ಬಿಬಿಎಂಪಿ ಸದಸ್ಯ ವೇಲುನಾಯಕ್ ಬಂಧನಕ್ಕೆ ಆಗ್ರಹ

Update: 2018-11-09 16:47 GMT

ಬೆಂಗಳೂರು, ನ.9: ಬಿಬಿಎಂಪಿ ಸದಸ್ಯ ಎಂ.ವೇಲುನಾಯಕ್, ಕೊಳಗೇರಿ(ಸ್ಲಂ) ನಿವಾಸಿಗಳನ್ನು ಒಕ್ಕಲೆಬ್ಬಿಸಿ, ದೌರ್ಜನ್ಯವೆಸಗಿದ್ದು, ಇವರನ್ನು ಈ ಕೂಡಲೇ ಬಂಧಿಸಬೇಕೆಂದು ಸಮತಾ ಸೈನಿಕ ದಳ ಸದಸ್ಯರು ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ನಗರದ ಶೇಷಾದ್ರಿಪುರಂನಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ಪ್ರಧಾನ ಕಚೇರಿ ಮುಂಭಾಗ ಸಮತಾ ಸೈನಿಕ ದಳ ನೇತೃತ್ವದಲ್ಲಿ ಜಮಾಯಿಸಿದ ಕೊಳಗೇರಿ ನಿವಾಸಿಗಳು, ಒಕ್ಕಲೆಬ್ಬಸಿ, ದೌರ್ಜನ್ಯವೆಸಗಿರುವ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಕಾಂಗ್ರೆಸ್ ಶಾಸಕ ಮುನಿರತ್ನ ಹಾಗೂ ಬಿಬಿಎಂಪಿ ವಾರ್ಡ್ ಸದಸ್ಯ ವೇಲುನಾಯಕ್ ಸೇರಿದಂತೆ ಕೆಲ ರೌಡಿಗಳು ಏಕಾಏಕಿ, ನ.7 ರಂದು ಇಲ್ಲಿನ, ಲಗ್ಗೆರೆಯ ಜೈ ಭುವನೇಶ್ವರಿ ನಗರದಲ್ಲಿದ್ದ ಸ್ವೀಪರ್ ಕಾಲನಿ ಬಡ ನಿವಾಸಿಗಳ ಮನೆಗಳಿಗೆ ನುಗ್ಗಿ, ದೌರ್ಜನ್ಯವೆಸಗಿದ್ದಾರೆ ಎಂದು ದೂರಿದರು.

ಬಡ ನಿವಾಸಿಗಳಿಗೆ ಸರಕಾರವು ಮನೆಗಳನ್ನು ಹಂಚಿಕೆ ಮಾಡಿದೆ. ಆದರೆ, ಉದ್ದೇಶಪೂರ್ವಕವಾಗಿ ಬಿಬಿಎಂಪಿ ಸದಸ್ಯ ವೇಲುನಾಯಕ್ ಮತ್ತು ಆತನ ಸಹಚರರು, ಬಡ ನಿವಾಸಿಗಳ ಮೇಲೆ ದಾಳಿ ನಡೆಸಿದ್ದಾರೆ. ಜೊತೆಗೆ, ಸ್ಲಂ ಬೋರ್ಡ್‌ನ ಕೆಲ ಅಧಿಕಾರಿಗಳು ಇವರೊಂದಿಗೆ ಶಾಮೀಲು ಆಗಿದ್ದಾರೆ. ಹಾಗಾಗಿ, ವೇಲುನಾಯಕ್‌ನನ್ನು ಈ ಕೂಡಲೇ ಬಂಧಿಸಬೇಕೆಂದು ಪಟ್ಟು ಹಿಡಿದರು.

ಬೆಂಗಳೂರು ವ್ಯಾಪ್ತಿಯಲ್ಲಿನ ಸ್ಲಂ ನಿವಾಸಿಗಳಿಗೆ ಸಕಲ ಸೌಕರ್ಯಗಳುಳ್ಳ ಮನೆಗಳನ್ನು ನಿರ್ಮಿಸಬೇಕು. ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಶೀಘ್ರವಾಗಿ ಸ್ಲಂ ಜನರಿಗೆ ಸೂಕ್ತ ಪುನರ್ವಸತಿ ಸೌಕರ್ಯ ಕಲ್ಪಿಸಬೇಕಾಗಿರುವುದು ಅತ್ಯಂತ ಅವಶ್ಯವಾಗಿದೆ ಎಂದು ವೆಂಕಟಸ್ವಾಮಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News