ನರೇಂದ್ರ ಮೋದಿ ಮಗನನ್ನು ಕೊಲ್ಲಿಸಿದರು ಎಂದು ವಿಠ್ಠಲ್‍ ಭಾಯಿ ಕಿರುಚಿದ್ದರು

Update: 2018-11-10 07:00 GMT

ಗುಜರಾತ್‍ನ ಮಾಜಿ ಗೃಹಸಚಿವ ಮತ್ತು ಬಿಜೆಪಿ ಮುಖಂಡ ಹರೇನ್ ಪಾಂಡ್ಯ ಹತ್ಯೆಗೆ ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ ಡಿ.ಜಿ.ವಂಝಾರಾ ಅವರಿಂದ ಆದೇಶ ಬಂದಿತ್ತು ಎಂದು ಸೊಹ್ರಾಬುದ್ದೀನ್ ತನ್ನ ಬಳಿ ಹೇಳಿದ್ದಾಗಿ ಅಝಂ ಖಾನ್ ಮುಂಬೈ ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿದ ಬೆನ್ನಲ್ಲೇ, ಗುಜರಾತ್‍ನ ಹಿರಿಯ ಪತ್ರಕರ್ತ ಪ್ರಶಾಂತ್ ದಯಾಳ್ ಅವರು, ಹರೇನ್ ಪಾಂಡ್ಯ ಪತ್ನಿ ಜಾಗೃತಿ ಪಾಂಡ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ದಯಾಳ್ ಅವರ ಬಹಿರಂಗ ಪತ್ರ ಗುಜರಾತಿ ಭಾಷೆಯಲ್ಲಿದೆ. ಪಾಂಡ್ಯ ಅವರ ಸ್ನೇಹಿತರು ಹಾಗೂ ಕುಟುಂಬದವರು, 2003ರ ಮಾರ್ಚ್ 26ರಂದು ನಡೆದ ಹತ್ಯೆ ಘಟನೆಯ ಸಿಬಿಐ ತನಿಖೆಯನ್ನು ನಿರಂತರವಾಗಿ ಪ್ರಶ್ನಿಸುತ್ತಾ ಬಂದಿದ್ದು, ನಿಷ್ಪಕ್ಷಪಾತವಾಗಿ ಮರು ತನಿಖೆ ನಡೆಸಿ, ನೈಜ ಹಂತಕರನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಇದನ್ನು ಇಂಗ್ಲಿಷ್‍ನಲ್ಲಿ ಭಾಷಾಂತರಿಸಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ.

ಸಹೋದರಿ ಜಾಗೃತಿ,

ಹರೇನ್ ಪಾಂಡ್ಯ ಅವರ ಬಹಳಷ್ಟು ಮಂದಿ ಸ್ನೇಹಿತರು ಸಾಮಾನ್ಯವಾಗಿ ನಿಮ್ಮನ್ನು ಭಾಬಿ ಎಂದು ಸಂಬೋಧಿಸುತ್ತಾರೆ; ಆದರೆ ನಾನು ನಿಮ್ಮನ್ನು ಈ ಪತ್ರದಲ್ಲಿ ಸಹೋದರಿ ಎಂದು ಕರೆಯುತ್ತಿದ್ದೇನೆ. 2003ಕ್ಕೆ ಮುನ್ನ ನಿಮ್ಮಲ್ಲಿಗೆ ಹರೇನ್ ಪಾಂಡ್ಯ ಅವರ ಭೇಟಿಗಾಗಿ ಬಂದಾಗಲೆಲ್ಲ ಅವಸರದ ಸಂವಾದ ನಡೆಸುತ್ತಿದ್ದೆವು. ಅವರ ಸ್ನೇಹಿತರಾದ ನಾವು 2003ರ ಮಾರ್ಚ್ 26ರ ಮುಂಜಾನೆ ನಡೆದ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಮಗೆ ಆಘಾತವಾಗಿತ್ತು. ಹರೇನ್ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಮೊದಲು ನಮಗೆ ತಿಳಿದಾಗ, ಮೊದಲ ಪ್ರತಿಕ್ರಿಯೆ ಇದ್ದುದು ದೇವರು ಅವರನ್ನು ಕಾಪಾಡಲಿ ಎಂದಾಗಿತ್ತು. ಆದರೆ ಆ ಅವಧಿಯಲ್ಲಿ ದೇವರೂ ಕ್ರೂರವಾಗಿದ್ದ. ನಮ್ಮ ಪ್ರಾರ್ಥನೆ ನಿಷ್ಪ್ರಯೋಜಕವಾಯಿತು.

ಹರೇನ್ ನಮ್ಮ ಸ್ನೇಹಿತರಾಗಿದ್ದರೂ, ಅವರು ನಿಮ್ಮ ಪತಿ ಹಾಗೂ ಇಬ್ಬರು ಮಕ್ಕಳ ತಂದೆ ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಮಕ್ಕಳು ಆಗ ಇನ್ನೂ ಎಳೆ ವಯಸ್ಸಿನವರು. ನಿಮ್ಮ ಯಾತನೆಯನ್ನು ನಾನು ಅರ್ಥ ಮಾಡಿಕೊಂಡಿದ್ದೆ ಹಾಗೂ ನಿಮ್ಮನ್ನು ಸಮಾಧಾನಿಸಲು ಧೈರ್ಯ ಸಾಧ್ಯವಾಗಲಿಲ್ಲ. ನಿಮಗೆ ಕರೆ ಮಾಡಲೂ ಆಗಲಿಲ್ಲ. ನೀವು ಎಲ್ಲವನ್ನೂ ಕಳೆದುಕೊಂಡಾಗ ನಾನು ಏನು ಹೇಳಲು ಸಾಧ್ಯವಿತ್ತು?.

ಹರೇನ್ ಅವರ ತಂದೆ ವಿಠ್ಠಲ್‍ ಭಾಯಿ ಅವರಿಗೂ ಆ ಆಘಾತ ಸಹಿಸಲಸಾಧ್ಯವಾದದ್ದು. ಮಗನ ಮೃತದೇಹಕ್ಕೆ ಹೆಗಲು ಕೊಡುವುದು ತಂದೆಯೊಬ್ಬರಿಗೆ ಎಷ್ಟು ನೋವಿನ ಸಂಗತಿ ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ನರೇಂದ್ರ ಮೋದಿ ಹರೇನ್‍ ನನ್ನು ಕೊಲ್ಲಿಸಿದರು ಎಂದು ವಿಠ್ಠಲ್‍ ಭಾಯಿ ಕಿರುಚಿದ್ದರು. ಆದರೆ ಅದನ್ನು ನಂಬಲು ನಾನು ಸಿದ್ಧನಿರಲಿಲ್ಲ. ಎಲ್ಲಿಸ್ ಬ್ರಿಜ್ ಸ್ಥಾನವನ್ನು ಮೋದಿಗಾಗಿ ತೆರವುಗೊಳಿಸಲು ಹರೇನ್ ನಿರಾಕರಿಸಿದಾಗಿನಿಂದಲೂ ಮೋದಿ ಹಾಗೂ ಹರೇನ್ ಎದುರಾಳಿಗಳಾಗಿದ್ದರು. ಹರೇನ್ ಹತ್ಯೆಗೆ ಮೋದಿ ಹೊಣೆ ಎನ್ನುವ ಭಾವನೆ ಸಹಜವಾಗಿಯೇ ಹುಟ್ಟಿಕೊಂಡಿತ್ತು. ಹತ್ಯೆಗೀಡಾದ ಮಗನಿಗೆ ನ್ಯಾಯ ದೊರಕಿಸಲು ವಿಠ್ಠಲ್‍ ಭಾಯಿ ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಡಿದರು. ಆ ವೇಳೆ ನೀವು ಮೌನವಾಗಿದ್ದಿರಿ. ಏಕೆಂದರೆ ನಿಮ್ಮ ಮಕ್ಕಳ ಭದ್ರತೆಯ ಚಿಂತೆ ನಿಮ್ಮನ್ನು ಕಾಡುತ್ತಿತ್ತು. ನಿಮ್ಮ ನಿರ್ಧಾರ ಸರಿ. ಹರೇನ್ ಹಂತಕರನ್ನು ನ್ಯಾಯದ ಕಟಕಟೆಗೆ ಎಳೆಯುವ ಬಗ್ಗೆ ನಿಮಗೆ ಆಸಕ್ತಿ ಇಲ್ಲದ ಕಾರಣ ನೀವು ಮೌನವಾಗಿದ್ದಿರಿ ಎಂಬ ಅರ್ಥವಲ್ಲ. ಆದರೆ ಪರಿಸ್ಥಿತಿ ಅದಕ್ಕೆ ಸೂಕ್ತವಾಗಿರಲಿಲ್ಲ.

ಮಕ್ಕಳು ಬೆಳೆದು ದೊಡ್ಡವರಾದಾಗ ನೀವು ಹೊರಬಂದಿರಿ. ನೀವು ಬುದ್ಧಿವಂತೆ ಹಾಗೂ ಕೇವಲ ಬೇರೆಯವರನ್ನು ದೂರುವುದರಿಂದ ಯಾವ ಫಲವೂ ಸಿಗುವುದಿಲ್ಲ ಎನ್ನುವುದನ್ನು ತಿಳಿದುಕೊಂಡಿದ್ದಿರಿ. ನಿಮ್ಮ ಪ್ರಯತ್ನಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ಹರೇನ್ ಪಾಂಡ್ಯ ಹತ್ಯೆ ಪ್ರಕರಣದ ಕಡತ ಹಿಡಿದುಕೊಂಡು ಒಬ್ಬ ವಕೀಲರ ಕಚೇರಿಯಿಂದ ಮತ್ತೊಬ್ಬ ವಕೀಲರ ಕಚೇರಿಗೆ ಅಲೆದಿದ್ದೀರಿ. ಈ ಪ್ರಕರಣದಲ್ಲಿ ಹೇಗೆ ಮುಂದುವರಿಯಬಹುದು ಎಂಬ ಬಗ್ಗೆ ನಾವು ಪರಸ್ಪರ ಭೇಟಿಯಾಗಿ ಚರ್ಚಿಸಿದ್ದೇವೆ. ಸಿಬಿಐ ಹಾಗೂ ಪೊಲೀಸರು ಬಂಧಿಸಿದ್ದ ಅಸ್ಗರ್ ಅಲಿ ಕೇವಲ ಮುಖವಾಡ ಎನ್ನುವ ಅರಿವು ನಮಗಿಬ್ಬರಿಗೂ ಇತ್ತು. ಅಮಿತ್ ಶಾ ಹರೇನ್ ಹತ್ಯೆಯ ಹಿಂದೆ ಇರಬಹುದೇ ಎಂದು ನಾವು ಅಚ್ಚರಿಪಟ್ಟಿದ್ದೆವು. ಆದರೆ ಅವು ನಮ್ಮ ಪಾಲಿನ ಸಂದೇಹವಷ್ಟೇ ಆಗಿತ್ತು. ಆ ಬಗ್ಗೆ ಆಗ ನಮಗೆ ಯಾವುದೇ ಪುರಾವೆ ಇರಲಿಲ್ಲ; ಅದು ಇಂದಿಗೂ ಸಿಕ್ಕಿಲ್ಲ. ಅಸ್ಗರ್ ಅಲಿ ಹರೇನ್ ಅವರನ್ನು ಹತ್ಯೆ ಮಾಡಿದ್ದರೆ, ಹಾಗೆ ಮಾಡುವಂತೆ ಆತನಿಗೆ ಕುಮ್ಮಕ್ಕು ನೀಡಿದವರು ಯಾರು?, ಇದು ಪತ್ತೆಯಾಗಬೇಕಾದ ಮಹತ್ವದ ವಿಚಾರ. ನಿಮ್ಮ ಪತಿಯನ್ನು ಹತ್ಯೆ ಮಾಡಿದ ಆರೋಪಿಯನ್ನು ಜೈಲಿನಲ್ಲಿ ಭೇಟಿ ಮಾಡಿದ ನಿಮ್ಮ ಪ್ರಯತ್ನ ಹಾಗೂ ಧೈರ್ಯವನ್ನು ಶ್ಲಾಘಿಸಲೇಬೇಕು.

ನೀವು ಅಸ್ಗರ್ ಅಲಿಗೆ ಸಾಕಷ್ಟು ಮನವಿ ಮಾಡಿಕೊಂಡಿದ್ದೀರಿ ಮಾತ್ರವಲ್ಲದೇ, ಆತನ ಪ್ರಕರಣದ ಪರ ಹೋರಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದೀರಿ. ಆದರೆ ಆತ ನಿಮಗೆ ಒಂದು ಶಬ್ಧವನ್ನೂ ಉಸುರಲಿಲ್ಲ. ಹರೇನ್ ಹತ್ಯೆ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಅಸ್ಗರ್ ಸೇರಿದಂತೆ ಎಲ್ಲರನ್ನೂ ದೋಷಮುಕ್ತಗೊಳಿಸಿದಾಗ ನಮ್ಮ ಸಂದೇಹ ಮತ್ತಷ್ಟು ಬಲವಾಯಿತು. ಅಸ್ಗರ್ ಹರೇನ್ ಅವರನ್ನು ಹತ್ಯೆ ಮಾಡಿಲ್ಲ ಎಂದಾದರೆ ಕೊಂದವರು ಯಾರು?, ನೀವು ಸಿಬಿಐನೊಂದಿಗೆ ಸಾಕಷ್ಟು ಪ್ರಯತ್ನ ಮಾಡಿದ್ದೀರಿ. ಅದು ಯುಪಿಎ ಆಡಳಿತಾವಧಿ. ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರು ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿದ್ದರು. ನೀವು ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೀರಿ ಹಾಗೂ ಸಿಬಿಐ ಈ ಪ್ರಕರಣದ ಮರುತನಿಖೆ ನಡೆಸಲು ಆದೇಶಿಸುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದೀರಿ. ಆದರೆ ಕಾಂಗ್ರೆಸ್ ನಿಷ್ಪ್ರಯೋಜಕ ಎನ್ನುವುದು ಸಾಬೀತಾಯಿತು. ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರನ್ನು ನಿಂದಿಸಲು ಮಾತ್ರ ಹರೇನ್ ಹೆಸರನ್ನು ಬಳಸಿಕೊಳ್ಳುವುದರಲ್ಲಿ ಕಾಂಗ್ರೆಸ್ ಗೆ ಆಸಕ್ತಿ ಇತ್ತು. ಕಾಂಗ್ರೆಸ್ ನಾಯಕರು ನಿಮ್ಮ ನೆರವಿಗೆ ಬರಲಿಲ್ಲ.

ಹರೇನ್ ಅವರು ಅಹ್ಮದಾಬಾದ್ ಮಹಾನಗರಪಾಲಿಕೆ ಸದಸ್ಯರಾಗಿದ್ದಾಗಿನಿಂದ ನನಗೆ ಅವರ ಜತೆ ಸ್ನೇಹವಿತ್ತು. ಪ್ರದೀಪ್ ಸಿನ್ಹ ಜಡೇಜಾ, ಹರೇನ್, ಭೀಮಾ ಷಾ ಮತ್ತು ನಾನು ಪ್ರತಿದಿನ ಭೇಟಿಯಾಗುತ್ತಿದ್ದೆವು. ನಾನು ಪತ್ರಕರ್ತ. ಬಿಜೆಪಿ ಹಾಗೂ ಹರೇನ್ ವಿರುದ್ಧ ಸಾಕಷ್ಟು ಬಾರಿ ಬರೆದಿದ್ದೇನೆ. ನನ್ನ ಕೆಲಸವನ್ನು ಹರೇನ್ ಅರ್ಥ ಮಾಡಿಕೊಂಡಿದ್ದರು. ಕೆಲವೊಮ್ಮೆ ನನ್ನ ಬಗ್ಗೆ ಅವರು ಅಸಮಾಧಾನಗೊಂಡಿದ್ದಿದೆ. ಆದರೆ ಕ್ರಮೇಣ ಅವರು ಒಪ್ಪುತ್ತಿದ್ದರು. ನನ್ನಂಥ ಪತ್ರಕರ್ತರು ಕೆಟ್ಟ ಅವಧಿಯಲ್ಲೂ ನ್ಯಾಯಯುತ ಪಾಲು ಹೊಂದಿದ್ದೇವೆ. ನಾನು ಸಂಕಷ್ಟದಲ್ಲಿದ್ದಾಗಲೆಲ್ಲ ಹರೇನ್ ನನ್ನೊಂದಿಗಿದ್ದರು. ಮೊದಲ ಹೆಸರಿನಿಂದ ನಾವು ಪರಸ್ಪರ ಕರೆಯುತ್ತಿದ್ದೆವು. ಹರೇನ್ ಹತ್ಯೆ ಬಳಿಕ ನಾನು ನಿಮ್ಮ ಪರವಾಗಿ ನಿಂತೆ. ಏಕೆಂದರೆ ಸ್ನೇಹಿತನಾಗಿ ಅದು ನನ್ನ ಕರ್ತವ್ಯ. ಹರೇನ್ ಅವರಿಗೆ ನ್ಯಾಯ ದೊರಕಿಸಲು ನಾವು ಪ್ರಯತ್ನಿಸಿದೆವು. ಮೋದಿ ಮತ್ತು ಅಮಿತ್ ಶಾ ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದು ನಮ್ಮ ಉದ್ದೇಶವಾಗಿರಲಿಲ್ಲ. ಹರೇನ್ ಹಂತಕರನ್ನು ಬಂಧಿಸಿ ಶಿಕ್ಷಿಸಬೇಕು ಎನ್ನುವುದಷ್ಟೇ ನಮ್ಮ ಇಚ್ಛೆಯಾಗಿತ್ತು. ಹರೇನ್ ಹತ್ಯೆಯಿಂದ ಲಾಭ ಪಡೆದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ನಮ್ಮ ಬಳಿ ಪುರಾವೆ ಇಲ್ಲ. ನಾವು ಪ್ರಯತ್ನಿಸಿದೆವು ಆದರೆ ಕೊನೆಗೂ ಕಳೆದುಕೊಂಡೆವು.

ಹರೇನ್ ಹಂತಕರನ್ನು ಪತ್ತೆ ಮಾಡದಿರುವ ಬಗ್ಗೆ ನಮಗೆ ಇನ್ನೂ ವಿಷಾದವಿದೆ. ಆದರೆ ನೀವು ಭಾರತೀಯ ಜನತಾ ಪಕ್ಷಕ್ಕ ಸೇರಿದ್ದು ನಮ್ಮಂತಹ ಸ್ನೇಹಿತರಿಗೆ ಆಘಾತವಾಗಿದೆ. ನಿಮ್ಮ ಪತಿಯ ಹತ್ಯೆಗೆ ಕಾರಣರು ಎಂದು ನೀವು ಭಾವಿಸಿದ ಮುಖಂಡರು, ಬಿಜೆಪಿ ಮುಖಂಡರು ಹರೇನ್ ಹತ್ಯೆ ಬಳಿಕ ನಿಮ್ಮಿಂದ ದೂರ ಉಳಿದಿದ್ದರು. ಹರೇನ್ ಅವರ ನಿಕಟ ಸ್ನೇಹಿತರಾಗಿದ್ದ ಬಿಜೆಪಿ ಮುಖಂಡರು ಕೂಡಾ ಹತ್ಯೆ ಬಳಿಕ ನಿಮ್ಮನ್ನು ಬಿಟ್ಟುಹೋದರು. ಏಕೆಂದರೆ ಆ ದಿನಗಳಲ್ಲಿ ನಿಮ್ಮೊಂದಿಗೆ ಇರುವುದು ಎಂದರೆ ಮೋದಿ ಹಾಗೂ ಅಮಿತ್ ಶಾ ಅವರನ್ನು ಎದುರು ಹಾಕಿಕೊಳ್ಳುವುದು ಎಂಬ ಅರ್ಥ.

ಕಾಲ ಬದಲಾಗಿದೆ. ನರೇಂದ್ರ ಮೊದಿ ದೇಶದ ಪ್ರಧಾನಿಯಾಗಿದ್ದಾರೆ ಹಾಗೂ ಅಮಿತ್ ಶಾ ಬಿಜೆಪಿ ಅಧ್ಯಕ್ಷ. ಸಾಮಾನ್ಯವಾಗಿ ನೀವು ಸಣ್ಣ ವಿಷಯಗಳನ್ನೂ ನನ್ನ ಜತೆ ಚರ್ಚಿಸುತ್ತಿದ್ದಿರಿ. ಅದರೆ ನೀವು ಬಿಜೆಪಿ ಸೇರುವ ನಿರ್ಧಾರದ ಬಗ್ಗೆ ನೀವೇನೂ ನನ್ನ ಬಳಿ ಹೇಳಲೇ ಇಲ್ಲ. ಒಂದು ಮುಂಜಾನೆ ಈ ಸುದ್ದಿ ಕೇಳಿ ನನಗೆ ಆಘಾತವಾಯಿತು. ನೀವು 2016ರಲ್ಲಿ ಬಿಜೆಪಿ ಸೇರಿ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಾದಿರಿ. ನಾನು ಸಂಪೂರ್ಣ ಕಳೆದುಕೊಂಡೆ. ಅದು ನೀವು ಬಿಜೆಪಿ ಸೇರಿದ್ದಕ್ಕಲ್ಲ. ಆದರೆ ಬಿಜೆಪಿ ರಾಷ್ಟ್ರೀಯ ಮುಖಂಡರು ಅಹ್ಮದಾಬಾದ್‍ಗೆ ಭೇಟಿ ನೀಡಿದ ವೇಳೆ ಹಲವು ಬಾರಿ ಪೊಲೀಸರ ನೆರವಿನಿಂದ ಅವರನ್ನು ನೀವು ಭೇಟಿ ಮಾಡದಂತೆ ತಡೆಯಲು ಹೇಗೆ ಪ್ರಯತ್ನಿಸಿದರು ಎನ್ನುವುದು ನನಗೆ ನೆನಪಿದೆ. ನಮ್ಮಲ್ಲಿ ಪುರಾವೆ ಇಲ್ಲ; ಆದರೆ ಹರೇನ್ ಅವರನ್ನು ಕೆಲ ಬಿಜೆಪಿ ಮುಖಂಡರೇ ಹತ್ಯೆ ಮಾಡಿದ್ದಾರೆ ಎನ್ನುವುದು ನಮ್ಮ ನಂಬಿಕೆ. ನೀವು ಕೈಗೊಂಡ ನಿರ್ಧಾರವನ್ನು ನನಗೆ ನಾನೇ ಪ್ರಶ್ನಿಸಿಕೊಂಡಿದ್ದೇನೆ. ನಿಮಗೆ ಅಸ್ತಿತ್ವದ ಸಮಸ್ಯೆ ಇರಲಿಲ್ಲ. ನಿಮ್ಮ ಅಡುಗೆಮನೆಯಲ್ಲಿ ಬೆಂಕಿ ಉರಿಯಬೇಕಾದರೆ ನೀವು ಬಿಜೆಪಿ ಸೇರಲೇಬೇಕು ಎಂಬ ಪರಿಸ್ಥಿತಿ ಇರಲಿಲ್ಲ. ಹಾಗಾದರೆ ನೀವು ಹೀಗೆ ಮಾಡಿದ್ದೇಕೆ?, ಇಂಥ ಪರಿಸ್ಥಿತಿಯಲ್ಲಿ, ನೀವು ಕೂಡಾ ಪಕ್ಷದಲ್ಲಿ ಹುದ್ದೆ ಗಳಿಸಲು ಹರೇನ್ ಪಾಂಡ್ಯ ಹತ್ಯೆ ಪ್ರಕರಣದ ಹೆಸರು ಬಳಸಿಕೊಂಡು ಬಿಜೆಪಿ ನಾಯಕರ ಮೇಲೆ ಒತ್ತಡ ಸೃಷ್ಟಿಸಿದ್ದೀರಿ ಎಂದೂ ನಾನು ಯೋಚಿಸಿದ್ದೆ. ಆದರೆ ನೀವು ಹಾಗೆ ಮಾಡಲಾರರಿರಿ ಎಂದು ನನಗೆ ನಾನೇ ಹೇಳಿಕೊಂಡು ಆ ಕಲ್ಪನೆಯನ್ನು ನಾನು ಕಿತ್ತೆಸೆದೆ.

ಬಹುಶಃ ನಿಮಗೂ ಬಿಜೆಪಿ ಸೇರಿ, ರಾಜ್ಯ ಆಯೋಗದ ಅಧ್ಯಕ್ಷೆಯಾದ ಬಗ್ಗೆ ಅಪರಾಧಿ ಭಾವನೆ ಕಾಡುತ್ತಿರಬೇಕು. ಬಹುಶಃ ಈ ಕಾರಣದಿಂದ ನೀವು ನನ್ನ ಜತೆ ಮಾತು ಬಿಟ್ಟಿರಬೇಕು. ನಿಮ್ಮ ಹೆಜ್ಜೆಯ ಬಗ್ಗೆ ನಾನು ಕೇಳಿದರೆ ಏನು ಪ್ರತಿಕ್ರಿಯೆ ನೀಡಬೇಕು ಎಂಬ ಯೋಚನೆ ನಿಮ್ಮದಿರಬಹುದು. ನೀವು ನನಗೆ ಉತ್ತರಿಸುವ ಅಗತ್ಯವಿಲ್ಲ; ಆದರೆ ಸಭ್ಯತೆ ಅದನ್ನು ಬಯಸುತ್ತದೆ. ನೀವು ಸರ್ಕಾರಿ ಕಚೇರಿಗೆ ಸರ್ಕಾರಿ ಕಾರಿನಲ್ಲಿ ಹೋಗಲು ಆರಂಭಿಸಿ, ಯಾರು ಹರೇನ್ ಅವರನ್ನು ಹತ್ಯೆ ಮಾಡಿದ್ದಾರೆ ಎನ್ನುವುದನ್ನು ಮರೆತಿದ್ದೀರಿ. ಆದರೆ ನಾನು ಮರೆಯುವಂತಿಲ್ಲ. ವ್ಯವಸ್ಥೆಯ ವಿರುದ್ಧ ನಾನು ಅಸಹಾಯಕ. ನನ್ನ ಅಸಹಾಯಕತೆ ಬಗ್ಗೆ ಹಲವು ಬಾರಿ ನನಗೆ ರೋಷ ಹುಟ್ಟಿದ್ದಿದೆ. ಮಾಜಿ ಪೊಲೀಸ್ ಅಧಿಕಾರಿ ಡಿ.ಜಿ.ವಂಝಾರಾ ಅವರ ಆದೇಶದಂತೆ ಹರೇನ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಕಳೆದ ಶನಿವಾರ ಅಝಂ ಖಾನ್ ಮುಂಬೈ ಕೋರ್ಟ್ ಮುಂದೆ ಹೇಳಿದಾಗ, ತಕ್ಷಣ ನನಗೆ ನಿಮ್ಮ ನೆನಪಾಯಿತು.

ಅಝಂ ಖಾನ್ ಸತ್ಯ ಹೇಳಿದ್ದಾನೆ ಎಂದು ನೀವು ಭಾವಿಸುವುದಾದರೆ, ವಂಝಾರಾ ಮತ್ತು ಹರೇನ್ ನಡುವೆ ಯಾವ ದ್ವೇಷವೂ ಇರಲಿಲ್ಲ. ಈ ಪ್ರಕರಣದಲ್ಲಿ ಪ್ರಮುಖ ಅಂಶವೆಂದರೆ, ಹರೇನ್ ಹತ್ಯೆಯಾಗಬೇಕು ಎಂದು ವಂಝಾರಾ ಏಕೆ ಬಯಸಿದ್ದರು ಎನ್ನುವುದು. ನಮ್ಮ ಶಂಕೆಯಂತೆ ಮತ್ತು ಲಭ್ಯವಿರುವ ವಿವರಗಳ ಪ್ರಕಾರ, ಉತ್ತರ ಅಮಿತ್ ಶಾ ಅವರತ್ತ ಬೆರಳು ತೋರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಅವರ ಜತೆ ಹೇಗಿರುತ್ತೀರಿ?, ವಿಠ್ಠಲ್‍ ಭಾಯಿ ಅವರಂತೆ ನಾವು ಹೋರಾಟದಲ್ಲೇ ಸಾಯಬಹುದು. ಆದರೆ ಹರೇನ್ ಪಾಂಡ್ಯ ಹತ್ಯೆಗೆ ಕಾರಣರು ಎಂದು ನಾವು ಶಂಕಿಸಿರುವವರ ಜತೆ ನೀವು ಹೇಗೆ ಕೂರುತ್ತೀರಿ?, ಅದು ನಿಮಗೆ ಅನಿವಾರ್ಯವೇ ಅಥವಾ ಅಧಿಕಾರದ ದಾಹವೇ ಎನ್ನುವುದು ನನಗೆ ತಿಳಿಯದು. ಈ ಪತ್ರ ನಿಮಗೆ ಕೆಟ್ಟದು ಎನ್ನಿಸಬಹುದು. ಆದರೆ ಈ ಬಗ್ಗೆ ಯೋಚಿಸಿ. ಇದು ಖಂಡಿತಾ ತೀರಾ ವಿಳಂಬವಲ್ಲ. ನಾವೆಲ್ಲರೂ ತಪ್ಪು ಮಾಡುತ್ತೇವೆ. ಆದರೆ ಅದನ್ನು ನಾವೇ ಸರಿಪಡಿಸಿಕೊಳ್ಳಲು ಸಿದ್ಧರಿದ್ದೇವೆಯೇ ಎಂಬುದಷ್ಟೇ ಮುಖ್ಯ.

ಹರೇನ್ ಎಲ್ಲೇ ಇದ್ದರೂ ಅವರನ್ನು ನಾವು ಭೇಟಿ ಮಾಡುವಾಗ, ಸ್ನೇಹಿತ ನಾವು ನಿನಗಾಗಿ ಹೋರಾಡಿದ್ದೇವೆ ಎನ್ನಲು ನಾನು ಬಯಸುತ್ತೇನೆ. ನಾವು ಎಷ್ಟು ದಣಿದರೂ ಮತ್ತು ಕಳೆದುಕೊಂಡರೂ, ನಾವು ರಾಜಿ ಮಾಡಿಕೊಳ್ಳುವುದಿಲ್ಲ. ಈ ಪ್ರಯತ್ನ ಮಾಡುತ್ತೇನೆ.

ಪ್ರಶಾಂತ್ ದಯಾಳ್

(ಗುಜರಾತಿ ಮೂಲದಿಂದ ಊರ್ವಿಶ್ ಕೊಠಾರಿ ಇದನ್ನು ಭಾಷಾಂತರಿಸಿದ್ದು, ಲೇಖಕರ ಅನುಮತಿಯೊಂದಿಗೆ thewire.inನಲ್ಲಿ ಪ್ರಕಟವಾಗಿದೆ) 

Writer - ಪ್ರಶಾಂತ್ ದಯಾಳ್, thewire.in

contributor

Editor - ಪ್ರಶಾಂತ್ ದಯಾಳ್, thewire.in

contributor

Similar News