×
Ad

ಎಲೆಕ್ಟ್ರಿಕಲ್ ಬಸ್‌ಗಳ ಸಂಚಾರಕ್ಕೆ ಮುಖ್ಯಮಂತ್ರಿ ನಿರ್ಧಾರ?

Update: 2018-11-09 21:12 IST

ಬೆಂಗಳೂರು, ನ.9: ರಾಜ್ಯದ ರಾಜಧಾನಿಯಲ್ಲಿ ಎಲೆಕ್ಟ್ರಿಕಲ್ ಬಸ್‌ಗಳ ಕಾರ್ಯಾಚರಣೆ ವಿಚಾರಕ್ಕೆ ಸಂಬಂಧಿಸಿದ ಕಡತ ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿಗೆ ರವಾನೆಯಾಗಿದ್ದು, ಶೀಘ್ರ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ.

ಹಿಂದಿನ ಸರಕಾರದ ಅವಧಿಯಲ್ಲಿ ಬಿಎಂಟಿಸಿ ಕರೆದಿದ್ದ ಟೆಂಡರ್‌ನಲ್ಲಿ ಹೈದರಾಬಾದ್ ಮೂಲದ ಒಲೆಕ್ಟ್ರಾ ಕಂಪನಿ ಗುತ್ತಿಗೆ ಪಡೆದಿತ್ತು. ಆದರೆ, ಹೊಸ ಸರಕಾರ ಬಂದ ನಂತರ ಯೋಜನೆ ಬಗ್ಗೆ ಬಿಎಂಟಿಸಿ ಹಾಗೂ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭಿನ್ನಾಭಿಪ್ರಾಯ ಹೊಂದಿದ್ದರಿಂದ ಅದು ಜಾರಿಯಾಗಲು ವಿಳಂಬವಾಗಿತ್ತು. ಗುತ್ತಿಗೆ ಆಧಾರದಲ್ಲಿ ಅತಿಕಡಿಮೆ ದರದಲ್ಲಿ ನಿಗಮಕ್ಕೆ ಎಲೆಕ್ಟ್ರಿಕಲ್ ಬಸ್ ಸಿಗುತ್ತದೆ ಎಂದು ಬಿಎಂಟಿಸಿ ವಾದಿಸಿದ್ದರೆ, ಖಾಸಗಿ ಕಂಪನಿಗೆ ಏಕೆ ಲಾಭ ಮಾಡಿಕೊಡಬೇಕು ಎನ್ನುವುದು ಸಚಿವರ ಅಭಿಪ್ರಾಯವಾಗಿತ್ತು. ಅಲ್ಲದೆ, ಬಿಎಂಟಿಸಿ ಹಿರಿಯ ಅಧಿಕಾರಿಗಳ ವಿರುದ್ಧ ತಮ್ಮಣ್ಣ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಎಲ್ಲ ವಿಚಾರ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಾರಿಗೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಹಿರಂಗವಾಗಿತ್ತು.

ಎಂಡಿ ಬೆನ್ನಿಗೆ ಸಿಎಂ: ಸಭೆಯಲ್ಲಿ ಬಿಎಂಟಿಸಿ ಎಂಡಿ ವಿ.ಪೊನ್ನುರಾಜ್ ಪರವಾಗಿ ನಿಂತಿದ್ದ ಸಿಎಂ, ನಿಮ್ಮ (ಪೊನ್ನುರಾಜ್) ಪ್ರಾಮಾಣಿಕತೆ ಪ್ರಶ್ನಾತೀತ ಎಂದಿದ್ದರು. ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದ ಸಿಎಂ, ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಅಲ್ಲದೆ, ಸಂಬಂಧಿಸಿದ ಕಡತಗಳನ್ನು ಸಾರಿಗೆ ಇಲಾಖೆಗೆ ಬಿಎಂಟಿಸಿ ಸಲ್ಲಿಸಿದೆ. ಇದನ್ನು ಆಧರಿಸಿ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಮೊದಲ ಹಂತದಲ್ಲಿ 80 ಬಸ್: ಮೊದಲ ಹಂತದಲ್ಲಿ 80 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನಿಗಮ ಪಡೆಯಲಿದೆ. ಇದರಲ್ಲಿ 12 ಮೀ. ಉದ್ದದ 39 ಸೀಟು ಸಾಮರ್ಥ್ಯದ 60 ಎಸಿ ಬಸ್‌ಗಳು ಹಾಗೂ 9 ಮಿ. ಉದ್ದದ 31 ಸೀಟಿನ 20 ಎಸಿ ರಹಿತ ಬಸ್ ಇರಲಿವೆ. ಕಂಪನಿಯ ಎಲೆಕ್ಟ್ರಿಕಲ್ ಬಸ್‌ಗಳನ್ನು ನಿರ್ವಹಣೆ ಮಾಡಲಿದ್ದರೆ, ಪರ್ಮಿಟ್ ಮತ್ತು ವಿದ್ಯುತ್ ದರದ ಜವಾಬ್ದಾರಿಯನ್ನು ಬಿಎಂಟಿಸಿ ವಹಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News