ನಾವು ಪಡೆಯುವ ಮನೋಭಾವ ಬೆಳೆಸಿಕೊಳ್ಳಬೇಕು: ನಾಡೋಜ ಪ್ರೊ.ಹಂಪ ನಾಗರಾಜಯ್ಯ

Update: 2018-11-09 16:45 GMT

ಬೆಂಗಳೂರು, ನ.9: ನಾವು ಇತರರಿಗೆ ನೀಡುವುದರಲ್ಲಿ ನಿಸ್ಸೀಮರು. ಆದರೆ, ಬೇರೆ ಭಾಗದ ಸಂಸ್ಕೃತಿಗಳಿಂದಲೂ ಪಡೆಯುವ ಮನೋಭಾವ ಬೆಳೆಸಿಕೊಂಡರೆ ಒಳಿತು ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ನಾಡೋಜ ಪ್ರೊ.ಹಂಪ. ನಾಗರಾಜಯ್ಯ ಅಭಿಪ್ರಾಯಪಟ್ಟರು.

ಶುಕ್ರವಾರ ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯು ಪ್ರಕಟಿಸಿರುವ ನಾಲ್ಕು ಕೃತಿಗಳ ಲೋಕಾರ್ಪಣೆ ಹಾಗೂ 2018ರ ಗೌರವ ಫೆಲೋಶಿಪ್ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾವು ಸಹ ಅನ್ಯ ಪ್ರದೇಶಗಳಲ್ಲಿನ ಉತ್ತಮ ಜ್ಞಾನ, ಸಂಸ್ಕೃತಿಯನ್ನು ಸ್ವಾಗತಿಸಬೇಕು. ಅಲ್ಲದೆ, ಕಲಾ ವಿಮರ್ಶಕಿ ಮಾರ್ಥ ಯಾಕಿಮೋವಿಝ್ ಅವರು ವಿದೇಶಿಗರಾದರೂ ರಾಜ್ಯದಲ್ಲಿ ನೆಲೆಸಿ, ಕನ್ನಡದಲ್ಲಿ ಬೆರೆತರು. ಇಲ್ಲಿನ ಕಲಾ ಸಂಸ್ಕೃತಿಯನ್ನು ಅರಿತುಕೊಂಡರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂ.ಎಸ್.ನಂಜುಂಡರಾವ್ ಅವರು ಸ್ಪರ್ಧೆಗೆ ನಿಂತವರಂತೆ ಸರಕಾರದಿಂದ ಅನುದಾನ ಬಿಡುಗಡೆಗೊಳಿಸಿ ಚಿತ್ರಕಲಾ ಪರಿಷತ್ತು ಹುಟ್ಟು ಹಾಕಿದರು. ಜಿ.ಎಲ್.ಎನ್.ಸಿಂಹ ರಚಿಸಿರುವ ಪೌರಾಣಿಕ ಪಾತ್ರಗಳ ಚಿತ್ರಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಆರ್.ಜಿ.ರಾಯಕರ ಅವರು ಕಲಾ ಸೇವೆಯೊಂದಿಗೆ ಶಿರಸಿ, ಸಿದ್ದಾಪುರದಲ್ಲಿ ಕನ್ನಡದ ಕಂಪನ್ನು ಹರಡಿದರು ಎಂದು ನೆನಪು ಮಾಡಿಕೊಂಡರು.

ಹಿರಿಯ ನಾಡೋಜ ಪ್ರೊ.ಎಂ.ಎಚ್.ಕೃಷ್ಣಯ್ಯ ಮಾತನಾಡಿ, ನಂಜುಂಡರಾವ್ ಅವರಿಗೆ ಚಿತ್ರಕಲಾ ಕೋಶ ರಚಿಸಬೇಕು ಎಂಬ ಮಹದಾಸೆ ಇತ್ತು. ಅದಕ್ಕಾಗಿ ಸಮಾನ ಮನಸ್ಕರೊಂದಿಗೆ ತಯಾರಿಗಳನ್ನು ನಡೆಸಿದ್ದರು. ಅವರ ನಿಧನಾನಂತರ ಆ ಯೋಜನೆ ಮುಂದುವರಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಫೆಲೋಶಿಪ್ ಪ್ರದಾನ: ಕಲಾವಿದರಾದ ನಾಡೋಜ ಡಾ.ಜೆ.ಎಸ್.ಖಂಡೇರಾವ್ ಮತ್ತು ಜಿ.ಎಲ್.ಎನ್.ಸಿಂಹ ಅವರಿಗೆ ಫೆಲೋಶಿಪ್ ಪುರಸ್ಕಾರ ಪ್ರದಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಕಲಾವಿದ ಡಾ.ಸಿ.ಚಂದ್ರಶೇಖರ್, ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಜೆ.ಕಮಲಾಕ್ಷಿ, ರಿಜಿಸ್ಟ್ರಾರ್ ಎಚ್.ವಿ.ಇಂದ್ರಮ್ಮ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News