ಪಾಲನೆಯಾಗದ ಮೇಯರ್ ಆದೇಶ: ರಾಶಿಯಾದ ಹಬ್ಬದ ಕಸ

Update: 2018-11-08 15:49 GMT

ಬೆಂಗಳೂರು, ನ. 8: ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿಗಳು ಬೆಂಗಳೂರಿನಲ್ಲಿಯೇ ಇರಬೇಕು. ಒಂದೊಮ್ಮೆ ಹೊರಗೆ ಹೋದರೂ ನಿರಂತರವಾಗಿ ಸಂಪರ್ಕದಲ್ಲಿದ್ದು, ಶೀಘ್ರ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮೇಯರ್ ಗಂಗಾಂಬಿಕೆ ಆದೇಶಿಸಿದ್ದರು. ಆದರೆ, ಮೂರು ದಿನಗಳಿಂದ ನಗರದಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗಿದ್ದರೂ ವಿಲೇವಾರಿಯಾಗಿಲ್ಲ.

ಹಬ್ಬದ ಕಸ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗದ ಕಾರಣ ಕಸದ ರಾಶಿ ಹೆಚ್ಚುವಂತಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ದಿನಗಳಿಗಿಂತಲೂ ಶೇ.40ರಷ್ಟು ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗುತ್ತದೆ. ಕೆಆರ್ ಮಾರುಕಟ್ಟೆ, ಮಲ್ಲೇಶ್ವರ, ಮಡಿವಾಳ, ಕೆಆರ್ ಪುರ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಟನ್‌ಗಟ್ಟಲೆ ತ್ಯಾಜ್ಯ ಶೇಖರಣೆಗೊಂಡಿದೆ. ಹಬ್ಬದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಸರಿಯಾಗಿ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿಲ್ಲದಿರುವುದರಿಂದ ಕಸದ ಸಮಸ್ಯೆ ಹೆಚ್ಚಾಗುತ್ತದೆ.

ಹೊಸ ಪ್ರಯತ್ನಕ್ಕೆ ಚಿಂತನೆ: ತ್ಯಾಜ್ಯ ಸಮಸ್ಯೆ ನಿವಾರಣೆಗೆ ಹಲವು ಕ್ರಮ ಕೈಗೊಳ್ಳುತ್ತಿರುವ ಬಿಬಿಎಂಪಿ ಇದೀಗ ಎರಡು ಪಾಳಿಯಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಮಾಡಲು ಚಿಂತನೆ ನಡೆಸಿದೆ. ಸಮಸ್ಯೆ ನಿವಾರಣೆಗೆ ತ್ಯಾಜ್ಯ ವಿಂಗಡಣೆ, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದುಬಾರಿ ದಂಡ ವಿಧಿಸುತ್ತಿದೆ. ಆದರೂ, ಬೆಳಗ್ಗೆ ತ್ಯಾಜ್ಯ ಸಂಗ್ರಹಿಸಿದ ನಂತರ ಮಧ್ಯಾಹ್ನ ಆಗುವುದರೊಳಗಾಗಿ ಅಷ್ಟೇ ಪ್ರಮಾಣದ ತ್ಯಾಜ್ಯ ರಸ್ತೆ ಬದಿ ಹಾಗೂ ಬ್ಲಾಕ್‌ಸ್ಪಾಟ್‌ಗಳಲ್ಲಿ ಶೇಖರಣೆಯಾಗುತ್ತಿದೆ. ಹೀಗಾಗಿ ಬೆಳಗ್ಗೆ ಹಾಗೂ ಮಧ್ಯಾಹ್ನದಂತೆ ಎರಡು ಪಾಳಿಯಲ್ಲಿ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡುವ ಕುರಿತು ಬಿಬಿಎಂಪಿ ಚರ್ಚೆ ನಡೆಸುತ್ತಿದೆ. ಇದು ಇನ್ನೂ ಚರ್ಚಾ ಹಂತದಲ್ಲಿದ್ದು, ಶೀಘ್ರದಲ್ಲಿ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News