ಟಿಪ್ಪು ಸುಲ್ತಾನ್ ಮಾದರಿ ಆಡಳಿತಗಾರ: ಸೂಫಿ ವಲಿಬಾ

Update: 2018-11-09 16:29 GMT

ಬೆಂಗಳೂರು, ನ.9: ಮೈಸೂರು ಪ್ರಾಂತ್ಯದಲ್ಲಿ ಆಡಳಿತ ನಡೆಸಿದ ಟಿಪ್ಪು ಸುಲ್ತಾನ್ ಕೋಮು ಸೌಹಾರ್ದತೆಯನ್ನು ಸ್ಥಾಪಿಸಿದ ಮಾದರಿ ಆಡಳಿತಗಾರನಾಗಿದ್ದ ಎಂದು ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಸೂಫಿ ವಲಿಬಾ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ನಗರದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಮೈದಾನದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತ್ಯುತ್ಸವ ಹಾಗೂ ಟಿಪ್ಪು ಸುಲ್ತಾನ್ ಏಕತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಆಡಳಿತ ಸಂದರ್ಭದಲ್ಲಿ ಮಸೀದಿಗಳ ಜೀರ್ಣೋದ್ಧಾರಕ್ಕಾಗಿ ಮಾಡಿದಷ್ಟೇ ಸೇವೆಯನ್ನು ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಮಾಡಿದ್ದಾರೆ ಎಂದು ಹೇಳಿದರು.

ಮಠ, ಮಂದಿರಗಳಿಗೆ ತಾರತಮ್ಯವಿಲ್ಲದೆ ಸೇವೆ ಸಲ್ಲಿಸಿದ ರಾಜ ಟಿಪ್ಪು ಸುಲ್ತಾನನಾಗಿದ್ದಾನೆ. ಶ್ರೀರಂಗಪಟ್ಟಣದ ರಂಗನಾಥ ದೇವಾಲಯ, ಮೇಲುಕೋಟೆಯ ನರಸಿಂಹ ದೇವಸ್ಥಾನ, ನಂಜನಗೂಡಿನ ಕಳಲೆಯ ಲಕ್ಷ್ಮಿಕಾಂತ ದೇವಾಲಯ, ಶೃಂಗೇರಿಯ ಶಾರದಾ ಪೀಠ ಜೀರ್ಣೋದ್ಧಾರ ಸೇರಿದಂತೆ ಹಲವಾರು ಮಠಗಳಿಗೆ, ಮಂದಿರಗಳಿಗೆ ಧನ ಸಹಾಯ ಮಾಡಿದ್ದಾರೆ. ಹಲವಾರು ಸ್ಥಳಗಳಿಗೆ ಅಪಾರ ರಕ್ಷಣೆ ಒದಗಿಸುವ ಮೂಲಕ ನಾಡಿನ ಸಂಪತ್ತನ್ನು ಉಳಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಟಿಪ್ಪು ಸುಲ್ತಾನ್ ತಮ್ಮ ಆಡಳಿತದ ನಿರ್ಣಾಯಕ ಸ್ಥಾನಗಳಲ್ಲಿ ಎಲ್ಲ ಧರ್ಮದವರನ್ನೂ ನೇಮಕ ಮಾಡಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಪತ್ರಗಳು, ಶಾಸನಗಳಿವೆ. ಆದರೆ, ಇತ್ತೀಚಿಗೆ ಟಿಪ್ಪುವನ್ನು ಒಂದು ಧರ್ಮಕ್ಕೆ ಸೀಮಿತ ಮಾಡುವ ಮೂಲಕ ಮತಾಂಧ ಎಂದು ಬಿಂಬಿಸಲಾಗುತ್ತಿದೆ. ಇದು ಅತ್ಯಂತ ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು.

ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಶೇಷಾದ್ರಿ ಭಟ್ ಮಾತನಾಡಿ, ಟಿಪ್ಪು ಸುಲ್ತಾನ್ ಕನ್ನಡ ನಾಡಿಗೆ ಅಪಾರವಾದ ಕೀರ್ತಿ ತಂದ ವ್ಯಕ್ತಿಯಾಗಿದ್ದಾರೆ. ತಮ್ಮ ಆಳ್ವಿಕೆಯಲ್ಲಿ ಹಿಂದೂ ದೇವಾಲಯಗಳಿಗೆ ನೀಡಿರುವಷ್ಟು ದೇಣಿಗೆ, ಸಹಾಯ ಬೇರೆ ಯಾವುದೇ ರಾಜರೂ ನೀಡಿಲ್ಲ. ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆಯಲು ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟ ಮಾಡಿದ್ದರು ಎಂದು ನುಡಿದರು.

ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಷೇಖ್ ಅಹಮದ್ ಮಾತನಾಡಿ, ರಾಜ್ಯ ಸರಕಾರ ಟಿಪ್ಪು ಜಯಂತಿಯನ್ನು ‘ಕೋಮು ಸೌಹಾರ್ದ ದಿನ’ವನ್ನಾಗಿ ಅಧಿಕೃತವಾಗಿ ಆಚರಣೆ ಮಾಡಲು ಆದೇಶ ಹೊರಡಿಸಬೇಕು. ಮೂಲಭೂತವಾದಿಗಳು ಅನಗತ್ಯವಾಗಿ ಮಾಡುವ ಅಪವ್ಯಾಖ್ಯಾನಗಳಿಗೆ ಕಿವಿಗೊಡಬಾರದು. ಟಿಪ್ಪು ಅನ್ನು ಸೌಹಾರ್ದ ಸಂಕೇತವಾಗಿ ಕಾಣಬೇಕು. ಹಿಂದೂ-ಮುಸ್ಲಿಮರ ನಡುವೆ ಒಡಕು ಮೂಡಿಸುವ ಹುನ್ನಾರಗಳನ್ನು ಹತ್ತಿಕ್ಕಬೇಕು ಎಂದು ಒತ್ತಾಯಪಡಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಹಿಂದೂ ಮುಸ್ಲಿಮ್, ಕ್ರೈಸ್ತ, ಸಿಖ್ ಗಣ್ಯರಿಗೆ ‘ಟಿಪ್ಪು ಏಕತಾ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಕರ್ನಾಟಕ ಅನುದಾನರಹಿತ ಅಲ್ಪಸಂಖ್ಯಾತರ ಶಾಲೆಗಳ ಒಕ್ಕೂಟದ ಅಧ್ಯಕ್ಷ ಡಾ.ಗುಲ್‌ಷಾದ್ ಅಹಮದ್, ಚಾಲಕರ ಸಂಘದ ಮುಹಮ್ಮದ್, ನವಾಬ್‌ಜಾನು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News