ಪಟಾಕಿ ಬಿಟ್ಹಾಕಿ ಜಾಗೃತಿಯಿಂದ ಪಟಾಕಿ ವಹಿವಾಟು ಕುಸಿತ

Update: 2018-11-08 15:45 GMT

ಬೆಂಗಳೂರು, ನ. 8: ಪಟಾಕಿ ಬಿಟ್ಹಾಕಿಯಂತಹ ಜಾಗೃತಿ ಕಾರ್ಯಕ್ರಮ ಹಾಗೂ ಜನತೆ ಪರಿಸರ ಸ್ನೇಹಿ ಹಬ್ಬದ ಮೊರೆ ಹೋದ ಪರಿಣಾಮ ಈ ವರ್ಷ ಪಟಾಕಿ ವಹಿವಾಟು ಶೇ.20ರಿಂದ 30ರಷ್ಟು ಕುಸಿತ ಉಂಟಾಗಿರುವುದು ಪಟಾಕಿ ವ್ಯಾಪಾರಿಗಳಲ್ಲಿ ಬೇಸರ ತಂದಿದೆ.

ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ವಿವಿಧ ಸ್ವಯಂ ಸೇವಕ ಸಂಘಟನೆಗಳು ಪಟಾಕಿ ಸಿಡಿಸದಂತೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಪಟಾಕಿ ವಹಿವಾಟು ಕಡಿಮೆಯಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.30ಕ್ಕಿಂತ ಕಡಿಮೆ ವಹಿವಾಟು ನಡೆದಿದೆ. ಈ ವರ್ಷ ನಿಗದಿತ ಸಮಯವಷ್ಟೇ ಪಟಾಕಿ ಸಿಡಿಸಬೇಕೆಂಬ ಸುಪ್ರೀಂ ಕೋರ್ಟ್ ಆದೇಶದ ಪರಿಣಾಮದಿಂದ ವ್ಯಾಪಾರ ಇಷ್ಟು ಕುಸಿದಿದೆ ಎಂದು ವ್ಯಾಪಾರಿಗಳು ಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ಪಟಾಕಿ ಖರೀದಿಸಲು ಬಂದರೂ, ಹೆಚ್ಚು ಶಬ್ದ ಹಾಗೂ ಮಾಲಿನ್ಯ ಉಂಟು ಮಾಡದ ಪಟಾಕಿಗಳನ್ನು ಕೇಳುತ್ತಾರೆ. ಅವರಿಗೆ ಅಂತಹ ಪಟಾಕಿ ಎಲ್ಲಿಂದ ತಂದು ಕೋಡೋಣ ಎಂದು ಪಟಾಕಿ ವ್ಯಾಪಾರಿಯೊಬ್ಬರು ಹೇಳಿದರು.

ಸುಪ್ರೀಂ ಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಬಹುದು ಎಂಬ ಕಾರಣದಿಂದ ಬೇಡಿಕೆ ಕಡಿಮೆಯಾಗಿರಬಹುದು, ಜತೆಗೆ ಜನರು ಕಡಿಮೆ ಹೊಗೆ, ವಾಸನೆ ಮತ್ತು ಶಬ್ದದ ಪಟಾಕಿ ಕೇಳುತ್ತಿರಬಹುದು. ಈ ವರ್ಷ ಬರುವ ಬೇಡಿಕೆ ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷ ಅಂತಹ ಪಟಾಕಿ ಸಿದ್ಧಪಡಿಸಿಕೊಡಲು ತಯಾರಿಕೆಗೆ ಬೇಡಿಕೆ ಇಡಲಾಗುವುದು ಎಂದು ವರ್ತಕರು ತಿಳಿಸಿದ್ದಾರೆ.

ಕಡಿಮೆ ಮಾಲಿನ್ಯ: ಕಳೆದ ಬಾರಿಯ ದೀಪಾವಳಿ ಸಂದರ್ಭದಲ್ಲಿ ಉಂಟಾದ ಮಾಲಿನ್ಯ ಪ್ರಮಾಣಕ್ಕೆ ಹೋಲಿಸಿದರೆ, ಈ ಬಾರಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಕಳೆದ ಬಾರಿ ನಗರದ ರೈಲು ನಿಲ್ದಾಣ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಸೇರಿ ಇನ್ನಿತರ ಕಡೆಗಳಲ್ಲಿ ಮಾಲಿನ್ಯ ಪ್ರಮಾಣ ಶೇ.200 ಹೆಚ್ಚಾಗಿತ್ತು. ಅದು ಈ ಬಾರಿ ಕಡಿಮೆಯಾಗಿದೆ.

ದೊಮ್ಮಲೂರು ಕೇಂದ್ರದಲ್ಲಿ 103 ಮೈ.ಗ್ರಾ, ಕೆಆರ್ ವೃತ್ತ 86, ಮೈಸೂರು ರಸ್ತೆ 69.4, ಖಾಜಿ ಸೊಣ್ಣೇನಹಳ್ಳಿ, ಐಟಿಪಿಎಲ್ 86 ಮೈ.ಗ್ರಾಂ ಮಾಲಿನ್ಯ ದಾಖಲಾಗಿತ್ತು. ಉಳಿದಂತೆ ಯಶವಂತಪುರ, ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ನಿಗದಿಗಿಂತಲೂ ಕಡಿಮೆ ಪ್ರಾಣದ ಮಾಲಿನ್ಯ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News