಟಾರೆಂಟ್ `ವಾಕಿಂಗ್ ಆನ್ ದಿ ಕ್ಲೌಡ್' ಇಲ್ಲಿಂದ ಕ್ಲಿಕ್ಕಿಸಲಾಗಿತ್ತು.

ಇದೇ ಸ್ಥಳ ಹಗಲು ಹೊತ್ತಿನಲ್ಲಿ ಹೇಗೆ ಕಾಣಿಸುತ್ತಿದೆ ಎಂಬ ಚಿತ್ರವೂ ಗೂಗಲ್‍ನಲ್ಲಿ ಲಭ್ಯವಾಗಿದೆ. ವಿಕಿಪೀಡಿಯಾದಲ್ಲಿ ಇದನ್ನು ದಕ್ಷಿಣ ಕೊರಿಯಾದ ಸಿಯೋಲ್ ನಗರದ ಹನ್ ನದಿಯದ್ದೆಂದು ಬಣ್ಣಿಸಲಾಗಿದೆ. ಇದಕ್ಕೂ ಮುಂಚೆ ಛತ್ತೀಸಗಢ ಬಿಜೆಪಿ ಅಕ್ಟೋಬರ್ ತಿಂಗಳಲ್ಲಿ ಗುಜರಾತ್ ಮತ್ತು ಕೆನಡಾದ ಚಿತ್ರಗಳನ್ನು ಬಳಸಿ ರಾಜ್ಯದ ಹೆದ್ದಾರಿಗಳು ಹೇಗೆ ಸುಧಾರಿಸಿವೆ ಎಂದು ಹೇಳಲು ಪ್ರಯತ್ನಿಸಿತ್ತು.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News