ಗೃಹಸಾಲದ ಕಂತುಗಳನ್ನು ಕಟ್ಟಿಲ್ಲವೇ?

Update: 2018-11-09 11:13 GMT

ಪ್ರತಿಯೊಬ್ಬರೂ ಸ್ವಂತ ಮನೆಯ ಕನಸು ಹೊಂದಿರುತ್ತಾರೆ. ಮನೆ ಅಥವಾ ಫ್ಲಾಟ್ ಖರೀದಿಗೆ ಬೃಹತ್ ಬಂಡವಾಳ ಅಗತ್ಯ. ಹೀಗಾಗಿ ಹೆಚ್ಚಿನವರು ಸಾಲ ಪಡೆದುಕೊಂಡು ತಮ್ಮದೊಂದು ಗೂಡನ್ನು ಮಾಡಿಕೊಳ್ಳುತ್ತಾರೆ. ಬ್ಯಾಂಕುಗಳಿಂದ ಅಥವಾ ಎನ್‌ಬಿಎಫ್‌ಸಿಗಳಿಂದ ಪಡೆದ ಗೃಹಸಾಲವನ್ನು ಮಾಸಿಕ ಕಂತುಗಳ ಮೂಲಕ ಮರುಪಾವತಿ ಮಾಡಬೇಕಾಗುತ್ತದೆ. ಆದರೆ ಹೆಚ್ಚುತ್ತಲೇ ಹೋಗುವ ಸಂಸಾರ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣ ವೆಚ್ಚ,ಅನಿರೀಕ್ಷಿತ ಅನಾರೋಗ್ಯ,ನಿರುದ್ಯೋಗ ಇವೇ ಮುಂತಾದ ಕಾರಣಗಳಿಂದ ಆದಾಯ ಸಾಲದೆ ಸಾಲದ ಕಂತು ಬಾಕಿಯುಳಿಯುವ ಸಂದರ್ಭಗಳೂ ಇರುತ್ತವೆ. ಒಂದು ಕಂತು ಬಾಕಿಯುಳಿದುಕೊಂಡಾಗ ಮುಂದಿನ ತಿಂಗಳಲ್ಲಿ ಅದನ್ನೂ ಸೇರಿಸಿ ಕಂತು ಪಾವತಿಸಿದರೆ ಬಚಾವ್. ಆದರೆ ಇದು ಸಾಧ್ಯವಾಗದಿದ್ದರೆ ಬಾಕಿ ಬೆಳೆಯುತ್ತಲೇ ಹೋಗುತ್ತದೆ ಮತ್ತು ಸಾಲ ನೀಡಿದ ಸಂಸ್ಥೆಯ ರಿಕವರಿ ಏಜೆಂಟ್‌ಗಳು ಸಾಲಗಾರನ ಮನೆಯ ಬಾಗಿಲು ಬಡಿಯಲು ಆರಂಭಿಸುತ್ತಾರೆ.

ಸಾಲಗಾರ ಆರು ತಿಂಗಳವರೆಗೂ ಸಾಲದ ಕಂತುಗಳನ್ನು ಕಟ್ಟದಿದ್ದರೆ ಸಾಮಾನ್ಯವಾಗಿ ಬ್ಯಾಂಕುಗಳು ಮರುಪಾವತಿಯನ್ನು ಕ್ರಮಬದ್ಧಗೊಳಿಸಿಕೊಳ್ಳಲು ಎರಡು ತಿಂಗಳ ಹೆಚ್ಚಿನ ಕಾಲಾವಕಾಶವನ್ನು ನೀಡುತ್ತವೆ. ಈ ಅವಧಿಯಲ್ಲಿಯೂ ಸಾಲದ ಕಂತುಗಳನ್ನು ಮರುಪಾವತಿಸಲು ಸಾಲಗಾರ ವಿಫಲನಾದರೆ ಬ್ಯಾಂಕು ಆತನ ಸಾಲವನ್ನು ಅನುತ್ಪಾದಕ ಆಸ್ತಿ(ಎನ್‌ಪಿಎ) ಎಂದು ಘೋಷಿಸುತ್ತದೆ. ಬ್ಯಾಂಕು ತನ್ನ ಸಾಲವನ್ನು ವಸೂಲಿ ಮಾಡಲು ಮತ್ತು ಎನ್‌ಪಿಎಗಳನ್ನು ತಗ್ಗಿಸಿಕೊಳ್ಳಲು ಸಾಲಗಾರನ ಆಸ್ತಿ/ಸಹಭದ್ರತೆಯನ್ನು ಹರಾಜು ಹಾಕಬಹುದು.

ಬ್ಯಾಂಕುಗಳು ಕಾನೂನು ಮಾರ್ಗವನ್ನು ಅನುಸರಿಸುವ ಬದಲು ಹೇಗಾದರೂ ತಮ್ಮ ಹಣವನ್ನು ವಾಪಸ್ ಪಡೆದುಕೊಳ್ಳಲು ಹೆಚ್ಚಿನ ಆಸಕ್ತಿ ಹೊಂದಿರುತ್ತವೆ. ಕಾನೂ ಮಾರ್ಗವನ್ನು ಅನುಸರಿಸುವುದು ಮನೆಯನ್ನು ಹರಾಜು ಹಾಕುವುದನ್ನು ಒಳಗೊಂಡಿರುತ್ತದೆ ಮತ್ತು ಇದು ಸಮಯಾವಕಾಶವನ್ನು ಬೇಡುತ್ತದೆ. ಹೀಗಾಗಿ ಬ್ಯಾಂಕುಗಳು ಆಸ್ತಿಯ ಕುರಿತು ಯಾವುದೇ ಕಾನೂನು ಕ್ರಮವನ್ನು ಕೈಗೊಳ್ಳುವ ಮುನ್ನ ಕನಿಷ್ಠ ಆರು ತಿಂಗಳವರೆಗಾದರೂ ತಮ್ಮ ರಿಕವರಿ ಏಜೆಂಟ್‌ಗಳ ಮೂಲಕ ಸಾಲ ಮರುವಸೂಲಿಗೆ ಪ್ರಯತ್ನಿಸುತ್ತವೆ. ಹೀಗೆ ಸಾಲ ವಸೂಲಿಗಾರರು ಮನೆ ಬಾಗಿಲಿಗೆ ಬಂದಾಗ ಸಾಲಗಾರರಿಗೂ ತಮ್ಮದೇ ಆದ ಕೆಲವು ಹಕ್ಕುಗಳಿವೆ. ಇವುಗಳ ಕುರಿತು ಮಾಹಿತಿಯಿಲ್ಲಿದೆ....

► ಗುರುತು ದೃಢಪಡಿಸಿಕೊಳ್ಳುವ ಹಕ್ಕು

ರಿಕವರಿ ಏಜೆಂಟ್‌ಗಳ ಸೋಗಿನಲ್ಲಿ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಲ ವಸೂಲಿ ಮಾಡುವವರು ಮನೆಬಾಗಿಲಿಗೆ ಬಂದಾಗ ಅವರೊಂದಿಗೆ ಮಾತು ಆರಂಭಿಸುವ ಮುನ್ನ ಬ್ಯಾಂಕುಗಳು ಅಥವಾ ಎನ್‌ಬಿಎಫ್‌ಸಿಗಳು ಅವರಿಗೆ ಒದಗಿಸಿರುವ ಗುರುತು ಚೀಟಿಗಳನ್ನು ಪರೀಕ್ಷಿಸಿ ದೃಢ ಪಡಿಸಿಕೊಳ್ಳ್ಳುವ ಹಕ್ಕನ್ನು ಸಾಲಗಾರರು ಹೊಂದಿರುತ್ತಾರೆ.

► ಖಾಸಗಿತನದ ಹಕ್ಕು

ಸಾಲಗಾರರ ಈ ಹಕ್ಕಿನನ್ವಯ ರಿಕವರಿ ಏಜೆಂಟ್‌ಗಳು ಸಾಲಗಾರರು ಬಾಕಿಯಿರಿಸಿರುವ ಬಾಕಿಗಳ ಕುರಿತು ಇತರರೊಂದಿಗೆ ಮಾಹಿತಿಗಳನ್ನು ಹಂಚಿಕೊಳ್ಳುವಂತಿಲ್ಲ ಅಥವಾ ಚರ್ಚಿಸುವಂತಿಲ್ಲ. ಅವರು ಹಾಗೆ ಮಾಡಿದ್ದು ಕಂಡುಬಂದರೆ ಸಾಲಗಾರರು ಅವರ ವಿರುದ್ಧ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ದೂರು ಸಲ್ಲಿಸಬಹುದು ಮತ್ತು ಕಾನೂನು ಕ್ರಮವನ್ನೂ ಕೈಗೊಳ್ಳಬಹುದು.

► ಮಾನವೀಯ ವರ್ತನೆಯ ಹಕ್ಕು

ಸಾಲಗಾರನೊಂದಿಗೆ ವ್ಯವಹರಿಸುವಾಗ ರಿಕವರಿ ಏಜೆಂಟ್‌ಗಳು ಸಭ್ಯತನದಿಂದ ಮತ್ತು ನಾಗರಿಕ ರೀತಿಯಲ್ಲಿ ವರ್ತಿಸುವುದು ಅಗತ್ಯವಾಗಿದೆ. ಅವರು ಉದ್ಧಟತನವನ್ನು ಪ್ರದರ್ಶಿಸುವಂತಿಲ್ಲ ಮತ್ತು ಯಾವುದೇ ರೀತಿಯಲ್ಲಿ ಬೆದರಿಕೆಗಳನ್ನೊಡ್ಡುವಂತಿಲ್ಲ. ಸಾಲಗಾರರ ಖಾಸಗಿ ಸಮಯವನ್ನು ಗೌರವಿಸಿ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು ಬೆಳಿಗ್ಗೆ ಏಳು ಗಂಟೆಯಿಂದ ಸಂಜೆ ಏಳು ಗಂಟೆಯವರೆಗಿನ ಅವಧಿಯಲ್ಲಿ ಮಾತ್ರ ಸಾಲಗಾರರನ್ನು ಸಂಪರ್ಕಿಸುವಂತೆ ತಮ್ಮ ಏಜೆಂಟರಿಗೆ ಸ್ಪಷ್ಟ ನಿರ್ದೇಶಗಳನ್ನು ನೀಡಿರುತ್ತವೆ. ಏಜೆಂಟರು ಇದನ್ನು ಉಲ್ಲಂಘಿಸಿದರೆ ಸಾಲಗಾರರು ಎಲ್ಲ ಸಾಕ್ಷಾಧಾರಗಳೊಂದಿಗೆ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವ ಸ್ವಾತಂತ್ರವನ್ನು ಹೊಂದಿರುತ್ತಾರೆ.

►►ಸಾಲಗಾರರು ಕಾನೂನುಬದ್ಧವಾಗಿ ಅನುಸರಿಸಬಹುದಾದ ಮಾರ್ಗಗಳು

ತಮ್ಮ ಗೃಹಸಾಲ ಕಂತುಗಳು ಬಾಕಿಯಿದ್ದಾಗ ಸಾಲಗಾರರು ತಮಗೆ ಸಾಲ ನೀಡಿದ ಬ್ಯಾಂಕು ಅಥವಾ ಎನ್‌ಬಿಎಫ್‌ಸಿಯನ್ನು ಸಂಪರ್ಕಿಸಿ ತಮ್ಮ ಹಾಲಿ ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ನೀಡಬೇಕು. ಇದು ಸಾಲಗಾರರ ಹಣಕಾಸು ಮಿತಿಯನ್ನು ರಿಕವರಿ ಏಜೆಂಟ್‌ಗಳು ತಿಳಿದುಕೊಳ್ಳಲು ಪುರಾವೆಯಾಗುತ್ತದೆ.

ಹಣಕಾಸು ಮುಗ್ಗಟ್ಟಿಗೆ ಸಿಲುಕಿದಾಗ ಸಾಲಗಾರರು ತಮ್ಮ ಬಾಕಿ ಸಾಲವನ್ನು ಪುನರ್‌ರಚಿಸಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಪ್ರಕರಣಗಳಲ್ಲಿ ಬ್ಯಾಂಕುಗಳು ಸಾಲದ ಪುನರ್‌ರಚನೆಯ ಸಂದರ್ಭದಲ್ಲಿ ಸಾಲವನ್ನು ಮರುಪಾವತಿಸಲು ಸಾಲಗಾರರಿಗೆ ಸುಲಭದ ಆಯ್ಕೆಗಳನ್ನು ನೀಡುತ್ತವೆ. ಅದಕ್ಕಾಗಿ ಬ್ಯಾಂಕಿನ ಪ್ರಸ್ತಾವವನ್ನು ಪರಿಶೀಲಿಸಿ,ವಿವರಗಳನ್ನು ಅರ್ಥ ಮಾಡಿಕೊಂಡ ಬಳಿಕ ಸಾಲಗಾರ ಅದಕ್ಕೆ ಸಮ್ಮತಿಯನ್ನು ಸೂಚಿಸಿ ಸುಸ್ತಿದಾರನಾಗುವ ಬದಲು ಕಂತು ಮರುಪಾವತಿಗಳನ್ನು ಮುಂದುವರಿಸಬಹುದು.

ಬ್ಯಾಂಕು ಅಥವಾ ಎನ್‌ಬಿಎಫ್‌ಸಿಗೆ ಯಾವುದೇ ಹಣವನ್ನು ಕಟ್ಟಲು ಸಾಧ್ಯವಾಗದ ಹಣಕಾಸು ಮುಗ್ಗಟ್ಟಿನ ಸ್ಥಿತಿಯನ್ನು ಸಾಲಗಾರ ಎದುರಿಸುತ್ತಿರಬಹುದು. ಇಂತಹ ಸಂದರ್ಭದಲ್ಲಿ ಆತ ಒಂದು ಬಾರಿ ಇತ್ಯರ್ಥ ಮಾಡುವ ಆಯ್ಕೆಗೆ ಮೊರೆ ಹೋಗಬಹುದು. ರಾಜಿ ಸಂಧಾನದ ಮೂಲಕ ಸ್ವಲ್ಪ ಮೊತ್ತವನ್ನು ಪಾವತಿಸಿ ತನ್ನ ಸಾಲವನ್ನು ಇತ್ಯರ್ಥ ಪಡಿಸಿಕೊಳ್ಳಬಹುದು. ಇಂತಹ ಪ್ರಕರಣಗಳಲ್ಲಿ ಬ್ಯಾಂಕುಗಳು ಅಸಲಿನ ಹೆಚ್ಚಿನ ಭಾಗ ಮತ್ತು ಶೇ.100ರಷ್ಟು ಬಡ್ಡಿಯನ್ನು ಮನ್ನಾ ಮಾಡಲು ಒಪ್ಪಿಕೊಳ್ಳುತ್ತವೆ. ಆದರೆ ಸಾಲಗಾರರು ಈ ಮಾರ್ಗವನ್ನು ಆಯ್ದುಕೊಂಡರೆ ಅವರಿಗೆ ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಲು ಸಾಧ್ಯವಾಗಿಲ್ಲ ಮತ್ತು ಒಂದು ಸಲದ ಹಣ ಪಾವತಿಯ ಮೂಲಕ ಅದನ್ನು ಇತ್ಯರ್ಥಗೊಳಿಸಲಾಗಿದೆ ಎನ್ನುವ ಅಂಶ ವನ್ನು ಅವರ ಕ್ರೆಡಿಟ್ ರಿಪೋರ್ಟ್ ಪ್ರತಿಬಿಂಬಿಸುತ್ತದೆ. ಹೀಗಾಗಿ ಇದು ಅವರ ಕ್ರೆಡಿಟ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಭವಿಷ್ಯದಲ್ಲಿ ಎಲ್ಲಿಯೂ ಸಾಲ ದೊರೆಯದಂತಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News