×
Ad

ದಂಡುಪಾಳ್ಯ ತಂಡದ ಪ್ರಮುಖ ಸದಸ್ಯ ತಿಮ್ಮ ಕೊನೆಗೂ ಜೈಲಿನಿಂದ ಬಿಡುಗಡೆ

Update: 2018-11-08 19:48 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.8: ಸರಣಿ ಕೊಲೆ ಆರೋಪದಲ್ಲಿ ಇಡೀ ರಾಜ್ಯವೇ ಭಯಗೊಳ್ಳುವಂತೆ ಮಾಡಿದ್ದ ದಂಡುಪಾಳ್ಯ ಹಂತಕರ ತಂಡದ ಪ್ರಮುಖ ಸದಸ್ಯ ತಿಮ್ಮ ಜೈಲಿನಿಂದ ಬಿಡುಗಡೆಯಾಗಿದ್ದಾನೆ. 

ದಂಡುಪಾಳ್ಯ ತಂಡದ ತಿಮ್ಮ ಬರೋಬ್ಬರಿ 19 ವರ್ಷ ಜೈಲುವಾಸ ಅನುಭವಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದಾನೆ. ಅಪರಾಧ ಕೃತ್ಯ ನಡೆದಾಗ ಹಾಗೂ ಪೊಲೀಸ್ ಬಂಧನದ ವೇಳೆ ಅಪ್ರಾಪ್ತನಾಗಿದ್ದ ಎಂಬ ಕಾರಣಕ್ಕೆ ಮತ್ತು ಯಾವೊಂದು ಪ್ರಕರಣವೂ ಬಾಕಿಯಿರದ ಕಾರಣ ತಿಮ್ಮನನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ.

ಹಾಸನದ ಮೇರಿ ಫಿಲೋಮಿನ ಅವರ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಹಾಗೂ ಹಲಸೂರಿನ ನಿವಾಸಿ ರಂಗನಾಥ್ ಕೊಲೆ ಸೇರಿ ಒಟ್ಟು ಐದು ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ತಿಮ್ಮನಿಗೆ ಅಧೀನ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, 2014ರಲ್ಲಿ ಹೈಕೋರ್ಟ್ ಗಲ್ಲು ಶಿಕ್ಷೆ ರದ್ದುಪಡಿಸಿದರೆ, ಉಳಿದ ಪ್ರಕರಣ ಸಂಬಂಧ ತಾನು ಬಾಲಾಪರಾಧಿ ಎಂದು ಹೇಳಿಕೊಂಡಿದ್ದ. 2014ರಲ್ಲಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ತಿಮ್ಮ, ನಾನು 1983ರ ಆ.16ರಂದು ಹುಟ್ಟಿದ್ದೆ. 1999ರ ಅ.9ರಂದು ಪೊಲೀಸರು ನನ್ನನ್ನು ಬಂಧಿಸಿದರು. ಆಗ ನನಗೆ ಕೇವಲ ಹದಿನಾಲ್ಕೂವರೆ ವರ್ಷವಾಗಿತ್ತು. ಹೀಗಾಗಿ, ನಾನು ಬಾಲಾಪರಾಧಿ. ಕಾನೂನಿನಲ್ಲಿ ಬಾಲಾಪರಾಧಿಗಳಿಗೆ ಕೇವಲ ಮೂರು ವರ್ಷ ಮಾತ್ರ ಶಿಕ್ಷೆ ವಿಧಿಸಲು ಅವಕಾಶವಿದೆ. ಈಗಾಗಲೇ ನಾನು 16 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದು, ಜೈಲಿನಿಂದ ಬಿಡುಗಡೆ ಮಾಡಲು ಆದೇಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದ.

ಆ ಮನವಿ ಪರಿಗಣಿಸಿದ್ದ ಹೈಕೋರ್ಟ್, ತಿಮ್ಮ ಕಾನೂನು ಸಂಘರ್ಷಕ್ಕೊಳಗಾಗಿರುವ ಬಾಲಕ ಎಂದು ತೀರ್ಮಾನಿಸಿ, ಆತನನ್ನು ಬಿಡುಗಡೆಗೊಳಿಸಲು 2017ರ ಮಾರ್ಚ್‌ನಲ್ಲಿ ಆದೇಶಿಸಿತ್ತು. ಆದರೆ, ಬಿಡುಗಡೆಗೆ ಎರಡು ಪ್ರಕರಣ ಅಡ್ಡಿಯಾಗಿದ್ದವು.

ಈಚೆಗೆ ಹೈಕೋರ್ಟ್, ಆ ಎರಡು ಪ್ರಕರಣಗಳಲ್ಲಿ ತಿಮ್ಮನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ರದ್ದುಪಡಿಸಿ, ಇತರೆ ಪ್ರಕರಣಗಳಲ್ಲಿ ಬಂಧನದ ಅಗತ್ಯವಿಲ್ಲವಾದರೆ, ಆತನನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಹೀಗಾಗಿ, ಆತನ ವಿರುದ್ಧ ಯಾವುದೇ ಪ್ರಕರಣ ಬಾಕಿಯಿರದ ಕಾರಣ ಬಿಡುಗಡೆ ಭಾಗ್ಯ ಕಲ್ಪಿಸಲಾಗಿದೆ.

ಬಂಧನದ ವೇಳೆ ತಿಮ್ಮನ ವಯಸ್ಸು ಹದಿನಾಲ್ಕುವರೆ ವರ್ಷ. ಈಗ 35 ವರ್ಷ. ತಿಮ್ಮ ತನ್ನ ಜೀವನದ 20 ವರ್ಷಗಳನ್ನು ಜೈಲಿನಲ್ಲಿಯೆ ಕಳೆದಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News