ದೀಪಾವಳಿ ಹಿನ್ನೆಲೆ: ಪಟಾಕಿ ಸಿಡಿಸುವಿಕೆಯಿಂದ ಮಿತಿಮೀರಿ ಮಾಲಿನ್ಯ; ಮಾಲಿನ್ಯ ನಿಯಂತ್ರಣ ಮಂಡಳಿ

Update: 2018-11-09 16:42 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.9: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಪಟಾಕಿ ಸಿಡಿಸುವಿಕೆಯಿಂದ ಹಲವು ಪ್ರದೇಶಗಳಲ್ಲಿ ಮಿತಿ ಮೀರಿ ವಾಯು ಹಾಗೂ ಶಬ್ದ ಮಾಲಿನ್ಯ ದಾಖಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಗರದ 7 ಭಾಗಗಳಲ್ಲಿ ನಿರಂತರ ವಾಯು ಪರಿವೇಷ್ಟಕಗಳ ಮೂಲಕ ತಪಾಸಣೆ ನಡೆಸಲಾಗಿದ್ದು, ಎಲ್ಲ 7 ಕೇಂದ್ರಗಳಲ್ಲಿ ಹೆಚ್ಚು ವಾಯುಮಾಲಿನ್ಯ ದಾಖಲಾಗಿದೆ. ನಗರ ರೈಲು ನಿಲ್ದಾಣದ ಸುತ್ತಮುತ್ತಲಿನ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಮಾಲಿನ್ಯ ಉಂಟಾಗಿದೆ ಎಂದು ಮಂಡಳಿ ತಿಳಿಸಿದೆ.

ಸುಪ್ರೀಂಕೋರ್ಟ್ ಪ್ರಕಾರ ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಿದೆ. ಆದರೂ, ನಗರದಲ್ಲಿ ಮಾಲಿನ್ಯ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಬೆಳಗ್ಗೆ 6ರಿಂದ ಮಾರನೇ ದಿನ ಬೆಳಗ್ಗೆ 6 ಗಂಟೆವರೆಗೆ ಮಾಲಿನ್ಯ ಕುರಿತು ಅಂಕಿ-ಅಂಶಗಳನ್ನು ಸಂಗ್ರಹಿಸಿದ್ದು, ಸುಮಾರು ನಾಲ್ಕು ಕೇಂದ್ರಗಳಲ್ಲಿ ಮಿತಿಗಿಂತಲೂ ಅಧಿಕ ಮಾಲಿನ್ಯವಾಗಿದ್ದರೆ, ಮೂರು ಕೇಂದ್ರಗಳಲ್ಲಿ ಕಡಿಮೆ ಹಾಗೂ ಅತಿಕಡಿಮೆ ಪ್ರಮಾಣದ ಮಾಲಿನ್ಯ ದಾಖಲಾಗಿದೆ.

ಕೋರ್ಟ್ ಆದೇಶ ಲೆಕ್ಕಿಸದ ಜನ: ಸುಪ್ರೀಂಕೋರ್ಟ್ ಮಾಲಿನ್ಯವನ್ನು ನಿಯಂತ್ರಣ ಮಾಡಬೇಕು ಎಂಬ ಉದ್ದೇಶದಿಂದ ರಾತ್ರಿ 8 ರಿಂದ 10 ರವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಿತ್ತು. ಆದರೆ, ನಗರದ ಜನತೆ ಕೋರ್ಟ್ ನೀಡಿದ್ದ ನಿರ್ದೇಶನವನ್ನೂ ಲೆಕ್ಕಿಸದೇ ಸಂಜೆ 5 ಗಂಟೆಯಿಂದಲೇ ಪಟಾಕಿ ಸಿಡಿಸಲು ಆರಂಭಿಸಿ, ರಾತ್ರಿಪೂರ್ತಿ ಮುಂದುವರಿಸಿದ್ದರು. ಇದರಿಂದಾಗಿ ಅಧಿಕ ಪ್ರಮಾಣದ ಮಾಲಿನ್ಯ ದಾಖಲಾಗಿದೆ.

ಹಿಂದಿನ ವರ್ಷದ ದೀಪಾವಳಿಗೆ ಹೋಲಿಕೆ ಮಾಡಿದರೆ ಈ ವರ್ಷದಲ್ಲಿ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ. ಹಿಂದಿನ ವರ್ಷ ಸಿಟಿ ರೈಲು ನಿಲ್ದಾಣ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಸುಮಾರು 200 ಮೆ.ಗ್ರಾಂ. ಅಷ್ಟು ಮಾಲಿನ್ಯವಾಗಿತ್ತು. ಆದರೆ, ಈ ಬಾರಿ ಕಡಿಮೆಯಾಗಿದ್ದು, ದೊಮ್ಮಲೂರು ಪ್ರದೇಶದಲ್ಲಿ 103, ಕೆ.ಆರ್.ವೃತ್ತ ಪ್ರದೇಶದಲ್ಲಿ 86, ಮೈಸೂರು ರಸ್ತೆ 69.4, ಸೊಣ್ಣೇನಹಳ್ಳಿ ಐಟಿಪಿಎಲ್ 86 ಮೆ.ಗ್ರಾಂ ಮಾಲಿನ್ಯದ ಪ್ರಮಾಣ ದಾಖಲಾಗಿದೆ ಎಂದು ಮಂಡಳಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News