ನೋಟು ನಿಷೇಧಕ್ಕೆ ಎರಡು ವರ್ಷ: ಕಾಂಗ್ರೆಸ್ ಕಾರ್ಯಕರ್ತರಿಂದ ಮೋದಿ ಅಣಕು ಶವಯಾತ್ರೆ

Update: 2018-11-08 15:56 GMT

ಬೆಂಗಳೂರು, ನ.8: ಗರಿಷ್ಠ ಮುಖ ಬೆಲೆಯ ನೋಟ್ ನಿಷೇಧದಿಂದ ಜನಸಾಮಾನ್ಯರು ಇಂದಿಗೂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕೇಂದ್ರ ಸರಕಾರದ ಅನೀತಿಯೆ ಕಾರಣವೆಂದು ಆರೋಪಿಸಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಣಕು ಶವಯಾತ್ರೆ ನಡೆಸಿ ಪ್ರತಿಭಟಿಸಿದರು.

ಕೇಂದ್ರ ಸರಕಾರ ಗರಿಷ್ಠ ಮುಖ ಬೆಲೆಯ ನೋಟು ನಿಷೇಧಿಸಿ ಎರಡು ವರ್ಷ ಆಗಿರುವ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಕಾರ್ಯಕರ್ತರು ಹಣೆಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಗರದ ಆರ್‌ಬಿಐ ಮುಂಭಾಗ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ, ನರೇಂದ್ರ ಮೋದಿ ಚೋರ್ ಹೈ ಎಂಬ ಘೋಷಣೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಪಾಟೀಲ್ ಮಾತನಾಡಿ, ಕೇಂದ್ರ ಸರಕಾರ ನೋಟು ಅಮಾನ್ಯಗೊಳಿಸಿ ಬಡವರಿಗೆ ಸಾಕಷ್ಟು ಸಮಸ್ಯೆ ತಂದಿಟ್ಟಿತು. ನೂರಾರು ಮಂದಿ ಎಟಿಎಂ, ಬ್ಯಾಂಕ್ ಮುಂದೆ ಹಣ ಬದಲಾಯಿಸಿಕೊಳ್ಳಲು ಸರದಿ ಸಾಲಲ್ಲಿ ನಿಂತು ಅಸ್ವಸ್ಥರಾಗಿ ಸಾವನ್ನಪ್ಪಿದರು. ಹೀಗೆ ಬಡವರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದೆ ನೋಟು ನಿಷೇಧದ ಹೆಚ್ಚುಗಾರಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಕೇವಲ ಸುಳ್ಳಿನ ಸರಮಾಲೆಯನ್ನೆ ಹೆಣೆಯುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಯಾವ ಭರವಸೆಯನ್ನು ಈಡೇರಿಸಿಲ್ಲ. ಕಪ್ಪುಹಣ ತರುವ ಭರವಸೆ ಈಡೇರಿಸಲಿಲ್ಲ. ಜಿಎಸ್ಟಿ ಹೆಸರಲ್ಲಿ ಜನರಿಗೆ ಬೇಡದ ಭಾರವಾದ ತೆರಿಗೆ ಹೊರಿಸಲಾಗಿದೆ ಎಂದು ಅವರು ಹೇಳಿದರು.

ಜನವಿರೋಧಿ ಕೇಂದ್ರ ಸರಕಾರದ ವಿರುದ್ಧ ನಮ್ಮ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಕಿತ್ತೊಗೆಯುವವರೆಗೂ ನಾವು ವಿರಮಿಸುವುದಿಲ್ಲ. ಮನೆ ಮನೆಗೆ ಮೋದಿ ಸರಕಾರದ ದುರಾಡಳಿತದ ವಿವರಗಳನ್ನು ತಲುಪಿಸುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News